»   » ರೌಡಿಯಾಗೋದು ಹೇಗಮ್ಮಾ?

ರೌಡಿಯಾಗೋದು ಹೇಗಮ್ಮಾ?

Subscribe to Filmibeat Kannada

*ಮಹೇಶ್‌ ದೇವಶೆಟ್ಟಿ

ಆತ ಬುದ್ಧಿವಂತ. ಆದರೆ ಬಡವ. ಒಂದೇ ಅಂಗಿಯ ಮೈತುಂಬಾ 28 ತೇಪೆ ಹಾಕಿಕೊಂಡರೂ ಸ್ವಾಭಿಮಾನ ಬಿಡದಾತ. ಅಂಥವನು ಏಕಾಏಕಿ ರೌಡಿಯಾಗುತ್ತಾನೆ. ಪೆನ್ನು ಹಿಡಿಯುವ ಕೈಯಲ್ಲಿ ಮಚ್ಚು ಹಿಡಿಯುತ್ತಾನೆ. ಆದರೂ ಬಡವರಿಗೆ ಬಂಧುವಾಗುತ್ತಾನೆ. ರೌಡಿಗಳಿಗೆ ರಾಜನಾಗುತ್ತಾನೆ. ಮೋಹನದಾಸ ಬರೀ ‘ದಾಸ’ನಾಗುತ್ತಾನೆ.

ಇಂತಹ ಎಷ್ಟೋ ಕಥೆಗಳು ಕನ್ನಡದಲ್ಲಿ ಬಂದುಹೋಗಿವೆಯಲ್ಲಾ ಅಂತ ಅಂದರೆ ನಿರ್ದೇಶಕ ಪಿ.ಎನ್‌.ಸತ್ಯ, ‘ಏನ್‌ ಮಾಡೋದು ಸ್ವಾಮಿ, ಅದಕ್ಕೇ ಕೊಂಚ ಡಿಫರೆಂಟ್‌ ಆ್ಯಂಗಲ್‌ ಕೊಟ್ಟಿದ್ದೀನಿ’ ಅಂತಾರೆ. ಅವರು ಮಾತು ಸಂಭಾಷಣೆ ಮಟ್ಟಿಗೆ, ನಾಯಕನ ಮ್ಯಾನರಿಸಂ ಮಟ್ಟಿಗೆ, ಬೋರಾಗದಂತಹ ನಿರೂಪಣೆ ಮಟ್ಟಿಗೆ ನಿಜ.

ಒಂದು ಮಸಾಲೆ ಚಿತ್ರಕ್ಕೆ ಏನೇನಿದ್ದರೆ ಪ್ರೇಕ್ಷಕರು ಮುಕುರುತ್ತಾರೆ ಅನ್ನುವುದು ಅವರಿಗೆ ಗೊತ್ತು. ಅದನ್ನೆಲ್ಲಾ ಹದವಾಗಿ ಬೆರೆಸಿದ್ದಾರೆ. ಸೆಂಟಿಮೆಂಟ್‌ ದೃಶ್ಯಗಳನ್ನು ನೀಟಾಗಿ ನಿಭಾಯಿಸಿದ್ದಾರೆ. ಮೆಜೆಸ್ಟಿಕ್‌ ಚಿತ್ರದಲ್ಲಿ ಕವಿಪುಂಗವರಾಗಿದ್ದ ಸತ್ಯ ಇಲ್ಲಿ ಸಾಕಷ್ಟು ಬೆಳೆದಿದ್ದಾರೆ. ‘ಬೇಸಿಗೆಯಲ್ಲಿ ನೆಟ್ಟ ಕಲ್ಲನ್ನು ಮಳೆಗಾಲದಲ್ಲಿ ತೆಗೆಯುವುದು ಜಾಣತನ’ ಎನ್ನುವ ಮಾತು ಹೊಸದಾಗಿ ಕೇಳಿಸುತ್ತದೆ. ಕೆಲವೊಂದು ಮಾತು ಪ್ರಾಸಬದ್ಧವಾಗಿದ್ದರೂ ಖುಷಿಕೊಡುತ್ತವೆ. ಆದರೆ ರೌಡಿಯಾಬ್ಬನಿಗೆ ಅಭಿಮಾನಿ ಸಂಘ ಕಟ್ಟಿಸಿ ಅಪಹಾಸ್ಯಕ್ಕೆ ಈಡಾಗಿದ್ದಾರೆ. ಅತಿರೇಕಕ್ಕೆ ಶರಣಾಗಿದ್ದಾರೆ.

ದರ್ಶನ್‌ ತೂಗುದೀಪ್‌ಗೆ ಬರ್ತಾ ಬರ್ತಾ ಯಾವ್ಯಾವ ಪಾತ್ರವನ್ನು ಹೇಗೆ ಹೇಗೆ ನಿಭಾಯಿಸಬೇಕೆನ್ನುವುದು ಗೊತ್ತಾಗಿದೆ. ಓವರ್‌ ಆ್ಯಕ್ಟಿಂಗ್‌ ಮಾಡುವ ಅವಕಾಶವಿದ್ದರೂ ಅದಕ್ಕೆ ಮೊರೆಹೋಗಿಲ್ಲ. ಸಂಯಮದಿಂದ ಒಂದು ಕಡೆ ರೌಡಿ, ಇನ್ನೊಂದು ಕಡೆ ಪ್ರೀತಿಯ ಮಗ ಎರಡನ್ನೂ ತೂಕಬದ್ಧವಾಗಿ ನಿಭಾಯಿಸಿದ್ದಾರೆ. ಚಿಕ್ಕ ಪಾತ್ರದಲ್ಲಿ ಕಾಣಿಸುವ ಸತ್ಯ ಕೂಡ ಗಮನ ಸೆಳೆಯುತ್ತಾರೆ. ಅವಿನಾಶ್‌, ಚಿತ್ರಾಶೆಣೈ, ಸೈಯಿದ್‌ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಒಂದೆರಡು ಹಾಡು ಪರವಾಗಿಲ್ಲ. ಉಳಿದದ್ದರ ಬಗ್ಗೆ ಹೇಳುವುದೇನೂ ಇಲ್ಲ. ಓಹೋ ಅನ್ನುವುಂತಿಲ್ಲ, ಅಯ್ಯೋ ಎಂದು ತೆಗೆದು ಹಾಕುವಂತೆಯೂ ಇಲ್ಲ. ಇವೆರಡರ ನಡುವೆ ದಾಸ ಮಚ್ಚು ಹಿಡಿದು ನಿಂತಿದ್ದಾನೆ. ಮೆಚ್ಚುವುದು, ಕಚ್ಚುವುದು ನಿಮಗೆ ಬಿಟ್ಟಿದ್ದು.

(ಸ್ನೇಹಸೇತು- ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada