»   » ಎಲ್ಲಾ ವಿಷ್ಣುಮಯ ; ಕಥೆ ಅಯೋಮಯ!

ಎಲ್ಲಾ ವಿಷ್ಣುಮಯ ; ಕಥೆ ಅಯೋಮಯ!

Posted By:
Subscribe to Filmibeat Kannada
  • ವಿನಾಯಕ ಭಟ್‌
ಚಿತ್ರದ ಆರಂಭದಲ್ಲಿ ಒಂದು ಸಾವು; ನದಿಯಲ್ಲಿ ಮುಳುಗಿ. ಮಧ್ಯಂತರದಲ್ಲಿ ಎರಡನೆ ಸಾವು; ಥೇಟ್‌ ನದಿಯಲ್ಲೇ ಮುಳುಗಿ. ಚಿತ್ರದ ಅಂತ್ಯಕ್ಕೆ ಮೂರನೆ ಸಾವು; ಅದೇ ರೀತಿ ನದಿಯಲ್ಲಿ ಮುಳುಗಿಯೇ ಸಂಭವಿಸಬಹುದಾದ್ದು ! ವಿಷ್ಣುವಿನ ಕರುಣೆಯಿಂದ ತಪ್ಪುತ್ತದೆ. ಅಲ್ಲಿಗೆ ಪ್ರೇಕ್ಷಕ ಬಚಾವ್‌.

ಹೀಗೆ ಸಾವಿನ ಎಳೆ ಹಿಡಿದೇ ಸಾಗುವ ಚಿತ್ರಕತೆಗೆ ಮುಕ್ತಿ ಕೊಟ್ಟವರು ನಿರ್ದೇಶಕ ಸುರೇಶ್‌ ಕೃಷ್ಣ. ಅಣ್ಣ-ತಮ್ಮಂದಿರ ‘ಅತಿ’ಪ್ರೀತಿಯ, ಆದರೆ ಇದುವರೆಗೆ ಬಂದ ವಿಷ್ಣು ಭ್ರಾತೃವಾತ್ಸಲ್ಯ ಚಿತ್ರಕ್ಕಿಂತ ಭಿನ್ನ ಎನ್ನಬಹುದಾದ ಚಿತ್ರ ‘ಜ್ಯೇಷ್ಠ’.

ಅವರೈವರು ಥೇಟ್‌ ಪಾಂಡವರು. ಹಿರಿಯಣ್ಣ ವಿಷ್ಣು ಸಾಕ್ಷಾತ್‌ ಧರ್ಮರಾಯ. ಆದರೂ ಕೆಚ್ಚೆದೆಯ ಗಂಡು. ತಮ್ಮಂದಿರಾದ ದೇವು, ಸೌರವ್‌, ಅನಿ, ಆನಂದ್‌ ‘ವಿಷ್ಣು ನಿಷ್ಠ’ರು. ಎಲ್ಲಿಗೆ ಹೋಗುವುದಾದರೂ ತೆರೆದ ಜೀಪಿನಲ್ಲಿ ದೊಡ್ಡಣ್ಣನ ಸಾರಥ್ಯ, ಎರಡನೆ ಅಣ್ಣ ಪಕ್ಕದಲ್ಲಿ, ಉಳಿದ ಮೂವರು ಸ್ಟೈಲಾಗಿ ಹಿಂದುಗಡೆ ಫ್ರೇಮ್‌ ಹಿಡಿದು ನಿಲ್ಲೋದು.

ಚಿಕ್ಕವರಿದ್ದಾಗ ದೊಡ್ಡಪ್ಪನ ಕ್ರೌರ್ಯದಿಂದ ತಂದೆಯನ್ನು ಕಳೆದುಕೊಂಡು ಊರು ಬಿಟ್ಟ ಪುಟ್ಟ ಅಣ್ಣತಮ್ಮಂದಿರು, ಅಜ್ಞಾತವಾಸ ಮುಗಿಸಿ ಹಿರಿಯರು ಬಾಳಿದ ನೆಲದಲ್ಲೇ ಬದುಕಬೇಕೆಂದು ಊರಿಗೆ ಮರಳುವುದು ದೊಡ್ಡವರಾಗಿ, ದೊಡ್ಡಮನುಷ್ಯರಾಗಿ, ಶ್ರೀಮಂತರಾಗಿ. ‘ಒಳ್ಳೆಯವರಿಗೆ ಒಳ್ಳೆಯವನು, ಕೆಟ್ಟವರಿಗೆ ಮೃಗ’ದಂಥ ಅಣ್ಣ ವಿಷ್ಣುವನ್ನು ಕೊಲ್ಲಿಸುವ ಸಂಚು ದೊಡ್ಡಪ್ಪನ ಮಗ ಭದ್ರಿಯದು. ಆದರೆ ಮೊದ್ಲಿಂದಲೂ ಯಾರ್ಯಾರೋ ನನ್ನ ಕೊಲ್ಲೋಕೆ ಪ್ರಯತ್ನ ಪಟ್ಟರು. ಆಗಲಿಲ್ಲ. ನನ್ನ ಮೈ ಮುಟ್ಟೋಕೆ ಆ ದೇವರೇ ಬರಬೇಕು’ ಎಂದು ವಿಷ್ಣು ಹೇಳಿದರೆ, ‘ಆ ದೇವ್ರಿಂದಲೂ ಸಾಧ್ಯ ಇಲ್ಲ’ ಎಂಬುದು ತಮ್ಮಂದಿರ ನಂಬಿಕೆ. ಇಂತಿಪ್ಪ ಅಣ್ಣ ತಮ್ಮಂದಿರ ನಡುವೆ ಬರುವ ಮೊದಲ ಹೆಣ್ಣು, ವಿಷ್ಣುವಿನ ಹೆಂಡತಿಯಾಗಿ ಕಾಂಚನಾ ಎಂಬ ಹೂ ಮಾರುವ ಹುಡುಗಿ. ಆ ನಂತರ ಬರುವಾತ ರೌಡಿ, ಹಿಂದೆಯೇ ಅವನ ತಂಗಿ ಗೌರಿ, ಇವರ ನಡುವೆ ಮತ್ತೊಬ್ಬ ಭೂಗತ ದೊರೆ ಅಣ್ಣಾಸೇಠ್‌, ಪೊಲೀಸ್‌ ಅಧಿಕಾರಿ ಅವಿನಾಶ್‌.... ಹೀಗೆ ಎಲ್ಲೆಲ್ಲಿಂದಲೋ ಬರುವ ಸಂಬಂಧಗಳು, ಸಂಕೋಲೆಗಳು.

ಒಂದು ಸುಂದರ ಭಾವನಾತ್ಮಕ ಎಳೆ, ಹೊಡೆದಾಟದ ಚಿತ್ರವಾಗಿದೆ. ಕತೆಗೆ ಉಪಕತೆಗಳು ಜಾಸ್ತಿಯಾಗಿ ಅಲ್ಲಲ್ಲಿ ತಲೆಹರಟೆ. ಒಂದು ಉಪಕತೆಗಾಗಿ ಹಿಂದಿನದು ಅಕಾಲ ಸಾವನ್ನಪ್ಪುವುದೂ ಇದೆ. ಹೀಗೆ ಅಸಂಖ್ಯ ಕತೆಗಳ ಪುಂಜವಾಗಿ, ಎಲ್ಲದರಲ್ಲೂ ಸರ್ವವ್ಯಾಪಿ ವಿಷ್ಣುವಿನಿಂದ ಸಮಸ್ಯೆ ಪರಿಹಾರವಾಗಿ ಕೊನೆಗೆ ಅವರೆಲ್ಲ ಸುಖ ಸಂತೋಷದಿಂದಿದ್ದರು ಎಂಬಲ್ಲಿಗೆ ಚಿತ್ರ ಮುಗಿಯುತ್ತದೆ.

ಛಾಯಾಗ್ರಹಣ ಸೊಗಸಾಗಿದೆ. ಒಂದೆರಡು ಹಾಡು ಓಕೆ. ಎಡಿಟಿಂಗ್‌ ತಂತ್ರದಿಂದಲೋ ಏನೋ, ಕತೆ ಹದಕ್ಕೆ ಬಂತು ಎಂದುಕೊಳ್ಳುತ್ತಿರುವಾಗಲೇ ಏನೋ ಐಟಂ ಸಾಂಗ್‌ ಬರುತ್ತದೆ. ಹಳಿ ಹತ್ತಿತು ಎನ್ನುವಾಗಲೇ ಹಳಿ ತಪ್ಪುತ್ತದೆ. ಅಣ್ಣತಮ್ಮಂದಿರಲ್ಲಿ ವಿಷ್ಣುವರ್ಧನ್‌ ಬಿಟ್ಟರೆ ಹೆಚ್ಚು ಮಿಂಚಿದವರು ಆನಂದ್‌. ಕಾಂಚನಾಳಾಗಿ, ಶಿಲ್ಪಾ ಶೆಟ್ಟಿಯ ಮೇಣದ ಪ್ರತಿಮೆಯಂತಿರುವ ಆಶೀಮಾ ಭಲ್ಲಾಳ ನಟನೆಯೂ ಓಕೆ. ಶರತ್‌ ಲೋಹಿತಾಶ್ವ, ಶೋಭರಾಜ್‌ ಭೇಷ್‌. ಉಳಿದ ಪಾತ್ರಗಳು ಬರುತ್ತವೆ ಹೋಗುತ್ತವೆ.

ಗೌರಿಯಾಗಿ ಎರಡೇ ದೃಶ್ಯಗಳಲ್ಲಿ ಬಂದು ಸಾಯುವ ಪಾತ್ರಕ್ಕೆ ಸಿಂಧೂ ಮೆನನ್‌ ಯಾಕೆ ಬೇಕಾಗಿತ್ತೋ. ಏನೇ ಇರಲಿ ದ್ವೇಷ ಅಸೂಯೆಯಿಂದ ಏನೂ ಸಾಧಿಸಲಾಗುವುದಿಲ್ಲ ಎಂಬ ಸಂದೇಶ ಚಿತ್ರದಲ್ಲಿದೆ.

(ಸ್ನೇಹಸೇತು: ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada