»   » ಕಾಮಣ್ಣ - ಸನ್ಸ್ ಕಾಮಿಡಿಕಾಂಡ !

ಕಾಮಣ್ಣ - ಸನ್ಸ್ ಕಾಮಿಡಿಕಾಂಡ !

Posted By:
Subscribe to Filmibeat Kannada

ತಮಿಳಿನ 'ಮಜಾ' ಚಿತ್ರದ ಅಪ್ಪಟ ರಿಮೇಕ್ ಈ ಗುರುದತ್ ನಿರ್ದೇಶನದ 'ಕಾಮಣ್ಣನ ಮಕ್ಕಳು'. ರಿಮೇಕಾದರೂ ಕಾಮಿಡಿಗೆ, ಮಜಾಕ್ಕೆ ಖಂಡಿತ ಮೋಸವಿಲ್ಲ. ಪಡ್ಡೆ ಹೈಕಳಿಗೆ ಏನು ಬೇಕೋ ಅದೆಲ್ಲ ಇಲ್ಲಿದೆ. ಸುದೀಪ್ ಅಭಿನಯ, ಸಾಧು ಕೋಕಿಲಾ ಕಿಲಕಿಲ ಚಿತ್ರದ ಹೈಲೈಟು. ದೀಪು ಲುಕ್ಕಿಗೆ ಮಾತ್ರ ಸೈ.

ವಿಮರ್ಶಕ : ವಿನಾಯಕರಾಮ್ ಕಲಗಾರು

ಅದು ರಿಮೇಕ್ ಆಗಿರಲಿ ಅಥವಾ ಯಥಾವತ್ ಪಡಿಯಚ್ಚಾಗಿರಲಿ. ಜನ ಕೇಳೋದು ಏನು? ಶೇ. 100ರಷ್ಟು ಮನರಂಜನೆ. ಕುಳಿತ ಎರಡೂವರೆ ತಾಸಿಗೆ, ಕೊಟ್ಟ ಕಾಸಿಗೆ ಮೋಸ ಆಗಬಾರದು. ಯಾರಪ್ಪ ಇವನು ಡಬ್ಬ ಪಿಚ್ಚರ್ ಮಾಡಿದ್ದಾನೆ. ಮಾಡೋಕೆ ಬೇರೇನೂ ಕೆಲಸವಿರಲಿಲ್ಲವಾ?' ಅಂತ ಬೈಕೊಂತ ಹೊರಬರುವಂತೆ ಚಿತ್ರ'ಹಿಂಸೆ ನೀಡಬಾರದು ಅಷ್ಟೆ.

ಈ ಸಿದ್ಧಾಂತ ನಿರ್ದೇಶಕ ಗುರುದತ್‌ಗೆ ತುಂಬಾನೇ ಚೆನ್ನಾಗಿ ಗೊತ್ತಿದೆ. ಅಷ್ಟೇ ಏಕೆ ಅವರು, ನಾವು ಏನಿದ್ದರೂ ಕಮರ್ಷಿಯಲ್ ಸಿನಿಮಾ ಮಾಡೋ ಮಂದಿ' ಅಂತ ಈಗಾಗಲೇ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ ಕೂಡ!

ಅದನ್ನು ಸುತಾರಾಮ್ ಸಾಬೀತು ಮಾಡೋಕೆ ಅಂತ ಅವರು ತಮಿಳಿನ ಮಜಾ' ಚಿತ್ರವನ್ನು ರಿಮೇಕ್ ಮಾಡಿದ್ದಾರೆ. ಅಲ್ಲಿ ಅದು ಹೇಗಿತ್ತು ಅನ್ನುವುದು ಪ್ರಶ್ನೆಯಲ್ಲ. ಆದರೆ ಇಲ್ಲಿ ಹೇಗೆ ಮಾಡಿದ್ದಾರೆ ಎನ್ನುವುದು ಮುಖ್ಯ. ಒಬ್ಬ ದೊಡ್ಡಣ್ಣ. ಇನ್ನೊಬ್ಬ ಸುದೀಪ್. ಮತ್ತೊಬ್ಬ ಮಾಜಿ ನಟ ರಾಕ್‌ಲೈನ್ ವೆಂಕಟೇಶ್. ಈ ತ್ರಿವಳಿ ಸಂಗಮದ ಒಟ್ಟು ಮೊತ್ತವೇ ಕಾಮಣ್ಣನ ಮಕ್ಕಳು. ಇವರನ್ನು ಇಟ್ಟುಕೊಂಡು ಗುರು ಒಂದು ಪಕ್ಕಾ ಕಾಮಿಡಿ ಚಿತ್ರ ಮಾಡಿದ್ದಾರೆ. ಜತೆಗೆ ಆಕ್ಷನ್, ಸೆಂಟಿಮೆಂಟ್, ಹಾಡು ಎಲ್ಲವೂ ಇದೆ. ಒಟ್ಟಾರೆ ಹೇಳುವುದಾದರೆ ಇದು ಫುಲ್ ಕಾಮಿಡಿ ಮೀಲ್ಸ್. ಉಳಿದದ್ದನ್ನು ಉಪ್ಪಿನಕಾಯಿ' ಎನ್ನಬಹುದು.

ಇಂಥವರನ್ನು ಕಟ್ಟಿಕೊಂಡು ಅಂದುಕೊಂಡಂತೇ ಮಾಡುವುದು ಉಂಟು ತೇಗಿದಷ್ಟು ಸುಲಭವಾ? ಅದಕ್ಕೆ ಅಷ್ಟೇ ತಾಕತ್ತು ಬೇಕು. ಏಕೆಂದರೆ ಒಬ್ಬೊಬ್ಬರಿಗೆ ಒಂದೊಂದು ಮ್ಯಾನರಿಸಂ ಇದೆ. ಎಲ್ಲರಿಗೂ ಸ್ವಂತಿಕೆಯನ್ನು ತೋರಿಸಲು ಅವಕಾಶ ಕೊಡಬೇಕು. ಜತೆಗೆ ಕತೆಗೆ ಏನು ಬೇಕು? ಎಷ್ಟೆಷ್ಟು ಬೇಕು ಎನ್ನುವುದನ್ನು ಮೊದಲೇ ನಿಕ್ಕಿ ಮಾಡಿಕೊಳ್ಳಬೇಕು. ಅದರಂತೆ ಎಲ್ಲವನ್ನೂ ಮಾಡಿಮುಗಿಸಬೇಕು. ಅವೆಲ್ಲವನ್ನೂ ಗುರು ಚಾಚೂತಪ್ಪದೇ ಮಾಡಿದ್ದಾರೆ. ಅದು ಎಷ್ಟರ ಮಟ್ಟಿಗೆ ಎಂದರೆ ಮೊದಲಾರ್ಧ ಮುಗಿದದ್ದೇ ಗೊತ್ತಾಗುವುದಿಲ್ಲ. ನಗು ನಗುತ್ತ ಒಂದು ಸಿಂಪಲ್ ಜರ್ನಿ ಮಾಡಿದ ಅನುಭವವನ್ನು ನೀಡುತ್ತಾರೆ ಕೆಂಗೇರಿಯ ಕಾಮಣ್ಣ ಅಂಡ್ ಸನ್ಸ್!

ಅಪ್ಪ ನಂಜಪ್ಪಾಸ್ ಮಕ್ಕಳು ಗುಂಜಪ್ಪಾಸ್.... ಪೈಲ್ವಾನನಂಥ ಪಿತಾಜಿ. ಆತನಿಗೆ ಸುನಾಮಿಯಂಥ ರಾಮ-ಕೃಷ್ಣ ಎಂಬ ಸುಪುತ್ರರು. ಅಪ್ಪ ಕುಡುಕೊಂತ ಕುಲುಕುಲು ಎಂದ್ರೆ, ಮಕ್ಕಳು ಬಡಕೊಂತ ಬುಸ್‌ಗುಡುತ್ತವೆ. ಪುತ್ರರತ್ನರು ಬೀದಿನಾಯಿಗಳ ಥರ ಕಿತ್ತಾಡುತ್ತಿದ್ದರೆ ಅದನ್ನು ನೋಡಿ, ಇಕ್ಲಾ ಮಗಾ... ಚಚ್ಲಾ ಮಗಾ...' ಎನ್ನುವ ದಿ ಗ್ರೇಟ್ ಫಾದರ್! ಯಾರೊಬ್ಬರಿಗೂ ಎದೆ ಸೀಳಿದರೆ ಅಆಇಈನೂ ಇಲ್ಲ. ಸಿನಿಮಾ ಶುರು ಆಗುವ ಮುನ್ನ ಅವರು ಪಕ್ಕಾ 420ಗಳಾಗಿರುತ್ತಾರೆ. ಕಂಡೋರ ಮನೆ ಹಂಚು ತೆಗೆಯಲು ಹೊಂಚು ಹಾಕೋದು ಅವರ "ಮಾಜಿ ಉದ್ಯೋಗ'. ಹಾಲಿ ಒಂದು ಡಕೋಟಾ ಎಕ್ಸ್‌ಪ್ರೆಸ್' ಥರದ ಲಾರಿ ಇಟ್ಕಂಡು ಯಾವುದೋ ಊರಿಗೆ ಹೊರಟಿರುತ್ತಾರೆ. ಅರ್ಧದಾರೀಲಿ ಆ ಲಾರಿ ಡೊರ್ ಡೊರ್... ಎನ್ನುತ್ತ ಅಂಗಾತ ಮಲಗುತ್ತೆ.

ಅಲ್ಲೇ ಮಲಗಿ ರಾತ್ರಿ ಕಳೆಯಲು ನಿರ್ಧರಿಸುತ್ತಾರೆ. ಅ ದ್ಹ್ಯಾಗೋ ಪಕ್ಕದಲ್ಲಿದ್ದ ಶಿವರಾಮಯ್ಯನವರ ಮನೆಯವರ ಪರಿಚಯವಾಗುತ್ತದೆ. ಅವರು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ ಎನ್ನುವುದೂ ಗೊತ್ತಾಗುತ್ತೆ. ಅದಕ್ಕೆ ಊರಿನ ಪಟೇಲ ಕಾರಣ ಎನ್ನೋದು ತಿಳಿಯುತ್ತೆ. ತಮಗೆ ಅನ್ನ ಕೊಟ್ಟವರಿಗೆ ತೊಂದರೆ ಆಗದಂತೆ ಪಟೇಲನ ಎದುರು ಕಾಮಣ್ಣನ ಮಕ್ಕಳು ಪಟ್ಟುಹಾಕಿ ಕೂರುತ್ತಾರೆ? ಈ ಕಡೆ ಶಿವರಾಮಯ್ಯನ ಮಗಳಿಗೂ ಕೃಷ್ಣನಿಗೂ, ಆಕಡೆ ಪಟೇಲನ ಮಗಳಿಗೂ ರಾಮನಿಗೂ ಸಮ್‌ಥಿಂಗ್ ಸಮ್‌ಥಿಂಗ್' ಶುರುವಾಗುತ್ತೆ.... ಮುಂದೆ ಇದೆ ಗುರು' ದರ್‌ಬಾರ್!

ಬಹುಶಃ ಗುರುದತ್‌ಗೆ ದತ್ತ'ಚಿತ್ರದಲ್ಲಿ ಮುಗ್ಗರಿಸಿ ಬೀಳಲು ಏನು ಕಾರಣ ಅಂತ ಗೊತ್ತಾಗಿರಬೇಕು. ಅದಕ್ಕೆ ಇಲ್ಲಿ ಸಿಕ್ಕಾಪಟ್ಟೆ ಹೊಡೆದಾಟ ಸೇರಿಸಿದ್ದಾರೆ. ಒಂದಿಷ್ಟು ಕಡೆ ಅಣ್ಣ- ತಮ್ಮ ಕಿತ್ತಾಡೋದು, ಇನ್ನೊಂದಿಷ್ಟು ಕಡೆ ಅವರಿಬ್ಬರೂ ಸೇರಿ ಪಟೇಲ್ರ ಚೇಲಾಗಳ ಜತೆ ಕಿತ್ತಾಡೋದು.... ಜತೆಗೆ ಕತೆಯಲ್ಲಿ ತಾಕತ್ತು' ಇಲ್ಲದಿದ್ದರೆ ಇಂಥ ಹಕೀಕತ್ತುಗಳು ಅನಿವಾರ್ಯ. ಆ ತಪ್ಪನ್ನು ನಿರ್ದೇಶಕರ ಮೇಲೆ ಹೊರಿಸಿದರೆ ಅದು ತಪ್ಪಾಗುತ್ತೆ. ಏಕೆಂದರೆ ಎಷ್ಟಾದರೂ ಇದು ರಿಮೇಕ್ ತಾನೆ?

ಅಭಿನಯದ ಮಟ್ಟಿಗೆ ಸುದೀಪ್ ಎಲ್ಲಿಯೂ ಹಿಂದೆ ಬಿದ್ದಿಲ್ಲ. ಅದೇ ಸ್ಕೋಪು, ಅದೇ ಠೀವಿ, ಅದೇ ನೋಟ... ಎಲ್ಲದಕ್ಕೂ ಸೈಯ್ಯಾರೆಸಯ್ಯಾ. ಇನ್ನು ರಾಕ್‌ಲೈನ್ ವೆಂಕಟೇಶ್. ಕೆಲವು ವರ್ಷಗಳ ನಂತರವೇ ಬಣ್ಣ ಹಚ್ಚಿದ್ದರೂ ತಮ್ಮ ಪಾತ್ರಕ್ಕೆ ಎಲ್ಲಿಯೂ ಮೋಸ ಮಾಡಿಲ್ಲ. ಇವರಿಬ್ಬರ ಅಪ್ಪನ ಪಾತ್ರದಲ್ಲಿ ದೊಡ್ಡಣ್ಣ ಹೇಗೆ ಅಭಿನಯಿಸಿರಬಹುದು ಎಂಬುದನ್ನು ನೀವೇ ನಿರ್ಧರಿಸಿ. ದೊಡ್ಡಣ್ಣ ಬಹುದೊಡ್ಡ ನಟ' ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ಆದರೆ ನಾಯಕಿ ದೀಪು ಸುಮ್ಮನೆ ನಿಂತು ಹಲ್ಲುಗಿಂಜುವುದಕ್ಕೆ ಮಾತ್ರ ಲಾಯಕ್ಕು. ಆದರೂ ಲುಕ್ಕು ಚೆನ್ನಾಗಿದೆ. ಮಾತು, ನಗುವಿನಲ್ಲಿ ತಾನೇನೆಂದು ತೋರಿಸಲು ಸಾಧ್ಯವಾಗದಾದಾಗ ನಡು ತೋರಿಸುವುದು ಅನಿವಾರ್ಯ! ಇನ್ನೊಬ್ಬ ನಾಯಕಿ ವೈಭವಿಗೆ ವೈಭವೀಕರಣಕ್ಕೆ ಅವಕಾಶ ಸಿಕ್ಕಿಲ್ಲ. ಅದು ಕೈತಪ್ಪಿದ್ದು ಒಳ್ಳೆಯದೇ ಆಯಿತು ಬಿಡಿ.

ಸಾಧುಕೋಕಿಲಾ ಪರದೆ ಮೇಲೆ ಕಿಲಕಿಲ ಎನ್ನುತ್ತ ಬಂದರೆ ಸಾಕು, ಜನ ಬಿದ್ದು ಬಿದ್ದು ನಗುತ್ತಾರೆ. ಆದರೆ ಅವರ ಡೈಲಾಗ್‌ಗಳಲ್ಲಿ ಮಲಮೂತ್ರಗಳ ಕುರಿತ ಸಂಭಾಷಣೆ' ಅತಿರೇಕವೆನಿಸುತ್ತದೆ. ಪಟೇಲನ ಪಾತ್ರಕ್ಕೆ ಸಿಗಬೇಕಾದ ಗೌರವ ಸಿಕ್ಕಿಲ್ಲ. ಒ.ಎ.ಕೆ ಸುಂದರ್ ಅವರನ್ನು ಎಲ್ಲಿಂದಲೋ ಕರೆಸುವುದರ ಬದಲು ಆ ಪಾತ್ರವನ್ನು ಅವಿನಾಶ್, ಶೋಭರಾಜ್... ಮಾಡಬಹುದಿತ್ತು. ಅಥವಾ ಗುರುದತ್ತೇ ಅದಕ್ಕೆ ಸೂಟ್ ಆಗುತ್ತಿದ್ದರೇನೋ. ಪೂಜಾಗಾಂಧಿ ಪುಕ್ಸಟ್ಟೆ ಬಂದು ಕುಣಿಯುವುದು ಅನಗತ್ಯ ಎನಿಸುತ್ತದೆ. ಆದಿ ಲೋಕೇಶ್ ಅಂತ್ಯದಲ್ಲಿ ಬಂದು ಅರಚುತ್ತಾರೆ. ರಂಗನಾಥ್ ಸಂಭಾಷಣೆ ಇಡೀ ಚಿತ್ರದ ಹೈಲೈಟ್. ಕ್ಲೈಮ್ಯಾಕ್ಸ್‌ನಲ್ಲಿ ರಾಕ್‌ಲೈನ್ ಕೆಸರಿನಲ್ಲಿ ಮುಳುಗುತ್ತಿರುವಾಗ ಎದೆ ಬಡಿತ ಹೆಚ್ಚಾಗುತ್ತದೆ. ಆ ಕ್ರೆಡಿಟ್ಟು ಛಾಯಾಗ್ರಹಣಕ್ಕೆ ಸಲ್ಲಬೇಕು. ದ್ವಿತೀಯಾರ್ಧದಲ್ಲಿ ಹತ್ತು ನಿಮಿಷಕ್ಕೊಂದರಂತೇ ಹಾಡುಗಳು ಬುರುಬುರು ಬಂದುಹೋಗುತ್ತವೆ. ವಿದ್ಯಾಸಾಗರ್ ಸಂಗೀತಕ್ಕೆ 59 ಅಂಕ ಕೊಡಬಹುದು. ಆದರೆ ನೂರಕ್ಕಲ್ಲ. ಸಾವಿರಕ್ಕೆ!

ಅದೇನೇ ಇರಲಿ, ಕಾಮಣ್ಣನ ಮಕ್ಕಳು' ನೋಡಿ, ಮಜಾ' ಮಾಡಿ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada