»   » ಚಿತ್ರ ವಿಮರ್ಶೆ: 3ನೇ ಕ್ಲಾಸ್ ಮಂಜ ಬಿಕಾಂ ಭಾಗ್ಯ

ಚಿತ್ರ ವಿಮರ್ಶೆ: 3ನೇ ಕ್ಲಾಸ್ ಮಂಜ ಬಿಕಾಂ ಭಾಗ್ಯ

Subscribe to Filmibeat Kannada

ಕಾಲೇಜ್ ಕುಮಾರ್ ಕಿಸ್ಸಿಗೆ ಢಮಾರು... ಕೇಳ್ರಣ್ಣೊ... ಕೋಮಾ... ಕೋಮಾ...ಓಂ ಚಿತ್ರದ ಈ ಹಾಡು ಕಿವಿಗೆ ಅಪ್ಪಳಿಸುತ್ತಿದ್ದಂತೆ ಪ್ರೇಕ್ಷಕ ಕೂಡ ಕೋಮಾ...!

*ವಿನಾಯಕರಾಮ್ ಕಲಗಾರು

3Ne class Manja B.Com Bhagya, review
ಆ ಮೂರನೇ ಕ್ಲಾಸ್ 'ಮೆಂಟಲ್ ಮಂಜ"ನ ಪೋಷಾಕು, ಪ್ರೀತಿಯ ಫಿಲಾಸಫಿ ಸಾರುವ, ಅದೇ ಹರುಕು ಮುರುಕು ಕಂಗ್ಲಿಷ್ 'ಡೈ"ಲಾಕು, ಎದುರಿಗೆ ಕುಳಿತವರನ್ನು ನುಂಗುವಂತೆ ಕಣ್ಣರಳಿಸಿ, ಹೆಬ್ಬೆಟ್ಟು- ಕಿರುಬೆಟ್ಟು ಆಚೆ ತೆಗೆದು, ಇಡೀ ಕೈಯನ್ನು ಕುಲುಕಿಸಿ, 'ಏನೀವಾಗ" ಎನ್ನುವ ಆ ನಾಯಕಿಯ ಲುಕ್ಕು, ತಿರುಪತಿ 'ತಿಮ್ಮ"ಪ್ಪಾ ಕನ್ನಡ ಪ್ರೇಕ್ಷಕರನ್ನು ಕಾಪಾಡಪ್ಪಾ...

ಇದು ಸಾಯಿ ಸಾಗರ್ ಹ್ಯಾಟ್ರಿಕ್ ನಿರ್ದೇಶನದ ಚಿತ್ರ. ಹಿಂದಿನ ಎರಡು 'ದಂತಕತೆ"ಗೆ ಹೋಲಿಸಿದರೆ ಈ ಹೆಬ್ಬೆಟ್ಟು ಮಂಜನೇ ವಾಸಿ. ಇಲ್ಲಿ ಎಲ್ಲವೂ ಮಾಸ್. ಇಲ್ಲಿಯವರೆಗೆ ಬರೀ ಮಚ್ಚು, ಲಾಂಗಿನಲ್ಲಿ ಸಾಯಿಸುತ್ತಿದ್ದ ಸಾಯಿ ಇಲ್ಲಿ ಪ್ರೀತಿ-ಪ್ರೇಮ ಎಂಬ ನಾಲ್ಕು ಅಕ್ಷರದಿಂದ ನೇಣು ಹೊಸೆದಿದ್ದಾರೆ. ಆ ಹ್ಯಾಂಗೋವರ್‌ನಿಂದ ಹೊರಬಂದು ಈ ಮೂಲಕ ಹ್ಯಾಂಗ್ ಮಾಡಿದ್ದಾರೆ.

ಹ್ಯಾಂಗವ್ರೆ ಈ ಮಂಜ-ಭಾಗ್ಯ? ಊರು ಸುತ್ತುವ ಉಡಾಳ, ಮೂರನೇ ಕ್ಲಾಸ್ ಮುಠ್ಠಾಳ, ಮೆಂಟಲ್ ಗಿರಾಕಿ ಮನೆ ಹಾಳ... ಅವನೇ ಮಂಜ. ಊರ ಚೇರ್‌ಮನ್ ಸುಪುತ್ರ, ಎಲ್ಲಾ ಅರಿತ ಸಾವಿತ್ರಿ. ಮಂಜನ ಪಾಲಿಗೆ 143... ಅವಳೇ ಬಿ.ಕಾಂ ಭಾಗ್ಯ. ಅವಳಿಗೊಬ್ಬ ರೌಡಿ ಅಣ್ಣ. ಮಂಜ-ಭಾಗ್ಯ ಊರು-ಕೇರಿ, ಟಾಕೀಸು-ಪಾರ್ಕು ತಿರುಗುತ್ತಾರೆ. ಆಗ ಅವಳ ಅಪ್ಪ-ಅಣ್ಣ ಕಳ್ಳೆಕಾಯಿ ತಿನ್ನುತ್ತಿರುತ್ತಾರೆ... ದ್ವಿತೀಯಾರ್ಧ ಶುರುವಾಗಿ ಇನ್ನೇನು ಎಲ್ಲರೂ ಎದ್ದು ಹೊರಡಬೇಕು; ಅಣ್ಣ ಬುಸುಗುಡುತ್ತಾ ಬರುತ್ತಾನೆ. ಮಂಜ ಚೆನ್ನಾಗಿ ಚಚ್ಚುತ್ತಾನೆ... ಕೊನೆಗೆ ಇಬ್ಬರೂ ಊರು ಬಿಟ್ಟು ಓಡಿ ಹೋಗುತ್ತಾರೆ...(ಕತೆಗೆ 'ಸ್ಪೂರ್ತಿ": ತಮಿಳಿನ 7/ ಜಿ ರೈನ್ ಬೊ ಕಾಲೋನಿ)

ಇಲ್ಲಿ ಹೊಸತೇನಿದೆ... ಅದೇ ಅಡುಗೆ, ಅದೇ ಪಾಕ... ಅದೇ ಚೆಲುವಿನ ಚಿತ್ರಾನ್ನ.. ಈ ಸೌ'ಭಾಗ್ಯ"ಕ್ಕೆ ನಾವು ಥೇಟರಿಗೆ ಹೋಗಬೇಕಾ ಎಂದು ಕೇಳಬೇಡಿ. ಇಲ್ಲಿ ನೀವು ನೋಡಲೇಬೇಕಾದ ಹಾಡೊಂದಿದೆ. ಅದು ಡಾ.ರಾಜ್-ಮಂಜುಳಾ, ಮಂಜ-ಭಾಗ್ಯ ಕುಣಿಯುವ 'ನೀ ನನ್ನ ಗೆಲ್ಲಲಾರೆ" ಚಿತ್ರದ 'ಜೀವ ಹೂವಾಗಿದೆ..." ಹಾಡು. ಸಂಗೀತ ನಿರ್ದೇಶಕ ವೆಂಕಟ್-ನಾರಾಯಣ್ ಸಂಗೀತದಲ್ಲಿ ಅತ್ಯುತ್ತಮವಾದದ್ದು ಈ ಗೀತೆ. ಅಂದು ಇಳಯರಾಜ ಹಾಕಿದ ರಾಗ ಇಡೀ ಚಿತ್ರದ ಹೈಲೈಟು. ಕೊಟ್ಟ ಕಾಸಿಗೆ ಅದು ಖಂಡಿತಾ ಮೋಸ ಮಾಡುವುದಿಲ್ಲ!

ಇನ್ನು ಪಾತ್ರವರ್ಗ. ನಾಯಕ ಅರ್ಜುನ್ ಹೊಡೆದಾಡುವ ದೃಶ್ಯದಲ್ಲಿ ಹೆಚ್ಚು ಗಮನ ಸೆಳೆಯುತ್ತಾರೆ. ಕುಣಿತ ಮಾತ್ರ ಅಂಕು-ಡೊಂಕು, ಎಡ-ಬಿಡಂಗಿ. ಕೆಲವು ಕಡೆ ನಗಿಸಲು ಹೋಗಿ, ನಗೆಪಾಟಲಿಗೆ ಗುರಿಯಾಗುತ್ತಾರೆ. ಡಾ.ರಾಜ್ ಥರ ಪೋಸ್ ಕೊಟ್ಟು, ಸರಕ್ ಅಂತ ಸೊಂಟ ತಿರುಗಿಸುವುದು ಅತಿರೇಕದ ಪರಮಾವಧಿ. ರಾಜ್ ಬಾಡಿ ಎಲ್ಲಿ, ಈ ಗಾಡಿ ಎಲ್ಲಿ? ಇನ್ನು ಅಶ್ವಿನಿ. ಹಿಂದಿನ ಚಿತ್ರಕ್ಕೆ ಹೋಲಿಸಿದರೆ ನಟನೆ ನೀಟಾಗಿದೆ. ಸರಿಯಾದ ನಿರ್ದೇಶಕ, ಪಾತ್ರ ಸಿಕ್ಕರೆ ಉತ್ತಮ ನಟಿ ಎನಿಸಿಕೊಳ್ಳುವ ಸಾಮರ್ಥ್ಯ ಇದೆ. ಬೇಗ ಬದಲಾಗಬೇಕು, ಇಲ್ಲದಿದ್ದರೆ 'ಆಂಟಿ ಪ್ರೀತ್ಸೆ ಭಾಗ 2"ಕ್ಕೆ ನಾಯಕಿ ಆಗಬೇಕಾಗುತ್ತದೆ!

ಕುಡಿದು, ತಡಕಾಡುವ ಸತ್ಯಜಿತ್ ಪಾತ್ರ ಇಷ್ಟವಾಗುತ್ತದೆ. ಆಶಾಲತಾ, ಹೊನ್ನವಳ್ಳಿ ಕೃಷ್ಣ, ಪ್ರಮಿಳಾ ಜೋಷಾಯಿ ಪಾತ್ರಗಳಲ್ಲಿ ಜೋಷ್ ಇಲ್ಲ. ಭಾಗ್ಯನ ಅಪ್ಪ-ಅಣ್ಣನ ಪಾತ್ರಧಾರಿಗಳು ಬದನೆಕಾಯಿ-ಕರಿ ಕುಂಬಳಕಾಯಿಗೆ ಹೋಲುತ್ತಾರೆ. ಶನಿಮಹದೇವಪ್ಪ ಅವರನ್ನು ಬಹಳ ವರ್ಷಗಳ ನಂತರ ಕರೆತಂದ ನಿರ್ದೇಶಕರನ್ನು ಮೆಚ್ಚಲೇಬೇಕು. ಆದರೆ ಅವರಿಗೆ ಕೊಟ್ಟ ಪಾತ್ರ ಕೆಟ್ಟದಾಗಿದೆ. ಛಾಯಾಗ್ರಹಣದಲ್ಲಿ ಹೊಸತನ ಇಲ್ಲ. ಸಾಯಿ ಸಾಗರ್ ತಂಡ ಹೆಣದ ಮುಂದೆ ಖುಷಿಯಿಂದ ಕುಣಿಯುವುದು ಇತ್ತೀಚಿನ ನೃತ್ಯ ಸಂಯೋಜಕರಿಗೇ ಸವಾಲು!

ಒಟ್ಟಾರೆ ಒಂದಷ್ಟು ಕಮರ್ಷಿಯಲ್ ಅಂಶ ತುರುಕಿ, ಜನ ಮಂಜನ ಸುತ್ತ ಮತ್ತೆ ಮತ್ತೆ ಗಿರಕಿ ಹೊಡೆಯಬೇಕು ಎನ್ನುವುದು ಸಾಯಿ ಉದ್ದೇಶ. ಆದರೆ ಅವರು ಚಿತ್ರಕತೆ, ಸಂಭಾಷಣೆ, ನಿರೂಪಣೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ ಎನ್ನುವುದು ಇಲ್ಲಿನ 'ವಿಶೇಷ". ಅಂದಹಾಗೆ ಇದಕ್ಕೆ ಅಪ್ಪ ನಿರ್ಮಾಪಕ, ಅಣ್ಣ ನಾಯಕ, ತಮ್ಮ ನಿರ್ದೇಶಕ, ನಾಯಕಿ ಕೂಡ ಹತ್ತಿರದ ಸಂಬಂಧ. ಕಳ್ಳು, ಬಳ್ಳಿ, ಸ್ನೇಹಿತರು ಅಲ್ಲಲ್ಲಿ ಮುಖ ತೂರಿಸಿ ಹೋಗುತ್ತಾರೆ. 'ಕೌಟಂಬಿಕ"ಚಿತ್ರಗಳ ಯುಗ ಮುಗಿಯಿತು ಅಂದವರು ಯಾರು ?
ನೀನ್ಯಾರೆ?, ಛಾಯಾಗ್ರಾಹಕ ವಿಷ್ಣುಗೆ ಹ್ಯಾಟ್ಸಾಫ್!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada