ಜರಾಸಂಧ: ವಿನಾಯಕರಾಮ್ ಕಲಗಾರು ಚಿತ್ರ ವಿಮರ್ಶೆ
ದುನಿಯಾ ವಿಜಯ್ ಎಂಬ ಕಲರ್ ಚಿರತೆ ಇಟ್ಟುಕೊಂಡು ಏನೆಲ್ಲಾ ಮಾಡಬಹುದು ಎನ್ನುವುದಕ್ಕೆ ಸಿಗುವ ಉದಾಹರಣೆಗಳಲ್ಲಿ ಹೆಚ್ಚಿನವು ಹೊಡೆದಾಡು-ಬಡಿದಾಡು ಮತ್ತು ಕಿತ್ತಾಡು-ಕೂಗಾಡುಗಳೇ ಹೆಚ್ಚು. ನಿರ್ದೇಶಕ ಶಶಾಂಕ್ ಅದೇ ಸೂತ್ರವನ್ನು ತಿರಗಾ ಮುರಗಾ ಮಾಡಿ ಪ್ರೇಕ್ಷಕರ ಕಿವಿ ಮೇಲೆ ಜರಾಸಂಧ ಎಂಬ ಹೂ ಇಟ್ಟಿದ್ದಾರೆ!
ಇಡೀ ಸಿನಿಮಾ ಹೊಡೆದಾಟದ ಅಲೆ ಎಬ್ಬಿಸುತ್ತಾ ಹೋಗುತ್ತದೆ. ಆದರೆ ಎಲ್ಲಿಯೂ ಅದನ್ನು ನಿಗ್ರಹಿಸಿ, ಚಿತ್ರಕಥೆಯ ವೇಗ ಕಾಪಾಡುವಲ್ಲಿ ಸಿನಿಮಾ ಮುಗ್ಗರಿಸಿದೆ. ಇನ್ನೇನೋ ಸ್ಪೆಷಲ್ ಇರಬಹುದು ಎಂದುಕೊಂಡು ಕಿವಿ ಕೆರೆದುಕೊಂಡು ಕೂತ ಪ್ರೇಕ್ಷಕನಿಗೆ ಶಶಾಂಕ್ ಅಗೆದು ಬಿಸಾಕಿದ ಕಬ್ಬಿನ ಜಲ್ಲೆಯನ್ನು ಬಿಲ್ಲೆಯ ರೂಪದಲ್ಲಿ ಕೊಡುತ್ತಾರೆ!
ವಿಜಯ್ ಇರುವುದೇ ಹಾಗೆ. ಮಾತೆತ್ತಿದರೆ ಮೈಕಲ್ ಜಾಕ್ಸನ್ ಅವತಾರ. ಎದುರಾಳಿಗಳನ್ನು ಹೊಡೆಯಲೇ ಹುಟ್ಟಿರುವ ಹೀರೋ ಪೀಸು ಎನ್ನುವ ಮಟ್ಟಕ್ಕೆ ಜಿಗಿದಾಡುತ್ತಾರೆ. ಎಗರಾಡುತ್ತಾರೆ. ಅದನ್ನು ಕಂಠೀರವ, ಕರಿಚಿರತೆ, ವೀರಬಾಹು ಇಂದ ಹಿಡಿದು ಸೂರಿಯ ದುನಿಯಾ ಚಿತ್ರದಲ್ಲೂ ನೋಡಿ ನೋಡಿ ಪ್ರೇಕ್ಷೇಕ ಎಲ್ಲೋ ಒಂದು ಕಡೆ ತನ್ನ ತಾಕತ್ ಕಳೆದುಕೊಂಡಿದ್ದಾನೆ ಎನ್ನುವುದು ಮೊದಲ ಶೋ ನೋಡಿ ಹೊರಬಂದವರ ಒಳಮಾತು!
ರಂಗಾಯಣ ರಘು ಅರಚಾಟ ಫುಲ್‌ಸ್ಟಾಪ್ ಹಾಕದಿದ್ದರೆ ಮುಂಬರುವ ದಿನಗಳಲ್ಲಿ ನಾಲ್ಕು ಗೋಡೆ ಮಧ್ಯೆ ನಿಂತು ಕಿರುಚಾಡುವ ಪರಿಸ್ಥಿತಿ ಬಂದರೆ ಅದಕ್ಕೆ ಅಖಿಲಾಂಡ ಕೋಟಿ ಕನ್ನಡಿಗರು ಜವಾಬ್ದಾರರಾಗುವುದಿಲ್ಲ. ನಾಯಿ ಚಂದ್ರು ಕಾಮಿಡಿಯಲ್ಲಿ ಹೆಚ್ಚು ಚಮಕ್ ಇಲ್ಲ. ಹಿರಿಯ ಮತ್ತು ಹಳೇ ನಟಿ ರೂಪಾದೇವಿ ಸ್ವಂತ ಸ್ವರದಲ್ಲೇ ಡಬ್ಬಿಂಗ್ ಮಾಡಿರುವುದು ಹೆಮ್ಮೆಯ ವಿಚಾರ. ನಾಯಕಿ ಪ್ರಣಿತಾ ನಡೆದಾಡುವ ಬೊಂಬೆ. ಕುಣಿದಾಡುವಾಗ ಪಡ್ಡೆ ಹುಡುಗರ ಕಾದ ಕಣ್ಣಿಗೆ ಚೊಂಬೇ!


Click it and Unblock the Notifications











