»   » ಅಮೃತವಾಣಿ : ಹೆಂಡತಿಗಿಂತ ಗೆಳೆಯನೇ ಮುಖ್ಯ!

ಅಮೃತವಾಣಿ : ಹೆಂಡತಿಗಿಂತ ಗೆಳೆಯನೇ ಮುಖ್ಯ!

Subscribe to Filmibeat Kannada


ಯಾವ ಗಂಡ ಸಹ ಮಾಡದ ಒಂದು ಕೆಲಸವನ್ನು ಈ ಚಿತ್ರದ ನಾಯಕ ಮಾಡುತ್ತಾನೆ. ಹೆಂಡತಿಗೆ ತನ್ನ ಗೆಳೆಯನಿಗೆ ಹತ್ತಿರವಾಗಲು ತಿಳಿ ಹೇಳುತ್ತಾನೆ. ಹೆಂಡತಿ ಒಪ್ಪದಿದ್ದರೂ ಒಪ್ಪಿಸುತ್ತಾನೆ. ಆಮೇಲೆ.. ?

ಚಿತ್ರ :ಅಮೃತವಾಣಿ
ನಿರ್ದೇಶನ : ಬಿ.ಆರ್‌.ರಾಜಶೇಖರ್‌
ಛಾಯಾಗ್ರಹಣ : ಸುಂದರನಾಥ ಸುವರ್ಣ
ಸಂಗೀತ : ಮನೋರಂಜನ್‌ ಪ್ರಭಾಕರ್‌
ತಾರಾಗಣ :ನವೀನ್‌ ಕೃಷ್ಣ, ಅಜಯ್‌, ರಾಧಿಕಾ ಮತ್ತು ಸಾಧುಕೋಕಿಲ ಮತ್ತಿತರರು

ನನ್ನ ಜೀವನದಲ್ಲಿ ಮೊದಲ ಸ್ಥಾನ ಸಮರ್ಥ್‌ಗೆ ಎನ್ನುತ್ತಾನೆ ವಿಶ್ವಾಸ್‌! ಇದನ್ನು ಕೇಳಿ ಗಾಬರಿಯಾಗುತ್ತಾಳೆ ಸುಮತಿ. ಅವಳು ಆ ಸ್ಥಾನದಲ್ಲಿ ತನ್ನನ್ನು ಕಲ್ಪಿಸಿಕೊಂಡಿರುತ್ತಾಳೆ. ಆದರೆ, ಆ ಸ್ಥಾನವನ್ನು ವಿಶ್ವಾಸ್‌ ತನ್ನ ಗೆಳೆಯನಿಗೆ ಕೊಟ್ಟಿದ್ದು ಸಹಜವಾಗಿಯೇ ಅಚ್ಚರಿಯಾಗುತ್ತದೆ.

ಅದರಲ್ಲಿ ಅಚ್ಚರಿಯೇನಿಲ್ಲ. ವಿಶ್ವಾಸ್‌ ಅಮ್ಮ ಅವನಿಗೆ ಬದುಕು ಕೊಟ್ಟಿರಬಹುದು, ಸುಮತಿ ಪ್ರೀತಿ ಕೊಟ್ಟಿರಬಹುದು, ಆದರೆ ಗೆಳೆಯ ಸಮರ್ಥ್‌ ಅವನಿಗೆ ಜೀವ, ಜೀವನ ಎರಡನ್ನೂ ಕೊಟ್ಟಿರುತ್ತಾನೆ. ಹಾಗಾಗಿ ಸಮರ್ಥ್‌ ಕಂಡರೆ ವಿಶ್ವಾಸ್‌ಗೆ ಅತೀವ ಪ್ರೀತಿ, ವಿಪರೀತ ನಿಷ್ಠೆ.

ಅದೇ ಕಾರಣಕ್ಕೆ ಅವನು ಮದುವೆಯಾದರೂ ಸಹ ತನ್ನ ಗೆಳೆಯ ಮದುವೆಯಾಗುವವರೆಗೂ ಹೆಂಡತಿಯನ್ನು ಮುಟ್ಟುವುದಿಲ್ಲ ಎಂದು ಪಣ ತೊಡುತ್ತಾನೆ. ಆದಷ್ಟು ಬೇಗ ಅವನು ಮದುವೆಯಾಗಲಿ ಎಂದು ಹಾರೈಸುತ್ತಾನೆ. ಆದರೆ, ಒಂದು ವಿಷಯ ಅವನಿಗೆ ಗೊತ್ತಿಲ್ಲ, ಸಮರ್ಥ್‌ ಸಹ ತನ್ನ ಹೆಂಡತಿಯನ್ನೇ ಪ್ರೀತಿಸುತ್ತಿದ್ದಾನೆ ಎಂದು.

ಇದು ಗೊತ್ತಾದಾಗ ಅವನು ಅವನಾಗಿ ಉಳಿಯುವುದಿಲ್ಲ. ತನಗೆ ಜೀವನ ಕೊಟ್ಟ ಗೆಳೆಯನಿಗೆ ಮೋಸ ಬಗೆದೆನಲ್ಲಾ ಎಂದು ಪರಿತಪಿಸುತ್ತಾನೆ. ಯಾವ ಗಂಡ ಸಹ ಮಾಡದ ಒಂದು ಕೆಲಸವನ್ನು ಮಾಡುತ್ತಾನೆ. ತನ್ನ ಹೆಂಡತಿಗೆ ಅವನಿಗೆ ಹತ್ತಿರವಾಗಲು ತಿಳಿ ಹೇಳುತ್ತಾನೆ. ಹೆಂಡತಿ ಒಪ್ಪದಿದ್ದರೂ ಒಪ್ಪಿಸುತ್ತಾನೆ. ಕೊನೆಗೆ ಅದೇ ಹೆಂಡತಿ, ಸ್ನೇಹಿತನಿಗೆ ಹತ್ತಿರವಾದಾಗ ಸಹಿಸದಾಗುತ್ತಾನೆ. ಅಷ್ಟರಲ್ಲಿ ಕಹಾನಿ ಮೇ ಟ್ವಿಸ್ಟ್‌ ... ಸ್ನೇಹಾನಾ? ಪ್ರೀತೀನಾ? ಇದು ‘ಅಮೃತವಾಣಿ ಚಿತ್ರದ ಒಟ್ಟಾರೆ ಕತೆ.

ಮೇಲುನೋಟಕ್ಕೆ ಒಂದು ಸಾಧಾರಣ ಕತೆ ಎನಿಸಬಹುದು. ಆದರೆ, ಅದನ್ನು ಮರೆಸಿ ಹಾಕುವಂತೆ ನಿರ್ದೇಶಿಸಿದ್ದಾರೆ ರಾಜಶೇಖರ್‌. ಮೊದಲ ಪ್ರಯತ್ನವಾದರೂ ಕತೆ, ಚಿತ್ರಕತೆ ಅವರದ್ದೇ ಆದ್ದರಿಂದ ನಿರೂಪಣೆ ಸುಲಭವಾಗಿದೆ. ಪಾತ್ರಪೋಷಣೆ ಸಲೀಸಾಗಿದೆ. ಈ ಹಿಡಿತ ಸಿಕ್ಕಿರುವುದರಿಂದ ಚಿತ್ರ ನೋಡಿಸಿ ಕೊಂಡು ಹೋಗುವಂತೆ ಮಾಡಿದೆ.

ಅಲ್ಲಲ್ಲಿ ಚಿತ್ರ ಎಳೆದಂತಾಗುವುದು ನಿಜ. ಅದರಲ್ಲೂ ಚಿತ್ರಕ್ಕೆ ಯಾವುದೇ ಸಂಬಂಧವಿಲ್ಲದ ಸಾಧು ಕೋಕಿಲ ಕಾಮಿಡಿ ಬಂದಾಗ ಈ ಎಳೆದಾಟ ಹೆಚ್ಚಾಗುತ್ತದೆ. ಅದೊಂದನ್ನು ಕೈಬಿಟ್ಟಿದ್ದರೆ ಚಿತ್ರ ಮೋಸ ಇಲ್ಲ.

ಚಿತ್ರ ಚೆನ್ನಾಗಿ ಮೂಡಿ ಬಂದಿರುವುದಕ್ಕೆ ನಿರ್ದೇಶಕರ ಜತೆ ಕಲಾವಿದರ ಹಾಗೂ ತಂತ್ರಜ್ಞರ ಪಾಲೂ ಇದೆ. ಅದರಲ್ಲೂ ನವೀನ್‌ ಕೃಷ್ಣ ಸುಲಭವಾಗಿ ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತೊಯ್ಯುತ್ತಾರೆ. ಅದರಲ್ಲೂ ತನ್ನ ಹೆಂಡತಿಯನ್ನು ಗೆಳೆಯನಿಗೆ ಒಪ್ಪಿಸಿದಾಗ ಅವರು ಪಡುವ ಯಾತನೆಯಿದೆಯೆಲ್ಲಾ, ಅದನ್ನು ನೋಡಿದರೇ ಚೆನ್ನ.

ನವೀನ್‌ಗೆ ಪೂರಕವಾಗಿ ರಾಧಿಕಾ ಹಾಗೂ ಅಜಯ್‌ ಒಳ್ಳೆಯ ಅಭಿನಯ ನೀಡಿದ್ದಾರೆ. ಇನ್ನುಳಿದಂತೆ ಹೆಚ್ಚು ಪಾತ್ರಗಳಿಲ್ಲ. ಇದ್ದರೂ ಈ ಮೂವರ ಮುಂದೆ ಅದು ಮಟಾಷ್‌.

ಸುಂದರನಾಥ ಸುವರ್ಣ ಕ್ಯಾಮರಾ ಕಣ್ಣಿಗೆ ಮೋಸ ಮಾಡುವುದಿಲ್ಲ, ಮನೋರಂಜನ್‌ ಪ್ರಭಾಕರ್‌ ಸಂಗೀತ ಕಿವಿಗೆ ಮೋಸ ಮಾಡುವುದಿಲ್ಲ, ಬಿ.ಎ.ಮಧು ಸಂಭಾಷಣೆ ಮನಸ್ಸಿಗೆ ಮೋಸ ಮಾಡುವುದಿಲ್ಲ... ಇನ್ನೂ ಕನಸು ಕಾಣುತ್ತಾ ಕೂಡಬೇಡಿ. ವಾಣಿಯ ವೀಣೆ ಕೇಳಲು ಹೊರಡಿ...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada