ಕಾಸಿಗೆ ತಕ್ಕ ಕಜ್ಜಾಯ; ನಿರೀಕ್ಷೆಗೆ ತಕ್ಕ ನಿಧಿಯಲ್ಲ 'ಜರಾಸಂಧ'

By * ಶ್ರೀರಾಮ್ ಭಟ್

ಶಶಾಂಕ್ ಸಿನಿಮಾ ಅಂದರೆ ನಿರೀಕ್ಷೆ ಸಹಜ. ಅದರಲ್ಲೂ ದುನಿಯಾ ವಿಜಯ್ ನಾಯಕರಾಗಿರುವಾಗ ಡಬಲ್ ನಿರೀಕ್ಷೆ ಇರಲೇಬೇಕು. ಇದೀಗ ಬಿಡುಗಡೆಯಾಗಿ ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿರುವ 'ಜರಾಸಂಧ' ಚಿತ್ರ ಈ ಇಬ್ಬರ ಕಾಂಬಿನೇಶನ್. ಸಿಕ್ಸರ್, ಮೊಗ್ಗಿನ ಮನಸ್ಸು ಹಾಗೂ ಕೃಷ್ಣನ ಲವ್ ಸ್ಟೋರಿ, ಹೀಗೆ ಮೊದಲು ಮಾಡಿದ ಸಿನಿಮಾಗಳಿಗಿಂತ ಭಿನ್ನವಾದ 'ಆಕ್ಷನ್' ಸಿನಿಮಾ ನೀಡಿದ್ದಾರೆ, ನಿರ್ದೇಶಕ ಶಶಾಂಕ್.

'ಲವ್' ಕಥಾವಸ್ತು ಹೊಂದಿದ್ದ ಚಿತ್ರಕಥೆಯನ್ನು ನವಿರಾಗಿ ನಿರೂಪಿಸಿ ಗೆದ್ದಿದ್ದ ಶಶಾಂಕ್, ಇಲ್ಲಿ ಮಾಸ್ ಪ್ರೇಕ್ಷಕರನ್ನು ಮೆಚ್ಚಿಸಬೇಕಾದ ಸವಾಲಿಗೆ ಸಿಲುಕಿದ್ದರು. ಅದರಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ. ಕಥೆಯ ಆಯ್ಕೆಯಲ್ಲಿ ಯಾವ ಲಾಜಿಕ್ಕನ್ನೂ ಇಟ್ಟುಕೊಳ್ಳದೇ ಕೇವಲ ದುನಿಯಾ ವಿಜಯ್ ರಂತಹ ಮಾಸ್ ಹೀರೋಗಳನ್ನೇ ಮನಸ್ಸಿನಲ್ಲಿಟ್ಟು ಕಥೆ, ಚಿತ್ರಕಥೆ ಹೆಣೆದದ್ದು ಸ್ಪಷ್ಟವಾಗಿ ಗೋಚರಿಸುತ್ತದೆ.

ತಂದೆ ಸಾಯುವ ಸಮಯಕ್ಕೆ ಸರಿಯಾಗಿ ಹುಟ್ಟಿದ ಮಗ, ತಂದೆಯ ಕೊಲೆಗಾರ ಎಂಬ ಹಳೆಯ ನಂಬಿಕೆಯನ್ನು ಈ ಕಥೆಯೂ ಮುಂದುವರಿಸಿದೆ. ತಾಯಿಯ ಆರೈಕೆಯಲ್ಲಿ ಬೆಳೆಯುವ ಹುಡುಗ ಹಿಂಸೆಯ ಪ್ರತಿರೂಪವಾಗಿ ಬೆಳೆಯುತ್ತಾನೆ. ಆದರೆ ತಾಯಿಯ ಮೇಲಿನ ಪ್ರೀತಿಯಿಂದ ಸಮಾಜದಲ್ಲಿ ಮುಖವಾಡ ತೊಟ್ಟು ಬದುಕು ನಡೆಸುತ್ತಿರುತ್ತಾನೆ. ನಾಯಕನ ಒಂದು ಮುಖ 'ಡಾನ್' ಹಾಗೂ ಮತ್ತೊಂದು ಮುಖ 'ತಾಯಿಗೆ ತಕ್ಕ ಮಗ'.

ಕಥೆಯ ಮುಖ್ಯ ಎಳೆಯಾಗಿರುವ 'ಕ್ರಿಮಿನಲ್ ಗಳು ಹುಟ್ಟಿನಿಂದಲೇ ಕ್ರಿಮಿನಲ್ ಗಳಾಗಿರುತ್ತಾರೆ ಹೊರತೂ ಪರಿಸ್ಥಿತಿಯಿಂದ ಅಥವಾ ಸಮಾಜದಿಂದ ಅಲ್ಲ' ಎಂಬ ತತ್ವ ಪ್ರತಿಪಾದನೆಗೆ ನಾಯಕನನ್ನು ಹುಟ್ಟಾ ಕೊಲೆಗಾರನಾಗಿ ಚಿತ್ರಿಸಲಾಗಿದೆ. ಅಂದರೆ ತಂದೆಯಿಲ್ಲದ, ತಾಯಿಯ ಆರೈಕೆಯಲ್ಲಿ ಬೆಳೆಯುವ ಮಕ್ಕಳೆಲ್ಲಾ ಹುಟ್ಟಾ ಕೊಲೆಗಾರರಾಗುತ್ತಾರೆಯೇ? ಎಂಬ ಪ್ರಶ್ನೆಗೆ ನಿರ್ದೆಶಕರೇ ಉತ್ತರಿಸಬೇಕು.

ತಾಯಿಯ ಜೊತೆ, ಪ್ರೇಯಸಿಯ ಜೊತೆ ನಾಟಕ ಆಡುತ್ತಿರುವ ಮುಖವಾಡ ಹೊತ್ತ ನಾಯಕನ ನಿಜವಾದ ಮುಖವನ್ನು ತೋರಿಸಲು ನಿರ್ದೇಶಕರು ಇಡೀ ಸಿನಿಮಾದ ಅರ್ಧ ಭಾಗವನ್ನೇ ಮೀಸಲಾಗಿಟ್ಟಿರುವುದು ಚಿತ್ರದ ಮೈನಸ್ ಪಾಯಿಂಟ್. ಚಿತ್ರದ ಮೊದಲಾರ್ಧವನ್ನು ಬಬ್ಬಲ್ ಗಮ್ ನಂತೆ ಎಳೆದು ಬೋರ್ ಹುಟ್ಟಿಸಿರುವ ನಿರ್ದೇಶಕರು ಉಳಿದ ಅರ್ಧದಲ್ಲಿ ಸಿನಿಮಾಕ್ಕೆ ನ್ಯಾಯ ಸಲ್ಲಿಸಲು ಹೋರಾಡಿದ್ದಾರೆ.

ಒಟ್ಟಿನಲ್ಲಿ ಹುಟ್ಟುವಾಗಲೇ ತಂದೆಯನ್ನು ಬಲಿ ತೆಗೆದುಕೊಂಡ ಬಾಲಕ ಆಮೇಲೆ ಅಂಡರ್ ವರ್ಲ್ಡ್ ಪ್ರವೇಶಿಸಿ ಮುಂದೆ ಹೇಗೆ ಬೆಂಗಳೂರಿನ ಡಾನ್ ಆಗಿ ಮೆರೆಯುತ್ತಾನೆ ಎಂಬುದು ಚಿತ್ರದ ಕಥೆ. ಸಿನಿಮಾ ಕೊನೆಯಲ್ಲಿ "to be continued..." ಎನ್ನುವ ಮೂಲಕ ನಿರ್ದೇಶಕರು ಮುಂದಿನ ಸಿನಿಮಾ ಮಾಡುವ ಪ್ರತಿಜ್ಞೆ ಮಾಡಿದ್ದಾರೆ. ಈ ಸಿನಿಮಾಕ್ಕೆ ಸ್ಪಷ್ಟ ಅಂತ್ಯ ಕೊಟ್ಟರೂ 'ಮುಂದುವರಿಯಲಿದೆ...' ಎನ್ನುವ ಮೂಲಕ ಸಸ್ಪೆನ್ಸ್ ಕ್ರಿಯೇಟ್ ಮಾಡಿದ್ದಾರೆ. ಜೊತೆಗೆ ಪ್ರೇಕ್ಷಕರು ಸಿನಿಮಾ ಮುಗಿದ ಮೇಲೂ ಜರಾಸಂಧನ ಗುಂಗಿನಿಂದ ಹೊರಬರದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಚಿತ್ರದ ಪೂರ್ತಿ ಕಥೆಯನ್ನು ಇಲ್ಲಿಯೇ ಹೇಳಿಬಿಟ್ಟರೆ ಹೋಗಿ ನೋಡುವುದೇನು? ಹಾಗಾಗಿ ಮುಂದಿನದನ್ನು ತೆರೆಯ ಮೇಲೆ ನೋಡಿ ಆನಂದಿಸಿ. ಆದರೆ ನಿರ್ದೇಶಕರ ಕೆಲವೊಂದು ಲಾಜಿಕ್ಕು ಸಿನಿಮಾಕ್ಕೆ ಕಪ್ಪು ಚುಕ್ಕಿ. 'ಯೂಟ್ಯೂಬ್' ನಂತಹ ಆಧುನಿಕ ತಂತ್ರಜ್ಞಾನ ಕೇವಲ ಡಾನ್ ಗಳಿಗೆ ಮೀಸಲಾಗಿದೆ; ಪೊಲೀಸ್ ಗೆ ಅದರ ವಾಸನೆಯೂ ಇಲ್ಲ ಅಂದರೆ ನಂಬುವುದೇ ಕಷ್ಟ. ಕಥೆಯ ಮಧ್ಯೆ ಅಲ್ಲಲ್ಲಿ ಇಂತಹ ದೋಷಗಳು ಕಂಡುಬಂದರೂ ಅದಕ್ಕಿಂತ ಬಿಗಿಯಾದ ನಿರೂಪಣೆ ಸಿನಿಮಾವನ್ನು ಕೊನೆಯವರೆಗೂ ನೋಡಿಸಿಕೊಂಡು ಹೋಗುವಲ್ಲಿ ಸಫಲವಾಗಿದೆ.

ನಾಯಕನನ್ನೇ ಮನಸ್ಸಿನಲ್ಲಿಟ್ಟು ನಿರ್ದೇಶಕರು ಮಾಡಿದ ಪಾತ್ರಕ್ಕೆ, ನಾಯಕರಾಗಿರುವ ದುನಿಯಾ ವಿಜಯ್ 'ಸಿಕ್ಸ್ ಪ್ಯಾಕ್ ಬಾಡಿ' ಚಿತ್ರಕ್ಕೊಂದು ಬೋನಸ್. ಜೊತೆಗೆ 'ಅವರದೇ ಆದ ಶೈಲಿಯ ನಟನೆ' ಅವರ ಅಭಿಮಾನಿಗಳಿಗೆ ವಿಜಯೋತ್ಸವ. ಆಕ್ಷನ್ ನಲ್ಲಿ 'ಡಬಲ್ ರಿಯಾಕ್ಷನ್' ನೀಡುವ ವಿಜಿ, ಸೆಂಟಿಮೆಂಟ್ ನಲ್ಲಿ ಸ್ವಲ್ಪ ಡಲ್ಲು. ನಾಯಕಿ ಪ್ರಣೀತಾ ಕಣ್ಣಿನಲ್ಲಿದೆ ಕಾಮನಬಿಲ್ಲು. ನೋಡಲು ಪಾರಿಜಾತ, ನಕ್ಕರೆ, ನಡೆದಾಡಿದರೆ ಪಾದರಸ. ನಟನೆಯೂ ಚೆನ್ನ. ಒಂದು ಹಾಡಿನಲ್ಲಿ ಬಂದು ಹೋಗುವ ನಟಿ ರಮಣಿತೂ ಚೌಧರಿ ಲುಕ್ 'ಕಿಕ್' ಗೆ ಸಮ.

ತಾಯಿಯ ಪಾತ್ರಧಾರಿ ರೂಪಾದೇವಿಗೆ ಸಾಕಷ್ಟು ವಯಸ್ಸಾಗಿದ್ದರೂ ಅವರ 'ರೂಪ' ಹಾಗೂ ಅಭಿನಯ ಮನಸ್ಸಿಗೆ ತಟ್ಟುವಂತಿದೆ. ದೇವರಾಜ್ ಪೊಲೀಸ್ ಪಾತ್ರದಲ್ಲಿ ಅದೇ ಗತ್ತು, ಗಮ್ಮತ್ತು. ಉಳಿದ ಪೋಷಕ ನಟರೆಲ್ಲರದೂ ಪಾತ್ರಕ್ಕೆ ಸರಿಯಾದ ಪೋಷಣೆ. ಡಾನ್ ಪಾತ್ರಧಾರಿ ರಂಗಾಯಣ ರಘು ಅಭಿನಯ ಅವರ ಮೂಮೂಲಿ 'ಓವರ್ ಆಕ್ಟಿಂಗ್' ನ ಮುಂದುವರಿದ ಭಾಗ.

ಚಿತ್ರಕ್ಕೆ ತಾಂತ್ರಿಕ ವರ್ಗದವರೆಲ್ಲರ ಸಹಕಾರ ಚೆನ್ನಾಗಿದೆ. ಅರ್ಜುನ್ ಜನ್ಯ ಹಾಡುಗಳು ಚೆನ್ನಾಗಿವೆ. ಹಿನ್ನಲೆ ಸಂಗೀತ ಹಾದಿ ತಪ್ಪಿಲ್ಲ. ಯೋಗರಾಜ್ ಭಟ್ ಹಾಗೂ ಶಶಾಂಕ್ ಸಾಹಿತ್ಯವೂ ಹಿತವಾಗಿದೆ. ಹರ್ಷ ಕೊರಿಯೋಗ್ರಫಿ, ಶೇಖರ್ ಚಂದ್ರ ಛಾಯಾಗ್ರಹಣವೂ ಸೂಪರ್. ಚಿತ್ರದಲ್ಲಿನ ಸಾಹಸ ದೃಶ್ಯಗಳು ಶಖತ್ತಾಗಿದೆ.

ಮೊದಲ ಬಾರಿಗೆ ಆಕ್ಷನ್ ಸಬ್ಜೆಕ್ಟ್ ಸಿನಿಮಾ ಮಾಡಿರುವ ಶಶಾಂಕ್, ಕಥೆ ಹಾಗೂ ಚಿತ್ರಕಥೆಗೆ ಇನ್ನೂ ಕೆಲಸ ಮಾಡಬೇಕಿತ್ತು. ಆದರೂ ಒಳ್ಳೆಯ ಸಿನಿಮಾ ಕೊಡಲು ಪ್ರಯತ್ನಿಸಿದ್ದಾರೆ. ಅದರಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ. ಕಾಸಿಗೆ ತಕ್ಕ ಕಜ್ಜಾಯ, ಆದರೆ 'ನಿರೀಕ್ಷೆಗೆ ತಕ್ಕ ನಿಧಿಯಲ್ಲ' ಈ ಜರಾಸಂಧ. (ಒನ್ ಇಂಡಿಯಾ ಕನ್ನಡ)

ಚಿತ್ರ: ಜರಾಸಂಧ
ನಿರ್ದೇಶನ: ಶಶಾಂಕ್
ತಾರಾಗಣ: ದುನಿಯಾ ವಿಜಯ್, ಪ್ರಣೀತಾ, ದೇವರಾಜ್, ರಂಗಾಯಣ ರಘು, ರೂಪಾದೇವಿ, ಚೇತನ್ (ಪಿಯುಸಿ), ರವಿಚೇತನ್, ಜೈಕುಮಾರ್, ಶರತ್, ರಿತೇಶ್, ಸಂಪತ್ ಮುಂತಾದವರು.
ಸಂಗೀತ: ಅರ್ಜುನ್ ಜನ್ಯ
ಸಾಹಿತ್ಯ: ಯೋಗರಾಜ್ ಭಟ್, ಶಶಾಂಕ್
ಛಾಯಾಗ್ರಹಣ: ಶೇಖರ್ ಚಂದ್ರ
ಸಂಕಲನ:
ಶ್ರೀ ಕ್ರೇಜಿಮೈಂಡ್ಸ್
ನೃತ್ಯ ನಿರ್ದೇಶನ: ಎ ಹರ್ಷ
ಸಾಹಸ: ಕೆ ರವಿವರ್ಮ, ಕೆ ಡಿ ವೆಂಕಟೇಶ್

More from Filmibeat

English summary
Kannada Movie Jarasandha movie review. Shashank directed this movie taking first time action subject. Duniya Vijay and Praneeta pair for this.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X