»   » ಚಿತ್ರ ವಿಮರ್ಶೆ : ಪಕ್ಕದ್ಮನೆ ಹುಡುಗಿ

ಚಿತ್ರ ವಿಮರ್ಶೆ : ಪಕ್ಕದ್ಮನೆ ಹುಡುಗಿ

Subscribe to Filmibeat Kannada
  • ಎಂ.ಡಿ.
ಇದೊಂದು ರಿಮೇಕ್‌ ಚಿತ್ರವೆಂದು ಮನಸ್ಸಿನಲ್ಲಿ ಇಟ್ಟುಕೊಂಡೇ ನೋಡಬೇಕು. ಏಕೆಂದರೆ ಮೂಲ ಹಿಂದಿ ಚಿತ್ರ ‘ಪಡೋಸನ್‌’ ಈಗಾಗಲೇ ಒಂದೂಕಾಲು ಕೋಟಿ ಸಲ ಅನೇಕ ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗಿದೆ. ಅದರ ಕತೆಯಿಂದ ಹಿಡಿದು ಪ್ರತಿಯಾಂದು ಪಾತ್ರ, ಹಾಡು, ಸಂಭಾಷಣೆ ಕಣ್ಣಮುಂದೆ ಕಟ್ಟಿದಂತಿದೆ. ಹೀಗಾಗಿ ‘ಪಕ್ಕದ್ಮನೆ ಹುಡುಗಿ’ಯಿಂದ ಹೊಸದೇನನ್ನೂ ನಿರೀಕ್ಷೆ ಮಾಡಬೇಡಿ.

ಇದೆಲ್ಲವನ್ನು ಪಕ್ಕಕ್ಕಿಟ್ಟು ನೋಡಿದರೆ ಇದೊಂದು ಪಕ್ಕಾ ತಮಾಷೆ ಚಿತ್ರ. ಹಾಗಂತ ನಿರ್ದೇಶಕ ಹೇಳಿಕೊಂಡಿದ್ದಾರೆ. ಎಷ್ಟೋ ಕಡೆ ಅದಕ್ಕೆ ಆಧಾರವೂ ಸಿಕ್ಕಿದೆ. ಆದರೆ ಇಲ್ಲಿಯ ಬಹುತೇಕ ಜೋಕು ಮತ್ತು ಕೆಲವು ದೃಶ್ಯಗಳು ಈಗಾಗಲೇ ಅನೇಕ ಚಿತ್ರಗಳಲ್ಲಿ ಬಂದುಹೋಗಿವೆ. ಮುಂದೆ ಹೀಗೇ ಆಗುತ್ತದೆಂದು ಮೊದಲೇ ಗೊತ್ತಾಗುವುದರಿಂದ ಕುತೂಹಲಕ್ಕಂತೂ ನೋ ವೇಕೆನ್ಸಿ .

ಪಕ್ಕದ ಮನೆಗೆ ಬಂದ ಹುಡುಗಿಯಲ್ಲಿ ನಾಯಕ ಅನುರಕ್ತನಾಗುತ್ತಾನೆ. ಅವಳನ್ನು ಒಲಿಸಿಕೊಳ್ಳಲು ನಾನಾ ಆಟ ಆಡುತ್ತಾನೆ, ನಾಟಕ ಮಾಡುತ್ತಾನೆ. ಆಕೆಗೆ ಸಂಗೀತದ ಬಗ್ಗೆ ಆಸಕ್ತಿ ಇರುವುದು ಗೊತ್ತಾದ ನಂತರ ಆತನೂ ನಕಲಿ ಗಾಯಕನಾಗುತ್ತಾನೆ. ಪರೀಕ್ಷೆಯಲ್ಲಿ ಅವಳು ಪಾಸಾದರೆ ಮನೆ ಖಾಲಿ ಮಾಡುತ್ತಾಳೆಂದು ಹೆದರಿ ಅದಕ್ಕೆ ಅಡ್ಡಗಾಲು ಹಾಕುತ್ತಾನೆ. ಅದು ನಾಯಕಿಗೆ ಗೊತ್ತಾಗಿ ನಾಯಕನ ಕಪಾಳಕ್ಕೆ ಬಾರಿಸುತ್ತಾಳೆ. ಮುಂದೇನಾಗುತ್ತದೆ ಅನ್ನುವುದನ್ನು ಬೇಕಾದರೆ ತೆರೆ ಮೇಲೆ ನೋಡಿ.

ಆರು ವರ್ಷಗಳ ನಂತರ ಮತ್ತೆ ಬಣ್ಣ ಹಚ್ಚಿರುವ ರಾಘವೇಂದ್ರ ರಾಜ್‌ಕುಮಾರ್‌ ಸಂಯಮದಿಂದ ಮತ್ತು ವಿಶ್ವಾಸದಿಂದ ನಟಿಸಿದ್ದಾರೆ. ಅತಿರೇಕಕ್ಕೆ ಅವಕಾಶವಿದ್ದರೂ ಹಾಗಾಗದಂತೆ ನೋಡಿಕೊಂಡಿದ್ದಾರೆ. ‘ಚತುರನಾರಿ’ ಹಾಡಿನಲ್ಲಂತೂ ತುಂಬಾನೇ ಇಷ್ಟವಾಗುತ್ತಾರೆ. ಅನಂತನಾಗ್‌ ಅವರದು ಲೀಲಾಜಾಲ ಭಿನಯ. ನಾಯಕಿ ರಂಜಿತಾ ಪರವಾಗಿಲ್ಲ . ಮೋಹನ್‌ ಮಾತಾಡೋದೇ ಗೊತ್ತಾಗೊಲ್ಲ . ಮೆಹಮೂದ್‌ರನ್ನು ಅನುಕರಣೆ ಮಾಡಲು ಹೋಗಿ ಬೇರೆ ಏನನ್ನೋ ಅನುಕರಣೆ ಮಾಡಿದ್ದಾರೆ.

ತಾಡೂರು ಕೇಶವ ಬರೆದ ಎರಡು ಹಾಡುಗಳು ಮೂಲವನ್ನು ಮರೆಸುವಷ್ಟು ಚೆನ್ನಾಗಿವೆ. ಸಮಯವಿದ್ದರೆ, ದುಡ್ಡು ಹೇಗೆ ಖರ್ಚು ಮಾಡಬೇಕೆಂದು ಚಡಪಡಿಸುತ್ತಿದ್ದರೆ ನಿಮ್ಮನೆ ಹುಡುಗಿಯಾಂದಿಗೆ ಪಕ್ಕದ್ಮನೆ ಹುಡುಗಿಯನ್ನು ನೋಡಲು ಹೋಗಬಹುದು.

(ಸ್ನೇಹಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada