twitter
    For Quick Alerts
    ALLOW NOTIFICATIONS  
    For Daily Alerts

    ಸ್ಯಾಡಿಸ್ಟ್‌ ಪ್ರೀತಿಯನ್ನು ಜನರು ಇತ್ತೀಚೆಗೆ ಬಾಯಿ ಚಪ್ಪರಿಸಿಕೊಂಡು ಅನುಭವಿಸುತ್ತಿದ್ದಾರೆ ಅಥವಾ ಕತೆಗಾರ ಹಾಗಂತ ತಿಳಿದಿದ್ದಾರೆ. ಅದಕ್ಕೆ ಸಬೂಬು ನೀಡುವಂತೆ ಉಪ್ಪಿಯ ಹಿಂಸಾ ವಿನೋದ!

    By Staff
    |

    ನೇಪಾಳದ ಯುವರಾಜ ಧೀರೇಂದ್ರ ಪ್ರೇಯಸಿಗಾಗಿ ತನ್ನ ಕುಟುಂಬವನ್ನೇ ಹತ್ಯೆ ಮಾಡಿದ ಘಟನೆಗೆ ಉಪ್ಪಿ ತಮ್ಮದೊಂದಿಷ್ಟು ವಗ್ಗರಣೆ ಸೇರಿಸಿ ಕತೆ ಹೆಣೆದಿದ್ದಾರೆ. ಆದರೆ ಆ ಹತ್ಯೆಯ ಪ್ರಸಂಗ ಕೇವಲ ಘಟನೆಯಾಗಿಯೇ ಉಳಿದುಬಿಡುತ್ತದೆ. ಕತೆಗಾರನ ಉದ್ದೇಶವೂ ಅದೇ ಆಗಿರುವುದರಿಂದ, ಪ್ರೇಯಸಿಯ ಹುಡುಕಾಟದ ಕತೆಯಾಗುತ್ತದೆ.

    ಯುವರಾಜ ಉಪೇಂದ್ರ, ಕೀರ್ತಿರೆಡ್ಡಿಯನ್ನು ಹಿಂಸೆ ಅನ್ನುವಷ್ಟು ಪ್ರೀತಿಸುತ್ತಿರುತ್ತಾನೆ. ಆದರವಳು ಅರಮನೆಯ ಕೆಲಸದವನ ಮಗಳಾಗಿರುವುದರಿಂದ ಮನೆಯಲ್ಲಿ ವಿರೋಧ ವ್ಯಕ್ತವಾಗುತ್ತದೆ. ಅವಳ ಜಾತಕ ಸರಿಯಿಲ್ಲವೆಂದು ಪ್ರೇಮಿಗಳಿಬ್ಬರನ್ನು ಬೇರೆ ಮಾಡುವ ಕುಟುಂಬದ ಸಂಚು ಉಪ್ಪಿಗೆ ಗೊತ್ತಾಗುತ್ತದೆ. ಅವರನ್ನು ಕೊಂದು ತಾನೂ ಆತ್ಮಹತ್ಯೆಗೆ ವಿಫಲ ಯತ್ನ ನಡೆಸುತ್ತಾನೆ. ಅದೇ ನೆಪ ಮಾಡಿಕೊಂಡ ಆಕೆ ಆತನ ಹಿಂಸಾ ಪ್ರೀತಿಯಿಂದ ತಪ್ಪಿಸಿಕೊಂಡು ಭಾರತಕ್ಕೆ ಬರುತ್ತಾಳೆ. ಅಲ್ಲಿ ಮತ್ತೊಬ್ಬ ಉಪ್ಪಿ ಗಂಟುಬೀಳುತ್ತಾನೆ. ಆಕಸ್ಮಿಕವಾಗಿ ಯುವರಾಜ ಉಪ್ಪಿಯ ಕಣ್ಣಿಗೆ ಆಕೆ ಮತ್ತೆ ಬೀಳುತ್ತಾಳೆ. ಅವಳನ್ನು ಪಡೆಯಲು ಉಪ್ಪಿ ದ್ವಯರ ನಡುವಿನ ಹಣಾಹಣಿ ಅಕ್ಷರಶಃ ರಾಮಾರಗತವಾಗಿ ಪರಿವರ್ತನೆಯಾಗುತ್ತದೆ. ಕೊನೆ ಏನಾಗುತ್ತದೆ ಅನ್ನುವುದನ್ನು 4 ಕ್ಲೈಮ್ಯಾಕ್ಸ್‌ಗಳ ಆರ್ಭಟ ನೋಡಿಯೇ ತಣಿಯಬೇಕು.

    ಹಿಂದಿಯ ‘ಅಗ್ನಿಸಾಕ್ಷಿ’ ಚಿತ್ರದ ಮೂಲ ಎಳೆಯಾಂದನ್ನು ಬಿಟ್ಟರೆ ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ . ಅಷ್ಟರಮಟ್ಟಿಗೆ ಇದು ಸ್ವಮೇಕು. ಸ್ಯಾಡಿಸ್ಟ್‌ ಪ್ರೀತಿಯನ್ನು ಜನರು ಇತ್ತೀಚೆಗೆ ಬಾಯಿ ಚಪ್ಪರಿಸಿಕೊಂಡು ಅನುಭವಿಸುತ್ತಿದ್ದಾರೆ ಅಥವಾ ಕತೆಗಾರ ಹಾಗಂತ ತಿಳಿದಿದ್ದಾರೆ. ಅದಕ್ಕೆ ಸಬೂಬು ನೀಡುವಂತೆ ಉಪ್ಪಿಯ ಹಿಂಸಾ ವಿನೋದ. ಇದಕ್ಕೆ ಅಬ್ಬರದ ಸಂಗೀತ, ಅವಸರದ ಡೈಲಾಗು, ಅನಿರೀಕ್ಷಿತ ತಿರುವುಗಳು ನಿಮ್ಮನ್ನು ಹಳ್ಳಕೊಳ್ಳಗಳಲ್ಲಿ ಕರೆದೊಯ್ದು ಪ್ರಪಾತದ ತುಟ್ಟತುದಿಗೆ ನಿಲ್ಲಿಸುತ್ತದೆ. ಆಮೇಲೆ ಏನಾಗಬಹುದೆನ್ನುವುದು ಊಹಾಲೋಕಕ್ಕೆ ಬಿಡಬಹುದು.

    ಹೆಣ್ಣೆಂದರೆ ಅಪನಂಬಿಕೆ. ಉಪ್ಪಿಯ ಮತ್ತು ಉಪ್ಪಿಯದಷ್ಟೇ ಆಗಿರುವ ಈ ಸಿದ್ಧಾಂತವನ್ನು ನಿಜವೆಂದು ನಿರೂಪಿಸುವ ಪರಮ ಅದ್ಭುತ ದೃಶ್ಯಗಳೂ ಇಲ್ಲಿವೆ. ಅದರಲ್ಲಿ ಉಪೇಂದ್ರ ಸಹಜತೆಯಲ್ಲಿ ಸಹಜವಾಗಿ ನಟಿಸಿದ್ದಾರೆ. ಆದರೆ ಉಪ್ಪಿ ನೆನಪಿನಲ್ಲಿ ಉಳಿಯುವುದು ಏಕಪಾತ್ರಾಭಿನಯದ ಒಂದು ದೃಶ್ಯದಲ್ಲಿ ಮಾತ್ರ. ಕೀರ್ತಿರೆಡ್ಡಿಗೆ ಯಾವ ಕೀರ್ತಿಯೂ ದಕ್ಕುವುದಿಲ್ಲ . ಇಡೀ ಚಿತ್ರವನ್ನು ಉಪೇಂದ್ರರೇ ಆವರಿಸಿಕೊಂಡಿರುವುದರಿಂದ ಅವರ ಅಭಿಮಾನಿಗಳ ಪಾಲಿಗೆ ರಸದೌತಣ. ಚಿಕ್ಕಪಾತ್ರದಲ್ಲಿ ಬರುವ ವಿ.ಮನೋಹರ್‌ ಕಾರ್ಮುಗಿಲಿನ ಕೋಲ್ಮಿಂಚು. ಹಂಸಲೇಖ ಹಾಡುಗಳಿಗೆ ಅವರ ಸಂಗೀತವೇ ವೈರಿಯಾಗಿದೆ. ಆದರೆ ಎರಡು ಹಾಡುಗಳು ಅವರೊಳಗಿನ ಕವಿಯನ್ನು ಜೀವಂತವಾಗಿಟ್ಟಿವೆ.

    ಚಿತ್ರದ ಎಲ್ಲ ಕೋರೆಗಳನ್ನು ಒರೆಸಿ ಹಾಕುವುದು ಕೃಷ್ಣಕುಮಾರ್‌ ಫೋಟೋಗ್ರಫಿ. ವಿಧನಸೌಧ ಹೀಗಿದೆಯಾ ಎಂದು ಅಚ್ಚರಿಯಾಗುವಷ್ಟು ಅವರ ಕೆಮರಾ ಕೆಲಸ ಮಾಡಿದೆ. ಇಬ್ಬರು ಉಪೇಂದ್ರ ನಿಜಕ್ಕೂ ಇಬ್ಬರೇ ಅನ್ನುವಂತೆ ಚಿತ್ರಿಸಿದ್ದು ಅವರ ಹೆಗ್ಗಳಿಕೆ. ಸಂಭಾಷಣೆ ಉಪೇಂದ್ರ ಬರೆದಿದ್ದರಿಂದ ಹೆಚ್ಚಿಗೆ ಹೇಳದಿರುವುದು ಒಳ್ಳೆಯದು.

    ಅಂದಹಾಗೆ,
    ಈ ಚಿತ್ರವನ್ನು ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶಿಸಿದ್ದಾರಂತೆ. ಅವರ ಹೆಸರು ಟೈಟಲ್‌ ಕಾರ್ಡ್‌ನಲ್ಲಿದೆ !
    (ವಿಜಯ ಕರ್ನಾಟಕ)

    Post your own Review

    ವಾರ್ತಾ ಸಂಚಯ
    ಸೂಪರ್‌ಸ್ಟಾರ್‌ ಈಕ್ವೇಷನ್‌
    ಕೀರುತಿಗಾಗಿ ಬಂದ ಕೀರ್ತಿ !
    ನೇಪಾಳ ರಕ್ತಪಾತದ ನೆರಳಿನಲ್ಲಿ ‘ಸೂಪರ್‌ಸ್ಟಾರ್‌’

    ಮುಖಪುಟ / ಸ್ಯಾಂಡಲ್‌ವುಡ್‌

    Thursday, April 25, 2024, 18:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X