»   » ‘ಸಾಗರಿ’ಯ ಕಿರಿಕಿರಿ

‘ಸಾಗರಿ’ಯ ಕಿರಿಕಿರಿ

Subscribe to Filmibeat Kannada
  • ರಮೇಶ್‌ ಕುಮಾರ್‌ ನಾಯಕ್‌
ಸಿನಿಮಾ, ಮನರಂಜನೆಯ ಸಾದನ ಮಾತ್ರವಲ್ಲ. ಅದರಿಂದಾಗುವ ಪ್ರಯೋಜನಗಳು ಹಲವು. ಉದಾಹರಣೆಗೆ ‘ಸಾಗರಿ’ ಚಿತ್ರವನ್ನೇ ನೋಡಿ. ಮನುಷ್ಯರ ತಾಳ್ಮೆ, ಸಹನೆಯ ಕರಾರುವಾಕ್‌ ಪರೀಕ್ಷೆಗೆ ಇದಕ್ಕಿಂತ ಬೇರೆ ವಿಧಾನ ಸಿಗಲಿಕ್ಕಿಲ್ಲ! ಈ ಹಿನ್ನೆಲೆಯಲ್ಲಿ ನಿರ್ದೇಶಕ ವಿಕ್ಟರಿವಾಸು ಅವರ ಪರಿಶ್ರಮ ಸಾರ್ಥಕ!!

ಇಂಟರ್‌ವೆಲ್‌ವರೆಗೆ ಒಮ್ಮೆಯೂ ಆಕಳಿಸದಿದ್ದರೆ ನೀವು ಸಹನೆಯ ಪ್ರತಿರೂಪ. ಕೊನೆಯವರೆಗೆ ಥಿಯೇಟರ್‌ನಲ್ಲೇ ಕುಳಿತಿದ್ದರೆ ನಿಮ್ಮ ತಾಳ್ಮೆಯ ಬಗ್ಗೆ ದೂಸರಾ ಮಾತಿಲ್ಲ. ಎರಡೂವರೆ ಗಂಟೆ ಅವಧಿಯಲ್ಲಿ ನೂರು ಬಾರಿ ಆಕಳಿಸಿದರೆ ನೀವು ಸಹಿಷ್ಣುಗಳಲ್ಲ. ಧ್ಯಾನಕ್ಕೆ ಮೊರೆ ಹೋಗಿ ಸಹನೆ ವೃದ್ಧಿಸಿಕೊಳ್ಳುವುದೊಳಿತು. 50 ಬಾರಿ ಆ... ಎಂದರೆ ನಿಮ್ಮ ಸಹನೆಯ ಮಟ್ಟ ಸಾಧಾರಣ ಎಂದರ್ಥ.

ಹಾಡು ಕೇಳಿದರೆ ಇದೊಂದು ಪ್ರೇಮಕಥಾ ಚಿತ್ರ ಎಂಬ ಕಲ್ಪನೆ ಬರುತ್ತದೆ. ಚಿತ್ರದ ಹೆಸರು ಕೂಡ ಇದಕ್ಕೆ ಪುಷ್ಟಿ ನೀಡುತ್ತದೆ. ಥಿಯೇಟರ್‌ಗೆ ಹೋದರೆ ಚಿತ್ರದ ಟ್ರ್ಯಾಕೇ ಬೇರೆ. ಆಗಾಗ ಕಾಣಿಸಿಕೊಳ್ಳುವ ದೆವ್ವ-ಭೂತಗಳು, ಇದು ಭಯಾನಕ ಚಿತ್ರ ಎದು ಸಾರಲು ಯತ್ನಿಸುತ್ತವೆ. ಪ್ರೇಕ್ಷಕರು ಮಾತ್ರ ಒಂದಿನಿತೂ ಹೆದರುವುದಿಲ್ಲ. ಹಾಗಾಗಿ ಇದು ಆ ಕೆಟಗರಿಯ ಚಿತ್ರ ಅಲ್ಲದಿದ್ದರೂ, ನಿರ್ದೇಶಕರು ಚಿತ್ರ ನಿರೂಪಿಸಿದ ರೀತಿ ಗಣನೆಗೆ ತೆಗೆದುಕೊಂಡರೆ ಇದು ‘ಭಯಾನಕ ಚಿತ್ರ’ ಹೌದು!

ಪ್ರಾಣಿ ಶಾಸ್ತ ಮತ್ತು ಸಸ್ಯ ಶಾಸ್ತ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕಾಗಿ ಕಾಡಿನಲ್ಲಿ ಕ್ಯಾಂಪ್‌ ಮಾಡುತ್ತಾರೆ. ಮಧ್ಯಂತರದವರೆಗೆ ಪ್ರೇಕ್ಷಕರನ್ನು ಮರೆತು ಕಾಲ ಕಳೆಯುತ್ತಾರೆ. ಬಳಿಕ ದೆವ್ವ-ಭೂತದ ಪ್ರಸ್ತಾಪವಾಗುತ್ತದೆ. ಕಾಡಿನಲ್ಲಿ ಗಿರಿಜನ ಮಹಿಳೆಯ ಕೊಲೆಯಾಗುತ್ತದೆ. ವಿದ್ಯಾರ್ಥಿನಿ ಭಾವನಾಳ ಮೈಮೇಲೆ ಸಾಗರಿ ಎಂಬ ನೃತ್ಯಗಾತಿಯ ಆತ್ಮ ಆವಾಹನೆಯಾಗುತ್ತದೆ. ಸಾಗರಿಯ ಸಾವಿಗೆ ಪರೋಕ್ಷವಾಗಿ ಕಾರಣನಾದ ಧರ್ಮನ ಕೊಲೆಗೆ ಆಕೆ ಪ್ರಯತ್ನಿಸುತ್ತಾಳೆ. ಸ್ವಾಮೀಜಿಯಾಬ್ಬರು ಧರ್ಮನನ್ನು ಕಲು ್ಲ ಕಂಬಕ್ಕೆ ಕಟ್ಟಿ ಹಾಕಿ ಭಾವನಾಳ ಕೈಗೆ ಖಡ್ಗವನ್ನು ನೀಡುತ್ತಾರೆ. ಆಕೆ ಧರ್ಮನ ರುಂಡ ಚೆಂಡಾಡುವ ಕೃತಕ ಸನ್ನಿವೇಶ ಸೃಷ್ಟಿಸುತ್ತಾರೆ. ಆಕೆ ನಾರ್ಮಲ್‌ ಸ್ಥಿತಿಗೆ ಬರುತ್ತಾಳೆ. ಅಲ್ಲಿಗೆ ಚಿತ್ರ ಖತಂ.

ಚಿತ್ರದಲ್ಲಿ ಸಖತ್‌ ಸ್ಕೋರ್‌ ಮಾಡಿರುವವರು ಸಾಧು ಕೋಕಿಲಾ ಮಾತ್ರ. ಹೆಚ್ಚು ಕಡಿಮೆ ಎಲ್ಲ ಗೀತೆಗಳು ಇಂಪಾಗಿವೆ. ಹಾಡು ಮಾತ್ರವಲ್ಲ, ಹಿನ್ನೆಲೆ ಸಂಗೀತವೂ ಸೊಗಸಾಗಿದೆ. ಸಾಧು ಅವರ ಶ್ರಮ ಸುಖಾ ಸುಮ್ಮನೆ ವೇಸ್ಟ್‌ ಆಗಬಾರದಿತ್ತು. ಕುಣಿಗಲ್‌ ನಾಗಭೂಷಣ್‌ರ ಸಂಭಾಷಣೆ ಪರವಾಗಿಲ್ಲ. ಆದರೆ ಆಗಾಗ ಕೇಳಿ ಬರುವ ಗಿಲ್‌ಮಸ್ತಿ, ಗಿಲ್ಮಾಸ್‌, ಎಂಬ ಅನಾಮಿಕ ಪದಗಳು ತಲೆ ತಿನ್ನುತ್ತವೆ.

ರಾಮ್‌ಕುಮಾರ್‌, ಸಾಧು ಕೋಕಿಲಾ, ಸುನಿಲ್‌ ಪುರಾಣಿಕ್‌, ನವೀನ್‌, ಭವ್ಯಾ ತಾರಾಗಣದಲ್ಲಿದ್ದಾರೆ. ಅನಂತ್‌ನಾಗ್‌ ಈ ಚಿತ್ರದಲ್ಲಿ ನಟಿಸಿದ್ದೇ ವಿಶೇಷ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada