ಲೋ ಕ್ಲಾಸ್ ಹುಡುಗರಿಗೆ ಹೇಳಿ ಮಾಡಿಸಿದ ಸಿನಿಮಾ
ಅದ್ಧೂರಿತನದ ಹೆಸರಲ್ಲಿ ಶಶಾಂಕ್ ಒಂದಷ್ಟು ಕಾರು-ಜೀಪು-ಬೈಕುಗಳನ್ನು ಆಕಾಶದೆತ್ತರಕ್ಕೆ ಹಾರಿಸುತ್ತಾರೆ. ಚೇಸಿಂಗ್, ಫೈಟಿಂಗ್, ಜಂಪಿಂಗ್ ಎಲ್ಲದರಲ್ಲೂ ಚಿತ್ರ ಎ ಕ್ಲಾಸ್! ಆಕ್ಷನ್ ವಿಚಾರದಲ್ಲಿ ಇಡೀ ಸಿನಿಮಾ ಲೋ ಕ್ಲಾಸ್ ಹುಡುಗರಿಗೆ ಹೇಳಿ ಮಾಡಿಸಿದಂತೆ. ಅಲ್ಲಲ್ಲಿ ಬಂದು ಅನಗತ್ಯವಾಗಿ ತೂರಿಕೊಂಡು, ತಲೆ ಕೆರೆಯುವಂತೆ ಮಾಡುವ ಹಾಡುಗಳು ಮಾಡಿ ಹೇಳಿಸಿದಂತಿದೆ!
ಅರ್ಜುನ್ ಜನ್ಯಾ ಹಾಡುಗಳಲ್ಲಿ ಎರಡು ಹಾಡುಗಳು ಸರ್ವೇ ಸಾಮಾನ್ಯ. ಇನ್ನೆರಡು ಸಾಧಾರಣ ಮಾನ್ಯ. ಯೋಗರಾಜ್ ಭಟ್ ಭಟ್ಟರ ಸಾಹಿತ್ಯದಲ್ಲಿ ಹುಬ್ಬಳ್ಳಿ ಭಾಷೆಯ ಸೊಗಡು ಸಂಭ್ರಮಿಸುತ್ತದೆ. ಅನಗತ್ಯ ಎನಿಸುವ ಒಂದು ಹಾಡಿಗೆ ಕತ್ತರಿಸಿ ಬಿಸಾಡೋಣ ಎಂದರೆ ಒಂದೊಂದು ಹಾಡಿಗೂ ಐವತ್ತು-ನಲವತ್ತು-ಮೂವತ್ತು ಲಕ್ಷ ಸುರಿಯಲಾಗಿದೆ. ನಿರ್ಮಾಪಕರ ಕಿಸೆಗೆ ಇನ್‌ಶ್ಯೂರೆನ್ಸ್ ಮಾಡಲಾಗಿದೆ!
ಇಡೀ ಚಿತ್ರದಲ್ಲಿ ಹೋಗಹೋಗುತ್ತಾ ನಾಯಕನಿಗೆ ನೆಗೆಟಿಶ್ ಶೇಡ್ ಕೊಡಲಾಗುತ್ತದೆ. ಜನಕ್ಕೆ ಅದನ್ನು ಅರಗಿಸಿಕೊಳ್ಳುವುದು ಕಷ್ಟವಾಗುತ್ತದೆ. ತೆಲುಗು-ತಮಿಳಿನ ರೇಂಜಿಗೆ ಸಿನಿಮಾ ಮೂಡಿಬಂದಿದ್ದರೂ ನಮ್ಮವರ ಮನೋಭಾವಕ್ಕೂ ಅಲ್ಲಿನ ಪ್ರೇಕ್ಷಕರ ನಾಡಿಮಿಡಿತಕ್ಕೂ ಅಜಗಜಾಂತರ ವ್ಯತ್ಯಾಸ. ನಮ್ಮವರು ನಾಯಕನನ್ನು ಕೊನೇ ಹಂತದಲ್ಲಾದರೂ ನೀಟಾಗಿ ನೋಡಲು ಇಚ್ಛಿಸುತ್ತಾರೆ. ಅದನ್ನು ಬಿಟ್ಟು ಜರಾಸಂಧ ಈಗ ದುಬೈನಲ್ಲಿ ದೊಡ್ಡ ಡಾನ್ ಆಗಿದ್ದಾನೆ. ಅಂಡರ್‌ವರ್ಲ್ಡ್ ಜಗತ್ತನ್ನು ಕಿರುಬೆರಳಿನಲ್ಲಿ ಆಡಿಸುತ್ತಿದ್ದಾನೆ ಎಂಬ ಸಂದೇಶವನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದರ ಮೇಲೆ ಜರಾಸಂಧನ ಜಾತಕ ನಿಂತಿದೆ!
ಶಶಾಂಕ್‌ಜೀ... ನಿಮ್ಮ ಮೇಲೆ ಇರುವ ಅಪಾರ ಅಭಿಮಾನ ಮತ್ತು ನಿಮ್ಮ ಮೇಕಿಂಗ್ ಆಫ್ ಸಿನಿಮಾ ಮೇಲೆ ನಂಬಿಕೆ ಇರುವ ಕಾರಣಕ್ಕೆ ಹೇಳುತ್ತಿದ್ದೇವೆ; ಮುಂದಿನ ಸಿನಿಮಾದಲ್ಲಿ ಇಂಥ ಕಮರ್ಷಿಯಲ್ ಪ್ರಯೋಗ ಮಾಡಲು ಹೋಗಬೇಡಿ. ಇದರ ಬದಲು ಇನ್ನೊಂದು ಸಾಫ್ಟ್ ಆಗಿರುವ ಕೃಷ್ಣನ್ ಲವ್ ಸ್ಟೋರಿಯ ಮಾದರಿಯ ಮೂವಿ ಮಾಡಿ...ಇದು ಒಬ್ಬ ಆರ್ಡಿನರಿ ಪ್ರೇಕ್ಷಕನ ಆಕಾಂಕ್ಷೆಯೂ ಹೌದು!


Click it and Unblock the Notifications











