For Quick Alerts
  ALLOW NOTIFICATIONS  
  For Daily Alerts

  ಹಿರಿತೆರೆಯಲ್ಲಿ ರವಿಶಂಕರ್ ಪಯಣ ಹೀಗಿದೆ

  By Staff
  |

  ಇದು ಎರಡೂವರೆ ತಾಸಿನ ಟ್ರಿಪ್. ರವಿ, ಟ್ಯಾಕ್ಸಿ ಡ್ರೈವರ್. ಅವ ಕನಸುಗಾರ'. ಮಾಮೂಲಿ ಪ್ರೇಮ ಜ್ವರ. ಕಾವ್ಯ ಕುಸುರಿ ಗೊತ್ತಿಲ್ಲ. ಯಾರು ಆ ಕನಸಿನ ರಾಣಿ ಎಂದು ಕೇಳಿದರೆ ಶ್ರೀ ಸಾಯಿಬಾಬಾಗೆ ಕೇಳಿ ಎಂದು ಕಿವಿಗೆ ಹೂ ಇಡುತ್ತಾನೆ. ದಗಲ್‌ಬಾಜಿತನಕ್ಕೆ ಅವನ ಶಬ್ದಕೋಶದಲ್ಲಿ ಅರ್ಥವಿಲ್ಲ. ಹಾಗಂತ ಅವಳೇ ಬೇಕು ಎಂಬ ಸ್ವಾರ್ಥವಿಲ್ಲ ಎಂದಲ್ಲ.

  *ವಿನಾಯಕರಾಮ್ ಕಲಗಾರು

  ಹೀಗಿರುವಾಗ ನಾಯಕಿಯ ಆಗಮನ. ಅದೇ ಟ್ಯಾಕ್ಸಿಯಲ್ಲಿ ಅವಳ ಪಯಣ. ಕರ್ನಾಟಕದ ನಾನಾ ಐತಿಹಾಸಿಕ, ರಮಣೀಯ ಸ್ಥಳಗಳ ಚಿತ್ರೀಕರಣ. ಮಧ್ಯಮಧ್ಯೆ ಒಂದಷ್ಟು ಪ್ರೇಮ ಪುರಾಣ. ಅವಳೇ ನನ್ನ ರಾಜಕುಮಾರಿ ಎಂದು ಪ್ರೇಕ್ಷಕರನ್ನು ಗೊಂದಲಕ್ಕೀಡುಮಾಡುತ್ತಾನೆ ರವಿ. ಆದರೆ ಆಕೆ ಮುಂದೆ ಹೇಳಲೊಂಥರಾಥರಾ. ಕಾರಣ ಅಂತಸ್ತಿನ ಅಂತರ. ಅವಳು ಕೋಟಿ, ಇವ ಐದು ರೂ. ಗಟ್ಟಿ. ಊರೂರು ತೋರಿಸುತ್ತಾನೆ, ಕನಸು ಕಾಣುತ್ತಾನೆ. ವಿರಾಮದ ವೇಳೆ ಆ ಬಗ್ಗೆ ಹೇಳಿ-ಕೇಳಿ ಮಾಡಬೇಕು ಎಂದುಕೊಳ್ಳುತ್ತಾನೆ; ಅವಳಪ್ಪ ಅಡ್ಡಬರುತ್ತಾನೆ; ವಿರಾಮ- ನಂತರ ಮುಂದುವರಿಯುವುದು...

  ಇದು ಹಿಂದೆ ಬಂದ ಹಿಂದಿಯ 'ರಾಜಾ ಹಿಂದುಸ್ತಾನಿ'ಯ ರೀಮೇಕ್ ಖಂಡಿತಾ ಅಲ್ಲ. ಅದು ಉಪೇಂದ್ರ ಅಭಿನಯದ ನಾನು ನಾನೇ ಚಿತ್ರದ ಆಣೆಗೂ ಸತ್ಯ. ಆ ಕಾನ್ಸೆಪ್ಟೇ ಬೇರೆ. ಈ ಪಯಣವೇ ಬೇರೆ. ಇದೊಂಥರಾ ಜಾಲಿ ರೈಡ್. ಕಿರುತೆರೆ ಕಲಾವಿದ ರವಿಶಂಕರ್-ಪಲ್ಲಕ್ಕಿಯ ರಮಣೀತು ಚೌಧರಿ ಕಥಾವಸ್ತುವಿನ ಕೇಂದ್ರಬಿಂದು. ರವಿ, ಅರಳು ಹುರಿದಂತೆ ಮಾತಿನ ಮಳೆಗರೆಯುತ್ತಾರೆ. ಜನ-ಹಣಬಲ ಇಲ್ಲದೇ, ಪರಿಶ್ರಮ-ಆತ್ಮಬಲದಿಂದ ಮೇಲೆಬಂದು, ನಟನೆಯನ್ನೇ ಜೀವನ ಮಾಡಿಕೊಂಡಿರುವ ರವಿಶಂಕರ್ ಫಸ್ಟ್‌ಕ್ಲಾಸ್‌ನಲ್ಲಿ ಪಾಸಾಗಿದ್ದಾರೆ. ಸಾಯಿಬಾಬಾ ಎಂದು ಪ್ರೇಕ್ಷಕರನ್ನು ನೋಡಿಕೊಂಡು, ಮಾತನಾಡುವ ಹೊಸ ಶೈಲಿ ಇಷ್ಟವಾಗುತ್ತದೆ. ಮುಂಗಾರು ಮಳೆ' ಮಧ್ಯೆ ಪ್ರೀತಿಗಾಗಿ' ಹಪಹಪಿಸುವ ಭಗ್ನ, ಭಿನ್ನ ಪ್ರೇಮಿಯಾಗಿ ಇಷ್ಟವಾಗುತ್ತಾರೆ. ರಮಣೀತು ಈ ಮೊದಲು ನಟಿಸಿದ ಎಲ್ಲ ಚಿತ್ರಗಳಿಗಿಂತಲೂ ರಮಣೀಯವಾಗಿ ಕಾಣುತ್ತಾರೆ. ಅದನ್ನು ನೀವು ನಿರ್ದೇಶಕರ ಜಾಣ್ಮೆ ಎಂದರೂ ತಪ್ಪಿಲ್ಲ.

  ನಿರ್ದೇಶಕ ಕಿರಣ್ ಗೋವಿ, ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ. ಸಹಜ ಹಾಗೂ ಸರಳ ನಿರೂಪಣೆಯಿಂದ ಚಿತ್ರಕತೆಗೆ ಜೀವತುಂಬಿದ್ದಾರೆ. ಕಿರುತೆರೆಯವರನ್ನು ಕಟ್ಟಿಕೊಂಡು ಹಿರಿತೆರೆಗಿಳಿದು, ಗೆಲ್ಲುವುದು ಸುಲಭವಲ್ಲ ಎಂಬ ಮಾತಿಗೆ ಅವರು ಈ ಮೂಲಕ ಮಂಗಳ ಹಾಡಿದ್ದಾರೆ. ಹರಿಕೃಷ್ಣ ಸಂಗೀತದ ಗಾರುಡಿ ಇಲ್ಲಿಯೂ ಮುಂದುವರಿದಿದೆ. ಮಾನಸಗಂಗೆ..., ಗಪ್‌ಚುಪ್..., ಮೋಡದ ಒಳಗೆ ಹಾಡುಗಳು ಕಿವಿಗೆ ಮುತ್ತಿಡುತ್ತವೆ. ಅಕಸ್ಮಾತ್ ಸಿನಿಮಾ ಗೆದ್ದರೆ, ಅರ್ಧ ಕ್ರೆಡಿಟ್ ಸಂಗೀತ ನಿರ್ದೇಶಕರಿಗೆ ಸಲ್ಲಬೇಕು. ನಾಗೇಂದ್ರಪ್ರಸಾದ್ ಸಾಹಿತ್ಯದ ಲಹರಿ ಹಲವು ಕಾಲ ಮನಸ್ಸಿನಲ್ಲಿ ಉಳಿಯುತ್ತದೆ.

  ಶರತ್‌ಬಾಬು ತಮ್ಮ ಹಳೇ ವರಸೆಯಲ್ಲೆ ಮುಂದುವರಿದಿದ್ದಾರೆ. ರಂಗಾಯಣ ರಘು ಮಾತುಮಾತಿಗೂ ಅಪ್ಪ... ಅಪ್ಪ... ಎಂದು ನಗು ತರಿಸುತ್ತಾರೆ. ಬುಲೆಟ್ ಪ್ರಕಾಶ್- ಮಂಡ್ಯರಮೇಶ್ ಕಾಮಿಡಿಯ ಪಯಣ ಕೆಲಕಾಲದ ನಂತರ ನಿಂತುಬಿಡುತ್ತದೆ. ರವಿಶಂಕರ್ ಮ್ಯಾನರಿಸಂನಲ್ಲೇ ಅದು ಇರುವುದರಿಂದ, ಕತೆ ಇನ್ನೊಂದು ಆಯಾಮದತ್ತ ಸಾಗುವುದರಿಂದ ಅದು ಗೊತ್ತಾಗುವುದಿಲ್ಲ.

  ಸೆಂಟಿಮೆಂಟ್ ದೃಶ್ಯಗಳನ್ನು ಇನ್ನಷ್ಟು ಚೆನ್ನಾಗಿ ಬಳಸಿಕೊಳ್ಳಬಹುದಿತ್ತು. ಹಾಡುಗಳು, ನೃತ್ಯಸಂಯೋಜನೆಗೆ ಹೋಲಿಸಿದರೆ ಛಾಯಾಗ್ರಹಣದಲ್ಲಿ ಇನ್ನಷ್ಟು ಆಟವಾಡಬಹುದಿತ್ತು. ಮೊದಲಾರ್ಧದಲ್ಲಿ ಕೆಲವು ಸನ್ನಿವೇಶಗಳು ನಿದ್ದೆಗೆ ಜಾರುವಂತೆ ಮಾಡುತ್ತವೆ. ಅವನ್ನು ಟ್ರಿಮ್ ಮಾಡದಿದ್ದರೆ ಎಲ್ಲಿಗೇ ಪಯಣ....

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X