»   » ಸಂತ : ಅಭಿಮಾನಿಗಳಿಗೆ ಸ ್ವಂತ

ಸಂತ : ಅಭಿಮಾನಿಗಳಿಗೆ ಸ ್ವಂತ

Posted By:
Subscribe to Filmibeat Kannada


ಇದು ಬರಿ ಲಾಂಗು ಮಚ್ಚಿನ ಕತೆ ಎಂದು ತಿಳಿಯಬೇಡಿ. ರಕ್ತಪಾತ ಎಷ್ಟು ಇದೆಯಾ ಅದರ ಎರಡರಷ್ಟು ಸೆಂಟಿಮೆಂಟ್‌ ಇದೆ, ಪ್ರೇಮ ಇದೆ, ಪ್ರೀತಿ ಇದೆ, ಕಣ್ಣೀರಿದೆ. ಇನ್ನೇನು ಬೇಕು?

ಚಿತ್ರ :ಸಂತ
ನಿರ್ಮಾಣ : ಕೆ.ಪಿ.ಶ್ರೀಕಾಂತ್‌ ಮತ್ತು ಆರ್‌.ವಿಜಯಕುಮಾರ್‌
ನಿರ್ದೇಶನ : ಎಸ್‌.ಮುರಳಿ ಮೋಹನ್‌
ಸಂಗೀತ : ಗುರುಕಿರಣ್‌
ತಾರಾಗಣ : ಶಿವರಾಜ್‌ ಕುಮಾರ್‌, ಆರತಿ ಛಾಬ್ರಿಯಾ, ಸಾಂಗ್ಲಿಯಾನ ಮತ್ತು ಶ್ರೀದೇವಿಕಾ ಮತ್ತಿತರರು

‘ಸಂತ ಮಚ್‌ ಕೈಗೆತ್ಕಂಡ್ರೆ ಭುಜದ್‌ ಮ್ಯಾಲೆ ಕತ್‌ ಉಳಿಯಲ್ಲ, ಮನೆಗ್‌ ಫೋನ್‌ ಮಾಡು, ಎಡೆ ರೆಡಿ ಮಾಡ್ಕ ಅಂತಾ ಹೇಳು... ’ ಇದನ್ನು ಹೇಳುತ್ತಾ ಸಂತ ಮಚ್ಚು ಕೈಗೆ ಎತ್ಕೊಂಡ್ರೆ ಫಿನಿಶ್‌...ಎದುರಿದ್ದವರು ಮಟಾಶ್‌...

ಹೀಗಂತ ಇದು ಬರಿ ಲಾಂಗು ಮಚ್ಚಿನ ಕತೆ ಎಂದು ತಿಳಿಯಬೇಡಿ. ರಕ್ತಪಾತ ಎಷ್ಟು ಇದೆಯಾ ಅದರ ಎರಡರಷ್ಟು ಸೆಂಟಿಮೆಂಟ್‌ ಇದೆ, ಪ್ರೇಮ ಇದೆ, ಪ್ರೀತಿ ಇದೆ, ಕಣ್ಣೀರಿದೆ. ಇದರ ಮಿಸಳ್‌ ಭಾಜಿ ಸಂತ ಅಲಿಯಾಸ್‌ ಪ್ರೀತಿಸೋರ್ಗೆ ಸ್ವಂತ.

ರೌಡಿಸಂ ಕತೆಗಳಿಗೆ ನಮ್ಮಲ್ಲಿ ಯಾವತ್ತೂ ಬರ ಬಿದ್ದಿಲ್ಲ. ಬೀಳುವುದೂ ಇಲ್ಲ. ಐದಾರು ವರ್ಷಕ್ಕೊಮ್ಮೆ ಇಂಥ ಚಿತ್ರಗಳು ದಾಳಿ ಮಾಡುತ್ತವೆ. ಹತ್ತು ವರ್ಷಗಳ ಹಿಂದೆ ಓಂ, ಮೊನ್ನೆ ಮೊನ್ನೆ ಜೋಗಿ, ಈಗ ಸಂತ ಅಂತಿದ್ದಾರೆ ಶಿವಣ್ಣ. ಹಾಗಾದರೆ ಹೊಸದೇನಿದೆ ಅಂದರೆ ನಿರ್ದೇಶಕ ಮುರುಳಿ ಮೋಹನ್‌ ಕ್ಯಾಮರಾ ಮಿಂಚುತ್ತದೆ. ಒಂದೊಂದು ಶಾಟ್‌ನ ಟೇಕಿಂಗ್ಸ್‌, ಶಿವಣ್ಣನ ಅದ್ಭುತ ಅಭಿನಯ, ಗುರುಕಿರಣ್‌ ಗುಂಗು ಹಿಡಿಸುವ ಸಂಗೀತ, ಚೆಂದದ ಲೋಕೇಶನ್‌, ತಡೆ ನೀಡದ ಸಂಕಲನ, ಚುರುಕು ಸಂಭಾಷಣೆ... ಇದರಲ್ಲಿ ಮುರುಳಿ ಕಾಣುತ್ತಾರೆ. ಅವರ ಶ್ರದ್ಧೆ ಇಣುಕುತ್ತದೆ, ಕೆಲಸದ ನಿಯತ್ತು, ಶ್ರಮದ ಬೆವರು ಹನಿಯುತ್ತದೆ.

ರಕ್ತಪಾತದ ಕತೆ ಅಂದುಕೊಂಡವರಿಗೆ ಒಂದು ಪ್ರೇಮ, ಇನ್ನೊಂದು ಭಗ್ನ ಪ್ರೇಮದ ಕತೆ ಹೇಳುತ್ತಾರೆ, ನಡುನಡುವೆ ಅಣ್ಣ ತಂಗಿ ಬಾಂಧವ್ಯ ಇದೆ. ತಾಯಿ ಮಮತೆ ಕಾಡುತ್ತದೆ. ಐದು ಚಿತ್ರಕ್ಕಾಗುವಷ್ಟು ಕತೆಯನ್ನು ಒಂದರಲ್ಲಿ ಬೆಸೆದದ್ದು ಅಚ್ಚರಿ ನೀಡುತ್ತದೆ. ಮನಸು ಮಾಡಿದ್ದರೆ ಕತೆಯ ಉದ್ದಕ್ಕೆ ಇನ್ನಷ್ಟು ಕತ್ತರಿ ಹಾಕಬಹು ದಿತ್ತು. ಎರಡು ಹಾಡನ್ನು ತೆಗೆಯಬಹುದಿತ್ತು. ಹಾಗಾಗಿದ್ದರೆ ಇನ್ನೂ ಫೋರ್ಸ್‌ ಸಿಗುತ್ತಿತ್ತು.

ಆದರೂ ಶಿವಣ್ಣನ ಅಭಿನಯ ಅದೆಲ್ಲವನ್ನೂ ಮರೆಸುತ್ತದೆ. ತಾಯಿ ಸತ್ತಾಗ ಶಿವಣ್ಣ ಅಳುವ ದೃಶ್ಯವೊಂದೇ ಅವರು ಎಂಥ ಕಲಾವಿದ ಎಂಬುದನ್ನು ತೋರಿಸುತ್ತದೆ. ಮಚ್ಚು ಹಿಡಿದಾಗ ಸಿಂಹದ ಮರಿಯಾಗುವ, ತಂಗಿ ನೆನಪಾದಾಗ ಮಗುವಿನ ಮುಗ್ಧತೆಗೆ ಮುಖ ಮಾಡುವ ಅವರ ಕಲೆಯ ಪ್ರೀತಿಯನ್ನು ನೋಡಿಯೇ ಸವಿಯಬೇಕು.

ನಾಯಕಿ ಆರತಿ ಛಾಬ್ರಿಯಾ ಒಂದು ಹಾಡಿನಲ್ಲಿ ಬಿಸಿಯಾಗಿ ಕುಣಿದು ಬಾಲಿವುಡ್‌ನಿಂದ ಯಾಕೆ ಬಂದೆನೆಂದು ಸಾಬೀತು ಪಡಿಸಿದ್ದಾಳೆ. ಇನ್ನೊಬ್ಬ ನಾಯಕಿ ಶ್ರೀದೇವಿಕಾ ಸಿಕ್ಕ ಅವಕಾಶವನ್ನು ಪ್ರಶಸ್ತವಾಗಿ ಬಳಸಿಕೊಂಡಿದ್ದಾರೆ. ಅಲ್ಲಲ್ಲಿ ಸ್ವಲ್ಪ ಸಹಿಸಿದರೆ ಸಂತ ನಿಮ್ಮ ಸ್ವಂತ ಆಗುತ್ತಾನೆ. ಇನ್ನೇನ್ರಿ ಬೇಕು ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada