ಅಣ್ಣನ ಪ್ರೀತಿಯ ‘ವರ್ಷ’ಧಾರೆ

By Staff
  • ಮಹಾಂತೇಶ ಬಹಾದುಲೆ
‘ಪ್ರತಿಯಾಬ್ಬ ಅಣ್ಣನೂ ತನ್ನ ತಂಗಿಯರನ್ನು ರಕ್ಷಿಸುವ ಹೊಣೆ ಹೊತ್ತಿರುತ್ತಾನೆ. ಅದನ್ನು ಆತ ತನಗೆ ತೋಚಿದ ರೀತಿಯಲ್ಲಿ ನಿಭಾಯಿಸುತ್ತಾನೆ. ಅದು ತನ್ನ ಕರ್ತವ್ಯ ಅಂತಲೂ ಭಾವಿಸಿರುತ್ತಾನೆ. ಇದು ಹೀಗೇಕೆ ಅಂತ ಕೇಳಿದರೆ, ಇದು ಈ ಮಣ್ಣಿನ ಗುಣ, ಇದನ್ನು ನಮ್ಮ ಸಂಸ್ಕೃತಿ ಕಲಿಸಿಕೊಟ್ಟದ್ದು. ನಾನು ಕೂಡ ನನಗೆ ತೋಚಿದ ರೀತಿಯಲ್ಲಿ ನನ್ನ ತಂಗಿಯರ ರಕ್ಷಣೆ ಮಾಡಿದ್ದೇನೆ, ನನ್ನ ಕರ್ತವ್ಯ ನಿಭಾಯಿಸಿದ ತೃಪ್ತಿ ಇದೆ’ ಎಂದು ಹೇಳುತ್ತ ಆತ ಮನೆಬಿಟ್ಟು ಹೊರಡಲು ಅನುವಾಗುತ್ತಾನೆ.

ಆದರೂ ಆತನಿಗೆ ತನ್ನ ತಂಗಿಯರನ್ನು ಬಿಟ್ಟು ಹೋಗಲು ಸಾಧ್ಯವಾಗುವುದಿಲ್ಲ. ಮತ್ತೆ ಅವರನ್ನು ರಕ್ಷಿಸುವ ಪ್ರಜ್ಞೆ ಜಾಗೃತವಾಗುತ್ತದೆ. ಪುನಃ ಮನೆಗೆ ಬರುತ್ತಾನೆ. ಅಲ್ಲಿಗೆ ಸಿನಿಮಾ ಮುಗಿಯುತ್ತದೆ. ಅದು ಅಣ್ಣ ತಂಗಿಯರ ನಡುವಿನ ಪ್ರೀತಿಯ ವರ್ಷಧಾರೆ.

ವಿಷ್ಣು ಅಭಿನಯದ ‘ವರ್ಷ’ ಚಿತ್ರ ನಿರೀಕ್ಷಿಸಿದಂತೆ ಎಲ್ಲವೂ ವಿಷ್ಣುಮಯವಾಗಿಯೇ ಇದೆ. ಸತ್ಯಮೂರ್ತಿಯಾಗಿ ಕಾಣಿಸಿಕೊಂಡ ಅವರಿಗೆ ಐವರು ಸಹೋದರಿಯರು. ಅವರಿಗೆಲ್ಲ ಸತ್ಯನೇ ತಂದೆ-ತಾಯಿ. ತಂಗಿಯರಿಗೆ ಏನಾದರೂ ನೋವಾದರೆ ಅಣ್ಣನ ಕಣ್ಣಲ್ಲೇ ನೀರು ಬರುವಂಥ ಉತ್ಕಟ ಪ್ರೀತಿ. ಇವರು ತಾಯಿ ಇಲ್ಲದ ತಬ್ಬಲಿಗಳು. ತಂದೆ(ಶ್ರೀನಿವಾಸಮೂರ್ತಿ)ಇದ್ದರೂ ಅವನದು ಬೇರೆಯವಳ ಜೊತೆ ಸಂಸಾರ.

ಇಂಥದೊಂದು ಕುಟುಂಬದಲ್ಲಿ ಅನೇಕ ಸಲ ಎಡವಟ್ಟುಗಳಾಗುತ್ತವೆ. ಆಗ ಅಣ್ಣ ಆರೋಪಿಯ ಜಾಗದಲ್ಲಿ ನಿಲ್ಲುತ್ತಾನೆ. ಕೊನೆಗೆ ನಿಜ ಏನೆಂದು ಗೊತ್ತಾದಾಗ ಎಲ್ಲರೂ ಕ್ಷಮೆ ಕೇಳುವ ಪ್ರಸಂಗಗಳು ಆಗಾಗ ಘಟಿಸುತ್ತಲೇ ಇರುತ್ತವೆ. ತನ್ನ ಹಿರಿಯ ತಂಗಿ(ಶ್ವೇತಾ ಚಂಗಪ್ಪ)ಯನ್ನು ಎರಡು ಮಕ್ಕಳಿರುವ ಸಂಸಾರಸ್ತನಿಗೆ ಮದುವೆ ಮಾಡಿ ಕೊಟ್ಟಾಗ ಆತ ಉಳಿದ ತಂಗಿಯರ ಕೆಂಗಣ್ಣಿಗೆ ಗುರಿಯಾಗುತ್ತಾನೆ. ಇದನ್ನು ಕಂಡು ಎರಡನೇ ತಂಗಿ(ಅನು ಪ್ರಭಾಕರ್‌) ತನ್ನ ಅಣ್ಣನಿಗೆ ಹೇಳದೇ ತಾನು ಬಯಸಿದವನ ಜೊತೆ(ರಮೇಶ್‌)ಮದುವೆಯಾಗುತ್ತಾಳೆ. ಆಗ ಈ ಅಣ್ಣನಿಗೆ ತನ್ನ ಅಮ್ಮನ ನೆನಪು. ಬಹುಶಃ ಅಮ್ಮ ಇದ್ದಿದ್ದರೆ ಮಕ್ಕಳ ಮನಸ್ಸನ್ನು ಅವಳು ಸರಿಯಾಗಿ ಅರಿಯುತ್ತಿದ್ದಳೋ ಏನೋ, ತನಗದು ಸಾಧ್ಯವಾಗಲಿಲ್ಲ ಎನ್ನುವ ಕೊರಗು. ಇದು ಕೊನೆಯವರೆಗೆ ಆತನನ್ನು ಕಾಡುತ್ತಲೇ ಇರುತ್ತದೆ. ಅದನ್ನು ನಿಭಾಯಿಸಲು ಆತ ಯತ್ನಿಸುವ ಕಥೆಯೇ ಸಿನಿಮಾದ ತಿರುಳು. ವಿಷ್ಣುವಿಗೆ ನಾಯಕಿಯಾಗಿ ಅಭಿನಯಿಸಿದವಳು ಮಾನ್ಯ. ಅವಳದು ಸತ್ಯನ ಸಂಬಂಧಿಯ ಮಗಳ ಪಾತ್ರ. ಚೂಟಿಯಾಗಿ ನಟಿಸುವ ಎಲ್ಲ ಪ್ರಯತ್ನ ಮಾಡಿದ್ದಾಳೆ. ಒಂದೆರಡು ಹಾಡುಗಳಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾಳೆ.

ವಿಷ್ಣು ಅವರ ಅಭಿನಯ ಮನಸ್ಸನ್ನು ತಟ್ಟುತ್ತದೆ. ಭಾವುಕ ಜೀವಿಯ ಜತೆ ಜತೆಗೇ ಆ್ಯಂಗ್ರಿ ಎಂಗ್‌ ಮ್ಯಾನ್‌ ಥರಾನೂ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಸಿನಿಮಾದ ಕೊನೆಯಲ್ಲಿಯ ಸುದೀರ್ಘ ಸೆಣಸಾಟವನ್ನು ನೋಡಬೇಕು. ಈ ದೃಶ್ಯವನ್ನು ಅನಗತ್ಯವಾಗಿ ಕೊಂಚ ಎಳೆದಿದ್ದರೂ, ವಿಷ್ಣು ಈಗಲೂ ಆ್ಯಕ್ಷನ್‌ ದೃಶ್ಯಗಳಿಗೆ ತಾಕತ್ತು ತುಂಬಬಲ್ಲರು ಎಂದು ತೋರಿಸಿಕೊಟ್ಟಿದ್ದಾರೆ. ತಂಗಿಯರ ಪಾತ್ರಗಳಿಗೆ ಅನು ಪ್ರಭಾಕರ್‌, ಶ್ವೇತಾ ಚಂಗಪ್ಪ, ಶಿಲ್ಪಾ ಮತ್ತು ಇನ್ನಿಬ್ಬರು ನ್ಯಾಯ ಒದಗಿಸಿದ್ದಾರೆ. ಹಾಸ್ಯದಲ್ಲಿ ಕೋಮಲ್‌ ಮಿಂಚಿದ್ದಾರೆ. ಶೋಭರಾಜ್‌ ಖಳನಾಯಕನ ಖದರು ತೋರಿದ್ದಾರೆ.

ತೆಲುಗು ಚಿತ್ರ‘ಹಿಟ್ಲರ್‌’ನ ರಿಮೇಕ್‌ ಆಗಿರುವ ಈ ಚಿತ್ರದ ನಿರ್ದೇಶಕ ಎಸ್‌.ನಾರಾಯಣ್‌. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅವರೇ ಬರೆದಿದ್ದು ಎಲ್ಲವೂ ಹಿತಮಿತ ಎನಿಸುತ್ತವೆ. ಎಲ್ಲಿಯೂ ದ್ವಂದ್ವಾರ್ಥಕ್ಕೆ ಅವಕಾಶ ಇಲ್ಲದಿರುವುದು ಸಮಾಧಾನಕರ. ಎಸ್‌.ಎ.ರಾಜ್‌ಕುಮಾರ್‌ ಅವರ ಸಂಗೀತದ ಎರಡು ಹಾಡುಗಳು ಇಂಪಾಗಿವೆ. ಪಿ.ಕೆ.ಎಚ್‌.ದಾಸ್‌ ಛಾಯಾಗ್ರಾಹಣ ಚಿತ್ರಕ್ಕೆ ಮೆರಗು ನೀಡಿದೆ.

ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಕನ್ನಡಕ್ಕೆ ಮತ್ತೊಂದು ಸದಭಿರುಚಿಯ ಚಿತ್ರಕೊಟ್ಟಿದ್ದಾರೆ ಎಂದು ನಿರಾಳವಾಗಿ ಹೇಳಬಹುದು.

(ಸ್ನೇಹ ಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X