»   » ಚಿತ್ರವಿಮರ್ಶೆ:ಹುಟ್ಟಿದರೆ ಕನ್ನಡನಾಡಲ್ಲೇ ಹುಟ್ಟಬೇಕು

ಚಿತ್ರವಿಮರ್ಶೆ:ಹುಟ್ಟಿದರೆ ಕನ್ನಡನಾಡಲ್ಲೇ ಹುಟ್ಟಬೇಕು

Subscribe to Filmibeat Kannada

ಆತ ಕೋಮಲ್. ಓದಿದ್ದು ಗೊತ್ತಿಲ್ಲ. ಆದರೆ ಉದ್ಯೋಗ ಅಲ್ಲಿ ಇಲ್ಲಿ ಅಂಡಲೆಯುವುದು, ಮೊಬೈಲ್ ಕಂಪನಿಯಲ್ಲಿ ಕೆಲಸ ಅಂತ ಹೇಳುವುದು. ಮಲಯಾಳಿ ಹುಡುಗಿ ಓಮನ್ ಕುಟ್ಟಿಗೆ ಡೌ ಹೊಡೆಯುವುದು. ಆದರೆ ಅಪ್ಪ ರಾಮಕೃಷ್ಣಯ್ಯ ಕಟ್ಟಾ ಕನ್ನಡ ಅಭಿಮಾನಿ. ವೃತ್ತಿಯಲ್ಲಿ ಕನ್ನಡ ಪ್ರಾಧ್ಯಾಪಕ. ರಾಜರತ್ನಂನಿಂದ ಹಿಡಿದು ಸಾಶಿ ಮರುಳಯ್ಯನವರ ಕನ್ನಡ ಪದಗಳೆಂದ್ರೆ ಅವರಿಗೆ ಪಂಚಪ್ರಾಣ. ಇದ್ದ ಮೂರು ಮಕ್ಕಳು ಓದಿ ಉದ್ಧಾರ ಆಗಲಿ ಎನ್ನುವುದು ಅವನ ಸದುದ್ದೇಶ. ಆದರೆ ದೊಡ್ಡ ಮಗ ಕೋಮಲ್ ಕುಟ್ಟಿಯ ಹಿಂದೆ ಬಿದ್ದಿರುತ್ತಾನೆ. ಮಲಯಾಳಂ ಕಲೀತೀನಿ ಅಂತ ಪ್ರೇಮಿಚ್ಚು, ಮೋಹಿಚ್ಚು' ಎನ್ನಲು ಶುರುಮಾಡುತ್ತಾನೆ.

ವಿನಾಯಕರಾಮ್ ಕಲಗಾರು

ಹೆತ್ತವರು ಎಷ್ಟೇ ಗೋಗರೆದರೂ ಅದಾವುದಕ್ಕೂ ತಲೆಬಾಗದೇ ಅವ ಕುಟ್ಟಿಯನ್ನೇ ಕಟ್ಟಿಕೊಳ್ಳುತ್ತಾನೆ. ಅಷ್ಟೇ ಅಲ್ಲ, ಅವಳನ್ನು ತನ್ನ ಕನ್ನಡ ಮನೆಯಲ್ಲೇ ಇಟ್ಟುಕೊಳ್ಳುತ್ತಾನೆ. ಅಪ್ಪನಿಗೆ ತಲೆಬಿಸಿ ಆರಂಭವಾಗುತ್ತದೆ. ಇವನಿಂದ ಇನ್ನಿಬ್ಬರು ಮಕ್ಕಳೂ ಹಳ್ಳದ ಹಾಡಿ ಹಿಡಿಯುತ್ತಾರೆ ಎಂಬ ಅನುಮಾನ ಶುರುವಾಗುತ್ತದೆ. ಅದಕ್ಕಾಗಿ ಊರಿನಿಂದ ಜ್ವಾಲಾಮುಖಿ ಎಂಬ ನೆಂಟನನ್ನು ಕರೆಸುತ್ತಾನೆ. ಅಷ್ಟೊತ್ತಿಗೆ ಇನ್ನಿಬ್ಬರು ಮಕ್ಕಳ ಪರಭಾಷಾ/ದೇಶೀ ಪ್ರೇಮ ಪ್ರಸಂಗ'ಗಳೂ ಬಯಲಾಗುತ್ತವೆ....

ಇದು ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಚಿತ್ರದ ಕೆಲವು ಸ್ಯಾಂಪಲ್‌ಗಳು. ಮೇಲಿನ ಕತೆಯನ್ನು ಹಾಗೇ ಸುಮ್ಮನೇ ಓದಲು ಬಲು ಸೊಗಸು ಎನಿಸಬಹುದು. ಆದರೆ ಅದನ್ನು ಕಣ್ಣಿಗೆ ಕಟ್ಟುವ ಹಾಗೆ ಚಿತ್ರಿಸುವುದು ಕನ್ನಡ ಬಾವುಟ ಹಾರಿಸಿದಷ್ಟು ಸುಲಭವಲ್ಲ. ಅದನ್ನು ಹೀಗೆಯೇ ಹೇಳಿದರೆ ಚೆಂದ ಎಂಬುದನ್ನು ಮೊದಲು ಅರಿತುಕೊಳ್ಳಬೇಕಾಗುತ್ತದೆ. ಆದರೆ ನಿರ್ದೇಶಕ ಮಹದೇವ್ ಈ ವಿಚಾರದಲ್ಲಿ ಎಡವಿದ್ದಾರೆ. ಕತೆಯೇನೋ ಚೆನ್ನಾಗಿದೆ. ಆದರೆ ಅದಕ್ಕೆ ತಕ್ಕುದಾದ ಚಿತ್ರಕತೆ, ಸಂಭಾಷಣೆಯಾಗಲೀ ಇಲ್ಲ. ಜತೆಗೆ ಅವರ ಕಲ್ಪನೆಗೆ ಒಂದು ಸುಂದರ ರೂಪ ಕೊಡಬಲ್ಲ ಯೋಗ್ಯ ಪಾತ್ರವರ್ಗದ ಕೊರತೆ ಕಂಡುಬರುತ್ತದೆ.

ಎಕ್ಸ್‌ಕ್ಯೂಸ್‌ಮಿ ಚಿತ್ರದಿಂದ ಒಂದಿಷ್ಟು ಹೆಸರುಮಾಡಿದ ಅಜಯ್ ನಾಯಕ. ಕೆಲವರ್ಷಗಳ ನಂತರ ಮತ್ತೆ ಬಂದಿದ್ದಾರೆ. ಆದರೆ ಏನು ಮಾಡಬೇಕೆಂದು ತೋಚದೇ ತಬ್ಬಿಬ್ಬಾಗಿದ್ದಾರೆ. ಇದರಲ್ಲಿ ಅಜಯ್‌ಗಿಂತ ನಾನೇನೂ ಕಮ್ಮಿ ಇಲ್ಲ' ಎಂದು ಸಾಬೀತುಮಾಡಿದ್ದಾರೆ ಮಾಸ್ಟರ್ ಆನಂದ್. ಆತನ ಬಗ್ಗೆ ಒಟ್ಟಾರೆ ಹೇಳುವುದಾದರೆ, ಅತಿ'ಮಧುರ, ಅದೇರಾಗ... ನಾಯಕಿ ದೀಪಾಗೆ ಮಲಯಾಳಿ ಹುಡುಗಿಯ ಪಾತ್ರ. ಅತ್ಲಾಗ್ ಕನ್ನಡವೂ ಅಲ್ಲ. ಇತ್ಲಾಗ್ ಮಲಯಾಳಮ್ಮೂ ಅಲ್ಲ. ಅದೇ ರೀತಿ ಅವರ ಅಭಿನಯ ಕೂಡ. ಸುನಿತಾ ನಿರ್ದೇಶಕರು ಹೇಳಿದ್ದನ್ನು ಸರಿಯಾಗಿ ಮಾಡೋಕೆ ಹೆಣಗಾಡಿದ್ದಾರೆ. ಜಾರ್ಜ್ ಪಾತ್ರಧಾರಿ ಮೈಮೇಲೆ ಹುಳ ಬಿಟ್ಟುಕೊಂಡವನಂತೆ ಆಡಿದ್ದು ಅಭಾಸ ಎನಿಸುತ್ತದೆ.

ಹಾಗಂತ ಚಿತ್ರದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವಂತಿಲ್ಲ. ವೆಂಕಟ್ ಅವರ ಸಂಭಾಷಣೆಯಲ್ಲಿ ಕೆಲವು ಕಡೆ ಪಂಚ್ ಇದೆ. ಸಂಗೀತ ನಿರ್ದೇಶಕ ಇಂದ್ರ ಎರಡು ಒಳ್ಳೆಯ ಹಾಡುಗಳನ್ನು ಕೊಟ್ಟಿದ್ದಾರೆ. ನೀನಾಸಂ ಅಶ್ವತ್ಥ್ ಅತಿಯಾಗಿ ನುಲಿದರೂ ಇದ್ದುದರಲ್ಲಿ ಆತ ವಾಸಿ. ರಾಮಕೃಷ್ಣ, ವಿನಯಾಪ್ರಕಾಶ್ ನಾವು ಯಾರಿಗೂ ಕಮ್ಮೀ ಇಲ್ಲ ಎಂದು ಸಾಬೀತುಮಾಡಿದ್ದಾರೆ.

ಉಳಿದದ್ದು ಏನೇ ಆಗಲಿ, ಈ ಸಂದೇಶವನ್ನು ನಾನು ಹೇಳಲೇಬೇಕು ಎಂದು ನಿರ್ದೇಶಕರು ಅಖಾಡ'ಕ್ಕಿಳಿದಿದ್ದಾರೆ. ಅದನ್ನು ಹೇಳಿದ್ದಾರೆ ಕೂಡ. ಅದೇನೆಂದರೆ- ಪ್ರೀತಿಗೆ ಕಣ್ಣಿಲ್ಲ. ಈ ಪ್ರೇತ ಒಮ್ಮೆ ಅಟಕಾಯಿಸಿಕೊಂಡರೆ ಸಾಕು. ಇಡೀ ಪ್ರಪಂಚ ಅದರ ಎದುರು ಬೋಳುಬೋಳು. ಅದು ದೇಶ, ಭಾಷೆ ಎಂಬ ಚೌಕಟ್ಟನ್ನು ಮೀರಿದ್ದು. ಅದು ಅಂಕುರಗೊಂಡರೆ ಅಪ್ಪ ಅಮ್ಮ ಅರೆಪಿರ್ಕಿಗಳ ಥರ ಕಾಣುತ್ತಾರೆ. ಅವರ ನೀರೀಕ್ಷೆಗಳಿಗೆ ತಲೆದೂಗುವುದು ದೊಡ್ಡ ಅಗ್ನಿಪರೀಕ್ಷೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada