For Quick Alerts
  ALLOW NOTIFICATIONS  
  For Daily Alerts

  ಪ್ರೀತಿಗಾಗಿ : ಪ್ರೀತಿ ಪ್ರಧಾನ, ಇನ್ನೆಲ್ಲವೂ ನಿಧಾನ!

  By Staff
  |


  ‘ಪ್ರೀತಿಗಾಗಿ’, ತಮಿಳಿನ ‘ಕಾದಲುಕ್ಕು ಮರ್ಯಾದೈ’ನ ರೀಮೇಕು ಎನ್ನುವುದು ಸುಮಾರು ಒಂದು ವರ್ಷದ ಹಿಂದೆಯೇ ಗೊತ್ತಾಗಿರುವ ವಿಷಯ. ಆ ಚಿತ್ರ ಬಿಡುಗಡೆಯಾಗಿ ಸ್ವಲ್ಪ ದಿನಕ್ಕೆ ಕನ್ನಡಕ್ಕೆ ರೀಮೇಕಾಗಿದ್ದರೆ ಚಿತ್ರ ಬಾಕ್ಸ್‌ ಆಫೀಸ್‌ ಚಿಂದಿ ಉಡಾಯಿಸಿ ಬಿಡುತ್ತಿತ್ತೇನೋ?

  ಚಿತ್ರ : ಪ್ರೀತಿಗಾಗಿ
  ನಿರ್ಮಾಣ : ರಾಮು
  ನಿರ್ದೇಶನ : ಎಸ್‌.ಮಹೇಂದರ್‌
  ಸಂಗೀತ : ಎಸ್‌.ಎ. ರಾಜಕುಮಾರ್‌
  ತಾರಾಗಣ : ಮುರಳಿ, ಶ್ರೀದೇವಿ, ದೊಡ್ಡಣ್ಣ, ನಾಗಶೇಖರ್‌, ಭವ್ಯ ಮತ್ತಿತರರು.

  ‘ನಮ್ಮನ್ನ ಅಷ್ಟೊಂದು ಪ್ರೀತಿಸುವ ನಮ್ಮ ಮನೆಯವರನ್ನು ಬಿಡೋದು ಸರಿಯಲ್ಲ. ಅವರ ಮನ ನೋಯಿಸಿ ಮದುವೆ ಆಗೋದ್ರಿಂದ ಯಾರೂ ನೆಮ್ಮದಿಯಾಗಿರೋಲ್ಲ. ಅವರಿಗೆ ಬೇಜಾರು ಮಾಡೋ ಬದಲು ನಾವಿಬ್ಬರು ದೂರವಾಗುವುದೇ ವಾಸಿ’

  ಸಂಜು-ಮಿಲಿ ಹೀಗೆ ಕೂತು ನಿರ್ಧರಿಸುವುದು ಅವರ ಮದುವೆಯ ದಿನದಂದು. ಅಷ್ಟೊತ್ತಿಗೆ ಅವರಿಬ್ಬರ ಮಧ್ಯೆ ಪ್ರೀತಿ ಪ್ರಾರಂಭವಾಗಿ, ಅದು ಮಿಲಿ ಮನೆಯಲ್ಲಿ ಗೊತ್ತಾಗಿ, ಅವಳ ಅಣ್ಣಂದಿರು ಸಂಜುಗೆ ನಾಲ್ಕಾರು ಬಾರಿ ಯದ್ವಾತದ್ವಾ ಗುದ್ದಿರುತ್ತಾರೆ. ಊರಲ್ಲೇ ಇದ್ದರೆ ಅಣ್ಣಂದಿರು ಬಿಡಂಗಿಲ್ಲ ಎಂದು ಪ್ರೇಮಿಗಳು ಓಡಿ ಹೋಗಿ ಸ್ನೇಹಿತನ ಊರು ಸೇರಿದ್ದಾಗಿರುತ್ತದೆ. ಆ ಊರಿನವರ ಆಶ್ರಯ ಪಡೆದಿದ್ದಾಗಿರುತ್ತದೆ. ಇನ್ನೇನು ಮದುವೆ ಆಗಬೇಕು ಅಷ್ಟರಲ್ಲಿ ಈ ತೀರ್ಮಾನ.

  ಕಾಲ ಬದಲಾಗಿದೆ. ಹಾಗೆಯೇ ಪ್ರೀತಿಸುವವರಲ್ಲೂ ಸಾಕಷ್ಟು ಬದಲಾವಣೆಯಾಗಿವೆ. ಈಗ ಪ್ರೇಮಿಗಳು ಓಡಿ ಹೋಗದೆ ಮನೆಯವರೇ ಮದುವೆ ಮಾಡಿ ಕೊಡಲಿ ಎಂದು ಬಯಸುತ್ತಾರೆ. ಕೊನೆಗೆ ಎಲ್ಲರೂ ಒಟ್ಟಾಗಿರುತ್ತಾರೆ. ಇಂಥದೊಂದು ಕ್ರಾಂತಿಕಾರಿಕ ಬದಲಾವಣೆಗೆ ಕಾರಣವಾಗಿದ್ದು ಸುಮಾರು 10 ವರ್ಷಗಳ ಹಿಂದೆ ಬಿಡುಗಡೆಯಾದ ‘ಕಾದಲುಕ್ಕು ಮರ್ಯಾದೈ’.

  ‘ಪ್ರೀತಿಗಾಗಿ’, ತಮಿಳಿನ ‘ಕಾದಲುಕ್ಕು ಮರ್ಯಾದೈ’ನ ರೀಮೇಕು ಎನ್ನುವುದು ಸುಮಾರು ಒಂದು ವರ್ಷದ ಹಿಂದೆಯೇ ಗೊತ್ತಾಗಿರುವ ವಿಷಯ. ಆ ಚಿತ್ರ ಬಿಡುಗಡೆಯಾಗಿ ಸ್ವಲ್ಪ ದಿನಕ್ಕೆ ಕನ್ನಡಕ್ಕೆ ರೀಮೇಕಾಗಿದ್ದರೆ ಚಿತ್ರ ಬಾಕ್ಸ್‌ ಆಫೀಸ್‌ ಚಿಂದಿ ಉಡಾಯಿಸಿ ಬಿಡುತ್ತಿತ್ತೇನೋ?

  ಮೂಲ ಚಿತ್ರವನ್ನು ಕನ್ನಡಕ್ಕೆ ಹಾಗೆಯೇ ಇಳಿಸಿದರೆ ಜನ ಏನನ್ನುತ್ತಾರೋ ಎಂಬ ಭಯ ನಿರ್ದೇಶಕ ಎಸ್‌. ಮಹೇಂದರ್‌ ಅವರನ್ನು ಕಾಡಿರಬಹುದು. ಹಾಗಾಗಿ ಅವರು ಕೆಲವು ವ್ಯತ್ಯಾಸ ಮಾಡಿಕೊಂಡಿದ್ದಾರೆ. ಅದೇ ಎಡವಟ್ಟಾಗಿದ್ದು. ಮೂಲ ಚಿತ್ರದಲ್ಲಿ ನಾಯಕ ಹಿಂದೂ, ನಾಯಕಿ ಕ್ರಿಶ್ಚಿಯನ್‌. ಅಲ್ಲಿ ಜಾತಿ ಸಮಸ್ಯೆ ಎರಡೂ ಕುಟುಂಬಗಳ ನಡುವೆ ಕಲಹಕ್ಕೆ ಕಾರಣವಾದರೆ, ಇಲ್ಲಿ ಅದೂ ಇಲ್ಲ. ನಾಯಕ-ನಾಯಕಿ ಇಬ್ಬರೂ ಒಂದೇ ಧರ್ಮದವರು. ಅಷ್ಟಾದರೂ ಎರಡೂ ಮನೆಯವರು ಆ ಪಾಟಿ ಅದೇಕೆ ಎಗರಾಡುತ್ತಾರೋ ಕೊನೆಗೂ ಅರ್ಥವಾಗುವುದಿಲ್ಲ.

  ಹೋಗಲಿ, ಚಿತ್ರ ಸ್ವಲ್ಪ ಚರುಕಾಗಿದ್ದರೂ ಕ್ಷಮಿಸಬಹುದಿತ್ತು. ದ್ವಿತೀಯಾರ್ಧದ ಕೊನೆಯ ಅರ್ಧ ಗಂಟೆ ಬಿಟ್ಟರೆ ಇನ್ನೆಲ್ಲ ಕಡೆ ‘ನಿಧಾನವೇ ಪ್ರಧಾನ!’. ತಮಿಳು ಚಿತ್ರದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ವಿಜಯ್‌--ಶಾಲಿನಿ ಮಿಂಚಿದ್ದರು. ಇಲ್ಲಿಯವರಿಗೆ ಅದೇ ಮಾತು ಹೇಳುವಂತಿಲ್ಲ. ಮುರಳಿ ಯಾಕೋ ತೀರಾ ಸುಸ್ತಾದವರಂತೆ ಕಾಣುತ್ತಾರೆ. ಇನ್ನು ನಾಯಕಿ ಶ್ರೀದೇವಿ ಕೂಡ ಅಷ್ಟೇ. ನಗುವಾಗಲೂ, ಅಳುವಾಗಲೂ ಅವರು ಒಂದೇ ರೀತಿ ಕಾಣಿಸುತ್ತಾರೆ ಎನ್ನುವುದು ಚಿತ್ರಮಂದಿರದಲ್ಲಿ ಕೇಳಿಬರುವ ಕಂಪ್ಲೇಂಟು. ನಾಯಕ-ನಾಯಕಿ ಸೋತಿರಬಹುದು. ಆದರೆ, ಪೋಷಕ ಕಲಾವಿದರು ತಮಗೆ ಸಿಕ್ಕ ಅವಕಾಶವನ್ನು ಸಖತ್ತಾಗಿ ಬಳಸಿಕೊಂಡಿದ್ದಾರೆ.

  ಮೊದಲಾರ್ಧ ನಾಗಶೇಖರ್‌-ಆನಂದ್‌, ದ್ವಿತೀಯಾರ್ಧದಲ್ಲಿ ದೊಡ್ಡಣ್ಣ, ಕ್ಲೈಮ್ಯಾಕ್ಸ್‌ನಲ್ಲಿ ಜಯಂತಿ-ಭವ್ಯಾ ಸಲೀಸಾಗಿ ತಮ್ಮ ಅಭಿನಯದಿಂದ ಗೆಲ್ಲುತ್ತಾರೆ. ಇವರೆಲ್ಲರ ಜತೆಗೆ ಸೃಜನ್‌ ಲೋಕೇಶ್‌ ಗಮನ ಸೆಳೆಯುತ್ತಾರೆ. ಈ ಪಟ್ಟಿಯಲ್ಲಿ ಛಾಯಾಗ್ರಾಹಕ ಚಂದ್ರು ಇದ್ದಾರೆ. ಅವರ ಕ್ಯಾಮೆರಾ ಕಣ್ಣಿನಲ್ಲಿ ಊಟಿ ಸೂಪರ್‌.

  ಎಸ್‌.ಎ. ರಾಜ್‌ಕುಮಾರ್‌ ಸಂಗೀತದಲ್ಲಿ ಮೂರು ಹಾಡುಗಳು ಚೆನ್ನಾಗಿವೆ. ಅವೆಲ್ಲ ಮೂಲ ಚಿತ್ರದ್ದು, ಮತ್ತು ಇಳಯರಾಜಾ ಅವರದ್ದು ಎನ್ನುವುದು ಬೇರೆ ಮಾತು. ಯಾರದ್ದೇ ಆದರೂ ಕೊನೆಗೆ ಹಾಡುಗಳು ಚೆನ್ನಾಗಿವೆ ಎನ್ನುವುದಕ್ಕೆ ಸಂತೋಷಪಡಬೇಕು. ಚಿತ್ರಕತೆಯೇ ಅಷ್ಟು ನಿಧಾನವಾಗಿರುವುದರಿಂದ ಸಂಕಲನಕಾರ ಸೌಂದರ್‌ರಾಜನ್‌ಗೆ ದೂರುವ ಹಾಗೆಯೇ ಇಲ್ಲ!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X