For Quick Alerts
  ALLOW NOTIFICATIONS  
  For Daily Alerts

  ಗರ್ಲ್‌ಫ್ರೆಂಡ್‌ : ಇಲ್ಲಿ ಹೆಣ್ಣಿಗೆ ಹೆಣ್ಣೇ ಹೆಂಡತಿ !

  By Staff
  |
  • ರವಿ ಬೆಳಗೆರೆ
  ಒಂದು ಇಂಗ್ಲಿಷ್‌ ಚಿತ್ರವಿದೆ. ಅದರಲ್ಲಿ ನಾಯಕ ತುಂಬ ಶ್ರೀಮಂತ ಲೇಖಕ. ಆತ ಒಬ್ಬಂಟಿಗ. ಹೆಣ್ಣಿನ ಜೊತೆ ಸಿಕ್ಕರೆ ಭೋಗಿಸಬಲ್ಲವನು: ಭೋಗಿಸಬಲ್ಲ ವಯಸ್ಸು ಆತನದು. ಅಂಥ ಶ್ರೀಮಂತ ಲೇಖಕ ಹೊಟೇಲೊಂದರಲ್ಲಿ ತುಂಬ ಕಷ್ಟಪಟ್ಟು ಕೆಲಸ ಮಾಡುತ್ತಿರುವ ಹೆಂಗಸೊಬ್ಬಳ ಬಗ್ಗೆ ಅನುಕಂಪ ಬೆಳೆಸಿಕೊಳ್ಳುತ್ತಾನೆ. ಅವಳ ಕಷ್ಟ ಏನೂಂತ ಅರಿತುಕೊಳ್ಳುವ ಯತ್ನ ಮಾಡುತ್ತಾನೆ. ಆ ಹೆಂಗಸಿಗೋ-ಇವನ ವರ್ತನೆಯ ಬಗ್ಗೇನೇ ಅನುಮಾನ. ಅವಳಿಗೊಬ್ಬ ಮಗ ಇದ್ದಾನೆ. ಅವನಿಗೆ ಕೆಟ್ಟ ಖಾಯಿಲೆ. ಚಿಕಿತ್ಸೆಗೆ ದುಡ್ಡಿಲ್ಲ. ಅದನ್ನು ಒದಗಿಸಲೆಂದೇ ಆಕೆ ಅಷ್ಟೊಂದು ಕಷ್ಟ ಪಡುತ್ತಿದ್ದಾಳೆ. ಅವಳಿಗೆ ಹೇಗಾದರೂ ಸಹಾಯ ಮಾಡಬೇಕು ಎಂಬುದು ಈ ಲೇಖಕನ ಚಡಪಡಿಕೆ. ಕಡೆಗೊಮ್ಮೆ, ಆಕೆಯ ಮಗ ವಿಪರೀತ ಸೀರಿಯಸ್ಸಾಗಿಬಿಡುತ್ತಾನೆ. ತಕ್ಷಣ ಚಿಕಿತ್ಸೆ ಕೊಡದಿದ್ದರೆ ಪ್ರಾಣ ಉಳಿಯಲಾರದು ಎಂಬಂಥ ಸ್ಥಿತಿ. ಹೆಂಗಸು ದಿಕ್ಕು ತೋಚದಂತಾಗಿಬಿಡುತ್ತಾಳೆ. ಈ ಶ್ರೀಮಂತ ಲೇಖಕ ಬಾಗಿಲಲ್ಲೇ ಹಾಜರಾಗುತ್ತಾನೆ. ‘ಸಹಾಯಕ್ಕೆ ಬರಲಾ? ಹಣ ಕೊಡಲಾ?’ ಕೇಳುತ್ತಾನೆ. ‘ಆಯ್ತು ಕೊಡು. ಅದಕ್ಕೆ ಪ್ರತಿಯಾಗಿ ನಾನೇನು ಕೊಡಬೇಕು? ದೇಹ ತಾನೆ. ಬಾ! ಅದನ್ನು ಅನುಭವಿಸಿಯೇ ಬಿಡು. ಅದೂ ಆಗಿಹೋಗಲಿ’. ‘Have me!’ ಅಂತ ಆಕ್ರೋಶದಿಂದ ಅಂದುಬಿಡುತ್ತಾಳೆ.

  ಲೇಖಕ ಅವಳನ್ನೇ ವಿಚಿತ್ರವಾಗಿ ದಿಟ್ಟಿಸುತ್ತಾನೆ. ಅಸಲಿಗೆ ಅವನಿಗೆ ಅವಳನ್ನು ದೈಹಿಕವಾಗಿ ಹೊಂದುವ, ಸುಖಿಸುವ ಉದ್ದೇಶವೇ ಇಲ್ಲ. ಏಕೆಂದರೆ ಅವನೊಬ್ಬ gay! ಅವನು ಪುರುಷನೊಂದಿಗೆ ಮಾತ್ರ ಸುಖಿಸಬಲ್ಲ ಸಲಿಂಗಕಾಮಿ. ಅವನಿಗೆ ಹೆಣ್ಣು ವರ್ಜ್ಯ. ಆಕೆಯೆಡೆಗೆ ಅವನಿಗಿದ್ದುದು ವಾಂಛೆಯಲ್ಲ. ಅದು ನಿಜವಾದ ಮಾನವೀಯ ಅನುಕಂಪ. ಅವಳು ತಪ್ಪು ತಿಳಿದುಕೊಂಡು ಕೂಗಾಡುತ್ತಾಳೆ. ಇವನು ಕೊಡಬೇಕಾದುದನ್ನು ಕೊಟ್ಟು ಹೊರಡುತ್ತಾನೆ. ಅಷ್ಟರಲ್ಲಿ ಅವನ ಸಲಿಂಗಿ ಗೆಳೆಯ ಅವನಲ್ಲಿಗೆ ಬರುತ್ತಾನೆ. ಅವರಿಬ್ಬರೂ ಹೊರಟು ಹೋಗುತ್ತಾರೆ. ಹೆಂಗಸಿನಲ್ಲಿ ಉಳಿಯುವುದು ಪಶ್ಚಾತ್ತಾಪ, ಅವನ ದುಡ್ಡು, ಮಗನ ಪ್ರಾಣ! ಅಷ್ಟೆ.

  ಸಲಿಂಗ ಕಾಮಿಗಳ ಸಾಮ್ರಾಜ್ಯ ಅಂತ ಕರೆಯಬಹುದಾದ ಅಮೆರಿಕದಂಥ ಸಲಿಂಗಕಾಮದ ಬಗ್ಗೆ ಸೃಷ್ಟಿಯಾದ ಚಿತ್ರವಿದು. ಇದರ ಮಟ್ಟವೇನೂ, ಇದೇ ಸಲಿಂಗಕಾಮದ subject ಇಟ್ಟುಕೊಂಡು ಹಿಂದಿ ಮಂದಿ ತೆಗೆದಿರುವ Girlfriendನ ಮಟ್ಟವೇನು? ಕೊಂಚ ತೂಗಿ ನೋಡಿ. Girlfriend ಚಿತ್ರವನ್ನು ವಿರೋಧಿಸುತ್ತಿರುವವರಿಗೆ ಆ ಚಿತ್ರದ ನೆಗೆಟಿವ್‌ ಮೌಲ್ಯ ಮತ್ತು ಅಶ್ಲೀಲ ದೃಶ್ಯಗಳು ಮಾತ್ರ ಖಂಡನಾರ್ಹ ಅನ್ನಿಸಿವೆ. ಆ ಕಾರಣಕ್ಕಾಗಿಯೇ ಅವರು ಗರ್ಲ್‌ ಫ್ರೆಂಡ್‌ ಚಿತ್ರವನ್ನು ಬ್ಯಾನ್‌ ಮಾಡಬೇಕು ಅನ್ನುತ್ತಿದ್ದಾರೆ. ಈ ಕೂಗನ್ನು ಠಾಕರೆಯ ಶಿವಸೇನೆ, ವಿಶ್ವಹಿಂದೂ ಪರಿಷತ್ತು, ಭಜರಂಗದಳ ಮುಂತಾದ ಸಂಘಟನೆಗಳು ಎಬ್ಬಿಸಿವೆಯೆಂಬ ಕಾರಣಕ್ಕೇ, ಗರ್ಲ್‌ ಫ್ರೆಂಡ್‌ ಚಿತ್ರವನ್ನು ಬೆಂಬಲಿಸುವ ಪ್ರಗತಿಪರರು ಹುಟ್ಟಿಕೊಂಡಿದ್ದಾರೆ. ಸ್ತ್ರೀ ಸಲಿಂಗಕಾಮ(ಲೆಸ್‌ಬಿಯನಿಸ್‌) ಒಂದು ಅಪರಾಧವಲ್ಲ. ಅದು ಅನೈತಿಕವೂ ಅಲ್ಲ. ಕೆಲವರು ಜನ್ಮತಃ ಸಲಿಂಗಿಗಳಾಗಿರುತ್ತಾರೆ. ಅವರ ಬಗ್ಗೆ ಸಿನೆಮಾ ಮಾಡುವ ಹಕ್ಕು ನಿರ್ಮಾಪಕ-ನಿರ್ದೇಶಕರಿಗಿದೆ. ಅದನ್ನು ವಿರೋಧಿಸಿದರೆ ನೀವು ಮನುವಾದಿಗಳಾಗುತ್ತೀರಿ! ಅಂತ ಪ್ರಗತಿಪರರು ದನಿಯೆತ್ತುತ್ತಾರೆ.

  ದುರಂತವೆಂದರೆ, ಸಲಿಂಗಕಾಮದಂತಹ explosive ಕಥಾವಸ್ತುವನ್ನ, ಸಲಿಂಗಿಗಳ ಬಗ್ಗೆ ಯಾವುದೇ ಗೌರವವಿಲ್ಲದೆ, ಎಷ್ಟು ಕೆಟ್ಟದಾಗಿ ಒಂದು ಸಿನೆಮಾ ಮಾಡಲಾಗಿದೆ ಎಂಬುದರ ಬಗ್ಗೆ ಎರಡೂ ಕಡೆಯ ಅವಿವೇಕಿಗಳು ಯೋಚಿಸುತ್ತಿಲ್ಲ.

  ನೀವೇ ಒಂದು ಪ್ರಶ್ನೆ ಕೇಳಿಕೊಳ್ಳಿ: ಗಂಡು ಮತ್ತು ಹೆಣ್ಣು ದೈಹಿಕವಾಗಿ ಪ್ರೀತಿಸಿಕೊಳ್ಳುವುದನ್ನು ಯಾರಾದರೂ ತೆರೆಯ ಮೇಲೆ ಎಷ್ಟು ಹೊತ್ತು ಅಂತ ನೋಡಲು ಸಾಧ್ಯ? ತೀರ ಪೋಲಿ ಬಿದ್ದು ಹೋದವರು ಕೂಡ ಒಂದು ಹಂತದಲ್ಲಿ blue filmಗಳ ಬಗ್ಗೆ ಹೇಸಿಗೆ ಮೂಡಿಸಿಕೊಂಡು ಬಿಡುತ್ತಾರೆ. ಸಿನೆಮಾದಲ್ಲಿ ತೆಳುವಾದ, ಗೌರವದ ಗಡಿದಾಟದ ಲೈಂಗಿಕತೆ ಇದ್ದರೆ ಅದು ಖಂಡಿತ ಇಷ್ಟವಾಗುತ್ತದೆ. ಆದರೆ ಅದರ ಸುತ್ತ ಭಾವುಕತೆ, ವಿವೇಕ, ಹಾಡು, ಮಾತು, ದುಃಖ, ಕಣ್ಣೀರು ಎಲ್ಲ ಇದ್ದು- ಬದುಕಿನ ಒಂದು ಭಾಗವೇ ಎಂಬಂತೆ ಒಂದಷ್ಟು ಲೈಂಗಿಕತೆ ಇದ್ದರೆ ಮಾತ್ರ ಅದು ಸಹನೀಯವೆನ್ನಿಸುತ್ತದೆ. ಅಲ್ಲವೆ? ಅಂಥದರಲ್ಲಿ ಇಬ್ಬರು ಹೆಂಗಸರು ಪ್ರೀತಿಸಿಕೊಳ್ಳುವುದನ್ನು ಇಡೀ ಸಿನೆಮಾದುದ್ದಕ್ಕೂ ನೋಡುವುದು ಯಾರಿಂದ ಸಾಧ್ಯ?

  ಒಮ್ಮೆ ಗರ್ಲ್‌ಫ್ರೆಂಡ್‌ ಚಿತ್ರವನ್ನು ಕುಳಿತು ನೋಡಿ: ಇಬ್ಬರು ಹೆಣ್ಣು ಮಕ್ಕಳು ಕೂತು ನೋಡಿದರೂ ಅಸಹ್ಯವೆನಿಸುವ, ಕೊಳಕು ಅನ್ನಿಸುವ, ವಿಕಾರ ಅನ್ನಿಸುವ, ಕಡೆಗೆ ಬೋರೆದ್ದು ಹೊರಕ್ಕೆ ಹೋಗೋಣ ಅನ್ನಿಸುವಂಥ ಕಳಪೆ ಚಿತ್ರವದು. ಚಿತ್ರದ ನಾಯಕನ ಹೆಸರು ರಾಹುಲ್‌. ಅವನು ಲಂಡನ್‌ನಿಂದ ಭಾರತಕ್ಕೆ ಯಾಕೋ ಬಂದಿದ್ದಾನೆ. ಮತ್ತು ಯಾಕೋ ವಾಪಸು ಹೊರಟು ಹೋಗಲು ನಿರ್ಧರಿಸುತ್ತಾನೆ!

  ಅವನು ಬರುವ ಮತ್ತು ಹೋಗುತ್ತೇನೆನ್ನುವ ಮಧ್ಯಕಾಲದಲ್ಲಿ ಇಡೀ ಕಥೆ ಘಟಿಸುತ್ತದೆ.

  ಕಥೆ ಪ್ರಾರಂಭವಾಗುವುದೇ ತಾನ್ಯಾ ಎಂಬ ಗಾರ್ಜಿಯಸ್‌ ಸುಂದರಿ, ತನಗಿಂತ ಕೃಶಳಾದ, ಬಲಹೀನಳಾದ, ಸುಂದರಿಯಾದ ಸಪ್ನಾ ಎಂಬ ಹುಡುಗಿಯಾಬ್ಬಳನ್ನು ಗಂಡಸಿನಂತೆ ಪ್ರೀತಿಸುತ್ತಾಳೆ ಎಂಬುದನ್ನು establish ಮಾಡುವ ಮೂಲಕ. ತಾನ್ಯಾ ಪಾತ್ರ ಮಾಡಿದ ಇಷಾ ಕೊಪ್ಪಿಕರ್‌ ಎಂಬ ಮಾಜಿ ಮಾಡೆಲ್‌, ಇಡೀ ಸಿನೆಮಾದಲ್ಲಿ ತುಂಬು ತೋಳಿನ ಯಾವ ಉಡುಪೂ ಧರಿಸುವುದಿಲ್ಲ. ಹುಡುಗನಂತೆ ಪ್ಯಾಂಟು, ಬನೀನಂಥ ಅಂಗಿ ಧರಿಸಿರುತ್ತಾಳೆ. ಅವಳು ತನ್ನ ಗೆಳತಿ, ಕಾಲೇಜಿನ ಸಹಪಾಠಿ ಹಾಗೂ ಮಾಡೆಲಿಂಗ್‌ ಜಗತ್ತಿನ ಹುಡುಗಿಯಾಬ್ಬಳನ್ನು ಬಂಗಲೆಯಾಂದರಲ್ಲಿ ತನ್ನೊಂದಿಗೆ ಇಟ್ಟುಕೊಂಡಿರುತ್ತಾಳೆ. ಅಪ್ಪಿತಪ್ಪಿ ಕೂಡ ಅವಳನ್ನು ಮನೆಯ ಮಾಲೀಕನಾದ ಅರವತ್ತು ವರ್ಷದ ಮುದುಕ ಕೂಡ ಮುಟ್ಟದಂತೆ protect ಮಾಡುತ್ತಾಳೆ. ಸಿನೆಮಾಗಳ ನಾಯಕ ತನ್ನ ಗೆಳತಿಯನ್ನು ಪಾರ್ಟಿಗಳಿಗೆ, ಡಿಸ್ಕೊಗಳಿಗೆ ಕರೆದೊಯ್ದಂತೆಯೇ ತಾನ್ಯಾ ತನ್ನ ಗೆಳತಿ ಸಪ್ನಾಳನ್ನು ಕರೆದೊಯ್ಯುತ್ತಾಳೆ. ಅವಳನ್ನು ಚುಡಾಯಿಸಿದ ಕುಡುಕರನ್ನು ಹೀರೋ ಒದ್ದಂತೆಯೇ ಒದೆಯುತ್ತಾಳೆ. Of Course, ಕಥೆಯ ಪ್ರಕಾರ ತಾನ್ಯಾ ಒಬ್ಬ ಕಿಕ್‌ಬಾಕ್ಸರ್‌.

  ಹೀಗೆ ಒಂದೇ ಬಂಗಲೆಯಲ್ಲಿರುವ ಸಪ್ನಾ ಮತ್ತು ತಾನ್ಯಾ ಎಷ್ಟೇ ಆತ್ಮೀಯರಾದರೂ, ಸಪ್ನಾ ಸ್ನಾನ ಮಾಡುವುದನ್ನು ತಾನ್ಯಾ ಕದ್ದು ನೋಡುತ್ತಾಳೆ. ಅವಳು ನಿದ್ರೆ ಮಾಡಿದಾಗ ಅವಳೆಡೆಗೆ ತಾನ್ಯಾಳಲ್ಲಿ ಲೆಸ್ಬಿಯನ್‌ (ಸಲಿಂಗ)ಕಾಮ ಜಾಗೃತವಾಗುತ್ತಿರುತ್ತದೆ. ಆದರೂ ಅವರಿಬ್ಬರ ಮಧ್ಯೆ ಅಂಥ established ಸಲಿಂಗ ಸಂಬಂಧ ಇರುವುದಿಲ್ಲ. ರಾತ್ರಿಗಳಲ್ಲಿ ಸಪ್ನಾ ಬಡಬಡಿಸಿದರೆ, ತಾನ್ಯಾ ಅವಳನ್ನು ತೆಕ್ಕೆಗೆ ತೆಗೆದುಕೊಂಡು ಧೈರ್ಯ ಹೇಳುವ ಮಟ್ಟಿಗಿನ ಸಂಬಂಧವಿರುತ್ತದೆ. ಹೀಗೆ ಶುರುವಾದಾಗ ಕಥೆ, ತಾನ್ಯಾ ಎಂಬ ಗಂಡುಬೀರಿ ಹದಿನೈದು ದಿನಗಳ ಮಟ್ಟಿಗೆ ಬೇರೆ ಊರಿಗೆ ಹೋಗುವುದರೊಂದಿಗೆ ಬೇರೆ ತಿರುವು ಪಡೆಯುತ್ತದೆ. ಒಬ್ಬ ನಪುಂಸಕನೊಂದಿಗೆ ಪಾರ್ಟಿಯಾಂದಕ್ಕೆ ಹೋಗುವ ಸಪ್ನಾ, ಅಲ್ಲಿ ರಾಹುಲ್‌ ಎಂಬ ಇಂಗ್ಲಂಡ್‌ ರಿಟರ್ನ್ಡ್‌ ಸುಂದರನ ಕಣ್ಣಿಗೆ ಬೀಳುತ್ತಾಳೆ. ಅವಳನ್ನು ಪಾರ್ಟಿಗೆ ಕರೆದೊಯ್ದು ನಪುಂಸಕನೇ, ರಾಹುಲ್‌ಗೆ ಪರಿಚಯ ಮಾಡಿಸುತ್ತಾನೆ. ತಮಾಷೆಯೆಂದರೆ ಈ ಹುಡುಗಿ normal ಆದ ಯುವಕರನ್ನು ಪ್ರೀತಿಸುವುದಿಲ್ಲ ಅಂದುಕೊಂಡ ರಾಹುಲ್‌, ಕೆಲಕಾಲ ತಾನೂ ನಪುಂಸಕನಂತೆಯೇ ಆಡುತ್ತಾನೆ. ಆಮೇಲೆ ಗುಟ್ಟು ಕಾದಿರಿಸಿಕೊಳ್ಳಲಾಗದೆ, ತಾನು ನಿಜಕ್ಕೂ ಗಂಡಸೆಂದೂ, ಸಪ್ನಾಳನ್ನು ಪ್ರೀತಿಸುತ್ತಿದ್ದಾನೆಂದೂ ಹೇಳಿಕೊಳ್ಳುತ್ತಾನೆ. ಅತ್ತ ಸಲಿಂಗ ಸುಂದರಿ ತಾನ್ಯಾ ಹದಿನೈದು ದಿನ ರಜೆ ಮುಗಿಸಿ ಹಿಂತಿರುಗುವ ಹೊತ್ತಿಗೆ ಸಪ್ನಾ, ಸಲಿಂಗ ಲೋಕದ ನಿಯಮ ಮುರಿದು ರಾಹುಲ್‌ನನ್ನು ಪ್ರೀತಿಸತೊಡಗಿಬಿಟ್ಟಿರುತ್ತಾಳೆ.

  Of Course, ಅವಳೇನೂ ಸಲಿಂಗಿಯಲ್ಲ ಅಂತಲೇ ಅಲ್ಲಿಯ ತನಕ ಪ್ರೇಕ್ಷಕರನ್ನು ನಿರ್ದೇಶಕ ನಂಬಿಸಿರುತ್ತಾನೆ. ಹಾಗೆ ಹದಿನೈದು ದಿನಗಳ ರಜೆ ಮುಗಿಸಿ ಹಿಂತಿರುಗುವ ತಾನ್ಯಾಗೆ, ತನ್ನ ಗೆಳತಿ ಪುರುಷನೊಬ್ಬನನ್ನು ಪ್ರೀತಿಸುತ್ತಿದ್ದಾಳೆ ಎಂಬುದು ಗೊತ್ತಾಗುವುದರೊಂದಿಗೇ ಆರಂಭವಾಗುತ್ತದೆ ನಿಜವಾದ ಸಂಘರ್ಷ. ಈಗ ತಾನ್ಯಾ is jealous. ಒಬ್ಬ ಯುವಕ ತನ್ನ ಪ್ರೇಯಸಿ ಇನ್ನೊಬ್ಬರ ಪಾಲಾಗುತ್ತಿದ್ದರೆ ಏನೇನು ತಪನೆ ಪಡುತ್ತಾನೋ ಅದೆಲ್ಲವನ್ನೂ ತಾನ್ಯಾ ಅನುಭವಿಸುತ್ತಾಳೆ. ಎಲ್ಲ ಗಂಡಸರೂ ವಂಚಕರೇ. ನೀನು ರಾಹುಲ್‌ನ ಬಿಟ್ಟುಬಿಡು ಅಂತ ಸಪ್ನಾಗೆ ದುಂಬಾಲು ಬೀಳುತ್ತಾಳೆ. ಅವಳೆದುರು, ರಾಹುಲ್‌ ಒಬ್ಬ ಹೆಣ್ಣುಬಾಕ ಅಂತ prove ಮಾಡುವ ಭಯಾನಕ ಪ್ರಯತ್ನ ಮಾಡುತ್ತಾಳೆ. ಅತ್ತ ಸಲಿಂಗ ಕಾಮಕ್ಕೂ ಒಂದು ಗೌರವ ಒದಗಿಸದ ನಿರ್ದೇಶಕ ಈ ಭಯಾನಕ ಪ್ರಯತ್ನದ ದೃಶ್ಯಗಳಲ್ಲಿ ಗಂಡು-ಹೆಣ್ಣಿನ ಸಹಜ ಲೈಂಗಿಕ ಸಂಬಂಧಕ್ಕೂ ಗೌರವ ಒದಗಿಸುವುದಿಲ್ಲ. ತಾನ್ಯಾಳ ಪೊಸೆಸಿವ್‌ನೆಸ್‌ ತೋರಿಸುವ ನೆಪದಲ್ಲಿ ಆತ ಸಪ್ನಾಳ ದೇಹದ ಕತ್ತಲನ್ನು ಲೂಟುತ್ತಾನೆ. ಸಪ್ನಾ ಮತ್ತು ರಾಹುಲ್‌ನ ಸಹಜ ಸಂಬಂಧ ನಿರೂಪಿಸುವ ನೆಪದಲ್ಲಿ ರಂಗೀಲಾ ನೃತ್ಯಗಳ ಅಪಾಲಜಿಗಳಂಥ ನೃತ್ಯಗಳನ್ನು ಮಾಡಿಸುತ್ತಾನೆ.

  ಇಷ್ಟೆಲ್ಲ ವಿಕಾರಗಳಾಗಿ ಕಥೆ ಒಂದು ತಿರುವಿಗೆ ಬಂದು ನಿಲ್ಲುವುದೆಂದರೆ, ಅವನು ತಾನ್ಯಾ ಮತ್ತು ಸಪ್ನಾ ಪರಸ್ಪರರನ್ನು ಪ್ರೀತಿಸಿಕೊಳ್ಳುವ ದೃಶ್ಯವನ್ನು ನೋಡುವುದರೊಂದಿಗೆ! ಅಲ್ಲಿಯ ತನಕ ತಾನು ಮತ್ತು ತಾನ್ಯಾ ಕೇವಲ ಗೆಳತಿಯರು ಅಂತ ವಾದಿಸುವ ಸಪ್ನಾ, ಕಾಲೇಜಿನ ದಿನಗಳಲ್ಲಿ ಒಮ್ಮೆ ಕುಡಿದ ಅಮಲಿನಲ್ಲಿ, ಅಕಸ್ಮಾತ್ತಾಗಿ ಸಲಿಂಗ ಸಂಬಂಧಕ್ಕೆ ಈಡಾಗಿದ್ದೆವು ಅಂತ ಒಪ್ಪಿಕೊಳ್ಳುತ್ತಾಳೆ. ಅದನ್ನು ಯಥಾಪ್ರಕಾರ flash back ನಲ್ಲಿ ಅಸಹ್ಯವೆನಿಸುವಷ್ಟು raw ಆಗಿ ತೋರಿಸುವ ಯತ್ನ. ಇದ್ದಕ್ಕಿದ್ದಂತೆ ನಿಮಗೆ ಟೈಗರ್‌ ಪ್ರಭಾಕರ್‌ನ ಕೊನೆ ಕೊನೆಯ ಸಿನೆಮಾಗಳು ನೆನಪಾದರೆ ಆಶ್ಚರ್ಯವಿಲ್ಲ. ಸ್ವತಃ ಸಲಿಂಗ ಸಂಬಂಧಗಳನ್ನು ಪ್ರತಿಪಾದಿಸುವವರೂ ಕೂಡ ಈ ದೃಶ್ಯಗಳನ್ನು ಅರಗಿಸಿಕೊಳ್ಳಲಾರರು.

  ಮುಂದಿನದೆಲ್ಲ ತಾನ್ಯಾಳ ಪೊಸೆಸಿವ್‌ ಪುರಾಣವೇ. ಅವಳು ಬರ್ತಾ ಬರ್ತಾ ಪೂರಾ ಗಂಡಸಿನಂತೆಯೇ ತಯಾರಾಗಿ ಬಿಡುತ್ತಾಳೆ. ತಾನೇ hair cut ಮಾಡಿಕೊಳ್ಳುತ್ತಾಳೆ. ವೇಷ ಬದಲಿಸಿಕೊಂಡು ಹೋಗಿ ಸಪ್ನಾಳ ಪ್ರಿಯತಮ ರಾಹುಲ್‌ನನ್ನು ಹಿಗ್ಗಾಮುಗ್ಗಾ ಒದೆಯುತ್ತಾಳೆ. ಅವಳ ಹುಚ್ಚಾಟ ಕಡೆಗೆ ಎಲ್ಲಿಗೆ ಹೋಗಿ ತಲುಪುತ್ತದೆಂದರೆ, ರಾಹುಲ್‌ನನ್ನು ಕೊಂದೇ ಹಾಕುತ್ತೇನೆ ಅಂತ ಹೋಗಿ ತಾನೇ ಬಿದ್ದು ಸಾಯುತ್ತಾಳೆ.

  ಇಂಥದ್ದೊಂದು ಅರೆಬೆಂದ ಕಥೆ, ಅರೆ ನಗ್ನ ಹುಡುಗಿಯರು, ಅರೆ ಹುಚ್ಚ ನಿರ್ದೇಶಕ ಇರುವ ಸಿನೆಮಾಕ್ಕೆ ಪ್ರತಿಭಟನೆ ಬೇರೆ ಕೇಡು. ಈ ಹಿಂದೆ FIRE ನಂಥ ಸಿನೆಮಾ, ಇದೇ ಲೆಸ್ಬಿಯನ್‌ ಪ್ರೇಮದ ಕುರಿತಂತೆ ಮಾಡಿದಾಗ ಅದರಲ್ಲೊಂದು logic ಇತ್ತು. ಶಬಾನಾ, ಕುಲಭೂಷಣ್‌, ಕರಬಂಡಾ ನಂದಿತಾ ದಾಸ್‌ ಮುಂತಾದ ದಿಗ್ಗಜರಿದ್ದರು. ಹೆಣ್ಣು ಸಂವೇದನೆ, ಸಂಕಟ, ಲೈಂಗಿಕ ಅನಿವಾರ್ಯತೆಗಳು, ತಮಗೆ ತಾವೇ ಹೇಳಿಕೊಳ್ಳುವ ಸಾಂತ್ವನಗಳು -ಇವೆಲ್ಲ ಚರ್ಚಿತವಾಗಿದ್ದವು. ಲೆಸ್ಬಿಯನ್‌ ಪ್ರಪಂಚದ ಅಂತರಾಳ ಅರಿತವರು ಮಾತ್ರ FIRE ನಂಥ ಸಿನೆಮಾ ಮಾಡಲು ಸಾಧ್ಯ ಅನ್ನಿಸಿತ್ತು. ಅದನ್ನು ಯಾವುದೇ ಅಸಹ್ಯವಿಲ್ಲದೆ ನೋಡಲು ಸಾಧ್ಯವಾಗಿತ್ತು: ಸಬ್ಜೆಕ್ಟ್‌ನೊಂದಿಗೆ ಸಮ್ಮತಿ ಇರದಿದ್ದರೂ! ಅಷ್ಟೇಕೆ ಅಮೆರಿಕದಂತಹ ದೇಶದಲ್ಲಿ gay, lesbian, bisexual ಇವೆಲ್ಲ ನಿತ್ಯ ಕಿವಿಗೆ ಬೀಳುವ ಪದಗಳೇ. ಅಲ್ಲಿ ಸಲಿಂಗ ಕಾಮದ ಬಗ್ಗೆ ಎಷ್ಟು ಸಿನೆಮಾಗಳು ನಿರ್ಮಾಣವಾಗುತ್ತವೆ ಅಂದುಕೊಂಡಿರಿ? ವರ್ಷಕ್ಕೊಂದೂ ಇಲ್ಲ. ಅಕಸ್ಮಾತ್‌ ಆದರೂ, ಈ ಲೇಖನದ ಆರಂಭದಲ್ಲೊಂದು ಕಥೆ ಹೇಳಿದೆನಲ್ಲ? ಅಂಥ ಸಮರ್ಪಕ ಚಿತ್ರಗಳು ನಿರ್ಮಾಣವಾಗುತ್ತವೆ. ಅಪ್ಪಿ ತಪ್ಪಿ ಕೂಡ ಅವುಗಳಲ್ಲಿ ಸಲಿಂಗ ಮಿಲನದ ದೃಶ್ಯಗಳಿರುವುದಿಲ್ಲ. ಅಮೆರಿಕನ್‌ ಸಾಹಿತ್ಯವನ್ನೇ ತಿರುವಿ ಹಾಕಿದರೆ Third sexಗೆ ಸಂಬಂಧಿಸಿದಂತೆ ಹೇರಳವಾದ ಗಂಭೀರ ಸಾಹಿತ್ಯ ಬಂದಿದೆ. ಎಲ್ಲೂ ವಿಷಯ ಅಸಹ್ಯವೆನಿಸುವುದಿಲ್ಲ. ಆ ಗುಂಪಿಗೆ ಸೇರಿದವರು ಮನಸ್ಸು, ಒಳತೋಟಿ, ಅನಿವಾರ್ಯತೆಗಳು- ಎಲ್ಲವನ್ನೂ ಅರಿತು ಬರೆಯಲ್ಪಟ್ಟ ಸಾಹಿತ್ಯವದು. ಎಷ್ಟೋ ಸಲ ಸಲಿಂಗಿಗಳು ತವ್ಮ ಬಗ್ಗೆಯೇ ಅದ್ಭುತವೆನಿಸುವ ಕೃತಿಗಳನ್ನು ಬರೆದಿದ್ದಾರೆ. ಸಲಿಂಗ ಕಾಮಕ್ಕೆ ಸಂಬಂಧಿಸಿದ ಸಿನೆಮಾಗಳಿಗೆ ಆಸ್ಕರ್‌ ಪ್ರಶಸ್ತಿ ಕೂಡ ಬಂದಿದೆ. ಪಶ್ಚಿಮದಲ್ಲಿ ಪರಿಸ್ಥಿತಿ ಹಾಗಿರುವಾಗ, ಸುಳ್ಳೇ ಮಡಿವಂತರು ಅಂದುಕೊಳ್ಳುವ ನಾವು ಎಂಥ ಸಿನೆಮಾಗಳನ್ನು ಸೃಷ್ಟಿಸುತ್ತೀವೋ ನೋಡಿ? ಇಡೀ ಚಿತ್ರದಲ್ಲಿ ಅವಳನ್ನು ಸಲಿಂಗಿ ಅಂತ ತೋರಿಸುತ್ತಾರೆ. ತಾನು ಹಾಗಾಗಲಿಕ್ಕೆ ಚಿಕ್ಕಂದಿನಲ್ಲಿ ನಡೆದ ಒಂದು rape ಕಾರಣ ಅಂತ ಅವಳ ಬಾಯಲ್ಲಿ ಹೇಳಿಸುತ್ತಾರೆ. ಇಂಥದ್ದೊಂದು ಕತೆ ಬರೆದವರಿಗೆ ಸಲಿಂಗ ಆಕರ್ಷಣೆಯೆಂಬುದು ಪರಿಸರಕ್ಕಿಂತ, ಅನುಭವಗಳಿಗಿಂತ ಹೆಚ್ಚಾಗಿ, ಜನ್ಮತಃ ಬಂದ ಮನೋಸ್ಥಿತಿ ಎಂಬುದು ಗೊತ್ತೇ ಇರುವುದಿಲ್ಲ. ಒಬ್ಬ ಮನುಷ್ಯ ಹೇಗೆ ಕಾರಣವೇ ಇಲ್ಲದೆ ಎಡಗೈ ಬಳಸುವ ಎಡಚನಾಗಿ ಹುಟ್ಟಿರುತ್ತಾನೊ, ಹಾಗೆಯೇ ಕೆಲವರು ನಿಷ್ಕಾರಣವಾಗಿ ಸಲಿಂಗಿಗಳಾಗಿರುತ್ತಾರೆ. ಅದನ್ನವರು ಅಸಹಜತೆ, ವಿಕೃತಿ, deviation ಅಥವಾ perversion ಉಹುಂ, ಇದ್ಯಾವುದೂ ಅಲ್ಲ ; ನಾವು ಹುಟ್ಟಿರೋದೇ ಹೀಗೆ ಅನ್ನುತ್ತಾರೆ. ಅನೇಕ ದೇಶಗಳಲ್ಲಿ ಅಂಥ ಸಂಬಂಧಗಳು, ಅವರವರ ನಡುವೆಯೇ ಮದುವೆಗಳು-ಸಮ್ಮತವೆನ್ನಿಸಿಕೊಂಡಿವೆ. ಇಂಥ ಯಾವುದೇ ಸೂಕ್ಷ್ಮವನ್ನು ಓದಿಕೊಳ್ಳದೆ ಇಬ್ಬರು ಹೆಂಗಸರ ಲೈಂಗಿಕತೆಯನ್ನೇ ದಾರುಣವಾಗಿ ತೋರಿಸಿ ಪ್ರಾಣ ತಿನ್ನುವ Girl firendನಂಥ ಸಿನೆಮಾಗಳು ನಿರ್ಮಾಣವಾಗಬೇಕೆ ? ಅರ್ಧ ಸಿನೆಮಾ ನೋಡಿದರೆ ಸಾಕು: ಸೆನ್ಸಾರ್‌ ಮಂಡಳಿಯವರು ಇದನ್ನು ನೋಡದೆಯೇ ಬಿಡುಗಡೆ ಮಾಡಿದ್ದಾರೆ ಅನ್ನಿಸುತ್ತದೆ.

  ಭಾರತದ Film makerನ ವಿಕೃತಿ ಇಂದು ನಿನ್ನೆಯದಲ್ಲ. ನೂರಾರು, ಸಾವಿರಾರು ಅಡಲ್ಟ್‌ ಮೂವೀಗಳು ಬಂದಿವೆ ಹೋಗಿವೆ. ಆದರೆ Girl firend ಬಂದ ಮೇಲೆ ಸಿನೆಮಾ ಮಾಡುವವರ ವಿಕೃತಿ ಹೆಣ್ಣು-ಹೆಣ್ಣುಗಳ ನಡುವಿನ ವಿಕಾರವನ್ನು ಪ್ರದರ್ಶಿಸುವ ಮಟ್ಟಕ್ಕೆ ತಲುಪಿದೆ ಅಂತ ಖಾತರಿಯಾಗುತ್ತದೆ.

  ತಮಾಷೆಯೆಂದರೆ, ಇಂಥದೊಂದು ಕೆಟ್ಟ ಚಿತ್ರದ ಬಗ್ಗೆ ಸೆಮಿನಾರು, ಚರ್ಚೆ, ವೆಬ್‌ಸೈಟುಗಳ ಸ್ಥಾಪನೆ- ಎಲ್ಲ ಆಗಿವೆ.

  ಬರಗೆಟ್ಟ ದೇಶದಲ್ಲಿ ಏನೇನೆಲ್ಲ ಆಗಬಹುದಲ್ಲವೆ?

  (ಸ್ನೇಹಸೇತು : ಹಾಯ್‌ ಬೆಂಗಳೂರ್‌!)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X