For Quick Alerts
  ALLOW NOTIFICATIONS  
  For Daily Alerts

  ‘ಮ್ಯಾಜಿಕ್‌ ಅಜ್ಜಿ’ಯ ಮಾಯಾ ಲೋಕ

  By Staff
  |
  • ಚೇತನ್‌ ನಾಡಿಗೇರ್‌
  ಸ್ಯಾಂಡಲ್‌ವುಡ್‌ನಲ್ಲಿ ಅರಳಿದ ಹಾಲಿವುಡ್‌ ಚಿತ್ರ!

  ಹಾಗನ್ನುತ್ತದೆ ‘ಮ್ಯಾಜಿಕ್‌ ಅಜ್ಜಿ ’ಚಿತ್ರದ ಜಾಹೀರಾತು. ಚಿತ್ರ ನೋಡಿ ಹೊರಬಂದವರಿಗೆ ಈ ಮಾತು ನೂರಕ್ಕೆ ನೂರು ಸತ್ಯ ಎನಿಸಿದರೆ ಆಶ್ಚರ್ಯ ಪಡಬೇಕಿಲ್ಲ. ಏಕೆಂದರೆ ಸ್ಯಾಂಡಲ್‌ವುಡ್‌ನ ಲಾಂಗು, ರಕ್ತ, ಕಣ್ಣೀರು ನೋಡಿನೋಡಿ ಸಾಕಾಗಿ ಬೆಂಡಾಗಿರುವ ಕನ್ನಡಾಭಿಮಾನಿಗಳಿಗೆ ‘ಮ್ಯಾಜಿಕ್‌ ಅಜ್ಜಿ ’ಯಲ್ಲಿನ ಹಾಲಿವುಡ್‌ ಶೈಲಿಯ ಗ್ರಾಫಿಕ್ಸ್‌ ಮ್ಯಾಜಿಕ್‌ ತಂಪೆರೆಯುವುದು ಖಚಿತ. ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಬಳಸಲಾಗಿರುವ ಹೈಡೆಫಿನೇಷನ್‌ ಕ್ಯಾಮರಾ ಹಾಗೂ ಗ್ರಾಫಿಕ್ಸ್‌ ತಂತ್ರಜ್ಞಾನ ಪ್ರೇಕ್ಷಕರನ್ನು ಮತ್ತೊಂದು ಲೋಕಕ್ಕೆ ಕೊಂಡೊಯ್ಯುವುದಂತೂ ಸತ್ಯ.

  ಗ್ರಾಫಿಕ್ಸ್‌ ಹಾಗೂ ಮ್ಯಾಜಿಕ್‌ ಚಿತ್ರವೆಂದ ಮೇಲೆ ಅಲ್ಲಿ ಲಾಜಿಕ್‌ ಅನ್ನು ನಿರೀಕ್ಷಿಸುವುದು ತಪ್ಪು. ಅಂತಹ ಕಡೆ ಏನಿದ್ದರೂ ಗಿಮಿಕ್‌ಗಳದೇ ಕಾರುಬಾರು. ಆದರೂ, ನಿರ್ದೇಶಕ ದಿನೇಶ್‌ಬಾಬು ಒಂದು ಸರಳ ಹಾಗೂ ಸುಂದರವಾದ ಕಥೆ ಹೆಣೆದಿದ್ದಾರೆ. ಅದೊಂದು ದೊಡ್ಡ ಅರಮನೆ. ಆ ಅರಮನೆಗೊಬ್ಬ ರಾಜಮಾತೆ. ಆಕೆಗೆ 100ವರ್ಷ. ಆಕೆಗೆ ನಾಲ್ಕು ಮೊಮ್ಮಕ್ಕಳು. ಒಬ್ಬ ಮೊಮ್ಮಗ ತೀರಿ ಹೋಗಿರುತ್ತಾನೆ. ಇನ್ನುಳಿದ ಮೊಮ್ಮಕ್ಕಳು ಹಾಗೂ ಅವರ ಗಂಡಂದಿರು ಅವನ ಮಗನನ್ನು ಬಹಳ ಕೆಟ್ಟದಾಗಿ ನೋಡಿಕೊಳ್ಳುತ್ತಿರುತ್ತಾರೆ. ಆತನ ತಾಯಿಯನ್ನು ಕೂಡಾ ಅಡುಗೆಮನೆಗೆ ಸೀಮಿತಗೊಳಿಸಿರುತ್ತಾರೆ. ಅಜ್ಜಿಗೆ ಆ ಮರಿಮಗನನ್ನು ತನ್ನ ನಂತರ ಸಮಸ್ತ ಕಾರುಬಾರಿಗೂ ಒಡೆಯನನ್ನಾಗಿ ಮಾಡುವ ಆಸೆ. ಆದರೆ, ಅಷ್ಟರಲ್ಲಿ ಆಕೆಗೆ ವಯಸ್ಸಾಗಿ ತೀರಿ ಹೋಗುತ್ತಾಳೆ. ಹೀಗೆ ತೀರಿಹೋದವಳು ತನ್ನ ಮೊಮ್ಮಗನೊಬ್ಬನಿಗೆ ಮಾತ್ರ ಪ್ರತ್ಯಕ್ಷವಾಗಿ ಅವನಿಗೆ ಸಿಂಹಾಸನ ದಕ್ಕಿಸಿಕೊಡುವಲ್ಲಿ ಸಹಾಯ ಮಾಡುತ್ತಾಳೆ. ಅದು ಹೇಗೆ ಎಂಬುದು ತೆರೆಯ ಮೇಲೆ ನೋಡಿಯೇ ಖುಷಿಪಡಬೇಕು.

  ಇಂಥ ಚಂದಮಾಮ ಕಥೆಯನ್ನಿಟ್ಟುಕೊಂಡು ಒಂದು ಸುಂದರ ಸಿನಿಮಾ ಮಾಡಿದ್ದಾರೆ ಬಾಬು. ಮೇಲುನೋಟಕ್ಕೆ ಇದೊಂದು ಮಕ್ಕಳ ಚಿತ್ರ ಎನಿಸಿದರೂ, ಎಲ್ಲಾ ವಯಸ್ಸಿನವರೂ ಕುಳಿತು ಯಾವುದೇ ಮುಜುಗರವಿಲ್ಲದೆ ನೋಡಬಹುದು. ಚಿತ್ರ ಇಷ್ಟವಾಗುವುದು ಅದರ ಸರಳತೆಯಿಂದ. ಇಷ್ಟೊಂದು ದೊಡ್ಡ ಬಜೆಟ್‌ನ ಚಿತ್ರವನ್ನು ಇಷ್ಟೊಂದು ಸರಳವಾಗಿ ಮಾಡಬಹುದಾ? ಎಂದು ಬಾಬು ಆಶ್ಚರ್ಯ ಹುಟ್ಟಿಸದಿದ್ದರೆ ಕೇಳಿ. ಒಂದು ಕಡೆ ಚಿತ್ರವನ್ನು ಸರಳವಾಗಿ ನಿರೂಪಿಸುತ್ತಲೇ, ಗ್ರಾಫಿಕ್ಸ್‌ನ ವೈಭವವನ್ನೂ ಕಟ್ಟಿಕೊಟ್ಟಿದ್ದಾರೆ ಬಾಬು. ಅಜ್ಜಿ ಮಕ್ಕಳೊಂದಿಗೆ ರಥದಲ್ಲಿ ಕುಳಿತು ಹಿಮಾಲಯಕ್ಕೆ ಹಾರುವುದು, ನರಕ-ಸ್ವರ್ಗಗಳ ದರ್ಶನ ಮಾಡಿಸುವುದೂ ಮುಂತಾದ ದೃಶ್ಯಗಳಲ್ಲಿ ಗ್ರಾಫಿಕ್ಸ್‌ನ ಚಮತ್ಕಾರ ನೋಡಿ ಅನುಭವಿಸಿದರೇ ಚೆನ್ನ. ಹಾಗೆ ನೋಡಿದರೆ ಚಿತ್ರದ ಆರಂಭವೇ ಅದ್ಭುತ. ಚಿತ್ರದ ಶೀರ್ಷಿಕೆಯಿಂದ ಅರಮನೆ ನಿರ್ಮಾಣಗೊಳ್ಳುವ ಪರಿ ಮಾತ್ರ ನೋಡುಗರನ್ನು ಚಕಿತಗೊಳಿಸದೇ ಇರುವುದಿಲ್ಲ.

  ನಟನೆಯ ವಿಷಯಕ್ಕೆ ಬಂದಲ್ಲಿ ಅಜ್ಜಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಖುಷ್ಟೂ ಅಪರೂಪಕ್ಕೆಂಬಂತೆ ಈ ಬಾರಿ ನಟನೆಯಲ್ಲಿ ಮ್ಯಾಜಿಕ್‌ ಮಾಡಿದ್ದಾರೆ. ಅಜ್ಜಿಯಾಗಿದ್ದಾಗಲಿ, ತನ್ನ ಅಪೂರ್ಣ ಆಸೆಗಳನ್ನು ಪೂರೈಸಿಕೊಳ್ಳುವ ಹುಡುಗಿಯಾಗಲೀ ಖುಷ್ಟೂ ಲವಲವಿಕೆಯ ಅಭಿನಯ ನೀಡಿದ್ದಾರೆ. ಅವರಿಗೆ 100 ವರ್ಷ ವಯಸ್ಸಾಗಿದೆ ಎಂದು ಅವರ ಬಿಳಿ ಕೂದಲು ಮಾತ್ರ ಹೇಳಬೇಕು. ಇನ್ನೆಲ್ಲೂ ಅವರಿಗೆ ಅಷ್ಟೊಂದು ವಯಸ್ಸಾಗಿದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಅದಕ್ಕೆ ಕಾರಣ ಮೇಕಪ್‌. ಅವರ ಮುಖದಲ್ಲಿ ಸುಕ್ಕಾಗಲಿ, ಸುಸ್ತಾಗಲಿ ಕಾಣುವುದಿಲ್ಲ. ಕೆಲವು ಕಡೆ ಅವರು ಪ್ರಯತ್ನಪೂರ್ಣವಾಗಿ ಸುಸ್ತಾದವರಂತೆ ಕಾಣುತ್ತಾರಾದರೂ , ಅದು ಅಷ್ಟೊಂದು ಕನ್‌ವಿನ್ಸಿಂಗ್‌ ಎನಿಸುವುದಿಲ್ಲ.

  ಚಿತ್ರದ ಮತ್ತೆರಡು ಹೈಲೈಟುಗಳೆಂದರೆ ಮಾಸ್ಟರ್‌ ತೇಜಸ್‌ ಹಾಗೂ ಮಂಡ್ಯ ರಮೇಶ್‌. ತೇಜಸ್‌ ತನ್ನ ಚೂಟಿತನದಿಂದ ಹಾಗೂ ಚುರುಕು ಸಂಭಾಷಣೆಗಳಿಂದ ಇಷ್ಟವಾಗುತ್ತಾರೆ. ಇನ್ನು ಮಂಡ್ಯ ರಮೇಶ್‌ ಬಹಳ ದಿನಗಳ ನಂತರ ಬಹಳ ದಿನಗಳ ಕಾಲ ನೆನಪಿನ್ನಲುಳಿಯುವಂಥ ಅಭಿನಯ ನೀಡಿದ್ದಾರೆ. ಪೆದ್ದುತನದಿಂದ ಅವರು ತಂದುಕೊಳ್ಳುವ ಹತ್ತಾರು ಗಂಡಾಂತರಗಳು ಹುಡುಗರು ಮುದುಕರೆನ್ನದೆ ಎಲ್ಲಾ ರೀತಿಯ ಪ್ರೇಕ್ಷಕರಿಗೆ ಸಲೀಸಾಗಿ ನಗುತರಿಸುತ್ತವೆ.

  ಅದರಲ್ಲೂ ಅವರ ಮೇಲೆ ಒಂದೇ ಸಮನೆ ಬೀಳುವ ಹೂ ಕುಂಡಗಳನ್ನು ನಿರ್ಲಕ್ಷಿಸಿ ಅವರು ಹೊರ ನಡೆವ ದೃಶ್ಯವಂತೂ ನೋಡೇ ಖುಷಿಪಡಬೇಕು. ಇನ್ನು ಅಸಹಾಯಕ ಅಮ್ಮನಾಗಿ(ಮೇಕಪ್‌ಲೆಸ್‌) ಸುಧಾರಾಣಿ, ಹಠಮಾರಿಗಳಾದ ರಮೇಶ್‌ಭಟ್‌, ಗುರುದತ್‌, ಅವರ ಹೆಂಡತಿಯರಾದ ಚಿತ್ರಾ ಶೆಣೈ, ಪೂಜಾ ಲೋಕೇಶ್‌, ಮಂತ್ರವಾದಿ ಕರಿಬಸವಯ್ಯ ಮುಂತಾದವರ ಅಭಿನಯ ಕೂಡ ಚೆನ್ನಾಗಿ ಮೂಡಿಬಂದಿದೆ. ಅಭಿಜಿತ್‌ ಹೀಗೆ ಬಂದು ಹಾಗೆ ಮಾಯವಾಗುತ್ತಾರೆ.

  ಕಥೆ, ಚಿತ್ರಕಥೆ, ಛಾಯಾಗ್ರಹಣ ನಿರ್ದೇಶನದ ಜವಾಬ್ದಾರಿಯನ್ನು ದಿನೇಶ್‌ ಬಾಬು ಅವರೇ ವಹಿಸಿಕೊಂಡಿದ್ದಾರೆ. ಈ ಎಲ್ಲಾ ವಿಭಾಗಗಳಲ್ಲೂ ಅವರು ನ್ಯಾಯ ಸಲ್ಲಿಸಿದ್ದಾರೆ. ಪೆಟ್ಟಿಗೆಯಾಳಗೆ ಸಿಕ್ಕಿಕೊಂಡಿರುವ ಅಜ್ಜಿ ಮುಂತಾದ ದೃಶ್ಯಗಳನ್ನು ಸೆರೆ ಹಿಡಿಯುವಲ್ಲಿ ಬಾಬು ಗೆದ್ದಿದ್ದಾರೆ. ಆದಿ ಸಂಗೀತ ನಿರ್ದೇಶನದಲ್ಲಿ ಎರಡು ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ.

  (ಸ್ನೇಹ ಸೇತು : ವಿಜಯ ಕರ್ನಾಟಕ)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X