twitter
    For Quick Alerts
    ALLOW NOTIFICATIONS  
    For Daily Alerts

    ಹಾಸ್ಯದ ಸುನಾಮಿ ಉಕ್ಕಿಸುವ ವೆಂಕಟ ಇನ್ ಸಂಕಟ

    By Super
    |

    Venkata in Sankata, Kananda movie review
    ರಮೇಶ್ ಅರವಿಂದ್ ತಾವೊಬ್ಬ ಉತ್ತಮ ಚಿತ್ರನಟ ಮಾತ್ರವಲ್ಲದೆ ಉತ್ತಮ ನಿರ್ದೇಶಕ ಕೂಡ ಅನ್ನುವುದನ್ನು 'ವೆಂಕಟ ಇನ್ ಸಂಕಟ' ಚಿತ್ರದಲ್ಲಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಹಾಸ್ಯ ಸನ್ನಿವೇಶಗಳೆಂಬ ಅತ್ಯಂತ ತಾಜಾ ಆಗಿರುವ ಬಿಡಿಬಿಡಿ ಹೂವುಗಳನ್ನು ಅತ್ಯಂತ ನಾಜೂಕಾಗಿ ಮತ್ತು ನವಿರತೆಯಿಂದ ನಗೆಯ ಘಮಲೆಬ್ಬಿಸುವ ನಗೆಹೂವಿನ ಹಾರವನ್ನು ರಮೇಶ್ ಅರವಿಂದ ಪೋಣಿಸಿದ್ದಾರೆ.

    * ಪ್ರಸಾದ ನಾಯಿಕ

    ಈ ವರ್ಷದಲ್ಲಿ ಪರಿಪೂರ್ಣವಾದ ಹಾಸ್ಯಪ್ರಧಾನ ಚಿತ್ರ ಬಂದಿಲ್ಲವೆಂದು ಕನವರಿಸುತ್ತಿದ್ದ ಪ್ರೇಕ್ಷಕರ ಸಂಕಟವನ್ನು ರಮೇಶ್ ಅರವಿಂದ ನಿವಾರಿಸಿದ್ದಾರೆ. 'ವೆಂಕಟ ಇನ್ ಸಂಕಟ' ಕೇವಲ ನಗೆ ಹಬ್ಬವಲ್ಲ ನಗೆಯ ಸುನಾಮಿ. ಮೊದಲ ದೃಶ್ಯದಿಂದ ಪರದೆ ಎಳೆಯುವವರೆಗೆ ನಗೆಯ ಓಕುಳಿ. ಮೊದಲಿನ ಅರ್ಧ ರಮೇಶ್ ಕಟ್ಟಿರುವ ನಗೆಯ ಹೂವು ಅತ್ಯಂತ ಬಿಗಿಯಾಗಿದೆ. ಆದರೆ, ಉತ್ತರಾರ್ಧ ಹೂವಿನ ಹಾರದ ಉದ್ದ ಸಾಕಾಗಲಿಲ್ಲವೆಂದು ನಿರ್ದೇಶಕರು ಸ್ವಲ್ಪ ಎಳೆದಿರುವುದು ಅತ್ಯಂತ ಸ್ಪಷ್ಟವಾಗಿ ಗೊತ್ತಾಗುತ್ತದೆ.

    ಏನೇ ಆಗಲಿ, ಚಿತ್ರವನ್ನು ಅತ್ಯಂತ ಬಿಗಿಯಾದ ನಿರೂಪಿಸಿರುವ ರಮೇಶ್ ಗೆ ಪೂರ್ಣ ಅಂಕ. ನಗಲಿಕ್ಕಾಗಲೆಂದೇ ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ ರಮೇಶ್. ಇಂಟರ್ವಲ್ ವರೆಗೆ ಇಡೀ ವರ್ಷ ಹೊಟ್ಟೆಯಲ್ಲಿ ಹಿಡಿದಿಟ್ಟುಕೊಂಡಿದ್ದ ನಗುವನ್ನು ರಮೇಶ್ ಬಿಡಿಬಿಡಿ ಹಾಸ್ಯ ಸನ್ನಿವೇಶಗಳ ಮೂಲಕ ಹೊರಹಾಕಿಸಿದ್ದಾರೆ. ಆರಂಭದಲ್ಲಿ ಶಾಪಿಂಗ್ ಮಾಲ್ ಗೆ ಭಯೋತ್ಪಾದಕರು ದಾಳಿ ಮಾಡಿದ ಪ್ರಸಂಗ, ಪೊಲೀಸ್ ಪಾತ್ರಧಾರಿಯಾಗಿರುವ ರಮೇಶ್ ರನ್ನು ಶರ್ಮಿಳಾ ಮಾಂಡ್ರೆ ಹಾವು ಬಿಟ್ಟು ಗೋಳು ಹೊಯ್ಕೊಳ್ಳುವ ಸನ್ನಿವೇಶ, ವೆಂಕಟ, ಪೊಲೀಸ್ ಪೇದೆ ಪಾಂಡು, ವೆಂಕಟನ ಅಜ್ಜಿ ಮೂವರೂ ಸೇರಿ ಭಯೋತ್ಪಾದಕರನ್ನು ಬೆನ್ನತ್ತುವ ಸೀನ್ ಬೊಂಬಾಟ್.

    ಸೂತ್ರಧಾರಿಯಾಗಿರುವ ರಮೇಶ್ ಪಾತ್ರಧಾರಿಗಳಿಂದ ಏನೇನು ಆಟವಾಡಿಸಬೇಕೋ ಅದನ್ನೆಲ್ಲ ಆಟವಾಡಿಸಿದ್ದಾರೆ. ಬಹುದಿನಗಳ ನಂತರ ಮತ್ತೆ ಅತ್ಯುತ್ತಮ ಪಾತ್ರ ಮಾಡಿರುವ ಉಮೇಶ್ ಅವರಿಂದ ತಿಂಡಿಪೋತಿ ಅಜ್ಜಿ ಪಾತ್ರ ಮಾಡಿಸಿದ್ದಾರೆ, ಭಾರತದ ಪ್ರಧಾನಿ ಅಷ್ಟೇ ಏಕೆ ಭಯೋತ್ಪಾದಕರಿಂದಲೂ ಜಾರಬಂಡಿ ಆಟವಾಡಿಸಿದ್ದಾರೆ. ರಮೇಶ್ ನಿರೂಪಣೆ, ಪಿಕೆಎಚ್ ದಾಸ್ ಛಾಯಾಗ್ರಹಣ, ರಿಕಿ ಕೇಜ್ ಸಂಗೀತ ನಿರ್ದೇಶನ, ಪೋಷಕ ಪಾತ್ರಗಳ ತಾಳಬದ್ಧ ನಟನೆ ಒಂದು ತೂಕವಾದರೆ ನಂದು ಬರೆದಿರುವ ಸಂಭಾಷಣೆಯದ್ದೇ ಮತ್ತೊಂದು ತೂಕ. ಸಂಭಾಷಣೆಯಲ್ಲಿರುವ ಹಾಸ್ಯದ ಪಂಚ್ ಅತ್ತಿತ್ತಲಾಗಿಲ್ಲ. ಅಜ್ಜಿ ಉಮೇಶ್ ಬಾಯಿಂದ ಹೊರಹೊಮ್ಮಿಸಿರುವ 'ಇವರಿಲ್ಲದ ಮಂಚ ಮಂಚನಾ?' ಸಂಭಾಷಣೆಯಲ್ಲಿರುವ ಗಮ್ಮತ್ತಿನ ಒಂದು ಪುಟ್ಟ ಉದಾಹರಣೆಯಷ್ಟೇ.

    ರಮೇಶ್ ತಮ್ಮ ಪಾತ್ರ ಮಾತ್ರವಲ್ಲ ಚಿತ್ರದುದ್ದಕ್ಕೂ ಉಳಿದೆಲ್ಲ ಪಾತ್ರಗಳನ್ನು ಚೆನ್ನಾಗಿ ದುಡಿಸಿಕೊಂಡಿದ್ದಕ್ಕೆ ಒಂದು ಹ್ಯಾಟ್ಸಾಫ್ ಹೇಳಲೇಬೇಕು. ಚಿತ್ರದ ಭಾರ ಒಂದೇ ಪಾತ್ರದ ಮೇಲೆ ಕೇಂದ್ರೀಕರಿಸದೇ ಸಮನಾಗಿ ಹಂಚಿದ್ದರಿಂದ ಒಂದು ಬ್ಯಾಲನ್ಸ್ ಕಾಯ್ದುಕೊಂಡಿದೆ. ವೆಂಕಟನಿಗೆ ಸಿಗಬೇಕಾಗಿದ್ದ ಕ್ರೆಡಿಟ್ಟನ್ನೆಲ್ಲ ತಾನೇ ಬಾಚುವ ಪೊಲೀಸ್ ಪೇದೆಯಾಗಿ ದೇವದಾಸ್ ಕಪ್ಪಿಕಾಡು ಅತ್ಯಂತ ಹದವಾದ ನಟನೆ ನೀಡಿದ್ದಾರೆ. ಅವರ ಮ್ಯಾನರಿಸಂನಲ್ಲಿ ಹಾಸ್ಯ ಎಲ್ಲೂ ಅತಿರೇಕವೆನ್ನಿಸುವುದಿಲ್ಲ, ಹಾಸ್ಯ ಅಪಹಾಸ್ಯವೂ ಆಗಿಲ್ಲ. ತಲೆಮೇಲೆ ಸೆರಗುಹೊದ್ದ ಅಜ್ಜಿಯಾಗಿ ಉಮೇಶ್ ಪ್ರೇಕ್ಷಕರಿಗೆ ನಗೆಯ ಬಜ್ಜಿ ತಿನ್ನಿಸಿದ್ದಾರೆ. ಮುಖ್ಯಮಂತ್ರಿ ಚಂದ್ರು, ಕರಿಬಸವಯ್ಯ, ಕಾಶಿ, ದತ್ತಣ್ಣ, ಉಮಾಶ್ರೀ, ಶರ್ಮಿಳಾ ಅಪ್ಪನ ಪಾತ್ರಧಾರಿ ಪೂರಕ ಅಭಿನಯ ನೀಡಿದ್ದಾರೆ. ಭಯೋತ್ಪಾದಕನಾಗಿ ರಾಜೇಂದ್ರ ಕಾರಂತ್ ಅತಿರೇಕದ, ಆಮದು ಖಳರಿಗಿಂತ ಸಾವಿರ ಪಾಲು ಉತ್ತಮ. ಅಂಥವರನ್ನು ಬಳಸಿಕೊಳ್ಳಲು ನಮ್ಮ ನಿರ್ಮಾಪಕರಿಗೆ ಮನಸು ಬರಬೇಕಷ್ಟೆ.

    ಶರ್ಮಿಳಾ ಮಾಂಡ್ರೆ ತಾವೊಬ್ಬ ಗ್ಲಾಮರ್ ಬೊಂಬೆ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಚಿಟಪಟ ಮಳೆಹನಿ ಹಾಡಿನಲ್ಲಿ ಮನಸು ಹುಚ್ಚೆಬ್ಬಿಸುವಂತೆ ಕಾಣಿಸಿಕೊಂಡಿದ್ದಾರೆ. ಮಳೆಯಲ್ಲಿ ಶರ್ಮಿಳಾ ನಲಿದಾಡುವ ಸೊಬಗು ಕುಣಿತದಲ್ಲಿರುವ ಕೊರತೆಗಳನ್ನು ಮರೆಮಾಚಿದೆ. ಎರಡನೇ ಹಂತದ ನಾಯಕಿಯರಲ್ಲಿ ಮೇಘನಾ ಪರವಾಗಿಲ್ಲ, ಅನೂಷಾ ಇದ್ದರೂ ಇದ್ದಂತಿಲ್ಲ.

    ರಮೇಶ್ ಉತ್ತರಾರ್ಧದ ಚಿತ್ರಕಥೆಯನ್ನು ಇನ್ನಷ್ಟು ಬಿಗಿಯಾಗಿಸಬಹುದಿತ್ತು, ರವಿವರ್ಮ ಸಂಯೋಜಿಸಿರುವ ಸಾಹಸ ದೃಶ್ಯಗಳನ್ನು ಸ್ವಲ್ಪ ಕಡಿಮೆ ಮಾಡಬಹುದಿತ್ತು, ಉತ್ತರಾರ್ಧದಲ್ಲಿ ಹಾಸ್ಯ ಸನ್ನಿವೇಶಗಳಿಗಿಂತ ಗಂಭೀರತೆಗೆ ಹೆಚ್ಚಿನ ಒತ್ತುಕೊಡಬಹುದಿತ್ತು ಎಂಬ ಕೆಲ ಅಂಶಗಳನ್ನು ಹೊರತುಪಡಿಸಿದರೆ ರಮೇಶ್ ನಿರ್ದೇಶಕರಾಗಿ ಗೆದ್ದಿದ್ದಾರೆ. ಸಂಕಟವನ್ನೆಲ್ಲ ಬದಿಗಿಟ್ಟು ವೆಂಕಟನ ಹಾಸ್ಯಲಹರಿಯನ್ನು ನೋಡಲು ಚಿತ್ರಮಂದಿರಕ್ಕೆ ಖಂಡಿತಬನ್ನಿ, ಕುಟುಂಬ ಸಮೇತ.

    Saturday, June 30, 2012, 14:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X