ತೆರೆಯ ಮೇಲೆ ಎಲ್ಲ ‘ಉಡೀಸ್‌’

By Staff
  • ಚೇತನ್‌ ನಾಡಿಗೇರ್‌
ಉಡೀಸ್‌ ಚಿತ್ರದ ಆರಂಭ ‘ಓಂ’ನೆನಪಿಸಿದರೆ, ಕ್ಲೈಮ್ಯಾಕ್ಸ್‌ ಹಿಂದಿಯ ‘ವಾಸ್ತವ್‌’ಚಿತ್ರವನ್ನು ನೆನಪಿಸುತ್ತದೆ. ಮಧ್ಯೆ ಮಧ್ಯೆಬಹಳಷ್ಟು ರೌಡಿಸಂ ಚಿತ್ರಗಳ ಸನ್ನಿವೇಶಗಳು ಕಣ್ಮುಂದೆ ಬಂದರೆ ಆಶ್ಚರ್ಯವಿಲ್ಲ. ಕಥೆ ಹಳೆಯದೇ, ಆದರೆ ಚಿತ್ರಕಥೆ ಮಾತ್ರ ಹೊಸದು. ಒಟ್ಟಾರೆ ಇದೊಂದು ಪಕ್ಕಾ ಕಮರ್ಷಿಯಲ್‌ ಚಿತ್ರ. ಇದರಲ್ಲಿ ಆನ್‌ಲೈನ್‌ ಲಾಟರಿ, ಮೀಟರ್‌ಬಡ್ಡಿ ಮಾರಕ ಎಂಬ ಸಂದೇಶಗಳಿವೆ, ಬಹಳಷ್ಟು ಎನ್‌ಕೌಂಟರ್‌ಗಳಿವೆ, ಅಕ್ಕ-ತಮ್ಮನ ಸೆಂಟಿಮೆಂಟಿದೆ, ಲಾಂಗಿದೆ, ರಕ್ತವಿದೆ, ಕಣ್ಣೀರಿದೆ, ಕಥೆ ನಿರೂಪಿಸಲಿಕ್ಕೆ ‘ಕ್ರೆೃಂ ಸ್ಟೋರಿ’ಯ ಬಾಲಕೃಷ್ಣ ಕಾಕತ್ಕರ್‌ ಇದ್ದಾರೆ.

ಈಗ ಕಥೆಯ ವಿಷಯಕ್ಕೆ ಬರೋಣ. ಪರಮೇಶ್ವರಪ್ಪನವರದು(ಶ್ರೀನಿವಾಸ ಮೂರ್ತಿ)ಅತ್ಯಂತ ಸುಖಿ ಹಾಗೂ ಕಡು ಬಡ ಕುಟುಂಬ. ಮಗ ಸತ್ಯ(ಮಯೂರ್‌)ನಿಗೆ ಸಂಗೀತವೆಂದರೆ ಪಂಚ ಪ್ರಾಣ. ದೊಡ್ಡ ಸಿಂಗರ್‌ ಆಗಬೇಕೆಂಬ ದೊಡ್ಡ ಆಸೆ ಇಟ್ಟುಕೊಂಡಿರುತ್ತಾನೆ. ಮಗಳು ಅನು ಪ್ರಭಾಕರ್‌ ಮದುವೆ ಮಯಸ್ಸಿಗೆ ಬಂದಿರುತ್ತಾಳೆ. ಹೇಗೋ ಮದುವೆಯೂ ಗೊತ್ತಾಗುತ್ತದೆ. ಆದರೆ ದುಡ್ಡಿಲ್ಲ. ಎಂಗೇಜ್‌ಮೆಂಟಿಗೇ 10 ಸಾವಿರ ಬೇಕಾಗುತ್ತದೆ. ಸರಿ ಮೀಟರ್‌ ಬಡ್ಡಿ ಮೋಹನನ (ಹರೀಶ್‌ ರಾಯ್‌) ಹತ್ತಿರ ಸಾಲ ಮಾಡುತ್ತಾರೆ. ಮೋಹನ ವಸೂಲಿಗೆ ನಿಂತರೆ ಬ್ರಹ್ಮನಿಗಿಂಥ ಒಳ್ಳೆಯವನು, ಯಮನಿಗಿಂತ ಕೆಟ್ಟವನು. ಸಾಲವನ್ನು ಅವನೆಂದೂ ತಿಂಗಳ ಬಡ್ಡಿಗೆ ಕೊಡುವವನಲ್ಲ. ಅವನಿಗೆ ಪ್ರತಿ ದಿನ ಬಡ್ಡಿ ಬೇಕು. ಬಡ್ಡಿಯಿಲ್ಲ ಎಂದರೆ ಸೀದಾ ಉಡೀಸ್‌. ಎಲ್ಲಾ ಬಿಟ್ಟು ಪರಮೇಶ್ವರಪ್ಪ ಅಂಥವನ ಹತ್ತಿರ ವ್ಯವಹಾರಕ್ಕಿಳಿಯುತ್ತಾರೆ.

ಸಾಲವೇನೋ ಸಿಗುತ್ತದೆ ಆದರೆ ಅವರಿಗೆ ಬಡ್ಡಿ ಕಟ್ಟಲಾಗುವುದಿಲ್ಲ. ಮೋಹನ ಸೀದಾ ಪರಮೇಶ್ವರಪ್ಪನ ಮನೆಗೆ ನುಗ್ಗಿ ನಿಶ್ಚಿತಾರ್ಥ ನಿಲ್ಲಿಸುತ್ತಾನೆ. ದುಡ್ಡು ಕೊಡಲಾಗದಿದ್ದರೆ ಮಗಳನ್ನು ಕಳಿಸು ಎಂದು ಕೆಟ್ಟದಾಗಿ ಮಾತಾಡುತ್ತಾನೆ. ಇದನ್ನು ಕೇಳಿ ಸತ್ಯನ ಪಿತ್ತ ನೆತ್ತಿಗೇರುತ್ತದೆ. ಅಲ್ಲಿಯವರೆಗೂ, ಲವ್‌ ಮಾಡುತ್ತಾ ಹಾಡುತ್ತಾ ಇದ್ದ ಸತ್ಯಅನಿವಾರ್ಯವಾಗಿ ಲಾಂಗ್‌ ಹಿಡಿಯುತ್ತಾನೆ. ‘ಕತ್ತಿ ಮುಟ್ಟಬಾರದು ಆದರೆ ಮುಟ್ಟಿದ್ದೀನಿ. ಇದನ್ನು ಬಿಟ್ಟರೆ ನಾನು ಬದ್ಕೋಲ್ಲ’ ಎಂದು ರೌಡಿಸಂ ಫೀಲ್ಡ್‌ನ ಕಾಯಂ ಸದಸ್ಯನಾಗುತ್ತಾನೆ. ಲಾಂಗು ಹೋಗಿ ಗನ್‌ ಬರುತ್ತದೆ. ಒಂದು ಕಾಲದಲ್ಲಿ ಗಿಟಾರ್‌ ಸತ್ಯ ಎನಿಸಿಕೊಂಡವನು ಕೊನೆಗೆ ಗನ್‌ ಸತ್ಯನಾಗುತ್ತಾನೆ. ಆಮೇಲಿನದೆಲ್ಲಾ ಉಡೀಸ್‌, ಉಡೀಸ್‌ ಹಾಗೂ ಉಡೀಸ್‌.

ಚಿತ್ರದ ನಿಜವಾದ ಹೈಲೈಟೆಂದರೆ ನಾಯಕ ಮಯೂರ್‌. ಹೊಡೆದಾಟದ ದೃಶ್ಯಗಳಲ್ಲೂ ಅವರ ಅಭಿನಯ ಚೆನ್ನಾಗಿದೆ. ಅವರ ಡೈಲಾಗ್‌ ಹೇಳುವ ಶೈಲಿಯೇ ಡಿಫರೆಂಟ್‌ ಎನಿಸುತ್ತದೆ. ಅವರ ಜತೆಗೆ ಕುಡಕವಾಗಿ ಸತ್ಯಜಿತ್‌ ಹಾಗೂ ರಾಜಕಾರಣಿಯಾಗಿ ಶ್ರೀರಾಮ್‌ ಅವರ ಅಭಿನಯ ಗಮನ ಸೆಳೆಯುತ್ತದೆ. ಶ್ರೀನಿವಾಸ ಮೂರ್ತಿ ಅಭಿನಯ ಕೂಡಾ ಓಕೆ. ನಾಯಕಿ ಪಾತ್ರಗಳಿಂದ ಪೋಷಕ ಪಾತ್ರಗಳಿಗೆ ಶಿಫ್ಟಾದಂತೆ ಕಾಣುವ ಅನುಪ್ರಭಾಕರ್‌ ಚಿಕ್ಕ ಪಾತ್ರದಲ್ಲೂ ಚೊಕ್ಕವಾಗಿ ಕಾಣಸಿಕೊಂಡಿದ್ದಾರೆ.

ಇನ್ನು ಹರೀಶ್‌ರಾಯ್‌, ಸಿದ್ದಾರ್ಥ ಮುಂತಾದವರ ನಟನೆ ಕಿರುಚಾಟದಲ್ಲಿ ಅಡಗಿದೆ. ಚಿತ್ರದಲ್ಲಿ ಒಬ್ಬಳು ನಾಯಕಿಯಿದ್ದಾಳೆ. ನಾಯಕನನ್ನು ಅತಿಯಾಗಿ ಪ್ರೀತಿಸುತ್ತಾಳೆ. ಆದರೆ ನಾಯಕ ಮಾತ್ರ ಅವಳಿಂದ ಯಾವಾಗಲೂ ದೂರ. ‘ನೀನೇನು ಉಪ್ಪು, ಹುಳಿ, ಖಾರ ತಿನ್ನಲ್ವಾ’ ಎಂದು ಮಾತಿನಲ್ಲೇ ನಾಯಕನನ್ನು ಉಡೀಸ್‌ ಮಾಡುತ್ತಾಳೆ. ನಿಜ ಜೀವನದಲ್ಲಿಲ್ಲದಿದ್ದರೂ ಕನಸಿನಲ್ಲಾದರೂ ಅವನ ಜತೆ ಇರೋಣ ಎಂದು ಎರಡು ಹಾಡುಗಳಲ್ಲಿ ಮತ್ತೆರಡು ಫೈಟುಗಳಲ್ಲಿ ಭಾಗಿಯಾಗುತ್ತಾಳೆ. ಹಾಗೆಯೇ, ಚಿತ್ರದಲ್ಲಿ ಸಾಕಷ್ಟು ಪವಾಡಗಳೂ ನಡೆಯುತ್ತವೆ. ಕೆ.ಪಿ.ಎಸ್‌.ಸಿ ಪರೀಕ್ಷೆ ಬರೆದವನು ಐ.ಪಿ.ಎಸ್‌ ಅಧಿಕಾರಿಯಾಗುತ್ತಾನೆ ! ಅಧಿಕಾರವಹಿಸಿಕೊಂಡ ತಕ್ಷಣವೇ ಎನ್‌ಕೌಂಟರ್‌ ಮಾಡಲಿಕ್ಕೆ ಕಳಿಸಲ್ಪಡುತ್ತಾನೆ!

ಕಥೆ, ಚಿತ್ರಕಥೆ, ನಿರ್ದೇಶನದ ಜತೆಗೆ ಸತ್ಯ ಸಂಭಾಷಣೆಯ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ಮೊದಲ ಮೂರು ವಿಭಾಗಗಳಲ್ಲಿ ಹೊಸತನವಿಲ್ಲದಿದ್ದರೂ, ಸಂಭಾಷಣೆ ಮಾತ್ರ ಹೊಸದಾಗಿ ಕೇಳಿಸುತ್ತದೆ. ‘ನಮ್ಮ ಜನಕ್ಕೆ ತಾಯಿ ಹಾಲಿಗಿಂತ ಮಲತಾಯಿ ಬಿರ್ಯಾನಿನೇ ಹೆಚ್ಚು ಇಷ್ಟ’. ‘ಮಾತು ತಪ್ಪಿದ್ರೆ ನಿನ್ನ ಆಡಿಯೋ-ವೀಡಿಯೋ (ನಾಲಿಗೆ- ಕಣ್ಣು) ಎರಡೂ ಉಡೀಸ್‌’, ‘ಈ ಸತ್ಯಂಗೆ ತಲೆ ಬಗ್ಗಿಸಿ ಗೊತ್ತೇ ಹೊರತು ಮರೆಸಿಕೊಂಡು ಅಭ್ಯಾಸವಿಲ್ಲ’, ‘ರೌಡಿಸಂ ನಂಥ ಗಾಜಿನ ಮನೆ ಬಿಟ್ಟು ಪ್ರೀತಿ ಎಂಬ ಅರಮನೆಗೆ ಬಾ’ ಮುಂತಾದ ಅವರ ಸಂಭಾಷಣೆಗಳಿಗೆ ಸಾಕಷ್ಟು ಚಪ್ಪಾಳೆ ಬೀಳುತ್ತವೆ. ವೆಂಕಟ್‌-ನಾರಾಯಣ್‌ ಸಂಗೀತದಲ್ಲಿ ಎರಡು ಹಾಡುಗಳು ಕೇಳುವಂತಿದೆ.

(ಸ್ನೇಹ ಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X