»   » ಆದಿತ್ಯ ಸ್ನೇಹಿತರಿಗೆ, ದರ್ಶನ್ ಪ್ರೇಮಿಗಳಿಗೆ ಮಾತ್ರ!

ಆದಿತ್ಯ ಸ್ನೇಹಿತರಿಗೆ, ದರ್ಶನ್ ಪ್ರೇಮಿಗಳಿಗೆ ಮಾತ್ರ!

Posted By:
Subscribe to Filmibeat Kannada


ಇದು ಅಮೀರ್, ಜೂಹಿ, ಅಜಯ್, ಕಾಜೋಲ್ ನಟಿಸಿದ್ದ ಹಿಂದಿ ಚಿತ್ರ ಇಷ್ಕ್‌ನ ಅಪ್ಪಟ ರಿಮೇಕ್. ಅದರದೇ ಕಾಪಿ ಆಗಿದ್ದರೂ ಎಷ್ಟೋ ಸಹನೀಯವಾಗುತ್ತಿತ್ತು. ಹಾಗೆಂದು ಅಸನೀಯವೂ ಅಲ್ಲ. ಚಿತ್ರವನ್ನು ಸಹನೀಯ ಮಾಡಿದ್ದು ದರ್ಶನ್‌ರ ಕಾಮೆಡಿ ಟೈಮಿಂಗ್ ಮತ್ತು ಪಂಚಿಂಗ್ ಡೈಲಾಗ್ಸ್. ಡೈಲಾಗ್ ಡೆಲಿವರಿಯಲ್ಲಾಗಿಲಿ, ಭಾವಾಭಿನಯದಲ್ಲಾಗಲಿ, ಫೈಟಿಂಗ್‌ನಲ್ಲಾಗಲಿ ದರ್ಶನ್‌ಗೆ ದರ್ಶನ್‌ರೇ ಸಾಟಿ.


ಅಣ್ಣತಂಗಿಯಂತಿರುವ ಸೂರ್ಯ ಮತ್ತು ಸಿಂಧು ವೀಸಾಗೀಸಾ ಇಲ್ದೆ ಶ್ರೀಲಂಕಾಗೆ ಹೋಗಲು ಇನ್ನೇನು ಫ್ಲೈಟ್ ಹತ್ತಬೇಕು, ಅತ್ತ ಅವರನ್ನು ತಡೆಯಲು ಬರುತ್ತಿರುವ ಆದಿ ಮತ್ತು ಲಕ್ಷ್ಮಿಯ ಕಾರು ಕಬ್ಬನ್ ಪಾರ್ಕ್ ಬಳಿಯೇ ಆಕ್ಸಿಡೆಂಟ್ ಆಗಿಬಿಡುತ್ತದೆ. ತೀವ್ರವಾಗಿ ಪೆಟ್ಟಾದ ಆದಿ ಕಾಲೆಳೆದುಕೊಂಡು ಎರಡೇ ನಿಮಿಷದಲ್ಲಿ ಏರ್‌ಪೋರ್ಟ್‌ನಲ್ಲಿರುತ್ತಾನೆ ಲಕ್ಷ್ಮಿಯೊಂದಿಗೆ. ಯಾವುದೇ ಪ್ರತಿರೋಧವಿಲ್ಲದೆ ಸೆಕ್ಯುರಿಟಿ ಅವರನ್ನು ವಿಮಾನದ ಬಳಿ ಹೋಗಲು ಬಿಟ್ಟುಬಿಡುತ್ತಾನೆ. ಇವರಿಬ್ಬರು ಅವರಿಬ್ಬರನ್ನು ದೇಶಬಿಟ್ಟು ಪರ್ಮನಂಟಾಗಿ ಹೋಗುವುದನ್ನು ತಡೆಯುತ್ತಾರೆ. ಕೊನೆಗೆಲ್ಲವೂ ಸುಖಾಂತ್ಯ.

ಇದು ಸ್ನೇಹನಾ ಪ್ರೀತಿನಾ ಚಿತ್ರದ ಅಂತಿಮ ದೃಶ್ಯ. ಇದರರ್ಥ ಇಷ್ಟೆ. ಚಿತ್ರ ನೋಡಲು ಹೋಗುವವರು ಲಾಜಿಕ್ಕನ್ನು ಮನೆಯಲ್ಲೇ ಇಸ್ತ್ರಿ ಮಾಡಿ ಕಪಾಟಿನಲ್ಲಿ ಮಡಚಿಟ್ಟು, ತಲೆಚಿಟ್ಟು ಹಿಡಿದರೆ ತೆಗೆದುಕೊಳ್ಳಲೊಂದು ಅನಾಸಿನ್ ಹಿಡಿದೇ ಬರಬೇಕು.

ಇದು ಅಮೀರ್, ಜೂಹಿ, ಅಜಯ್, ಕಾಜೋಲ್ ನಟಿಸಿದ್ದ ಹಿಂದಿ ಚಿತ್ರ ಇಷ್ಕ್‌ನ ಅಪ್ಪಟ ರಿಮೇಕ್. ಅದರದೇ ಕಾಪಿ ಆಗಿದ್ದರೂ ಎಷ್ಟೋ ಸಹನೀಯವಾಗುತ್ತಿತ್ತು. ಹಾಗೆಂದು ಅಸನೀಯವೂ ಅಲ್ಲ. ಚಿತ್ರವನ್ನು ಸಹನೀಯ ಮಾಡಿದ್ದು ದರ್ಶನ್‌ರ ಕಾಮೆಡಿ ಟೈಮಿಂಗ್ ಮತ್ತು ಪಂಚಿಂಗ್ ಡೈಲಾಗ್ಸ್. ಡೈಲಾಗ್ ಡೆಲಿವರಿಯಲ್ಲಾಗಿಲಿ, ಭಾವಾಭಿನಯದಲ್ಲಾಗಲಿ, ಫೈಟಿಂಗ್‌ನಲ್ಲಾಗಲಿ ದರ್ಶನ್‌ಗೆ ದರ್ಶನ್‌ರೇ ಸಾಟಿ. ಆದರೆ, ಅಷ್ಟೇ ಮಹತ್ವದ ಪಾತ್ರವಿದ್ದರೂ ಆದಿತ್ಯ ಆದಿ ಪಾತ್ರದಲ್ಲಿ ಸೂರ್ಯ(ದರ್ಶನ್)ನ ಪ್ರಖರತೆಯ ಮುಂದೆ ಮಂಕಾದಂತೆ ಕಾಣುತ್ತಾರೆ.

ಹಾಸ್ಯ ಸನ್ನಿವೇಶಗಳ ನಿರೂಪಣೆಯಲ್ಲಿ ವಹಿಸಿದ ಆಸ್ಥೆಯನ್ನು ಚಿತ್ರಕಥೆ ಬರೆದು ಚಿತ್ರ ನಿರ್ದೇಶಿಸಿದ ಶಾಹುರಾಜ್ ಶಿಂಧೆ ಚಿತ್ರದ ಇತರ ಸಣ್ಣಸನ್ನಿವೇಶಗಳ ಬಗ್ಗೆ ಹರಿಸಿಲ್ಲ. ಸನ್ನಿವೇಶವೊಂದರಲ್ಲಿ ಗಾಯಗೊಂಡ ಮಗ ಆದಿಯನ್ನು ನಂಬಿಸುವ ರೀತಿಯಲ್ಲಿ ಕನ್ನಡಿಗೆ ಹಣೆಗಟ್ಟಿಸಿ ರಕ್ತ ಸುರಿಸುವ ರಂಗಾಯಣ ರಘು ಹಣೆಯ ಮೇಲೆ ಗಾಯದ ಗುರುತೇ ಇರುವುದಿಲ್ಲ ಮುಂದಿನ ಸನ್ನಿವೇಶದಲ್ಲಿ. ದರ್ಶನ್ ಲಕ್ಷ್ಮಿಯನ್ನು ಅಟ್ಟಿಸಿಕೊಂಡು ಹೋಗಿ ಬಲಾತ್ಕಾರ ಮಾಡುವ ನಾಟಕವಾಡುವ ಜಾಗದಲ್ಲಿ ಸಾಧು ಕೋಕಿಲಾ ಇಲ್ಲದಿದ್ದರೂ ಅಲ್ಲಿನ ಫೋಟೋಗಳನ್ನು ಹೇಗೆ ತಗೆದ? ಕೊನೆಯ ದೃಶ್ಯದಲ್ಲಾದರೂ ಕಾಲಿಗೆ ಗಾಯಗೊಂಡು ಕುಂಟುತ್ತ ಏರ್‌ಪೋರ್ಟ್ ತಲುಪಿದ ಆದಿಗೆ ಒಂದು ಆಟೋವನ್ನಾದರೂ ಹಿಡಿದು ಹೋಗುವಷ್ಟು ಪರಿಜ್ಞಾನವಿಲ್ಲವೆ? ಇವುಗಳಿಗೆ ಉತ್ತರ ಕಂಡುಕೊಳ್ಳುವ ಗೋಜಿಗೆ ಹೋಗಲೇಬೇಡಿ.

ವೇಗದ ಓಟಗಾರನೊಬ್ಬ ಕಾಲಲ್ಲಿ ಬಂದ ಟೆನ್ನಿಸ್ ಚೆಂಡನ್ನು ಎಡವಿ ಬಿದ್ದಂತಾಗಿದೆ ಚಿತ್ರದ ಸ್ಥಿತಿ. ವೇಗಕ್ಕೆ ಕೊಟ್ಟ ಪ್ರಾಮುಖ್ಯತೆಯನ್ನು ರಾಗಕ್ಕೂ ಕೊಟ್ಟಿದ್ದರೆ ಮೂಲ ಚಿತ್ರಕ್ಕೆ ಸರಿಸಾಟಿಯಾಗುವ ಸಾಧ್ಯತೆಯಿತ್ತು. ಹರಿಕೃಷ್ಣ ಅವರ ಸಂಗೀತವಾಗಲಿ, ರಂಗನಾಥ್ ಅವರ ಹಿನ್ನೆಲೆ ಸಂಗೀತವಾಗಲಿ ಇಷ್ಕ್ ಚಿತ್ರದ ಹತ್ತಿರವೂ ಸುಳಿಯುವುದಿಲ್ಲ.

ಹಾಡು ಕುಣಿತದಲ್ಲಿ ಮಿನಿಗಳಲ್ಲೇ ಕಾಣಿಸುವ ಲಕ್ಷ್ಮಿ ರೈ ಮತ್ತು ಸಿಂಧು ದುಲಾನಿ ಅಭಿನಯ ಅಷ್ಟಕ್ಕಷ್ಟೇ. ನಿಲುವಿನಲ್ಲಿ ಲಕ್ಷ್ಮಿ ರೈ ಎತ್ತರದಲ್ಲಿದ್ದರೂ ಅಭಿನಯದಲ್ಲಿ ಸಿಂಧುಗಿಂತ ತುಸು ಕುಳ್ಳಿಯೇ. ಲಕ್ಷ್ಮಿ ರೈ ಸಂಭಾಷಣೆ ಒದಗಿಸುವಾಗ ತುಟಿಯ ಚಾಲನೆಗೂ ಸಂಭಾಷಣೆಗೂ ತಾಳಮೇಳ ಇಲ್ಲದಿರುವುದು ಶಶಿಕುಮಾರ್ ಸಂಕಲನ ವಿಫಲವಾಗಿರುವುದಕ್ಕೆ ಸಾಕ್ಷಿ. ಚಿತ್ರ ಎರಡೂವರೆ ಗಂಟೆಯವರೆಗೆ ಜಗ್ಗಿರುವುದರಿಂದ ನಿರ್ಮಾಪಕ ಅಣಜಿ ನಾಗರಾಜ್ ಅವರ ಕ್ಯಾಮೆರಾ ಕೂಡ ಅಷ್ಟೇ ವೇಗವಾಗಿ ಸಾಗಿದೆ.

ರಂಗಾಯಣ ರಘು, ಈ ಬಾರಿ ವಿಗ್ ಹಾಕದ ರಾಜೀವ್ ಅಭಿನಯ ಓಕೆ. ಪರಮೇಶಿ ರಮೇಶ್ ಭಟ್, ಬೆಳ್ಳಿಮೋಡ ದೊಡ್ಡಣ್ಣಗೇನಾಗಿದೆ ಎಂದು ಪ್ರೇಕ್ಷಕರಿಗೆ ಕಾಡಿದರೆ ಆಶ್ಚರ್ಯವಿಲ್ಲ. ಇಂಥ ಪಾತ್ರಗಳಲ್ಲಿ ಅಭಿನಯಿಸುವ ಬದಲು ಸುಮ್ಮನಿರುವುದೇ ಲೇಸೆಂದು ಅಂದುಕೊಂಡರೆ ತಪ್ಪೇನೂ ಇಲ್ಲ.

ಆದರೆ, ದರ್ಶನ್ ಚಿತ್ರಪ್ರೇಮಿಗಳು ನಿರಾಶರಾಗಬೇಕಿಲ್ಲ. ಕಾಮೆಡಿ ದೃಶ್ಯಗಳಲ್ಲಿ ಸಾಧು ಕೋಕಿಲಾಗಿಂದ ದರ್ಶನ್‌ಗೇ ಹೆಚ್ಚಿನ ಶಿಳ್ಳೆಗಳು ಬೀಳುತ್ತವೆ. ಈ ಚಿತ್ರ ಹಿಂದಿಯ ಇಷ್ಕ್ ಚಿತ್ರ ನೋಡದಿದ್ದವರಿಗೆ ಮತ್ತು ದರ್ಶನ್ ಚಿತ್ರ ನೋಡಲೇಬೇಕು ಎಂಬುವವರಿಗೆ ಮಾತ್ರ.

ಸ್ನೇಹನಾ ಪ್ರೀತಿನಾ ಚಿತ್ರಪಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada