twitter
    For Quick Alerts
    ALLOW NOTIFICATIONS  
    For Daily Alerts

    ಪ್ರೇಕ್ಷಕರ ಮನದಲ್ಲಿ ಮತ್ತೆ ಜಗಮಗಿಸುವ ‘ತವರಿನ ಸಿರಿ’ವಂತಿಕೆ

    By Staff
    |


    ಹಳೆಯ ಕತೆಗೆ ಸಾಯಿಪ್ರಕಾಶ್‌, ಒಂದು ಕೋಟ್‌ ಹೊಸ ಬಣ್ಣ ಬಳಿದಿದ್ದಾರೆ. ಸರಳವಾಗಿ ಮಾಡಬಹುದಾಗಿದ್ದ ಕತೆಯನ್ನು ಅದ್ಧೂರಿಯಾಗಿ ಮಾಡಿದ್ದಾರೆ. ಒಂದೊಂದು ಫ್ರೇಮಿನಲ್ಲೂ ಹಲವು ಜನರನ್ನು ನಿಲ್ಲಿಸಿದ್ದಾರೆ. ಚಿತ್ರದ ಪೂರಾ ರೇಷ್ಮೆ ಸೀರೆಗಳು, ಬಂಗಾರದ ಒಡವೆಗಳು, ಕಿಲಕಿಲ ನಗು, ತಳಿರು ತೋರಣಗಳನ್ನು ತೋರಿಸಿದ್ದಾರೆ. ಅದೆಷ್ಟೇ ಗೋಳಿದ್ದರೂ ಒಂಥರಾ ಹಬ್ಬದ ವಾತಾವರಣವಿರುವಂತೆ ನೋಡಿಕೊಂಡಿದ್ದಾರೆ. ಪ್ರೇಕ್ಷಕರಿಗೆ ಇನ್ನೇನು ಬೇಕು?

    • ಚೇತನ್‌ ನಾಡಿಗೇರ್‌
    ದಾನ ಧರ್ಮವನ್ನ ಕಾಪಾಡತ್ತೆ ; ಧರ್ಮ ನಮ್ಮನ್ನ ಕಾಪಾಡತ್ತೆ.

    -ಇದು ಮುತ್ತಣ್ಣನ ಬಲವಾದ ನಂಬಿಕೆ. ಆ ನಂಬಿಕೆಯಂತೆಯೇ ಅವನು ನಡೆಯುತ್ತಾನೆ. ಅದರಂತೆಯೇ ನುಡಿಯುತ್ತಾನೆ. ಸದಾ ಕೈತುಂಬಾ ದಾನ ಮಾಡುತ್ತಾನೆ. ಬೊಗಸೆ ತುಂಬಾ ಗೌರವ ಸಂಪಾದಿಸುತ್ತಾನೆ. ಇಂಥ ಮುತ್ತಣ್ಣನಿಗೆ ಮೂವರು ತಂಗಿಯರು. ಪ್ರಾಣಕ್ಕಿಂತ ಹೆಚ್ಚಾದವರು. ಅದಕ್ಕೇ ಮುತ್ತಣ್ಣ ಅವರಿಗೆ ತನ್ನ ಸರ್ವಸ್ವವನ್ನೇ ಧಾರೆಯೆರೆಯುತ್ತಾನೆ. ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತಾನೆ. ಇಬ್ಬರನ್ನು ಡಾಕ್ಟ್ರು-ಇಂಜಿಯರ್ರಿಗೆ ಕೊಟ್ಟು ಮದುವೆ ಮಾಡುತ್ತಾನೆ. ಏನೋ ಸಣ್ಣ ಪುಟ್ಟ ಸಮಸ್ಯೆಗಳಿಂದ ಒಡೆದಿದ್ದ ಅವರ ಕುಟುಂಬಗಳನ್ನು ಪೊರೆಯುತ್ತಾನೆ.

    ಅಷ್ಟರಲ್ಲಿ ಮೂರನೇ ತಂಗಿ ಮದುವೆಗೆ ಬಂದಿರುತ್ತಾಳೆ. ಕೋಟ್ಯಧೀಶ ಒಬ್ಬ ಅವಳ ಪ್ರೇಮಿ. ಅವನನ್ನೇ ಮದುವೆಯಾಗಬೇಕೆಂದು ಹಂಬಲಿಸುತ್ತಾಳೆ. ಇದಕ್ಕೆ ಮುತ್ತಣ್ಣ ತೆರಬೇಕಾದ ಬೆಲೆ ಕೇವಲ ಒಂದೂವರೆ ಕೋಟಿ ರೂಪಾಯಿ. ತಂಗಿ ಮದುವೆಯನ್ನು ಅದ್ದೂರಿಯಾಗಿ ಮಾಡುತ್ತಾನೆ. ಅದಕ್ಕೆ ಲಕ್ಷ ಲಕ್ಷ ಸಾಲ ಎತ್ತುತ್ತಾನೆ. ಎಲ್ಲರಿಂದಲೂ ಶಹಬ್ಬಾಸ್‌ ಎನಿಸಿಕೊಳ್ಳುತ್ತಾನೆ.

    ಬೇರೆಯವರನ್ನು ತನ್ನ ಪ್ರೀತಿಯಿಂದ ಗೆಲ್ಲುವ ಮುತ್ತಣ್ಣ, ಕೊನೆಗೆ ತನ್ನ ಪ್ರೀತಿಯನ್ನೇ ಗೆಲ್ಲುವುದರಲ್ಲಿ ಸೋಲುತ್ತಾನೆ. ಇದರಿಂದ ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾನೆ. ಆಸ್ತಿಯನ್ನು ಸಹ. ಒಂದು ಕಾಲದಲ್ಲಿ ಕಲಿಯುಗದ ಕರ್ಣ ಎನಿಸಿಕೊಂಡಿದ್ದ ಮುತ್ತಣ್ಣ ಬರಿಗೈದಾಸನಾಗುತ್ತಾನೆ. ರೋಡಿಗೆ ಬೀಳುತ್ತಾನೆ. ಮುಂದೇನಾಗುತ್ತದೆ ಎಂಬ ಸಸ್ಪೆನ್ಸ್‌ ಅನ್ನು ಚಿತ್ರಮಂದಿರದಲ್ಲೇ ನೋಡಿ ಬಿಡಿ...

    ಈ ಹಿಂದೆ ಒಂದೇ ಘಟನೆಯನ್ನು ಎರಡೂವರೆ ಗಂಟೆ ವಿಸ್ತರಿಸಿ ಅಳಿಸುತ್ತಿದ್ದ ಸಾಯಿಪ್ರಕಾಶ್‌, ಇಲ್ಲಿ ಸಾಕಷ್ಟು ಬದಲಾಗಿದ್ದಾರೆ. ಒಂದು ಸಮಸ್ಯೆ ಹುಟ್ಟುತ್ತದೆ. ಸ್ವಲ್ಪ ಹೊತ್ತಿಗೇ ಉತ್ತರ ದೊರೆಯುತ್ತದೆ. ಮತ್ತೊಂದು ನಡೆಯುತ್ತದೆ. ಅದಕ್ಕೂ ತಟ್ಟನೆ ಉತ್ತರ. ಹೀಗೆ ಪ್ರತಿ ಘಟನೆಗಳ ಮೂಲಕ ಹಲವು ಸಂದೇಶಗಳನ್ನು ರವಾನಿಸುತ್ತಾ ಹೋಗುತ್ತಾರೆ. ಅನೇಕ ನಾಣ್ಣುಡಿಗಳಿಗೆ ಅರ್ಥ ಕಲ್ಪಿಸುತ್ತಾರೆ.

    ಇದು ಹಳೆಯ ಕತೆ. ಅದು ಸಾಯಿಪ್ರಕಾಶ್‌ಗೂ ಚೆನ್ನಾಗಿ ಗೊತ್ತು. ಅದಕ್ಕೇ ಅವರು ಒಂದು ಕೋಟ್‌ ಹೊಸ ಬಣ್ಣ ಬಳಿದಿದ್ದಾರೆ. ಸರಳವಾಗಿ ಮಾಡಬಹುದಾಗಿದ್ದ ಕತೆಯನ್ನು ಅದ್ಧೂರಿಯಾಗಿ ಮಾಡಿದ್ದಾರೆ. ಒಂದೊಂದು ಫ್ರೇಮಿನಲ್ಲೂ ಹಲವು ಜನರನ್ನು ನಿಲ್ಲಿಸಿದ್ದಾರೆ. ಚಿತ್ರದ ಪೂರಾ ರೇಷ್ಮೆ ಸೀರೆಗಳು, ಬಂಗಾರದ ಒಡವೆಗಳು, ಕಿಲಕಿಲ ನಗು, ತಳಿರು ತೋರಣಗಳನ್ನು ತೋರಿಸಿದ್ದಾರೆ. ಅದೆಷ್ಟೇ ಗೋಳಿದ್ದರೂ ಒಂಥರಾ ಹಬ್ಬದ ವಾತಾವರಣವಿರುವಂತೆ ನೋಡಿಕೊಂಡಿದ್ದಾರೆ. ಬರಿ ಅಳುವೊಂದೇ ಇದ್ದರೆ ಜನರಿಗೆ ಕಷ್ಟ ಎಂಬುದು ಗೊತ್ತಿದ್ದೇ ಕಾಲ ಕಾಲಕ್ಕೆ ಹಾಡು, ಫೈಟು ಸೇರಿಸಿದ್ದಾರೆ. ಇದರ ಜೊತೆಗೆ ದ್ವಿತೀಯಾರ್ಧದಲ್ಲಿ ‘ಕಸ್ತೂರಿ ನಿವಾಸ’ದ ಛಾಯೆಯಿದೆ.

    ಏನೇ ಆದರೂ ನೋಡುವಂತೆ ಮಾಡುವುದು ಶಿವರಾಜ್‌ಕುಮಾರ್‌. ಸೆಂಟಿಮೆಂಟ್‌ ದೃಶ್ಯಗಳಲ್ಲಿ, ಅದರಲ್ಲೂ ದ್ವಿತೀಯಾರ್ಧದಲ್ಲಿ ಅವರ ಅಭಿನಯ ವಾಹ್‌ ವಾಹ್‌! ಬಹಳ ದಿನಗಳ ನಂತರ ರಮೇಶ್‌ ಭಟ್‌ಗೆ ಸೊಗಸಾದ ಪಾತ್ರವೊಂದಿದೆ. ಅದನ್ನು ಅವರು ಚೆನ್ನಾಗಿ ನಿರ್ವಹಿಸಿದ್ದಾರೆ.

    ಡೈಸಿ ಬೊಪ್ಪಣ್ಣ ಅಂದವಾಗಿ ನಟಿಸಿದ್ದಾರೆ. ಆಶಿತಾ, ಅಶ್ವಿನಿ, ಮಮತಾ ಅಳು ತರಿಸುವುದರಲ್ಲಿ ನುರಿತಿದ್ದಾರೆ. ದೊಡ್ಡಣ್ಣ, ಟೆನ್ನಿಸ್‌ ಕೃಷ್ಣ, ಸಾಧು ಕೋಕಿಲ, ರೇಖಾ ದಾಸ್‌ ಮುಂತಾದವರ ಹಾಸ್ಯವನ್ನು ಬಲಾತ್ಕಾರವಾಗಿ ತುಂಬಿದ್ದಾರೆ. ಮುಖ್ಯ ಪಾತ್ರಗಳನ್ನು ಹೊರತುಪಡಿಸಿದರೂ ಅಸಂಖ್ಯಾತ ಪಾತ್ರಗಳಿವೆ. ಅವೆಲ್ಲ ಬಂದ ಪುಟ್ಟ, ಹೋದ ಪುಟ್ಟ ಅಷ್ಟೇ.

    ಶಿವರಾಜ್‌ಕುಮಾರ್‌ ಜತೆ ಚಿತ್ರವನ್ನು ಚೆಂದಗಾಣಿಸುವಲ್ಲಿ ಹಂಸಲೇಖ ಕೂಡಾ ಸಾಕಷ್ಟು ದುಡಿದಿದ್ದಾರೆ. ಬರಿ ಸಂಗೀತ ಮಾತ್ರವಲ್ಲ, ಸಾಹಿತ್ಯದಲ್ಲೂ ಮಿಂಚಿದ್ದಾರೆ. ಗಿರಿ ಕ್ಯಾಮೆರಾ ಕಣ್ಣು ಗ್ರಾಮೀಣ ಸೊಗಡನ್ನು ಗರಿಗರಿಯಾಗಿ ಹಿಡಿದಿಟ್ಟಿದೆ.

    ಗ್ಯಾಲರಿ : ಕೊಡಗಿನ ಬೆಡಗಿ ಸ್ಪೈಸಿ ಡೈಸಿ ಬೊಪ್ಪಣ್ಣ
    ಗ್ಯಾಲರಿ : ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Wednesday, April 24, 2024, 13:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X