For Quick Alerts
  ALLOW NOTIFICATIONS  
  For Daily Alerts

  ಹೊಂಗನಸು : ಬಾಂಧವ್ಯದ ಕಥೆ ಬೆಸೆಯುವ ಕಾವ್ಯ

  By Staff
  |

  ನೆನಪಿರಲಿ' ಮೂಲಕ ಚಿತ್ರರಂಗ ಪ್ರವೇಶಿಸಿ, ಜನಮನ ಗೆದ್ದ ರತ್ನಜ, ಈಗ 'ಹೊಂಗನಸು' ಮೂಲಕ ಮತ್ತೆ ಕನಸನ್ನು ಹಂಚಲು ಹೊರಟಿದ್ದಾರೆ. ಎರಡು ವರ್ಷದ ಗ್ಯಾಪ್ ನಂತರ ಮೂಡಿ ಬರುತ್ತಿರುವ ದೃಶ್ಯ ಕಾವ್ಯಕ್ಕೆ ಕಾತುರದಿಂದ ಕಾದಿದ್ದು ಸಾರ್ಥಕವಾಗಲಿದೆ. ಈ ಚಿತ್ರ ಪ್ರತಿಯೊಬ್ಬರ ಮನಸ್ಸನ್ನು ತಟ್ಟುವುದಂತೂ ಖಂಡಿತಾ ಎಂದು ಆತ್ಮ ವಿಶ್ವಾಸದಿಂದ ರತ್ನಜ ಹೇಳುತ್ತಾರೆ.

  • ಚೇತನ್ ಬಿ.ಎಸ್, ಬೆಂಗಳೂರು
  ಸಾಗರ್ ,ಉಮಾ, ವೀರೇಶ್, ಪಿವಿಆರ್ ಚಿತ್ರಮಂದಿರಗಳು ಸೇರಿದಂತೆ ರಾಜ್ಯದೆಲ್ಲೆಡೆ 25ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಹೊಂಗನಸು ಕಾಣಲು ಜನರು ಹೋಗಬಹುದಾಗಿದೆ. ಕಲ್ಪನ ಶಕ್ತಿ ಬ್ಯಾನರ್ ಹೋಗಿ ನೆನಪಿರಲಿ ಬ್ಯಾನರ್ ಬಂದಿರುವುದು ಬಿಟ್ಟರೆ, ರತ್ನಜ ಹಾಗೂ ಅಜಯ್ ಅವರ ನಿರ್ಮಾಣ ತಂಡ ಅದೇ ಹುಮ್ಮಸ್ಸಿನಲ್ಲಿದೆ. ಸುಮಾರು 3ಕೋಟಿ ವೆಚ್ಚದಲ್ಲಿ ತಯಾರಿಗಿರುವ ಈ ಚಿತ್ರದಲ್ಲಿ ನೆನಪಿರಲಿ ಪ್ರೇಮ್, ಅಂಜಲಿ(ತೆಲುಗು ಮೂಲದ ನಟಿ), ಅನುರಾಧ ಮೆಹ್ತಾ(ಅಜಯ್ ಚಿತ್ರದ ನಾಯಕಿ) ಮುಖ್ಯ ಭೂಮಿಕೆಯಲ್ಲಿದ್ದಾರೆ. ಅನಂತ್ ನಾಗ್, ಶರಣ್ ಮುಂತಾದವರು ಪೋಷಕ ಪಾತ್ರವಹಿಸಿದ್ದಾರೆ.

  ಹೊಂಗನಸು ಕಥಾ ಹಂದರ

  ಅನಂತನಾಗ್ ಗೆ ತನ್ನ ತಂಗಿ ಮಗಳಾದ ಸೌಮ್ಯ(ಅನುರಾಧ ಮೆಹ್ತಾ)ಳನ್ನು ತನ್ನ ಹಿರಿಯ ಮಗ ಸಂತೋಷ್(ಆದರ್ಶ್) ಕೊಟ್ಟು ಮದುವೆ ಮಾಡಬೇಕೆಂಬುದು ಹೆಬ್ಬಯಕೆ.ಇದಕ್ಕೆ ಸೌಮ್ಯಳ ತಂದೆ, ಅನಂತ್ ಅವರ ಸ್ನೇಹಿತ ರಮೇಶ್ ಭಟ್ಟರ ಒಪ್ಪಿಗೆ ಕೂಡ ಇರುತ್ತದೆ. ಈ ಬಗ್ಗೆ ಬಾಲ್ಯದಲ್ಲಿ ಮಾತುಕತೆ ನಡೆದಿರುತ್ತದೆ. ಈ ಕನಸನ್ನು ನನಸು ಮಾಡುವ ಹೊಣೆಯನ್ನು ಅನಂತ್ ಅವರ ಎರಡನೇ ಮಗ ನಾಯಕ ಸಾಗರ್ (ಪ್ರೇಮ್) ಹೊತ್ತುಕೊಳ್ಳುತ್ತಾನೆ. ಆದರೆ, ತನ್ನ ಅತ್ತಿಗೆಯನ್ನು ಮನೆಗೆ ಕರೆತರುವ ಮೊದಲು ಬೆಳೆದು ನಿಂತ ತಂಗಿಯ ಮದುವೆ ಮಾಡಬೇಕಾಗಿರುತ್ತದೆ.ಶಿಲ್ಪ(ನಾಯಕನ ತಂಗಿ) ಅನೇಕ ವರ ಪರೀಕ್ಷೆಯ ನಂತರ ಒಪ್ಪಿಕೊಂಡ ವರ ಮನೆಯವರಿಗೆ ಮೆಚ್ಚುಗೆಯಾಗುತ್ತದೆ. ಆದರೆ, ತನ್ನ ತಂಗಿ ಇಂಪನ(ಅಂಜಲಿ)ಳನ್ನು ನಾಯಕ ಸಾಗರ್ ಮದುವೆಯಾದರೆ ಮಾತ್ರ ನಾನು ಶಿಲ್ಪಳನ್ನು ವರಿಸುತ್ತೇನೆ ಎಂದು ಹುಡುಗ ಹೇಳಿದಾಗ ಅನಂತ್ ನಾಗ್ ಹಾಗೂ ನಾಯಕ ಪ್ರೇಮ್ ಗೆ ದಿಗ್ಭ್ರಮೆ ಯಾಗುತ್ತದೆ. ಇಬ್ಬರ ಹೊಂಗನಸು ಕಮರದೆ , ಹೇಗೆ ಅದನ್ನು ನಾಯಕ ಅರಳಿಸುತ್ತಾ, ಸಂಬಂಧಗಳ ಬೆಸುಗೆಯನ್ನು ಉಳಿಸುತ್ತಾನೆ ಎಂಬುದು ಮುಂದಿನ ಕಥಾ ವಿಸ್ತರಣೆ.

  ಕಥೆಯ ಎಳೆ ಚಿಕ್ಕದಾಗಿ ಚೊಕ್ಕವಾಗಿದೆ. ಅದಕ್ಕೆ ಪೂರಕವಾದ ನಟನೆ ಹಾಗೂ ಸಂಗೀತ, ಸಾಹಿತ್ಯದ ಸಾಥ್ ಸಿಕ್ಕಿದೆ. ಚಿತ್ರದ ಮೊದಲಾರ್ಧದಲ್ಲಿ ಪ್ರೇಮ್ ಹಾಗೂ ಶರಣ್ ಅವರ ನಟನೆ ಮೋಡಿ ಮಾಡುತ್ತದೆ. ಆದರೆ ದ್ವಿತಿಯಾರ್ಧದಲ್ಲಿ ಕಥೆಯನ್ನು ಎಳೆದಿದ್ದು, ಪ್ರೇಕ್ಷಕರ ಸಹನೆಯನ್ನು ಪರೀಕ್ಷಿಸುವಂತೆ ಮಾಡುತ್ತದೆ.ಫ್ಲಾಶ್ ಬಾಕ್ ನಲ್ಲಿ ನಾಯಕನಿಗೆ ಅವನ ಅತ್ತಿಗೆ ಮೇಲಿನ ಅತಿಯಾದ ಗೌರವಯುತ ಪ್ರೀತಿಯನ್ನು ತೋರುವ ಬರದಲ್ಲಿ ಸಾಕಷ್ಟು ರೀಲುಗಳನ್ನು ತಿಂದಿರುವುದನ್ನು ಬಿಟ್ಟರೆ, ರತ್ನಜರವರು ತಾವು ಹೇಳಬೇಕದ್ದನ್ನು ಚುಟುಕಾಗಿ ಹೇಳುವ ಪ್ರಯತ್ನ ಹಲವೆಡೆ ಮಾಡಿದ್ದಾರೆ. ಸೂಕ್ಷ್ಮ ಕಸುರಿಯ ನಿರ್ದೇಶಕ ಎಂದು ಗುರುತಿಸಲ್ಪಟ್ಟ ರತ್ನಜ ಅವರು ನಿಧಾನಗತಿಗೆ ಇಳಿದರೆ ಎಂಬ ಅನುಮಾನ ಕಾಡಿದರೂ,ಚಿತ್ರದ ಕ್ಲೈಮಾಕ್ಸ್ ಅದಕ್ಕೆ ಉತ್ತರ ನೀಡುತ್ತದೆ.

  ಇನ್ನು ನಟನಾ ವಿಭಾಗದಲ್ಲಿ ಪ್ರೇಮ್ ಹಿಂದಿನ ತಮ್ಮ ತಪ್ಪುಗಳನ್ನು ತಿದ್ದಿಕೊಂಡು, ಉತ್ತಮ ಅಭಿನಯ ನೀಡಿ ಜನಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.ಇಬ್ಬರು ನಾಯಕಿಯರು ಪರಕೀಯರಾದರೂ ಇಲ್ಲಿನ ಹವಾಗುಣಕ್ಕೆ ಹೊಂದಿಕೊಂಡಂತೆ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ಅನಂತ್ ನಾಗ್, ರಮೇಶ್ ಭಟ್, ವಿನಯಾ ಪ್ರಕಾಶ್ ಎಂದಿನಂತೆ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.ನವೀನ್ ಕೃಷ್ಣ ಹಾಗೂ ಶರಣ್ ಅಭಿನಯ ಜನರ ಮನಸ್ಸಿನಲ್ಲಿ ಉಳಿಯುತ್ತದೆ.

  ರತ್ನಜರವರ ನೆನಪಿರಲಿ ಹಾಡಿನ ಗುಂಗಿನಿಂದ ಈ ಚಿತ್ರದ ಹಾಡುಗಳನ್ನು ಆಲಿಸಿದರೆ, ನಿರಾಶೆ ಮೂಡುವುದು ಖಂಡಿತವಾದರೂ, ಈ ಚಿತ್ರಕ್ಕೆ ಅಗತ್ಯವಾದ ಸಾಹಿತ್ಯ, ಸಂಗೀತ ಒದಗಿಸುವಲ್ಲಿ ಹಂಸಲೇಖ ಯಶಸ್ವಿಯಾಗಿದ್ದಾರೆ.ಹಾಡಿಗೆ ತಕ್ಕ ಲೋಕೇಷನ್, ಸಂಗೀತ, ನೃತ್ಯ ಈ ಚಿತ್ರದ ಪ್ರಮುಖ ಅಂಶವಾಗಲಿದೆ. ಈ ಬಾಳಿನ ಜೊತೆ ವಾತ್ಸಲ್ಯದ ಲತೆ ಬೆಳೆಸೊ ಕನಸೆ ಹೊಂಗನಸು ಹೊಂಗನಸು...ಎಫ್ ಎಂ ವಾಹಿನಿಯಲ್ಲಿ ಸಾಮಾನ್ಯವಾಗಿ ಮೂಡಿ ಬರುವ ಈ ಹಾಡು ಶಾನ್ ಕಂಠದಲ್ಲಿ ಬೇಡವೆಂದರು ಇಷ್ಟವಾಗುವುದು, ಹಂಸಲೇಖರ ಸಾಹಿತ್ಯ, ಸಂಗೀತ ಕಾರಣ ಎಂದು ಹೇಳಬಹುದು.
  ಆದರೂ ಹಂಸಲೇಖರವರ ಮಾಂತ್ರಿಕ ಸ್ಪರ್ಶ ಕಾಣೆಯಾಗಿದೆ ಎಂದು ವಿಷಾದದಿಂದ ಹೇಳಬಹುದು.ಚಿತ್ರದ ಅವಧಿ ಕೊಂಚ ಹೆಚ್ಚಿಸುವುದು ಇನ್ನೊಂದು ಮೈನಸ್ ಅಂಶ.ಸ್ವಲ್ಪ ಕತ್ತರಿ ಪ್ರಯೋಗ ನಡೆಸಿದ್ದರೆ, ಸೂಕ್ಷ್ಮವಾದ ಕತೆ ಸಿಗುತ್ತಿತ್ತು.ಸಂಕಲನಕಾರರು ಇಲ್ಲಿ ಸೋತಿದ್ದಾರೆ.

  ಏನೇ ಆದರೂ, ತಮ್ಮ ಅನಿಸಿಕೆ ,ಅಭಿಪ್ರಾಯಗಳನ್ನು ತೆರೆಯ ಮೇಲೆ ಸ್ಪಷ್ಟವಾಗಿ ತರುವ ಪ್ರಯತ್ನದಲ್ಲಿ ರತ್ನಜ ಗೆದ್ದಿದ್ದಾರೆ. ಕಾಣೆಯಾಗುತ್ತಿರುವ ಕೌಟುಂಬಿಕ ಸಂಬಂಧಗಳನ್ನು ಬೆಸೆಯುವ ಕಾಯಕಕ್ಕೆ ಹೊಂಗನಸು ನಾಂದಿ ಹಾಡುವಂತಿದೆ. ಯಾವುದೇ ಪೂರ್ವಗ್ರಹವಿಲ್ಲದೆ ಚಿತ್ರವನ್ನು ಕುಟುಂಬ ಸಮೇತ ಕೂತು ವೀಕ್ಷಿಸಲು ಅಡ್ಡಿಯಿಲ್ಲ. ಹೊಂಗನಸು...ರತ್ನಜರ ಕುಸುರಿಯಿಂದ ಹೊರಬಿದ್ದ ಸುಂದರ ದೃಶ್ಯಕಾವ್ಯ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X