»   » ಜಸ್ಟ್‌ ಉಪ್ಪಿ ಉಪ್ಪಿ ಮತ್ತು ಉಪ್ಪಿ...

ಜಸ್ಟ್‌ ಉಪ್ಪಿ ಉಪ್ಪಿ ಮತ್ತು ಉಪ್ಪಿ...

Posted By:
Subscribe to Filmibeat Kannada

*ಮಹೇಶ್‌ ದೇವಶೆಟ್ಟಿ

ಮುಡಿ ಕೊಟ್ರೆ ಅದು ಮತ್ತೆ ಬೆಳೆಯುತ್ತೆ. ಅದ್ಕೆ ಕೊಡ್ತೀಯಾ. ದೇವ್ರ ಮೇಲೆ ಅಷ್ಟೇ ಭಕ್ತಿ ಇದ್ರೆ ಕಣ್ಣು ಕೊಡು ಕೈ ಕೊಡು, ಕಾಲು ಕೊಡು. ದೇವಸ್ಥಾನ ಅಂದ್ರೆ ಕಟಿಂಗ್‌ ಸಲೂನ್‌ ಅಂತ ತಿಳ್ಕೊಂಡಿದಾನೆ ಮುಠ್ಠಾಳ...

ಜನರು ಕ್ಯಾಕಿ ಹೊಡೆಯಲು, ಚಪ್ಪಾಳೆ ತಟ್ಟಲು, ಏನ್‌ ಡೈಲಾಗ್‌ ಹೊಡೀತಾನಪ್ಪ ಉಪ್ಪಿ ಎಂದು ಬಾಯಿ ಚಪ್ಪರಿಸಲು ಇನ್ನೆಂತಹ ರೋಚಕ ಮಾತುಗಳು ಬೇಕು? ಹೌದು, ಉಪ್ಪಿ ತಮ್ಮ ವಿಲಕ್ಷಣ ಮಾತುಗಳಿಂದ, ವಿಶಿಷ್ಟ ಮ್ಯಾನರಿಸಂನಿಂದ, ವಿಭಿನ್ನ ಡೈಲಾಗ್‌ ಡೆಲಿವರಿಯಿಂದ ಮತ್ತು ತಮಗಷ್ಟೇ ಸಾಧ್ಯವೆನಿಸುವ ಅಭಿನಯದಿಂದ ಮೆಚ್ಚುಗೆ ಗಳಿಸುತ್ತಾರೆ. ಹೆತ್ತ ತಾಯಿಗೆ ಒದ್ದು, ಒಬ್ಬ ವೇಶ್ಯೆಯಿಂದ ಎದೆಗೆ ಒದೆಸಿಕೊಂಡು ಕಲಾವಿದ ಯಾವುದೇ ಇಮೇಜಿಗೆ ಜೋತು ಬೀಳಬಾರದೆಂದು ಸಾಂಕೇತಿಕವಾಗಿ ಮಾತಾಡಿದ್ದಾರೆ. ಉಪ್ಪಿಯ ಮಾತು ಮತ್ತು ನಟನೆಯಷ್ಟೇ ಕೊನೆಗೆ ನೆನಪಿನಲ್ಲಿ ಉಳಿದರೆ, ಅದು ಚಿತ್ರದ ವೈಶಿಷ್ಟ್ಯವೂ ಹೌದು, ಮಿತಿಯೂ ಹೌದು. ಯಾಕೆಂದರೆ ಒಂದೇ ಕೈಯಿಂದ ಯಾವತ್ತೂ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲ. ಆದರೆ ಒಂದು ಕೈಯಿಂದ ಚಿಟಿಕೆ ಹೊಡೆಯಬಹುದು. ಅದು ಚಪ್ಪಾಳೆ ಸದ್ದಿಗಿಂತ ಕಡಿಮೆ ಮಾಡುತ್ತದೆನ್ನುವುದು ನೆನಪಿಡಬೇಕು...

ಪ್ರಿಯ ಓದುಗ ಧಣಿಗಳೇ, ಬರಹ ಎಲ್ಲೆಲ್ಲಿಗೋ ಹೋಗುತ್ತಿದೆ. ಮೊದಲು ವಿಷಯ ಕೇಳಿ ಬಿಡಿ. ನಾಯಕ ವಿದೇಶದಲ್ಲಿ ಓದಿ ಭಾರತಕ್ಕೆ ಬಂದಾತ. ಇಲ್ಲಿಯ ಆಚಾರ- ವಿಚಾರ, ಸಂಪ್ರದಾಯ, ಸಂಸ್ಕೃತಿಗಳೆಂದರೆ ಆತನಿಗೆ ಅಲರ್ಜಿ. ಅವನಿಗೆ ನಾಚ್‌ವಾಲಿ ರಮ್ಯಕೃಷ್ಣ ಗಂಟು ಬೀಳುತ್ತಾಳೆ. ಆಗ ಬೇರೊಬ್ಬಳನ್ನು ಮದುವೆಯಾಗುವ ಆತ, ಉಪ್ಪಿನಕಾಯಿ ಭರಣಿಗೆ ಬಿರಡೆ ಹಾಕಿದಂತೆ ಸೀರೆ ಉಟ್ಟ ಪತ್ನಿಯನ್ನು ನಿರಾಕರಿಸುತ್ತಾನೆ. ವೇಶ್ಯೆಯಾಂದಿಗೆ ಮಜಾ ಮಾಡುತ್ತಾನೆ. ಆಸ್ತಿ ಕರಗುತ್ತದೆ. ಮೈಯಿ ಕೆರೆಯುತ್ತದೆ. ಕುಷ್ಠ ರೋಗ ಅಂಟುತ್ತದೆ. ಬೀದಿಗೆ ಬೀಳುತ್ತಾನೆ. ಕೊನೆಗೆ ಕೋಕೋನಟ್‌ ಚಿಪ್ಪು ಹಿಡಿದು ಶಿವಪ್ಪ ಕಾಯೋ ತಂದೆ ಮೂರು ಲೋಕ ಸ್ವಾಮಿ ದೇವ...

ಸುಮಾರು ಐವತ್ತು ವರ್ಷಗಳ ಹಿಂದೆ ಯಶಸ್ವಿಯಾದ ತಮಿಳಿನ ರಕ್ತ ಕಣ್ಣೀರು ಚಿತ್ರದ ರೀಮೇಕಿದು. ಅದಕ್ಕೂ ಹಿಂದೆ ನಾಟಕವಾಗಿಯೂ ಇದು ಜನಪ್ರಿಯವಾಗಿತ್ತಂತೆ. ಅದನ್ನೆ ಉಪೇಂದ್ರ ಗ್ಯಾಂಗು ಕನ್ನಡಕ್ಕೆ ಇಳಿಸಿದೆ. ಐವತ್ತು ವರ್ಷಗಳ ಹಿಂದೆ ಹೋಗಿ ಎಲ್ಲವನ್ನು ಆಗಿನಂತೆ ಚಿತ್ರಿಸಿದ್ದೇವೆ ಅನ್ನುವುದು ಅವರ ಅಂಬೋಣ. ಆದರೆ ನಾಯಕನ ಡ್ರೆಸ್ಸು, ಒಂದೆರಡು ಹಾಡು, ಕಾರು ಬಿಟ್ಟರೆ ಯಾವುದೂ ಆಗಿನಂತಿಲ್ಲ. ಅದಲ್ಲದೆ ಕೇವಲ ಬಟ್ಟೆ ಬರೆಯಿಂದ ಪೀರಿಯಾಡಿಕ್‌ ಚಿತ್ರ ನಿರ್ಮಿಸಲು ಸಾಧ್ಯವಿಲ್ಲ. ಅದು ಗೊತ್ತಾಗಬೇಕಾದರೆ ಶಂಕರ್‌ನಾಗ್‌ ನಿರ್ದೇಶಿಸಿದ ಮಾಲ್ಗುಡಿ ಡೇಸ್‌ ಧಾರಾವಾಹಿ ನೋಡಿದರೆ ಸಾಕು.

ಇನ್ನು ಸಿನಿಮಾ ನೋಡ್ತಾ ನೋಡ್ತಾ ನಾಟಕದಂತೆ ಭಾಸವಾದರೆ ಅದಕ್ಕೆ ನಿರ್ದೇಶಕನ ಬಾಲಿಶತನ ಕಾರಣವೆನ್ನದೆ ವಿಧಿಯಿಲ್ಲ. ಮೂಲತಃ ಇದು ನಾಟಕವಾಗಿದ್ದರೂ ಸೆಲ್ಯುಲಾಯ್ಡ್‌ಗೆ ಅಳವಡಿಸಲು ಅದರದೇ ಬದಲಾವಣೆ ಮಾಡಿಕೊಳ್ಳಲೇಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ಸಂಭಾಷಣೆ ಬಗ್ಗೆ ಒಂದೆರಡು ಮಾತು ಹೇಳಲೇಬೇಕು. ಸಂಪ್ರದಾಯ, ಧರ್ಮವನ್ನು ವಿರೋಧಿಸುವುದು ನಾಯಕನ ಗುಣ. ಹೀಗಾಗಿ ಅವುಗಳನ್ನು ಗೇಲಿ ಮಾಡುವ ಸಾಕಷ್ಟು ಮಾತುಗಳನ್ನು ಉಪ್ಪಿ ಬರೆದಿದ್ದಾರೆ. ಆದರೆ ಪರಂಪರೆಯ ವಿರುದ್ಧ ದನಿ ಎತ್ತುವವನಿಗೆ ಅದಕ್ಕೆ ಪರ್ಯಾಯ ಮಾರ್ಗ ಸೂಚಿಸುವ ಜವಾಬ್ದಾರಿ ಇರುತ್ತದೆನ್ನುವುದು ಅವರಿಗೆ ಗೊತ್ತಿದ್ದಂತಿಲ್ಲ. ಅವರ ಎಷ್ಟೋ ಮಾತುಗಳು ಘೋಷಣೆ ಮಟ್ಟಕ್ಕೆ ಸೀಮಿತವಾಗಿವೆ.

ನಾಯಕ ಕುಷ್ಠ ರೋಗಿಯಾಗಿ ಕಣ್ಣು ಕಳಕೊಂಡು ಭಿಕ್ಷೆ ಬೇಡುವುದು ಕೇವಲ ಕತೆಯಾಗುತ್ತದೇ ವಿನಾ ಮನುಷ್ಯನ ವ್ಯಥೆಯೆನಿಸುವುದೇ ಇಲ್ಲ. ಇದರರ್ಥ ಉಪ್ಪಿ ಚೆನ್ನಾಗಿ ಅಭಿನಯಿಸಿಲ್ಲವೆಂದೂ ಅರ್ಥವಲ್ಲ. ದುರಂತವೆಂದರೆ ಇದುವರೆಗಿನ ಉಪ್ಪಿ ಚಿತ್ರಗಳಲ್ಲಿ ಇಷ್ಟು ಖರಾಬಿನ ತಾಂತ್ರಿಕತೆ ಯಾವ ಚಿತ್ರದಲ್ಲೂ ಕಂಡಿರಲಿಲ್ಲ. ಮೊದಲಬಾರಿ ನಿರ್ದೇಶನ ಮಾಡಿರುವ ಸಾಧುಕೋಕಿಲ, ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದರೂ ಹೀಗೆ ಕ್ಯಾಮರಾ ಹಿಡಿದಿರುವ ಕೃಷ್ಣಕುಮಾರ್‌ ಲೆಕ್ಕಕ್ಕೆ ಇಲ್ಲ. ಆದರೆ ಅದೇ ಸಾಧು ಮೂರು ಹಾಡುಗಳಲ್ಲಿ ಬೇರೊಂದು ಲೋಕಕ್ಕೆ ಕರೆದೊಯ್ಯುತ್ತಾರೆ. ಅದಕ್ಕೆ ಉಪ್ಪಿಯ ಕಿರಿಕ್ಕಿನ ಜುಗಲ್‌ಬಂದಿ ಸಾಥ್‌ ನೀಡಿದೆ. ರಮ್ಯಕೃಷ್ಣ, ಅಭಿರಾಮಿ ಅಷ್ಟಕ್ಕಷ್ಟೆ.

ಡಿಯರ್‌ ಉಪ್ಪಿ, ನೀವು ಥ್ರಿಲ್ಲರ್‌ ಮಂಜು ಅಲ್ಲವೆನ್ನುವ ಕಾರಣಕ್ಕೆ ಇಷ್ಟೊಂದು ವಿವರವಾಗಿ ಚರ್ಚಿಸ ಬೇಕಾಯಿತು. ಅವರಿಗಿಲ್ಲದ ಸೆನ್ಸಿಟಿವ್‌ ಮನಸ್ಸು ನಿಮಗಿದೆ ಎನ್ನುವುದಕ್ಕೆ ಇಂಚಿಂಚನ್ನು ಬಿಚ್ಚಿಡಬೇಕಾಯಿತು. ಏನೇ ಆದರೂ ನಿಮ್ಮ ಅಭಿಮಾನಿಗಳಿಗೆ ನೀವಾಡುವ ಮಾತು ಬೂಂದಿ ಲಾಡು ಆಗುವುದಂತೂ ಗ್ಯಾರಂಟಿ. ಹೆಂಗಸರಿಗೆ ಮುಜುಗರ ಅನಿಸುವ (?) ಮಾತುಗಳನ್ನು ಹೇಳುವಾಗ ಮೆಲುದನಿಯಲ್ಲಿ, ಗೊಣಗುವಂತೆ ಹೇಳುವ ಶೈಲಿ ನಿಮ್ಮ ತಾಕತ್ತಿಗೆ ಸಾಕ್ಷಿ. ಆದರೆ ಕೊನೆಯ ದೃಶ್ಯದಲ್ಲಿ ನನ್ನಂತೆ ಆಗಬೇಡಿ ಎಂದು ಉಪದೇಶ ನೀಡುವುದು ದೃಶ್ಯ ಮಾಧ್ಯಮಕ್ಕೆ ನೀವು ಮಾಡಿದ ಅನ್ಯಾಯ. ಅಷ್ಟು ಹೊತ್ತು ನಾಯಕನ ಸ್ಥಿತಿ ನೋಡಿದವರಿಗೆ ಹಾಗೊಂದು ಮಾತನ್ನು ವಾಚ್ಯವಾಗಿಸಿ ಹೇಳುವ ಅಗತ್ಯವಿತ್ತೆ? ಹಾಗಿದ್ದರೆ ಅದನ್ನು ತೆರೆ ಮೇಲೆ ತೋರಿಸಬೇಕೆ ವಿನಾ ಕೇಳಿಸಬಾರದು.

ಅದೇ ನಿಮ್ಮ ಉದ್ದೇಶವಾಗಿದ್ದರೆ ವಿಡಿಯಾ ಯಾಕೆ ಬೇಕು, ಆಡಿಯೋನೇ ಸಾಕಲ್ಲವೇ?

ಏನೇ ಆಗಲಿ, ಇದುವರೆಗೆ ಕನ್ನಡದಲ್ಲಿ ಯಾರೂ ಮಾಡದ ಸಾಹಸ ಮಾಡಿದ್ದೀರಿ. ಶ್ರಮಪಟ್ಟಿದ್ದೀರಿ. ಜನರನ್ನೆ ಥಿಯೇಟರ್‌ನತ್ತ ನುಗ್ಗುವಂತೆ ಮಾಡಿದ್ದೀರಿ. ಒಂದು ಸಿನಿಮಾ ಇಷ್ಟು ಮಾಡಿದರೆ ಸಾಕಲ್ಲವೆ?

(ಸ್ನೇಹಸೇತು- ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada