twitter
    For Quick Alerts
    ALLOW NOTIFICATIONS  
    For Daily Alerts

    ನಕ್ಕು ನಗಿಸುತ್ತ ಸಕತ್ತು ಖುಷಿ ಕೊಡುವ ‘ಏಕದಂತ’!

    By Staff
    |


    ಬಹಳ ವರ್ಷಗಳ ನಂತರ ಸಿಂಗೀತಂ ಶ್ರೀನಿವಾಸರಾವ್‌, ದಿನೇಶ್‌ ಬಾಬು ಶೈಲಿಯ ಸದಭಿರುಚಿಯ ಚಿತ್ರವೊಂದು ಬಂದಿದೆ. ನೋಡಿ ‘ಏಕದಂತ’ನ ಆಶೀರ್ವಾದ ಪಡೆದುಕೊಳ್ಳಿ!

    ಚಿತ್ರ : ಏಕದಂತ
    ನಿರ್ಮಾಣ : ಶ್ರೀರಾಂ ಕುಮಾರ್‌, ಗೋಪಿ
    ನಿರ್ದೇಶನ : ಸಚಿನ್‌
    ಸಂಗೀತ : ಗುರುಕಿರಣ್‌
    ತಾರಾಗಣ : ಡಾ.ವಿಷ್ಣುವರ್ಧನ್‌, ರಮೇಶ್‌, ಪ್ರೇಮಾ, ರಮೇಶ್‌ ಭಟ್‌ ಮತ್ತಿತರರು

    ಅವನು ವಕ್ರತುಂಡ ಅಲಿಯಾಸ್‌ ವ್ಯಾಕಿ. ಅವಳು ಭಕ್ತಿ. ಒಂದರ್ಥದಲ್ಲಿ ‘ಪ್ರೀತಿಯೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳಿಗೆ ... ’ ಎಂದು ಬಲವಾಗಿ ನಂಬಿರುವ ದಂಪತಿ. ಈ ಆದರ್ಶ ದಂಪತಿ ಮಧ್ಯೆ ಒಂದೇ ಒಂದು ವಿಷಯಕ್ಕೆ ಜಗಳ. ಹೆಂಡತಿಗೆ ಮಗು ಬೇಕು. ಗಂಡನಿಗೆ ಬೇಡ. ಕಾರಣ ಬಡತನ. ‘ಜೀವನದಲ್ಲಿ ಸೆಟ್ಲ್‌ ಆಗುವವರೆಗೂ ಮಗು ಬೇಡ,’ ಇದು ವ್ಯಾಕಿ ವಾದ.

    ಮದುವೆಯಾಗಿ ಆರು ವರ್ಷವಾದರೂ ಸೆಟ್ಲ್‌ ಆಗಿಲ್ಲ ಅಂದರೆ...? ವ್ಯಾಕಿ ಅಪ್ಪ ಮಾಡಿಕೊಂಡಿರುವ ಹರಕೆ ತೀರುವವರೆಗೂ ಅವನು ಸೆಟ್ಲ್‌ ಆಗುವುದಿಲ್ಲ ಎಂದು ಸಂಶೋಧನೆ ಮಾಡುತ್ತಾಳೆ ವ್ಯಾಕಿ ಅತ್ತೆ. ಇಷ್ಟಕ್ಕೂ ಏನಾಗಿರುತ್ತದೆಂದರೆ, ತನಗೆ ಗಂಡು ಮಗುವಾದರೆ, ಆ ಮಗುವನ್ನು ಗಣಪತಿಪುರದ ಗಣಪತಿ ದೇವಸ್ಥಾನಕ್ಕೆ ಬೆತ್ತಲೆಯಾಗಿ ಕರೆದುಕೊಂಡು ಬರುತ್ತೀನಿ ಎಂದು ವ್ಯಾಕಿಯ ಅಪ್ಪ ಹರಕೆ ಹೊತ್ತಿರುತ್ತಾನೆ. ಅದನ್ನು ತೀರಿಸುವ ಮುಂಚೆಯೇ ಕಣ್ಮುಚ್ಚಿರುತ್ತಾನೆ. ಹರಕೆ ಇನ್ನೂ ತೀರಿಲ್ಲ, ಅದಕ್ಕೆ ವ್ಯಾಕಿ ಉದ್ಧಾರವಾಗಿಲ್ಲ.

    ಈಗಲಾದರೂ ಅವನು ಗಣಪತಿಪುರಕ್ಕೆ ಹೋಗಿ ಬೆತ್ತಲೆ ದರ್ಶನ ಮಾಡಿ ಬಂದರೆ ಎಲ್ಲವೂ ಸರಿ ಹೋಗುತ್ತದೆ. ಆದರೆ, ಮಧ್ಯವಯಸ್ಕನೊಬ್ಬ ಬೆತ್ತಲೆಯಾಗಿ, ಛೇ, ಛೇ!

    ಇಂಥದೊಂದು ಯಕ್ಷಪ್ರಶ್ನೆಯಾಂದಿಗೆ ಪ್ರಾರಂಭವಾಗುವ ‘ಏಕದಂತ’, ಹರಕೆ ತೀರಿ ವ್ಯಾಕಿ ಉದ್ಧಾರವಾಗುವುದರಲ್ಲಿ ಮುಕ್ತಾಯವಾಗುತ್ತದೆ.

    ‘ಬೆತ್ತಲೆ ದರ್ಶನ’ದ ಕಲ್ಪನೆಯೇ ವೈನಾಗಿದೆ. ಆದರೆ, ಅದರ ಮಧ್ಯದ ಎರಡು ಗಂಟೆಯಿದೆಯೆಲ್ಲ ಅದು ಮಜ. ವ್ಯಾಕಿ ದಂಪತಿ ಹರಕೆ ತೀರಿಸಲು ಗಣಪತಿಪುರಕ್ಕೆ ಹೊರಡುತ್ತಾರೆ. ಅದೂ ಬಸ್ಸಿನಲ್ಲಿ. ಅಲ್ಲೊಂದಿಷ್ಟು ಚಿತ್ರ-ವಿಚಿತ್ರ ಪಾತ್ರಗಳು, ಘಟನೆಗಳು, ಸಂಭಾಷಣೆಗಳು, ಗೊಂದಲ-ಗೋಜಲುಗಳು ... ಹೆಚ್ಚೂ ಕಡಿಮೆ ‘ಬಾಂಬೆ ಟು ಗೋವಾ’ ಚಿತ್ರದ ಪುನರಾವರ್ತನೆಯಂತಿದೆ.

    ಇದೊಂದು ಭಕ್ತಿ ಪ್ರಧಾನ ಅಥವಾ ಮೂಢನಂಬಿಕೆ ಚಿತ್ರ ಆಗದಿರುವುದು ನಿರ್ದೇಶಕ ಸಚಿನ್‌ರ ಜಾಣ್ಮೆಗೆ ಸಾಕ್ಷಿ. ಅವರಿಗೆ ಗೊತ್ತಿರುವುದು ಜನರನ್ನು ನಗಿಸುವುದು ಮಾತ್ರ. ಅದನ್ನು ಅವರು ಇಡೀ ಚಿತ್ರದುದ್ದಕ್ಕೂ ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂಬುದು ಅವರಿಗೆ ಸಲ್ಲಬೇಕಾದ ಕಾಂಪ್ಲಿಮೆಂಟು.

    ಒಂದು ಐಟಂ ಸಾಂಗ್‌ ಹಾಗೂ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ, ಆಗ ಚಿತ್ರ ಮತ್ತಷ್ಟು ಚುರುಕಾಗಿರುತ್ತಿತ್ತು. ಚಿತ್ರ ಇಷ್ಟವಾಗುವುದಕ್ಕೆ ಸಚಿನ್‌ ಜತೆ ಕಾರಣರು ಕಲಾವಿದರು. ಡಾ. ವಿಷ್ಣುವರ್ಧನ್‌ರ ಕಂಡಕ್ಟರ್‌ ಪಾತ್ರ ಸ್ವಲ್ಪ ಚಿಕ್ಕದಾಗಿದ್ದರೂ, ಅವರ ಅಭಿನಯವನ್ನು ನೋಡಿಯೇ ಎಂಜಾಯ್‌ ಮಾಡಬೇಕು. ರಮೇಶ್‌-ಪ್ರೇಮಾರ ಸರಸ-ವಿರಸ ಸನ್ನಿವೇಶಗಳು ಖುಷಿ ಕೊಡುತ್ತವೆ. ಇನ್ನುಳಿದಂತೆ ರಾಜಕಾರಣಿಯಾಗಿ ಉಮಾಶ್ರೀ, ವೀಜೇ ಮೋನಿಕಾ, ಮಲಯಾಳಿ ಕಾಮಿನಿಧರನ್‌, ಮೂಕ ಮಂಡ್ಯ ರಮೇಶ್‌, ಇಬ್ಬರು ಹೆಂಡಿರ ಮುದ್ದಿನ ಗಂಡ ದಯಾನಂದ್‌... ಎಲ್ಲರ ಅಭಿನಯ ಹ್ಹ ಹ್ಹ ಹ್ಹ ...

    ಇದೆಲ್ಲದರ ಜತೆ ಖುಷಿ ಕೊಡುವುದು ಸಂಭಾಷಣೆ. ಗುರುಕಿರಣ್‌ ಸಂಗೀತದಲ್ಲಿ ಎರಡು ಹಾಡುಗಳನ್ನು ಎಂಜಾಯ್‌ ಮಾಡಬಹುದು. ಎಲ್ಲಕ್ಕಿಂತ ಮಾತು ಹೆಚ್ಚಿರುವುದರಿಂದ ಛಾಯಾಗ್ರಹಣ, ಸಂಕಲನ ಅಷ್ಟೊಂದು ಗಮನಸೆಳೆಯುವುದಿಲ್ಲ.

    ನಾವು ನೀಡುವ ಸಲಹೆ : ಬಹಳ ವರ್ಷಗಳ ನಂತರ ಸಿಂಗೀತಂ ಶ್ರೀನಿವಾಸರಾವ್‌, ದಿನೇಶ್‌ ಬಾಬು ಶೈಲಿಯ ಸದಭಿರುಚಿಯ ಚಿತ್ರವೊಂದು ಬಂದಿದೆ. ನೋಡಿ ‘ಏಕದಂತ’ನ ಆಶೀರ್ವಾದ ಪಡೆದುಕೊಳ್ಳಿ!

    Saturday, April 20, 2024, 1:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X