ವಿಮರ್ಶೆ: 'ಬನ್ನಿ' ಚಿತ್ರವನ್ನು ನೀವೊಮ್ಮೆ ನೋಡಬೇಕು
ಅದೇ ಕಾಲೇಜು, ಅದೇ ರೌಡಿಸಂ,ಅದೇ ಸೆಂಟಿಮೆಂಟ್, ಅದೇ ಲವ್ವು...ಇಂಥವನ್ನು ಮರೆಯಬೇಕೆಂದಿದ್ದರೆ 'ಬನ್ನಿ' ಚಿತ್ರವನ್ನು ನೀವೊಮ್ಮೆ ನೋಡಬೇಕು. ಯಾಕೆಂದರೆ ಇದು ದೇಸಿ ಸೊಗಡಿನ ಘಮಲನ್ನು ನೀಡುತ್ತದೆ. ನಿರ್ದೇಶಕ ಗೊಡಚಿ ಮಹಾರುದ್ರ ಗೆದ್ದಿರುವುದೇ ದೇಸಿ ಕಲೆಯನ್ನು ಕಮರ್ಶಿಯಲ್ ಮತ್ತು ಕಲಾತ್ಮಕ ಅಂಶಗಳನ್ನು ಒಂದೇ ತಕ್ಕಡಿಯಲ್ಲಿ ತೂಗಿರುವುದರಿಂದ...
ಉತ್ತರ ಕರ್ನಾಟಕದ ಸಾಂಪ್ರದಾಯಿಕ ಬನ್ನಿ ಹಬ್ಬ ಮತ್ತಿತರ ಗ್ರಾಮೀಣ ಆಟ, ಹಬ್ಬ, ತಿಂಡಿ ತಿನಿಸುಗಳನ್ನು ಮತ್ತೊಮ್ಮೆ ನೆನಪು ಮಾಡಿ ಕೊಡುವುದ ರಿಂದ...ಇದನ್ನೆಲ್ಲ ಬದಿಗಿಟ್ಟು ಚಿತ್ರವನ್ನು ಯಾಕೆ ನೋಡಬೇಕು ಎಂದು ಕೇಳಿದರೆ ಎರಡು ಕಾರಣಗಳಿವೆ. ಒಂದು ನೀನಾಸಂ ಅಶ್ವತ್ಥ್ ಮತ್ತೊಂದು ನಿನಾಸಂ ಅಶ್ವತ್ಥ...
ಹೌದು, ಅಕುಲ್ ಬಾಲಾಜಿ ನಾಯಕನಾದರೂ ಅಶ್ವತ್ಥ್ ನೆನಪಿನಲ್ಲಿ ಉಳಿಯುತ್ತಾರೆ. ಅಪ್ಪನನ್ನು ಹಗೇವಿನಲ್ಲಿ ಹಾಕಿ ಗೊತ್ತಿಲ್ಲದೆ ಮುಚ್ಚಿ ಹಾಕಿದ್ದು ತಿಳಿದಾಗ ಆ ಹುಡುಗ ಎದೆಬಡಿದುಕೊಂಡು ಓಡಿ ಬರುವ ಒಂದೇ ಒಂದು ದೃಶ್ಯ ಸಾಕು ಆತನಲ್ಲಿ ಎಂಥ ಬೆಂಕಿ ಇದೆ ಎಂದು ಗೊತ್ತಾಗುತ್ತದೆ.ಪೋಷಕ ನಟ ರಾಜ್ಯ ಪ್ರಶಸ್ತಿಗೆ ಈ ಮೂಲಕ ಅನಧಿಕೃತವಾಗಿ ಅರ್ಜಿ ಹಾಕಿದ್ದಾರೆ.
ಅಕುಲ್ ಲವರ್ ಬಾಯ್ ಆಗಿ ಎಂಟ್ರಿ ಕೊಟ್ಟು, ಕತೆಯ ಒಂದು ಭಾಗವಾಗುತ್ತಾರೆ. ನಟನೆಯಲ್ಲಿ ಗೆಲ್ಲುತ್ತಾರೆ. ನಾಯಕಿ ಸೌಮ್ಯ ಅಪ್ಪಟ ಹಳ್ಳಿ ಹುಡುಗಿಯಾಗಿ ಗಮನ ಸೆಳೆಯುತ್ತಾಳೆ. ಮೈ ಚಳಿಬಿಡುವುದನ್ನು ಕಲಿಯಬೇಕು. ಮಾಸ್ಟರ್ ಆನಂದ್ ಕಾರಣ ಇಲ್ಲದೆ ನಗಿಸಿ ಗೆದ್ದಿದ್ದಾರೆ. ಅಲ್ಲಲ್ಲಿ ಕತ್ತರಿ ಆಡಿಸಿದ್ದರೆ ಕತೆಗೆ ಇನ್ನಷ್ಟು ವೇಗ ದಕ್ಕುತ್ತಿತ್ತು...ಮುಂದಿನ ಚಿತ್ರದಲ್ಲಿ ಅದಾಗಲಿ...(ಸ್ನೇಹಸೇತು: ವಿಜಯ ಕರ್ನಾಟಕ)


Click it and Unblock the Notifications











