»   » ಸಾವಿನ ಸಾಮ್ರಾಜ್ಯದ ಇನ್ನೊಂದು ‘ಅಶೋಕ’ ಚರಿತ್ರೆ

ಸಾವಿನ ಸಾಮ್ರಾಜ್ಯದ ಇನ್ನೊಂದು ‘ಅಶೋಕ’ ಚರಿತ್ರೆ

Subscribe to Filmibeat Kannada


ಗನ್‌ ಹಿಡಿಯಬೇಕಾಗಿದ್ದ ಕೈ ಅನಿವಾರ್ಯವಾಗಿ ಮಚ್ಚು ಹಿಡಿಯಬೇಕಾಗುತ್ತದೆ. ಅದ್ಹೇಗೆ ಅಂತ ತೆರೆಯ ಮೇಲೇ ವಸಿ ನೋಡ್ರಲ್ಲಾ...

  • ಚೇತನ್‌ ನಾಡಿಗೇರ್‌
ಆ ಅಶೋಕ ಸಾವಿಗೆ ಹೆದರಿ ಸಾಮ್ರಾಜ್ಯ ಬಿಟ್ಟು ಹೋದ. ಈ ಅಶೋಕ ಸಾವಿನ ಮೇಲೆ ಸಾಮ್ರಾಜ್ಯ ಕಟ್ತಾನೆ!

ಇದು ನಾಯಕ ಹೇಳುವ ಒಂದು ಡೈಲಾಗ್‌. ಈ ಸಂಭಾಷಣೆ ಚಿತ್ರದ ಸಾರಾಂಶವೂ ಹೌದು, ಒನ್‌ಲೈನ್‌ ವಿಮರ್ಶೆಯೂ ಹೌದು!

ಏಕೆಂದರೆ ಅಶೋಕ ಅಕ್ಷರಶಃ ಹೆಣಗಳ ಮೇಲೆ ರೌಡಿಸಂನ ಸಾಮ್ರಾಜ್ಯ ಕಟ್ಟುತ್ತಾನೆ. ಹಾಗಂತ ಅವನು ಅಶೋಕ ಮಹಾರಾಜನ ತರಹ ಅಲ್ಲ. ರಾಜ್ಯದ ಆಸೆಗೆ, ಪದವಿಯ ಆಸೆಗೆ ಸುಖಾ ಸುಮ್ಮನೆ ಅಡ್ಡ ಬಂದವರನ್ನು ಇರಿದು ಮಲಗಿಸುವವನಲ್ಲ. ಅವನಿಗೂ ಒಂದು ಧ್ಯೇಯವಿದೆ. ಒಂದು ಗುರಿಯಿದೆ. ಸಮಾಜದ ಸ್ವಾಸ್ಥ್ಯ ಕಾಪಾಡಬೇಕೆಂಬ ಕಳಕಳಿಯಿದೆ. ಅದಕ್ಕೇ ಅವನು ಬರೀ ರೌಡಿಗಳನ್ನು, ದುಷ್ಟ ಶಕ್ತಿಗಳನ್ನು, ಧನಪಿಶಾಚಿಗಳನ್ನು ರಕ್ತ ಪಿಶಾಚಿಗಳ ರಕ್ತ ಮಾತ್ರ ಹೀರುತ್ತಾನೆ. ಮಟ್ಕಾ, ಜೂಜು, ಸಾರಾಯಿ ಅಂತ ಕೆಳ ದರ್ಜೆಗೆ ಹೋಗದೆ ಆಸ್ಪತ್ರೆಗಳಲ್ಲಿನ, ಪ್ರೆೃವೇಟ್‌ ಶಾಲೆಗಳಲ್ಲಿನ ಕರಪ್ಪನ್‌ ವಿರುದ್ಧ ಹೋರಾಡುತ್ತಾನೆ. ಲ್ಯಾಂಡ್‌ ಮಾಫಿಯಾದವರಿಗೆ, ಟ್ರಾವಲ್ಸ್‌ ದಂಧೆಯಲ್ಲಿರುವವರಿಗೆ ಭಯ ಹುಟ್ಟಿಸಿ ಮಟ್ಟ ಹಾಕುತ್ತಾನೆ. ಅವರಿಂದ ಒಂದಿಷ್ಟು ಹಣ ಪೀಕಿಸಿ ಅದನ್ನು ಬಡವರ ಕಲ್ಯಾಣಕ್ಕಾಗಿ ಉಪಯೋಗಿಸುತ್ತಾನೆ. ಇಷ್ಟೆಲ್ಲ ಏಕೆ? ಅದಕ್ಕೊಂದು ಸುದೀರ್ಘ ಫ್ಲಾಶ್‌ಬ್ಯಾಕ್‌ ಇದೆ.

ಆ ಫ್ಲಾಷ್‌ಬ್ಯಾಕ್‌ನಲ್ಲೊಂದು ಬಡ ಹಾಗೂ ಸುಖೀ ಸಂಸಾರ. ಕಾನ್‌ಸ್ಟೆಬಲ್‌ ರಾಮಯ್ಯ (ಶ್ರೀನಿವಾಸಮೂರ್ತಿ) ನೇ ಆ ಮನೆಗೆ ಯಜಮಾನ. ಅವನಿಗೆ ತಮ್ಮ ಮಗ ಅಶೋಕ (ಶಿವರಾಜ್‌ ಕುಮಾರ್‌)ನನ್ನು ಹೋಗಾದರೂ ಮಾಡಿ ಪೊಲೀಸ್‌ ಅಧಿಕಾರಿ ಮಾಡಬೇಕೆಂಬ ಆಸೆ. ಅಶೋಕನಿಗೂ ಎಲ್ಲ ಅರ್ಹತೆಗಳಿವೆ. ಆದರೆ, ಅದನ್ನು ಮೀರಿದ ಮುಂಗೋಪವಿದೆ. ಆ ಮುಂಗೋಪದಿಂದಲೇ ಅವನಿಗೆ ‘ಕೈಲಿದ್ದ ತುತ್ತು ಬಾಯಿಗೆ ಬರುವುದಿಲ್ಲ’ ಇದರಿಂದ ಅವನ ಮನೆ ಛಿದ್ರವಾಗುತ್ತದೆ. ಗನ್‌ ಹಿಡಿಯಬೇಕಾಗಿದ್ದ ಕೈ ಅನಿವಾರ್ಯವಾಗಿ ಮಚ್ಚು ಹಿಡಿಯಬೇಕಾಗುತ್ತದೆ. ಅದ್ಹೇಗೆ ಅಂತ ತೆರೆಯ ಮೇಲೇ ನೋಡ್ರಲ್ಲಾ...

ಇಂಥ ಚಿತ್ರಗಳು ನಿರ್ದೇಶಕ ಶಿವಮಣಿಗೆ ಹೊಸತಲ್ಲ. ಕತೆಯನ್ನು ಸೈಡಿಗೆ ಹಾಕಿ ಬರೀ ಪ್ರಚಲಿತ ವಿದ್ಯಮಾನಗಳನ್ನು, ಘಟನೆಗಳನ್ನು, ಅಸಂಖ್ಯಾತ ಪಾತ್ರಗಳನ್ನಿಟ್ಟುಕೊಂಡು ಅದಕ್ಕೊಂದಿಷ್ಟು ಹಾಡುಗಳನ್ನು, ಫೈಟುಗಳನ್ನು, ಗಟ್ಟಿ ಸಂಭಾಷಣೆಗಳನ್ನು ಮಾಡಿದ್ದಾರೆ. ವಿಶೇಷ ಏನಪ್ಪಾ ಅಂದರೆ ಅಲ್ಲೆಲ್ಲ ನಾಯಕ ಪೊಲೀಸ್‌ ಅಧಿಕಾರಿಯಾಗಿರುತ್ತಿದ್ದ. ನ್ಯಾಯ, ನೀತಿ ಹಾಗೂ ನಿಷ್ಠೆಯಿಂದ ‘ದುಷ್ಟ ಶಿಕ್ಷಕ, ಶಿಷ್ಟ ರಕ್ಷಕ’ನಾಗಿ ಚಿತ್ರದ ತುಂಬಾ ವಿಜೃಂಭಿಸುತ್ತಿದ್ದ. ಈ ಬಾರಿ ಅದೇ ಕೆಲಸವನ್ನು ಶಿವಮಣಿ ರೌಡಿಯಾಬ್ಬನ ಕೈಲಿ ಮಾಡಿಸಿದ್ದಾರೆ. ರಿವಾಲ್ವರ್‌ ಕಿತ್ತುಕೊಂಡು ಮಚ್ಚು ಕೊಟ್ಟಿದ್ದಾರೆ. ಎರಡೂ ತರಹದ ಚಿತ್ರಗಳಲ್ಲಿ ಒಂದು ಕಾಮನ್‌ ಫ್ಯಾಕ್ಟರ್‌ ಎಂದರೆ ರಕ್ತಪಾತ, ಅಬ್ಬರ, ಹಿಂಸೆ...

ಏನೇ ಆದರೂ ಚಿತ್ರವನ್ನು ನೋಡಬಲ್‌ ಆಗಿಸುವವರು ಶಿವರಾಜ್‌ಕುಮಾರ್‌. ಅವರು ಪಾತ್ರದೊಳಗೆ ಒಂದಾಗುವುದನ್ನು ನೋಡಿಯೇ ಎಂಜಾಯ್‌ ಮಾಡಬೇಕು. ಅದರಲ್ಲೂ ಸೆಂಟಿಮೆಂಟ್‌ ಹಾಗೂ ಆ್ಯಕ್ಷನ್‌ ದೃಶ್ಯಗಳಲ್ಲಿ ಶಿವಣ್ಣ ವಾಹ್‌ ವಾಹ್‌. ಶ್ರೀನಿವಾಸಮೂರ್ತಿ ಕೂಡಾ ನಟನೆಯಲ್ಲಿ ಸಮನಾದ ಪೈಪೋಟಿ ನೀಡಿದ್ದಾರೆ. ನಾಯಕಿಯರಿಬ್ಬರಿದ್ದಾರೆ. ಆದರೆ, ಯಾರೂ ನೆನಪಿನಲ್ಲುಳಿಯುವುದಿಲ್ಲ. ವಿನಯ ಪ್ರಕಾಶ್‌, ಜಿ.ಕೆ. ಗೋವಿಂದರಾವ್‌, ಅಶೋಕ್‌ ಅಭಿನಯ ಓಕೆ. ಇನ್ನು ಎ.ಟಿ.ರಘು, ಸತ್ಯಜಿತ್‌ ಹಾಗೂ ಸತ್ಯಪ್ರಕಾಶ್‌ ಮೈಮೇಲೆ ಶಕುನಿಯನ್ನು ಆಹ್ವಾನಿಸಿಕೊಂಡವರ ತರಹ ಆಡುತ್ತಾರೆ.

ಸಾಧುಕೋಕಿಲ ಎಂದಿನಂತೆ ತಮ್ಮ ರೀಮೇಕ್‌ ಹಾಗೂ ರೀಮಿಕ್ಸ್‌ ಹಾವಳಿಯನ್ನು ಈ ಚಿತ್ರದಲ್ಲೂ ಮುಂದುವರಿಸಿದ್ದಾರೆ. ಹಿಂದಿಯ ಜನಪ್ರಿಯ ‘ದುನಿಯಾ ಹೈ ಮೇರೆ ಪೀಛೆ, ಲೇಖಿನ್‌ ಮೈ ತೇರೆ ಪೀಛೆ’ ಹಾಡು ರೀಮೇಕಾದರೆ, ಗಿರಿಕನ್ಯೆ ಚಿತ್ರದ ತೈ ತೈ ತೈತೈ ಬಂಗಾರಿ ರೀಮಿಕ್ಸ್‌ ಆಗಿದೆ. ಇವೆರಡೂ ಹಾಡುಗಳು ಚೆನ್ನಾಗಿದೆ ಎಂದು ಹೇಳಬೇಕಾಗಿಲ್ಲ. ಮಿಕ್ಕ ಹಾಡುಗಳ ಬಗ್ಗೆ ಬೇಡ ಬಿಡಿ. ಸುಂದರ್‌ನಾಥ್‌ ಸುವರ್ಣ ಛಾಯಾಗ್ರಹಣ ಚೆನ್ನಾಗಿದೆ.

(ಸ್ನೇಹ ಸೇತು: ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada