»   » ನೀನ್ಯಾರೆ?, ಛಾಯಾಗ್ರಾಹಕ ವಿಷ್ಣುಗೆ ಹ್ಯಾಟ್ಸಾಫ್!

ನೀನ್ಯಾರೆ?, ಛಾಯಾಗ್ರಾಹಕ ವಿಷ್ಣುಗೆ ಹ್ಯಾಟ್ಸಾಫ್!

Posted By:
Subscribe to Filmibeat Kannada

ಒಬ್ಬ ನಿರ್ದೇಶಕನಿಗೆ ತನ್ನ ಚಿತ್ರ ತಂಡ ಹೇಗಿದೆ ಎನ್ನುವ ಅರಿವು ಅಗತ್ಯ. ಅದೇ ರೀತಿ ಅವರ ಕೆಲಸ, ಸಾಮರ್ಥ್ಯವನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟ ಕಲ್ಪನೆ ಇರಬೇಕು. ಇಲ್ಲದಿದ್ದರೆ ಅದು ಸೂತ್ರ ಹರಿದ ಗಾಳಿಪಟ...

*ವಿನಾಯಕರಾಮ್ ಹೆಗಡೆ

Neenyaare: Kannada movie review
ನಿರ್ದೇಶಕ ಸಿಂಧೇಶೆ ಅದೇ ಸಾಲಿಗೆ ಸೇರುತ್ತಾರೆ. ಇಲ್ಲಿ ಎಲ್ಲವೂ ಚೆನ್ನಾಗಿದೆ. ಕಿವಿಗೆ ಸಿಹಿ ನೀರೆರೆಯುವ ವಿ.ಮನೋಹರ್ ಸಂಗೀತ, ಕಣ್ಣಿಗೆ ಮುದ ನೀಡುವ ವಿಷ್ಣುವರ್ಧನ್ ಛಾಯಾಗ್ರಹಣ, ನೈಪುಣ್ಯ ಮೆರೆಯುವ ನಾಯಕ-ನಾಯಕಿಯರ ನಟನೆ, ಖುಷಿ ಕೊಡುವ ನೃತ್ಯ ಸಂಯೋಜನೆ, ಮನದ ಕದ ತಟ್ಟುವ ಶರತ್‌ಬಾಬು,ತುಳಸಿ ಅಭಿನಯ, ಅಲ್ಲಲ್ಲಿ ಕಚಗುಳಿ ಇಡುವ ಪವನ್, ವಿಶ್ವರ ಕಾಮಿಡಿ... ಇಲ್ಲಿ ಎಲ್ಲ ಇದೆ. ಆದರೂ ಏನೋ ಒಂದು ಕೊರತೆ ಎದ್ದು ಕಾಣುತ್ತದೆ. ಏನದು?

ಹೋಮ-ಹವನ-ಹವಿಸ್ಸು ಎಲ್ಲವನ್ನೂ ಮುಗಿಸಿ, ಕೊನೆಗೆ ಅಲ್ಲಿ ಅಶುದ್ಧ ಮಾಡಿದರೆ ಏನಾಗುತ್ತದೆ ಹೇಳಿ? ನಿರ್ದೇಶಕರು ಇಲ್ಲಿ ಅದನ್ನೇ ಮಾಡಿದ್ದಾರೆ. ಇದೊಂದು ಪರಿಶುದ್ಧ ಪ್ರೇಮಕತೆ ಎಂದು ಜನ ಯೋಚಿಸುತ್ತಿರುವಾಗ ಇದ್ದಕ್ಕಿದಂತೆ ಭೂತ ಚೇಷ್ಟೆ ಎಂದು ದಿಕ್ಕು ತಪ್ಪಿಸುತ್ತಾರೆ. ಮೊದಲಾರ್ಧದಲ್ಲಿ 'ಪಿಯುಸಿ" ಹುಡುಗನೊಬ್ಬ ತನ್ನ ಪ್ರಿಯತಮೆಯ ಹುಡುಕಾಟದಲ್ಲಿ ತೊಡಗಿ, ತೊಳಲಾಡುತ್ತಿರುತ್ತಾನೆ. ವಿರಾಮದ ನಂತರ ಅವಳನ್ನು ಸಂಧಿಸುತ್ತಾನೆ. ಒಂದಷ್ಟು ಸುತ್ತಾಡುತ್ತಾನೆ, ಕುಣಿಯುತ್ತಾನೆ, ಹಾಡುತ್ತಾನೆ. ಆ ಮೇಲೆ ಇದ್ದಕ್ಕಿದ್ದಂತೆ ಆಕೆ ಮಾಯ... ಅದು ಪ್ರೇತವಾ ಎಂಬ ಅನುಮಾನ ಮೂಡುತ್ತದೆ. ಅಲ್ಲಿಂದ ಪ್ರೇಕ್ಷಕರು ದಿಕ್ಕು ತಪ್ಪಿ, ದಿಗ್ಬಂಧನಕ್ಕೆ ಒಳಗಾಗುತ್ತಾರೆ. ಕ್ಲೈಮ್ಯಾಕ್ಸ್ ಹೊತ್ತಿಗೆ ಆಕಳಿಕೆ, ತೂಕಡಿಕೆ. ಅಡ್ಡ ಪರಿಣಾಮ: ವಾಕರಿಕೆ... ಅಂದುಕೊಳ್ಳುವುದು ಒಂದು, ಆಗಿದ್ದು ಮತ್ತೊಂದು ಎಂದು ಎಲ್ಲರೂ ಆಚೆಬರುತ್ತಾರೆ...

ಇದು ನಿರ್ದೇಶಕರ ಪ್ರಥಮ ಪ್ರಯತ್ನವಾದ್ದರಿಂದ ಕೊಂಚ ಮಾಫಿ ಮಾಡಬಹುದು. ಕತೆಯ ಓಘಕ್ಕೆ ತಕ್ಕಂತೆ ಚಿತ್ರಕತೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಹೆತ್ತವರಿಗೆ ಹೆಗ್ಗಣವೂ ಮುದ್ದು ಎನ್ನುವಂತೆ ನಾವು ಮಾಡಿದ್ದು ನಮಗೆ ಚೆನ್ನಾಗಿಯೇ ಕಾಣುತ್ತದೆ. ಆದರೆ ಅದು ಎಲ್ಲರಿಗೂ ಇಷ್ಟವಾಗುತ್ತಾ ಎಂದು ಕೊಂಚ ಯೋಚಿಸಬೇಕಿತ್ತು. ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿ, ಇನ್ನಷ್ಟು ಟ್ರಿಮ್ ಮಾಡಿದ್ದರೆ ಅದರ ಕತೆಯೇ ಬೇರೆಯಾಗುತ್ತಿತ್ತು...

ವಿ.ಮನೋಹರ್‌ಗೆ ಕಾಲಾವಕಾಶ ಕೊಟ್ಟರೆ ಖಂಡಿತಾ ಒಳ್ಳೆಯ ಟ್ಯೂನ್ ಹಾಕುತ್ತಾರೆ ಎಂಬುದನ್ನು ನೀನ್ಯಾರೆ ಮತ್ತೊಮ್ಮೆ ನಿರೂಪಿಸಿದೆ. ಇದು ಅವರ ನೂರನೇ ಚಿತ್ರ. ಮೂರು ಹಾಡುಗಳು ಕೇಳಲೇಬೇಕೆನಿಸುತ್ತವೆ. ಅವರೇಕಾಯಿ, ಹೀರೇಕಾಯಿ, ಸೌತೆಕಾಯಿ ಹಾಡಿನಲ್ಲಿ ದಮ್ ಇದೆ. ಛಾಯಾಗ್ರಹಣದ ಮಟ್ಟಿಗೆ ಎರಡು ಮಾತಿಲ್ಲ. ಪ್ರತಿ ದೃಶ್ಯವನ್ನೂ ಕಣ್ಣಿಗೆ ಕಟ್ಟಿಕೊಡುವಲ್ಲಿ ವಿಷ್ಣುವರ್ಧನ್ ಯಶಸ್ವಿಯಾಗಿದ್ದಾರೆ. ನಾಯಕ ಸೂರಜ್ ಕೆಲವು ದೃಶ್ಯಗಳಲ್ಲಿ ಚೆನ್ನಾಗಿ ಕಾಣುತ್ತಾರೆ. ಅಪ್ಪ ಅಸುನೀಗಿದಾಗ ಗೋಳಾಡುವ ಪರಿ ಇಷ್ಟವಾಗುತ್ತದೆ. ನಾಯಕಿಯರಲ್ಲಿ ರಮ್ಯಾ ಬಾರ್ನೆ ಹೆಚ್ಚು ಗಮನ ಸೆಳೆಯುತ್ತಾರೆ. ಇನ್ನೊಬ್ಬಾಕೆ ಸಂಭ್ರಮ ಅರ್ಧಕ್ಕೆ ಬಂದು ಒಂದಷ್ಟು ಆಟ ಆಡಿ, ಮಾಯವಾಗುತ್ತಾಳೆ. ಕಾಮಿಡಿ ಅತಿರೇಕ ಎನಿಸುವುದಿಲ್ಲ.

ನಿರ್ದೇಶಕರು ಮುಂದಿನ ಚಿತ್ರಗಳಲ್ಲಿ ಕೆಲವು ಬದಲಾವಣೆ ಮಾಡಿಕೊಂಡು, ಪ್ರೇಕ್ಷಕರ ಅಭಿರುಚಿಗೆ ಹೊಂದಿಕೊಂಡರೆ ಉತ್ತಮ ಭವಿಷ್ಯವಿದೆ. ಏಕೆಂದರೆ ಕೆಲವು ಸೆಂಟಿಮೆಂಟ್ ದೃಶ್ಯಗಳನ್ನು ಹೆಣೆದ ಪರಿ ಅಚ್ಚರಿ ಮೂಡಿಸುವಂತಿದೆ. ಏನನ್ನು ಬೇಕಾದರೂ ಮಾಡಬಹುದು. ಆದರೆ ಉಸಿರು ಬಿಸಿಗೊಳಿಸುವ ದೃಶ್ಯಗಳನ್ನು ಸೃಷ್ಟಿಸಲು ಸಾಕಷ್ಟು ಸಾಮರ್ಥ್ಯ ಬೇಕು. ಅದನ್ನು ಸಿಂಧೇಶೆ ಮಾಡಿದ್ದಾರೆ.

ಚಿತ್ರ ವಿಮರ್ಶೆ: 3ನೇ ಕ್ಲಾಸ್ ಮಂಜ ಬಿಕಾಂ ಭಾಗ್ಯ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada