»   » ಒಂದು ಕೊಲೆ. ನಂತರ ಕೋರ್ಟಿನ ಕಟಕಟೆ. ಆಮೇಲೆ ಒಂದು ಹಾಡು. ಮತ್ತೆ ಹೊಡೆದಾಟ. ... ಎಲ್ಲ ಓರೆಕೋರೆಗಳನ್ನೂ ಸಂಭಾಳಿಸಿಕೊಂಡು ಹೋಗಿರುವುದು ನಾಯಕ ಶಿವರಾಜ್‌ಕುಮಾರ್‌ ಮಾತ್ರ.

ಒಂದು ಕೊಲೆ. ನಂತರ ಕೋರ್ಟಿನ ಕಟಕಟೆ. ಆಮೇಲೆ ಒಂದು ಹಾಡು. ಮತ್ತೆ ಹೊಡೆದಾಟ. ... ಎಲ್ಲ ಓರೆಕೋರೆಗಳನ್ನೂ ಸಂಭಾಳಿಸಿಕೊಂಡು ಹೋಗಿರುವುದು ನಾಯಕ ಶಿವರಾಜ್‌ಕುಮಾರ್‌ ಮಾತ್ರ.

Posted By:
Subscribe to Filmibeat Kannada

ಒಂದು ಕೊಲೆ. ನಂತರ ಕೋರ್ಟಿನ ಕಟಕಟೆ. ಆಮೇಲೆ ಒಂದು ಹಾಡು. ಮತ್ತೆ ಹೊಡೆದಾಟ. ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಇವೇ ದೃಶ್ಯಗಳು ಮರುಕಳಿಸುತ್ತವೆ. ಬರೀ ಘಟನೆಗಳೇ ಚಿತ್ರವನ್ನು ವೇಗವಾಗಿ ಮುನ್ನಡೆಸುತ್ತವೆ. ಎಲ್ಲ ಓರೆಕೋರೆಗಳನ್ನೂ ಸಂಭಾಳಿಸಿಕೊಂಡು ಹೋಗಿರುವುದು ನಾಯಕ ಶಿವರಾಜ್‌ಕುಮಾರ್‌ ಮಾತ್ರ. ಕುರುಚಲು ದಾಡಿಯ ಮೇಕಪ್‌ ಇಲ್ಲದ ಮುಖದಲ್ಲಿ ನಟಿಸಿದ್ದು ಅವರ ಪಾತ್ರದ ಬಗೆಗಿನ ಪ್ರೀತಿ ತೋರಿಸುತ್ತದೆ. ಜೊತೆಗೆ ಹೊಸ ಮ್ಯಾನರಿಸಂನಿಂದ ಹೊಸ ಇಮೇಜ್‌ ಸೃಷ್ಟಿಸಿಕೊಳ್ಳುವ ಪ್ರಯತ್ನದಲ್ಲೂ ಶಿವಣ್ಣ ಯಶಸ್ವಿಯಾಗಿದ್ದಾರೆ. ಒಂದೇ ಬೆರಳಿನಿಂದ ಸಲಾಂ ಮಾಡೋದು, ಕತ್ತನ್ನು ಹೊರಳಿಸುವ ವರಸೆ ನಾಟಕೀಯವೆನಿಸದಂತೆ ಎಚ್ಚರಿಕೆ ವಹಿಸಿದ್ದಾರೆ. ‘ಸಾಹಸ ಅಪ್ಪನಿಂದ ಬಂದ ಬಳುವಳಿ’ ಅಥವಾ ‘ನನ್ನ ಅಪ್ಪನಿಗೆ ನಾನು ಒಬ್ಬನೇ ಮಗನಲ್ಲ. ಅವರಿಗೆ ಮೂವರು ಮಕ್ಕಳು’ ಎನ್ನುವ ಸಂಭಾಷಣೆ ಶಿವಣ್ಣ ಹೇಳಿದರಷ್ಟೇ ಚೆಂದ ಅನ್ನಿಸುವಂತಿವೆ. ‘ಕ್ಯಾಟ್‌ ವಾಕ್‌’ನಂತೆ ನಡೆಯುವ ಶೈಲಿಯನ್ನು ಬದಲಿಸಿಕೊಂಡಿದ್ದರೆ ಪಾತ್ರದ ಫೋರ್ಸ್‌ ಇನ್ನಷ್ಟು ಹೆಚ್ಚಾಗುತ್ತಿತ್ತು. ಉಳಿದಂತೆ ಬಹುತೇಕ ಮಾತುಗಳು ಮೆಗಾ ಧಾರಾವಾಹಿಯ ಸಂಭಾಷಣೆ ನೆನಪಿಸುತ್ತದೆ. ಎಷ್ಟೋ ಕಡೆ ನಾಟಕದ ಪಡಿಯಚ್ಚಿನಂತಿವೆ. ಮಾತು ಬರೆವಾಗ ಸತ್ಯ ಅದೇಕೆ ಅರೆಬೆಂದ ಕವಿಪುಂಗವರಾಗಲು ಯತ್ನಿಸುತ್ತಾರೋ?

ಬೆಣ್ಣೆ ಬೆನ್ನನ್ನು ತೋರಿಸುವಲ್ಲಿ ವಹಿಸಿದ ಕಾಳಜಿಯ ಹದಿನೈದು ಪೈಸೆಯಷ್ಟು ಅಭಿನಯದಲ್ಲಿ ತೋರಿಸಿದ್ದರೆ ನಾಯಕಿ ಮೇಘನಾ ನಾಯ್ಡು ಮರ್ಯಾದೆಯಾದರೂ ಉಳಿಯುತ್ತಿತ್ತು. ಆದರೂ ಈ ಹುಡುಗಿ ಚೆಂದವಾಗಿ ಕುಣಿಯುತ್ತಾಳೆ. ಹೊಡೆದಾಟದಲ್ಲಿ ಮಾಲಾಶ್ರೀಯನ್ನು ನೆನಪಿಗೆ ತರುತ್ತಾಳೆ. ರುಚಿತಾ ಪ್ರಸಾದ್‌ ಬರೀ ‘ಐಟಂ ಸಾಂಗ್‌’ನಲ್ಲಿ ಹಾದುಹೋಗುತ್ತಾಳೆ. ಇನ್ನು ಮುಂದೆ ಒಂದೇ ಹಾಡಿಗಾಗಿಯೂ ರುಚಿತಾ ಲಭ್ಯ.

ಅವಿನಾಶ್‌ ತೆರೆ ಮೇಲೆ ಕಾಣಿಸೋದು ಕಡಿಮೆಯಾದರೂ ವಿಶಿಷ್ಟ ಗೆಟಪ್ಪಿನಿಂದ ದಿಲ್‌ಖುಷ್‌ ಮಾಡುತ್ತಾರೆ. ದತ್ತಣ್ಣ, ಅಶೋಕ್‌, ಜೈಜಗದೀಶ್‌ ಹೆಸರಿಗೆ ಇದ್ದಾರೆ. ಸಾಧುಕೋಕಿಲ , ಸಂಗೀತದಲ್ಲಿ ಎಲ್ಲ ಹಾಡುಗಳು ಒಂದೇ ತಪ್ಪಲೆಯಲ್ಲಿ ಬೆಂದ ಅನ್ನದಂತಿವೆ. ಅಬ್ಬರದ ಸಂಗೀತ ಪದ್ಯವನ್ನೇ ನುಂಗಿ ಹಾಕುತ್ತದೆ. ಹಿನ್ನೆಲೆ ಸಂಗೀತ ಕತೆಗೆ ಪೂರಕವಾಗಿದೆ.

ಶಿವರಾಜ್‌ಕುಮಾರ್‌ ತಮ್ಮ ಪಾತ್ರದ ಬಗ್ಗೆ ತೋರಿಸುವ ಆಸಕ್ತಿಯನ್ನೇ ಚಿತ್ರದ ಉಳಿದ ವಿಭಾಗಗಳ ಕಡೆಗೂ ಹರಿಸಿದರೆ ಒಳ್ಳೆಯದು. ಇಲ್ಲದಿದ್ದರೆ ಅವರು ಮಾಡಿದ ಕೆಲಸ, ಅದಕ್ಕೆ ಹಾಕಿದ ಶ್ರಮ, ತೋರಿಸುವ ಶ್ರದ್ಧೆ ಎಲ್ಲ ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತಾಗುತ್ತದೆ.

(ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada