»   » ಇದು ಸ್ನಿಗ್ಧ ‘ಸೌಂದರ್ಯ’

ಇದು ಸ್ನಿಗ್ಧ ‘ಸೌಂದರ್ಯ’

Subscribe to Filmibeat Kannada


ಭೂ ಮಾಫಿಯಾದ ಡಾನ್‌ ಒಬ್ಬನ ಕಣ್ಣು, ಸೌಂದರ್ಯಳ ಸೌಂದರ್ಯದ ಮೇಲೆ ಬೀಳುತ್ತದೆ. ಇದರಿಂದ ಸಹಜವಾಗಿಯೇ ನೊಂದ ಆಕೆಯ ಗಂಡ ಆ ಡಾನ್‌ನನ್ನು ಮುಗಿಸಿ ಹಾಕುತ್ತಾನೆ. ಆಮೇಲೆ..?!

ಚಿತ್ರ : ಸೌಂದರ್ಯ
ನಿರ್ಮಾಣ : ಗಣಪತಿ ಪ್ರಭು, ಡಿ.ರಾಮಚಂದ್ರ, ಆರ್‌.ಗೋವಿಂದರಾಜು, ರಾಘವೇಂದ್ರ.
ನಿರ್ದೇಶನ : ಈ. ಚೆನ್ನಗಂಗಪ್ಪ
ಸಂಗೀತ : ಹಂಸಲೇಖ
ತಾರಾಗಣ : ರಮೇಶ್‌, ಸಾಕ್ಷಿ ಶಿವಾನಂದ್‌, ಬೇಬಿ ಶ್ರೇಯಾ ಮತ್ತು ರಾಹುಲ್‌ ದೇವ್‌ ಮತ್ತಿತರರು.

ಭೂಮಾಫಿಯಾದ ಕಣ್ಣು ತನ್ನ ಪಾಡಿಗೆ ತಾನಿರುವ ಮೇಲ್ಮಧ್ಯಮ ವರ್ಗದ ಕುಟುಂಬವೊಂದರ ಮೇಲೆ ಬಿದ್ದರೆ ಏನಾಗುತ್ತದೆ? ‘ಸೌಂದರ್ಯ’ದಲ್ಲೂ ಅದೇ ಆಗುತ್ತದೆ. ಕುಟುಂಬದ ಮೇಲೆ ಎನ್ನುವುದಕ್ಕಿಂತ, ಭೂ ಮಾಫಿಯಾದ ಡಾನ್‌ ಒಬ್ಬನ ಕಣ್ಣು ಸೌಂದರ್ಯಳ ಸೌಂದರ್ಯದ ಮೇಲೆ ಬೀಳುತ್ತದೆ. ಇದರಿಂದ ಸಹಜವಾಗಿಯೇ ನೊಂದ ಆಕೆಯ ಗಂಡ ಆ ಡಾನ್‌ನನ್ನು ಮುಗಿಸಿ ಹಾಕುತ್ತಾನೆ.

ಕೊಲೆ ಏನೋ ಒಂದೇ ಬಾರಿಗೆ ಮಾಡಿಬಿಡುತ್ತಾನೆ. ಆದರೆ, ಕೊಲೆ ಮಾಡಿದ ಪಾಪಪ್ರಜ್ಞೆಯಲ್ಲಿ ಪ್ರತಿದಿನ ಕೊಲ್ಲಲ್ಪಡುತ್ತಾನೆ. ತನ್ನ ಆಪ್ತಮಿತ್ರನೇ ಆ ಕೊಲೆಯ ತನಿಖೆಗೆ ಬಂದ ಎಂದು ಗೊತ್ತಾದಾಗ ಇನ್ನಷ್ಟು ಹೌಹಾರುತ್ತಾನೆ. ಇದೆಲ್ಲದರಿಂದ ಹೇಗೆ ಆಚೆ ಬರುತ್ತಾನೆ ಎನ್ನುವುದೇ ‘ಸೌಂದರ್ಯ’.

ಚೆನ್ನಗಂಗಪ್ಪ ಬಿ.ಡಿ.ಎ.ನಲ್ಲಿದ್ದವರು. ಭೂ ಮಾಫಿಯಾ ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸಿದವರು. ತಾವು ಗಮನಿಸಿದ ಕೆಲವು ಘಟನೆಗಳನ್ನೇ ಇಲ್ಲಿ ಬಳಸಿಕೊಂಡಿದ್ದಾರೆ. ಮಧ್ಯಮ ವರ್ಗದ ಭಯ, ತವಕ, ತಲ್ಲಣ, ಪಾಪ ಪ್ರಜ್ಞೆಗಳನ್ನು ಸೂಕ್ಷ್ಮವಾಗಿ ಮತ್ತು ಅಷ್ಟೇ ಅದ್ಭುತವಾಗಿ ಸೆರೆಹಿಡಿದಂತೆ, ಭೂ ಮಾಫಿಯಾದ ಚಾಲಾಕಿತನ, ಮೋಸ, ಕ್ರೌರ್ಯಗಳನ್ನು ಅವರು ಸೆರೆ ಹಿಡಿದಿಲ್ಲ ಎನ್ನಬಹುದೇನೋ.

ಹಾಗೆ ನೋಡಿದರೆ ಭೂ ಮಾಫಿಯಾ ಬದಲು ಡ್ರಗ್‌ ಮಾಫಿಯಾ, ಗೋಲ್ಡ್‌ ಸ್ಮಗ್ಲಿಂಗ್‌ ... ಹೀಗೆ ಯಾವುದೇ ದಂಧೆಯನ್ನು ಇಲ್ಲಿ ಹಿನ್ನೆಲೆಯಲ್ಲಿ ಬಳಸಿಕೊಂಡಿದ್ದರೂ ಅಂಥ ದೊಡ್ಡ ಫರ್ಕಾಗುತ್ತಿರಲಿಲ್ಲ. ಆದರೆ, ಭೂ ಮಾಫಿಯಾ ಹೆಚ್ಚು ಸಮಕಾಲೀನವಾಗಿದೆ ಎನ್ನುವ ಕಾರಣಕ್ಕೆ ಅದೇ ‘ಸೌಂದರ್ಯ’ದ ಹಿನ್ನೆಲೆಯಾಗಿರಬಹುದು. ಇದೊಂದು ಬಿಟ್ಟರೆ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಇಡೀ ಕುಟುಂಬ ಒಟ್ಟಾಗಿ ಕುಳಿತು ನೋಡುವಂತಿದೆ.

ಒಂದಿಷ್ಟು ಕತ್ತರಿಸ ಬಹುದಾಗಿತ್ತು ಎಂದು ಚೆನ್ನಗಂಗಪ್ಪನವರಿಗೆ ಸಲಹೆ ಕೊಡುತ್ತಲೇ, ಒಂದು ಒಳ್ಳೆಯ ಚಿತ್ರ ಮಾಡಿರುವುದಕ್ಕೆ ಕಂಗ್ರಾಟ್ಸ್‌ ಹೇಳಲೇಬೇಕು.

ಬಹಳ ದಿನಗಳ ನಂತರ ರಮೇಶ್‌ ಈ ಚಿತ್ರದಲ್ಲಿ ಇಂಟೆನ್ಸ್‌ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ. ಚಿತ್ರದ ಹೆಸರು ನಾಯಕಿ ಪ್ರಧಾನವಾದರೂ ನಿಂತಿರುವುದು ರಮೇಶ್‌ ಮೇಲೆ.

ಈ ಅವಕಾಶವನ್ನು ಅವರು ಸಮರ್ಥವಾಗಿ ಬಳಸಿಕೊಂಡಿದ್ದಾರೆ ಸಹ. ಭಯ, ದುಗುಡದ ಸನ್ನಿವೇಶಗಳಾಗಲೀ, ಜಾಲಿ ದೃಶ್ಯಗಳಾಗಲೀ ರಮೇಶ್‌ಗೆ ಸಲೀಸು. ರಮೇಶ್‌ ಜತೆ ಶ್ರಿಯಾ ಶರ್ಮ ತನ್ನ ಅಭಿನಯದಿಂದ, ಮುಗ್ಧ ನಗುವಿನಿಂದ ನಿಮ್ಮನ್ನು ಕಟ್ಟಿ ಹಾಕದಿದ್ದರೆ ಕೇಳಿ. ಹಾಗೆ ನೋಡಿದರೆ ‘ಸೌಂದರ್ಯ’ವತಿ ಸಾಕ್ಷಿ ಶಿವಾನಂದ್‌ರೇ ಸ್ವಲ್ಪ ಡಲ್ಲು. ಅಭಿನಯದ ಜತೆಗೆ ಡಬ್ಬಿಂಗ್‌ ಸಹ ಕೆಟ್ಟದಾಗಿದೆ. ರಾಹುಲ್‌ ದೇವ್‌ ರೋಬೋಟ್‌ನಂತೆ ವರ್ತಿಸಿದರೆ ಅದು ನಿರ್ದೇಶಕರ ತಪ್ಪಲ್ಲ. ಚಿತ್ರದಲ್ಲಿ ಇನ್ನೂ ಅಸಂಖ್ಯ ಪಾತ್ರಗಳಿವೆ, ಅವನ್ನು ರಮೇಶ್‌ ಅಭಿನಯ, ಶ್ರಿಯಾ ಮುಗ್ಧತೆ ತಿಂದು ಹಾಕಿಬಿಡುತ್ತದೆ.

ತಿಂದು ಹಾಕುವವರ ಪೈಕಿ ಹಂಸಲೇಖ ಹಾಗೂ ಗಿರಿ ಕೂಡಾ ಇದ್ದಾರೆ. ಹಂಸಲೇಖ ತನ್ನ ಸಂಗೀತದಿಂದ ಚಿತ್ರವನ್ನು ರಸವತ್ತಾ ಗಿಸಿದ್ದಾರೆ. ಇನ್ನೂ ಸ್ವಲ್ಪ ಕಷ್ಟಪಟ್ಟಿದ್ದರೆ ಕುನಾಲ್‌ ಗಾಂಜಾವಾಲ ಅವರ ‘ರುದಯ’ವನ್ನು, ಅದ್ನಾನ್‌ ಸಾಮಿಯ ‘ಊಂ ಊಂ’ವನ್ನು ಸರಿಪಡಿಸಬಹುದಾಗಿತ್ತು. ಅದು ಬಿಟ್ಟರೆ ಅವರ ಸಂಗೀತ-ಸಾಹಿತ್ಯದ ಬಗ್ಗೆ ನೋ ಕಾಮೆಂಟ್ಸ್‌. ಗಿರಿ ಕ್ಯಾಮೆರಾ ಕಣ್ಣಿನಲ್ಲಿ ಕಾಂಕ್ರೀಟ್‌ ಕಾಡು ಬೆಂಗಳೂರು ಸಹ ಸುಂದರ, ಸ್ವಿಟ್ಜರ್‌ಲ್ಯಾಂಡೂ ನಯನ ಮನೋಹರ. ಅಷ್ಟೇ ಅಲ್ಲ, ಅಗನಾಶಿನಿಯೂ ನಯಾಗರ.

ಸ್ನಿಗ್ಧ ಸೌಂದರ್ಯ ಯಾವಾಗಲೂ ಎಲ್ಲರನ್ನೂ ಆಕರ್ಷಿಸುತ್ತದೆ. ಇನ್ನು ನಿಮ್ಮನ್ನು ಬಿಟ್ಟೀತೇ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada