»   » ಕದಂಬ ನಿಂತರೂ ಹಬ್ಬ, ಕುಂತರೂ ಹಬ್ಬ

ಕದಂಬ ನಿಂತರೂ ಹಬ್ಬ, ಕುಂತರೂ ಹಬ್ಬ

Posted By:
Subscribe to Filmibeat Kannada
  • ಮಹೇಶ್‌ ದೇವಶೆಟ್ಟಿ
‘ಅವಳ ಹೆಣಕ್ಕೆ ಬೆಂಕಿ ಇಡಲು ನಾನು ಬರೊಲ್ಲ. ಬೇಕಾದ್ರೆ ನೀನೇ ಬೆಂಕಿ ಹಚ್ಚು.’ ಹೀಗಂತ ಹೇಳಿ ಆತ ಕಟ್ಟಿಗೆ-ಬೆಂಕಿ ಪೆಟ್ಟಿಗೆಯನ್ನು ನಾಯಕನ ಕೈಗೆ ಕೊಡುತ್ತಾನೆ. ರಕ್ತ ಹಂಚಿಕೊಂಡು ಹುಟ್ಟಿದ ಮಗನೇ ಅಮ್ಮನ ಹೆಣಕ್ಕೆ ಬೆಂಕಿ ಇಡಲಾರೆ ಎಂದು ಹೇಳಿದಾಗ ಹೆತ್ತ ತಂದೆಗೆ ಹೇಗಾಗಬೇಡ? ಹತ್ತು ಮಾತು ಹೇಳುವುದನ್ನು ಕೇವಲ ಎರಡು ಮೂರು ಹೆಜ್ಜೆ ತಪ್ಪಿದಂತೆ ಅಲ್ಲೇ ಕುಸಿದುಕೊಳ್ಳುತ್ತಾ ವಿಷ್ಣು ತಮಗಾದ ಅಘಾತವನ್ನು ತೋರಿಸುವುದಿದೆಯಲ್ಲ ....ಅಲ್ಲಿಗೆ ಅವರು ತಮ್ಮ ಎಲ್ಲ ಪ್ರತಿಭೆಯನ್ನು ಧಾರೆ ಎರೆದು ಬಿಟ್ಟಿದ್ದಾರೆ. ಇಂಥಹ ದೃಶ್ಯಗಳು ಅವರ ಚಿತ್ರದಲ್ಲಿಯೇ ಸಾಕಷ್ಟು ಬಂದು ಹೋಗಿವೆ. ಆದರೆ ಅಂಥದೊಂದು ಹರಳುಗಟ್ಟಿದ ಅಭಿನಯ ನೋ ಚಾನ್ಸ್‌.

ಒಂದರ್ಥದಲ್ಲಿ ಇಡೀ ಚಿತ್ರವೇ ಕದಂಬನ ಹಬ್ಬ. ನಿಷ್ಠಾವಂತ ಪೊಲೀಸ್‌ ಅಧಿಕಾರಿಯಾಗಿ. ಅಚ್ಛಾ ಖಾಸಾ ಪತಿಯಾಗಿ, ಪುತ್ರ ವ್ಯಾಮೋಹಿಯಾಗಿ, ನೋವಿನ ಧಡಕಿಗೆ ಎದೆಯ ಕುಡಿಕೆ ಒಡೆದು ಕುಳಿತುಕೊಳ್ಳುವ ಅಸಹಾಯಕ ತಂದೆಯಾಗಿ ವಿಷ್ಣು, ತಾವು ಇದುವರೆಗೆ ನಟಿಸಿದ ಎಲ್ಲ ಪಾತ್ರಗಳ ಅಷ್ಟಷ್ಟೇ ರಸ ಹಿಂಡಿ ಒಂದೇ ತಟ್ಟೆಯಲ್ಲಿ ಸುರಿದು ಬಿಟ್ಟಿದ್ದಾರೆ. ಎದುರಿಗೆ ಕುಳಿತವರ ಬಾಯೆಲ್ಲಾ ನೀರು ನೀರು. ಕೆಲವೊಮ್ಮೆ ಕಣ್ಣಲ್ಲೂ...

ವಿಷ್ಣು ಚಿತ್ರವೆಂದರೆ ಹೀಗಿರಬೇಕಪ್ಪಾ . ಹೀಗೇನಾದರು ಕ್ರೆಡಿಟ್‌ ಕೊಡಬೇಕೆನಿಸಿದರೆ ಅದನ್ನು ನಿರ್ದೇಶಕ ಸುರೇಶ್‌ ಕೃಷ್ಣ ಜೇಬಿಗೆ ಹಾಕಿ. ಯಾಕೆಂದರೆ ಅವರಿಗೆ ವಿಷ್ಣು ಅನುಭವ ಗೊತ್ತು. ಅವರ ವಯಸ್ಸಿಗೆ ಎಂತಹ ಪಾತ್ರ ರೂಪಿಸಬೇಕೆನ್ನುವುದು ಗೊತ್ತು. ನೋಡುಗರನ್ನು ಹಿಡಿದಿಟ್ಟು ಕೊಳ್ಳುವ ಕಥೆಯ ತಿರುಳು ಹೇಗಿರಬೇಕೆನ್ನುವುದು ಗೊತ್ತು. ಸೂಕ್ಷ್ಮ ವಿಷಯಗಳನ್ನು ಅದರೆಲ್ಲ ಸೊಗಡಿನೊಂದಿಗೆ ಕ್ಯಾಚ್‌ ಮಾಡುವ ನೈಪುಣ್ಯ ಗೊತ್ತು. ಪ್ರತಿಯಾಂದು ಪ್ರೇಮಿನಲ್ಲೂ ಶ್ರೀಮಂತಿಕೆ ಹೇಗಿದ್ದರೆ ಚೆಂದ ಅನ್ನುವುದೂ ಗೊತ್ತು. ಆದರೆ ಒಂದು ಗೊತ್ತಿರುವ ವಿಷಯವನ್ನು ಅವರು ಬೇಕಂತಲೇ ಮರೆತಿದ್ದಾರೆ. ಅದು ವಿಷ್ಣು ಇಮೇಜು. ಹಾಗಾಗಿ ಕದಂಬನಿಗೊಂದು ಹೊಸ ಸಾಮ್ರಾಜ್ಯ ದೊರೆತಂತಾಗಿದೆ.

ನಾಯಕ ನಿಷ್ಟಾವಂತ ಪೊಲೀಸ್‌ ಅಧಿಕಾರಿ. ಕರ್ತವ್ಯಕ್ಕೆ ರಕ್ತ ಸಂಬಂಧವೇ ಅಡ್ಡ ಬಂದರೂ ಆತ ಡೋಂಟ್‌ಕೇರ್‌. ಹೀಗಿದ್ದಾಗ ಎಳೆಯ ಮಗನನ್ನು ವಿಲನ್‌ ಕಡೆಯವರು ಅಪಹರಿಸುತ್ತಾರೆ. ಬ್ಲ್ಯಾಕ್‌ಮೇಲ್‌ ಮಾಡುತ್ತಾರೆ. ಆದರೆ ನಾಯಕ ಹೇಳುತ್ತಾನೆ: ‘ಬೇಕಾದರೆ ಮಗನನ್ನು ಶೂಟ್‌ ಮಾಡಿ. ನಾನು ಕರ್ತವ್ಯಕ್ಕೆ ದ್ರೋಹ ಮಾಡೊಲ್ಲ .’ ಅದು ಮಗನ ಕಿವಿ ಮುಟ್ಟುತ್ತದೆ, ಎದೆಯಲ್ಲಿ ಉಳಿಯುತ್ತದೆ. ಅಪ್ಪನನ್ನು ಆತ ದ್ವೇಷ ಮಾಡತೊಡಗುತ್ತಾನೆ. ಕಳ್ಳನಾಗುತ್ತಾನೆ, ಮುಂಬೈಗೆ ಓಡಿ ಹೋಗಿ ಕೊಲೆ ಮಾಡಲು ಯತ್ನಿಸಿ ಹದಿನಾಲ್ಕು ವರ್ಷ ರಿಮ್ಯಾಂಡ್‌ ಹೋಮ್‌ ಸೇರುತ್ತಾನೆ. ಮರಳಿ ಬಂದಾಗ ಅಪ್ಪನ ಎಲಾ ್ಲ ಮಾತನ್ನು ವಿರೋಧಿಸುವುದೇ ಜನ್ಮಸಿದ್ಧ ಹಕ್ಕೆಂದು ತಿಳಿಯುತ್ತಾನೆ. ಕೊನೆಗೆ ಅಪ್ಪನ ಎದೆಗೇ ಪಿಸ್ತೂಲು ಇಡುತ್ತಾನೆ...

ಕತೆಯಲ್ಲಿ ಹೊಸತನವೇನು ಇಲ್ಲ. ಆದರೆ ಅದನ್ನು ನಿರೂಪಿಸಿದ ಧಾಟಿಯೇ ಹೊಸ ದಾರಿಯಾಗಿದೆ. ಹೊಡೆದಾಟ, ಭಾವುಕತೆ, ಪ್ರೇಮ, ದ್ವೇಷ ಯಾವುದೂ ಅತಿರೇಕವಾಗಿಲ್ಲ. ‘ಅಪ್ಪ -ಅಮ್ಮ ಇಲ್ದೋನು ಅನಾಥನಲ್ಲ, ಪ್ರೀತಿ ಸಿಗದವನೇ ನಿಜವಾದ ಅನಾಥ’ ಎನ್ನುತ್ತಾ ವಿಷ್ಣು, ರಮೇಶ್‌ಭಟ್‌ ತಲೆ ತಿನ್ನುವ ಹಾಸ್ಯ ದೃಶ್ಯ ಬಚ್ಚನ್‌ ಚಿತ್ರಗಳ ಲೆವಲಿನಲ್ಲಿದೆ. ಪ್ರೇಮದ ಸನ್ನಿವೇಶಗಳನ್ನು ವಿಷ್ಣು ವಯೋಮಾನಕ್ಕೆ ತಕ್ಕಂತೆ ಹೆಣೆಯಲಾಗಿದೆ. ಅದರಲ್ಲಿನ ನವಿರತೆ ಕೂಡಾ ಗರಿಕೆ ಮೇಲಿನ ಇಬ್ಬನಿ. ‘ಈ ಐದು ಬೆರಳಲ್ಲಿ ಪಂಚಕೋಟಿ ಕನ್ನಡಿಗರು ಇದ್ದಾರೆ, ಮುಷ್ಟಿ ಬಿಗಿ ಮಾಡಿ ಹೊಡೆದರೆ ನೀನು ಎದ್ದು ಬರೋಲ್ಲ ’ ಇದು ಎಂ.ಎಸ್‌.ರಮೇಶ್‌ ಬರೆದ ಮಾತುಗಳ ಖದರು. ಅದೊರೊಂದಿಗೆ ದೇವಾ ನೀಡಿದ ಸಂಗೀತ, ಕಲ್ಯಾಣ್‌ ಬರೆದ ಹಾಡು, ರಮೇಶ್‌ ಬಾಬು ಛಾಯಾಗ್ರಹಣ, ಲೈಟಿಂಗ್‌ ಮಾಡಿದಾತನ ನೆರಳುಬೆಳಕಿನ ಗ್ರಹಿಕೆ, ಕಾಸ್ಟ್ಯೊಮ್‌ ರೂಪಿಸಿದವರ ಅಭಿರುಚಿ... ಎಲ್ಲವೂ ಹೋಳಿಗೆಯಾಂದಿಗೆ ಹೆಪ್ಪಿಟ್ಟ ತುಪ್ಪ.

ಅಪ್ಪನನ್ನು ದ್ವೇಷಿಸುವ, ಅನಾಥ ಪ್ರಜ್ಞೆಯಿಂದ ನರಳುವ ಹುಡುಗನಾಗಿ ನವೀನ್‌ ಕೃಷ್ಣ ಸುಪ್ಪರ್‌ ಲೊಟ್ಟೊ ಹೊಡೆದಿದ್ದಾನೆ. ಜಗತ್ತನ್ನೇ ತಿರಸ್ಕಾರದಿಂದ ನೋಡುವ ನಿರ್ಲಕ್ಷ್ಯತನ, ಉಡಾಫೆ, ಕೊಬ್ಬು ... ಎಲ್ಲವನ್ನೂ ಅರೆದು ಕುಡಿದು ಬಿಟ್ಟಿದ್ದಾನೆ. ಭಾನುಪ್ರಿಯಾ, ರಮೇಶ್‌ಭಟ್‌ ಅವರದ್ದು ಎಷ್ಟು ಬೇಕೋ ಅಷ್ಟು ಅಭಿನಯ. ವಿಲನ್‌ ತರುಣ್‌ ಒಳ್ಳೆ ಸರ್ಕಸ್ಸಿನ ಜೋಕರ್‌ನಂತೆ ತಿಣುಕಾಡಿದ್ದಾನೆ.

ಹಾಗಂತ ಇದರಲ್ಲಿ ತಪ್ಪುಗಳೇ ಇಲ್ಲವೆಂದಲ್ಲ. ಹದಿನಾಲ್ಕು ವರ್ಷ ಮಗ ರಿಮ್ಯಾಂಡ್‌ ರೂಮ್‌ಮಲ್ಲಿದ್ದರೂ ಒಂದು ಸಲವೂ ಅಪ್ಪ -ಅಮ್ಮ ನೋಡಲು ಹೋಗದಿರುವುದು ಮತ್ತು ಆ ಸಮಯದಲ್ಲಿ ಅವರು ಏನೇನು ಆಗಿಲ್ಲವೆಂಬಂತೆ ವರ್ತಿಸುವುದು, ತಂದೆ-ತಾಯಿಯರನ್ನು ಅನಾದರದಿಂದ ಕಾಣುವ ನವೀನ್‌ ಒಂದು ಹಾಡಿನಲ್ಲಿ ಅವರೊಂದಿಗೇ ಕುಲುಕುಲು ನಗುತ್ತಾ ಡ್ಯಾನ್ಸ್‌ ಮಾಡುವುದು ಮತ್ತು ಮಗನ ಕಳ್ಳತನ ಬಯಲು ಮಾಡಲು ಅಷ್ಟೊಂದು ನಾಟಕವಾಡಿ ಅಷ್ಟೊಂದು ಸಮಯ ಅದಕ್ಕೆಂದೇ ತಿಂದದ್ದು ಅಗತ್ಯವಿತ್ತಾ ಎಂದೆನಿಸುವುದು ನೋಡುಗರು ಒಪ್ಪಿಕೊಳ್ಳುವಂತೆ ಚಿತ್ರಿತವಾಗಿಲ್ಲ.

ವಿಷ್ಣುವಿಗೆ ಜ್ಞಾನೋದಯವಾದಂತಿದೆ. ‘ಹೃದಯವಂತ’ ಚಿತ್ರದಲ್ಲಿ ನೂರಾರು ಸಲ ‘ದೇವರು ದೇವರು’ ಎಂದು ಕರೆಸಿಕೊಂಡದ್ದು ವಿಷ್ಣು ಅವರಿಗೇ ಬೇಸರವಾದಂತಿದೆ. ಅದಿಲ್ಲಿ ಕೇವಲ ಒಂದು ಬಾರಿಗೆ ಇಳಿದಿದೆ. ಅದಕ್ಕಿಂತ ಹೆಚ್ಚಾಗಿ ಎರಡು ಮುಖ್ಯ ಪಾತ್ರಗಳು ಮೇಲಿಂದ ಮೇಲೆ ಅವರನ್ನು ಬಾಯಿಗೆ ಬಂದಂತೆ ಬೈಯ್ದಿವೆ. ಏಕವಚನದಲ್ಲಿ ಕರೆದಿವೆ. ಇಮೇಜಿನ ಬಗ್ಗೆ ತಲೆ ಕೆಡಿಸಿಕೊಳ್ಳದೆ ವಿಷ್ಣು ಕೂಡಾ ಅದನ್ನು ಒಪ್ಪಿಕೊಂಡಿದ್ದಾರೆ. ಆದರೆ ಅವರ ಅಭಿಮಾನಿಗಳು ಇದನ್ನು ಒಪ್ಪಿಕೊಳ್ಳುತ್ತಾರಾ? ಕಾಲವೇ ಹೇಳಬೇಕು.

ಆದರೆ ‘ಬಾಳ ಸಂಗಾತಿಯೆ...’ ಎನ್ನುವ ಹೃದಯಸ್ಪರ್ಶಿ ಹಾಡಿನಲ್ಲಿ ವಿಷ್ಣು ಅದೆಷ್ಟು ತಾದಾತ್ಮ್ಯವಾಗಿ ನಟಿಸಿದ್ದಾರೆಂದರೆ ಹಿ ಆ್ಯಕ್ಟ್ಸ್‌ ಜಸ್ಟ್‌ ಲೈಕ್‌ ಎ ಪೋಯೆಟ್ರಿ. ‘ಕದಂಬ’ ದಿಗ್ವಿಜಯ ಸಾಧಿಸುವುದು ಹೀಗೆ...

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada