»   » ವಚನಕೆ ಬಸವಣ್ಣ ನ್ಯಾಯಕೆ ‘ನಮ್ಮಣ್ಣ’

ವಚನಕೆ ಬಸವಣ್ಣ ನ್ಯಾಯಕೆ ‘ನಮ್ಮಣ್ಣ’

Subscribe to Filmibeat Kannada
  • ದೇವಶೆಟ್ಟಿ ಮಹೇಶ್‌
ಆತ ಹೆಂಗರುಳಿನ ವ್ಯಕ್ತಿ. ಕಾಡಿನಿಂದ ಬಂದ ಅಮಾಯಕ, ಪಟ್ಟಣದ ಮಚ್ಚು ಕೊಚ್ಚು ಗೊತ್ತಿಲ್ಲದ ಪ್ರಾಮಾಣಿಕ. ಆತನಿಗೆ ಒಬ್ಬ ತಮ್ಮ. ಆತನನ್ನು ಕಂಡರೆ ಅಣ್ಣನಿಗೆ ಅಷ್ಟೇ ಜೀವ. ತಮ್ಮ ಶಾಲೆ ಕಲಿಯಲು ಇಷ್ಟ ಪಟ್ಟಾಗ ಕುದುರೆ ಗಾಡಿ ಓಡಿಸಿ ಫೀಸು ಕಟ್ಟುತ್ತಾನೆ, ಆದರೆ ಆಕಸ್ಮಿಕವಾಗಿ ರೌಡಿಗಳ ಕೆಂಗಣ್ಣಿಗೆ ಗುರಿಯಾಗುತ್ತಾನೆ. ಅದೇ ನೆಪದಲ್ಲಿ ತಮ್ಮ ಅವರಿಗೆ ಬಲಿಯಾಗುತ್ತಾನೆ. ಅಣ್ಣ ಹುಲಿಯಾಗದೆ ಇನ್ನೇನು ಆಗಲು ಸಾಧ್ಯ? ಆತನೆ ವಚನಕೆ ಬಸವಣ್ಣ ನ್ಯಾಯಕೆ ನಮ್ಮಣ್ಣ!

ಇದು ಹನ್ನೆರೆಡು ವರ್ಷಗಳ ಹಿಂದೆ ತೆರೆ ಕಂಡ ತೆಲುಗಿನ ‘ಅಣ್ಣ’ ಚಿತ್ರದ ರೀಮೇಕು. ಮಾಮೂಲಿ ಕತೆಯ ಸಿನಿಮಾ. ಆದರೆ ಅದೇ ಮಾಮೂಲಿ ಕತೆಗೆ ಹೊಸ ಬಣ್ಣ ಬಳಿದು, ಅದಕ್ಕೆ ಸೆಂಟಿಮೆಂಟಿನ ವಗ್ಗರಣೆ, ಹೊಡೆದಾಟದ ಹುಳಿಸಾರು, ರೋಮ್ಯಾನ್ಸ್‌ ರಾಗಿ ರೊಟ್ಟಿ, ಕಾಮಿಡಿ ಕಲ್ಲು ಸಕ್ಕರೆ ಸೇರಿಸಲಾಗಿದೆ.

ಒಂದು ಪಕ್ಕಾ ಮಾಸ್‌ ಸಿನಿಮಾ ಅಂತ ಗಾಂಧಿನಗರ ಏನನ್ನುತ್ತೊ ಅದನ್ನು ಮತ್ತು ಅದನ್ನಷ್ಟೇ ತಯಾರಿಸಲಾಗಿದೆ. ಮುಂದಿನ ಬೆಂಚಿನ ಪ್ರೇಕ್ಷಕರಿಗೆ ಎಂಟಿಆರ್‌ ಮೀಲ್ಸು!

ಸುದೀಪ್‌ ಎಂದಿನಂತೆ ತಮ್ಮ ಪಾತ್ರವನ್ನು ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ಇದುವರೆಗೆ ಕಾಣದ ಕಾಮಿಡಿ ಅವರ ಪಾತ್ರದಲ್ಲಿ ಇಣುಕಿ ಹಾಕಿದೆ. ಹೊಡೆದಾಟದಲ್ಲಿ ತಾವು ಯಾವ ಆ್ಯಕ್ಷನ್‌ ಹೀರೊಗಿಂತಲೂ ಕಡಿಮೆ ಇಲ್ಲ ಎಂದು ತೋರಿಸಿದ್ದಾರೆ. ಅದಕ್ಕೆ ಅವರು ಹಾಕಿದ ಶ್ರಮ ಕೂಡ ಎದ್ದು ಕಾಣುತ್ತದೆ. ಕಣ್ಣಿನ ಮೂಲಕ ಭಾವನೆ ವ್ಯಕ್ತಪಡಿಸುವ ಸೆಂಟಿಮೆಂಟ್‌ ದೃಶ್ಯಗಳು ಅವರನ್ನು ಕಲಾವಿದನನ್ನಾಗಿ ರೂಪಿಸಿವೆ. ಮಗುವನ್ನು ದಾಟಿಕೊಂಡು ಹೋಗುವ ಒಂದು ದೃಶ್ಯ ಅದಕ್ಕೆ ಉದಾಹರಣೆ.

ನಾಯಕಿ ಫ್ಲೋರಾ ಶೈನಿ ಪಾತ್ರಕ್ಕೆ ಸರಿಯಾಗಿದ್ದಾಳೆ. ಆಕೆ ಅಪ್ಪಟ ಕನ್ನಡದ ಹುಡುಗಿಯಂತೆ ಕಾಣೋದು ಅಚ್ಚರಿ. ಮತ್ತೊಬ್ಬ ನಾಯಕಿ ಅಂಜಲಾ ಜವೇರಿ ಜವರಾಯನಿಗೇ ಸವಾಲು ಹಾಕುವಂತಿದ್ದಾಳೆ. ಜತೆಗೆ ‘ತುಂಬಿದ’ ಕೊಡವೇ ತುಳುಕುತ್ತದೆ ಎಂಬ ಹೊಸಗಾದೆ ಮಾತಿಗೆ ಫೌಂಡೇಷನ್‌ ಹಾಕಿದ್ದಾಳೆ.

ಮಾ.ಚಂದನ್‌ ಕನ್ನಡಕ್ಕೆ ದಕ್ಕಿದ ಹೊಸ ತಲೆ ಮಾರಿನ ಬಾಲ ನಟ. ಆತನ ಮುಗ್ಧತೆ ಮತ್ತು ಅಭೋದ ಕಣ್ಣುಗಳ ಅಭಿನಯ ಫೆಂಟಾಸ್ಟಿಕ್‌. ಸಾಧು ಕೋಕಿಲಾ, ಕಿಶೋರಿ ಬಲ್ಲಾಳ್‌ ಸಿಕ್ಕಷ್ಟು ಅವಕಾಶ ಬಳಸಿಕೊಂಡಿದ್ದಾರೆ. ಕೋಟಾ ಶ್ರೀನಿವಾಸ ರಾವ್‌ ಮತ್ತು ಒಬ್ಬ ವಿಲನ್‌ ತೆಲುಗಿನಿಂದ ಆಮದಾಗಿದ್ದಕ್ಕೆ ಸರಿಯಾಗಿ ನ್ಯಾಯ ಸಲ್ಲಿಸಿದ್ದಾರಾ ಅನ್ನೋದು ಪ್ರೇಕ್ಷಕರಿಗೆ ಬಿಟ್ಟರೆ ವಾಸಿ.

ಸಂಗೀತದಲ್ಲಿ ಅಬ್ಬರ ಜಾಸ್ತಿ ಆಯಿತು ಅಂದರೆ ಮಾಸ್‌ ಅದನ್ನೇ ಕೇಳ್ತಾರೆ ಅಂತ ಗುರುಕಿರಣ್‌ ಹೇಳಬಹುದು. ಎರಡೇ ಹಾಡು ಓಕೆ ಉಳಿದದ್ದು ಹಂಗ್ಯಾಕೆ ಅಂದರೂ ಅವರು ಸೇಮ್‌ ಟು ಸೇಮ್‌ ಉತ್ತರ ನೀಡಬಹುದು.

ಪ್ರತಿ ಪ್ರೇಮ್‌ನಲ್ಲಿ ಶ್ರೀಮಂತಿಕೆ ಎದ್ದು ಕಾಣುವಂತಿದೆ. ವಿದೇಶದಲ್ಲಿ ಶೂಟ್‌ ಮಾಡಿದ ಹಾಡುಗಳು ಸೈಯರೆ ಸೈಯಾ... ಎಡಿಟಿಂಗ್‌ನಲ್ಲಿ ಕುದುರೆ ಕರಪುಟ ಇದೆ, ಜಗದೀಶ್‌ ರೆಡ್ಡಿ ಮತ್ತು ಬಿ.ಎ.ಮಧು ಮಾತಿನಲ್ಲಿ ಹಸಿ ಇದೆ, ಬಿಸಿಯೂ ಇದೆ, ಹೊಡೆದಾಟದಲ್ಲಿ ರಕ್ತ ‘ಪಾಕ’ ಇದೆ. ಇದನ್ನೆಲ್ಲ ಇದ್ದೇ ಇದೆ ಎನ್ನುವದಕ್ಕೆ ಸಾಕ್ಷಿಯಾಗಿ ‘ನಮ್ಮಣ್ಣ’ ಇದ್ದಾನೆ. ಆತನನ್ನು ನಿಮ್ಮಣ್ಣನಾಗಿ ಮಾಡಿಕೊಳ್ಳುವ ಜವಾಬ್ದಾರಿ ಅವರವರ ಭಾವಕ್ಕೆ ಭಕುತಿಗೆ ಬಿಟ್ಟ ವಿಷಯ...

(ಸ್ನೇಹ ಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada