»   » ಪ್ರತಿ ಚಿತ್ರದಲು ಅವತರಿಪ ಬಕ್ರಾವತಾರ!

ಪ್ರತಿ ಚಿತ್ರದಲು ಅವತರಿಪ ಬಕ್ರಾವತಾರ!

Subscribe to Filmibeat Kannada
  • ಚೇತನ್‌ ನಾಡಿಗೇರ್‌
ಜಗ್ಗೇಶ್‌ಗೂ ಬಕ್ರಾಗೂ ಅದ್ಯಾವ ಜನ್ಮಜನ್ಮಾಂತರದ ಸಂಬಂಧವೋ ಏನೋ? ಏಕೆಂದರೆ ಪ್ರತಿ ಚಿತ್ರದಲ್ಲೂ ಅವರು ಒಮ್ಮೆಯಾದರೂ ಬಕ್ರ ಆಗಬೇಕು, ಒಮ್ಮೆಯಾದರೂ ಬೇರೆಯವರನ್ನು ಬಕ್ರ ಮಾಡಬೇಕು. ಇದೊಂದು ಕೆಲಸ ಅವರ ಪ್ರತಿ ಚಿತ್ರದಲ್ಲೂ ನಡೆದಿದೆ. ಅದು 20ನೆಯ ಚಿತ್ರವಿರಬಹುದು. ಮೂವತ್ನಾಲ್ಕಾಗಬಹುದು, ಎಪ್ಪತ್ತಾರಾಗಬಹುದು...ಒಟ್ಟಿನಲ್ಲಿ ಅವರು ಸೋಲಬೇಕು, ಸೋತು ಗೆಲ್ಲಬೇಕು. ಇದು ಅವರ 101ನೆಯ ಚಿತ್ರ ‘ಮಿಸ್ಟರ್‌ ಬಕ್ರ’ದಲ್ಲೂ ಮುಂದುವರೆದಿದೆ. ಹಿಂದಿನ ಚಿತ್ರಗಳಲ್ಲಿ ಜಗ್ಗೇಶ್‌ ಏನಿದ್ದರೂ ಅವರ ಮಾವ, ಅತ್ತೆ ಹಾಗೂ ಅವರ ಮಗಳ ಪಾತ್ರಗಳಿಂದ ಬಕ್ರ ಆಗುತ್ತಿದ್ದರು. ಆದರೆ ಫಾರೆ ಎ ಚೇಂಚ್‌ ಮಿಸ್ಟರ್‌ ಬಕ್ರದಲ್ಲಿ ಇನ್ನೊಂದು ರೀತಿಯ ಬಕ್ರ ಆಗಿದ್ದಾರೆ.

ಬರೀ ಇಷ್ಟೇ ಹೇಳಿದರೆ ಗೊತ್ತಾಗುತ್ತದೋ ಇಲ್ಲವೋ? ಕಥೆ ಕೇಳಿ ಬಿಡಿ. ಅದು ಗೋಪಾಲಪುರ. ಅಲ್ಲಿಗೊಬ್ಬ ಗೌಡ ಬೆಟ್ಟಪ್ಪ(ಶ್ರೀನಿವಾಸ ಮೂರ್ತಿ). ಬೇರೆ ಚಿತ್ರಗಳಲ್ಲಿನ ಗೌಡರ ಹಾಗೆ ದರ್ಪ ಇಲ್ಲ. ಅವನು ನಿಷ್ಠಾವಂತ, ಗುಣವಂತ, ನೀತಿವಂತ ಇತ್ಯಾದಿ. ಅವನಿಗೊಬ್ಬ ಮಗ ಗೋಪಾಲ(ಜಗ್ಗೇಶ್‌). ಅವನಿಗೆ ನಟನಾಗಬೇಕೆಂಬ ಹುಚ್ಚು. ಎಂದಿನಂತೆ ತಂದೆಗೆ ಈ ವಿಷಯ ಇಷ್ಟವಾಗುವುದಿಲ್ಲ. ತಂದೆ ‘ಆಳಾಗಿ ದುಡಿಯಬೇಕು, ಅರಸನಾಗಿ ಉಣ್ಣಬೇಕು’ ಎಂದರೆ, ಮಗ ‘ಪ್ರತಿ ಮನೆಯಲ್ಲೂ ಒಲೆ ಇದ್ದಂಗೆ, ಪ್ರತಿ ಮನುಷ್ಯರಲ್ಲೂ ಕಲೆ ಇರಬೇಕು’ ಎನ್ನುತ್ತಾನೆ. ಸರಿ ಅಪ್ಪ ಮಗನ ಮಧ್ಯೆ ದಿನವೂ ಫೈಟು. ಮೊಮ್ಮಗನ ಅಜ್ಜಿ ಹಾಗೂ ಅಪ್ಪನ ತಾಯಿ ಈ ಫೈಟಿಗೆ ಮೂಕ ಪ್ರೇಕ್ಷಕಿ. ಆದರೂ ಮೊಮ್ಮಗನೆಡೆಗೆ ತುಸು ಪ್ರೀತಿ ಹೆಚ್ಚು.

ಗೋಪಾಲನ ಈ ಅಭಿನಯದ ಆಸೆಯನ್ನು ಕ್ಯಾಶ್‌ ಮಾಡಿಕೊಳ್ಳುವುದು ಶೂಟಿಂಗ್‌ ಶಂಕ್ರು(ಮುಖ್ಯಮಂತ್ರಿ ಚಂದ್ರು)ಎಂಬ ನಕಲಿ ಕೋಟಿ ನಿರ್ಮಾಪಕ. ತನ್ನನ್ನು ಶಂಕ್ರು ಹೀರೋ ಮಾಡ್ತೀನಿ ಎಂದೇಟಿಗೆ ಗೋಪಾಲ, ಅಪ್ಪನ ಹತ್ತಿರ ದುಡ್ಡಿಗಾಗಿ ಜಗಳ ಮಾಡುತ್ತಾನೆ. ಕೊನೆಗೆ ಅಪ್ಪ ಕೊಟ್ಟ ಹತ್ತು ಲಕ್ಷ ತೆಗೆದುಕೊಂಡು ಗೋಪಾಲ ಫ್ರಮ್‌ ವಿಲೇಜ್‌ ಗಾಂಧೀನಗರ ಸೇರುತ್ತಾನೆ. ಕ್ರಮೇಣ ಚಿತ್ರರಂಗ ದೂರದ ಬೆಟ್ಟ ಎಂಬುದು ಅರಿವಾಗುತ್ತದೆ. ಅಷ್ಟರಲ್ಲಿ ಜೇಬು ಖಾಲಿ. ಹೀಗೆ ಬಕ್ರ ಆದ ಗೋಪಾಲ ಮುಂದೇನು ಮಾಡುತ್ತಾನೆ? ಅದೇ ಸಸ್ಪೆನ್ಸ್‌.

ಇದು ಚಿತ್ರದ ಒಟ್ಟಾರೆ ಕಥೆ. ಈ ಹಳೆಯ ಕಥೆಗೆ ಸ್ವಲ್ಪ ಸುಣ್ಣಬಣ್ಣ ಬಳಿದು ಪ್ರೇಕ್ಷಕರ ಮುಂದಿಟ್ಟಿದ್ದಾರೆ ನಿರ್ದೇಶಕ ವಸಂತ್‌. ಜಗ್ಗೇಶ್‌ ತಮ್ಮ ಬಹಳಷ್ಟು ಚಿತ್ರಗಳಲ್ಲಿ ಹಳ್ಳಿ ಬಿಟ್ಟು ಬೆಂಗಳೂರು ಸೇರಿದ್ದಾರೆ. ಆದರೆ ಇಲ್ಲಿ ಗಾಂಧೀನಗರ ಸೇರಿದ್ದಾರೆ ಎನ್ನುವುದೇ ಕಥೆಯಲ್ಲಿನ ಹೊಸತನ. ಅದು ಬಿಟ್ಟರೆ, ಚಿತ್ರಕಥೆಯಲ್ಲಾಗಲಿ ಅಥವಾ ನಿರೂಪಣೆಯಲ್ಲಾಗಲಿ ಚಿತ್ರ ಅದೇ ಪುರಾತತ್ವ ಇಲಾಖೆಯಾಗಿಬಿಟ್ಟಿದೆ. ಆರಂಭದ ಕೆಲವು ನಿಮಿಷಗಳು ಖುಷಿ ನೀಡುತ್ತವೆಯಾದರೂ, ನಂತರ ಚಿತ್ರ ಕ್ರಮೇಣ ಹಾದಿ ತಪ್ಪುತ್ತದೆ. ಜಗ್ಗೇಶ್‌ ಚಿತ್ರವೆಂದ ಮೇಲೆ ಹಾಸ್ಯ ಇರಲೇ ಬೇಕೆಂಬ ಅಲಿಖಿತ ನಿಯಮವಿರುವುದರಿಂದಲೋ ಏನೋ ಅನಾವಶ್ಯಕವಾಗಿ ಹಾಸ್ಯಮಯ ದೃಶ್ಯಗಳನ್ನು ಹೇರಳವಾಗಿ ತುರುಕಲಾಗಿದೆ. ಆದರೆ ಅದರಲ್ಲೂ ಹಾಸ್ಯವೆಂದು ನಗೆ ತರಿಸಬೇಕಾದ ದೃಶ್ಯಗಳು ನಗೆಪಾಟಲಿಗೆ ಗುರಿಯಾಗಿವೆ. ನಾಯಕ ದುಡ್ಡು ಕಳೆದು ಕೊಂಡು ಒದ್ದಾಡುವ ಹಾಸ್ಯ ದೃಶ್ಯಗಳು ಅಪಹಾಸ್ಯ ದೃಶ್ಯಗಳಾಗಿವೆ.

ಚಿತ್ರದ ಏಕೈಕ ಪ್ಲಸ್‌ ಪಾಯಿಂಟ್‌ ಎಂದರೆ ಜಗ್ಗೇಶ್‌. ಮತ್ತೊಮ್ಮೆ ತಮ್ಮ ಬಾಡಿ ಲಾಂಗ್ವೇಜ್‌ ಹಾಗೂ ಟೈಮಿಂಗ್‌ ಇನ್ನೂ ಚೆನ್ನಾಗಿದೆ ಎಂದು ಅವರು ಸಾಬೀತು ಪಡಿಸಿದ್ದಾರೆ. ಕೃಷ್ಣನ ವೇಷದಲ್ಲಾಗಲೀ, ಮೈತುಂಬಾ ಬಂಗಾರ ಹೇರಿಕೊಂಡು ಅದನ್ನು ಪ್ರದರ್ಶಿಸುವ ಸಂದರ್ಭದಲ್ಲಾಗಲಿ ಅವರ ಅಭಿನಯವನ್ನು ನೋಡೇ ಎಂಜಾಯ್‌ ಮಾಡಬೇಕು. ನಟನೆ ಜತೆಗೆ ಒಂದು ಹಾಡಲ್ಲಿ ಜಗ್ಗೇಶ್‌ ಕಂಠಸಿರಿ ಬೋನಸ್‌. ಶ್ರೀನಿವಾಸಮೂರ್ತಿ ತಮ್ಮ ಸಹಜಾಭಿನಯದಿಂದ ಮನೆಗೆಲ್ಲುತ್ತಾರೆ. ಎಂ.ಎನ್‌.ಲಕ್ಷ್ಮೀದೇವಿ ಹಾಗೂ ಮುಖ್ಯಮಂತ್ರಿ ಚಂದ್ರು ಕೂಡ ಗಮನ ಸೆಳೆಯುತ್ತಾರೆ. ನಾಯಕಿ ರೋಹಿಣಿ ಹಾಡುಗಳಲ್ಲಷ್ಟೇ ಚೆಂದ. ಬಿರಾದಾರ್‌ ತಮ್ಮ ಎಂದಿನ ಭಿಕ್ಷುಕನ ಪಾತ್ರದಲ್ಲಿ ಸಹನೆ ಪರೀಕ್ಷಿಸುತ್ತಾರೆ.

ವಿ.ಮನೋಹರ್‌ ಸಂಗೀತ ನಿರ್ದೇಶನದಲ್ಲಿ ‘ಹೆಣ್ಣು ಮಾಗಿದರೇ ಕಚ್ಚಬೇಕು...’ ಹಾಗೂ ‘ರಜನಿ ರಜನಿ...’ ಹಾಡು ಕೇಳುವಂತಿವೆ. ಆದರೆ ಈ ಚಿತ್ರದಲ್ಲಿ ವೇಸ್ಟ್‌ ಆಗುತ್ತದಲ್ಲಾ ಎಂಬುದು ಒಂದು ಬೇಜಾರಿನ ಸಂಗತಿ. ಜನಾರ್ದನ ಬಾಬು ಅವರ ಛಾಯಾಗ್ರಹಣದಲ್ಲಾಗಲಿ, ರಾಜಶೇಖರ್‌ ರೆಡ್ಡಿಯವರ ಸಂಕಲನದಲ್ಲಾಗಲಿ ಹೊಸತನವೇನಿಲ್ಲ.

(ಸ್ನೇಹ ಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada