»   » ಪ್ರೀತಿಯ ತುಂಟಾಟ; ನಗುವಿನ ಚೆಲ್ಲಾಟ

ಪ್ರೀತಿಯ ತುಂಟಾಟ; ನಗುವಿನ ಚೆಲ್ಲಾಟ

Subscribe to Filmibeat Kannada


ಚೆಲ್ಲಾಟಗಳೇ ಈ ‘ಚೆಲ್ಲಾಟ’ದ ಅಸಲೀ ಕತೆ. ಇದು ಅತಿ ಪುರಾತನವಾದ ಕತೆ ಅಂತ ಶ್ರೀಧರ್‌ಗೆ ಚೆನ್ನಾಗಿ ಗೊತ್ತು. ಬರಿ ಇಷ್ಟೇ ತೋರಿಸಿದರೆ ಪ್ರೇಕ್ಷಕರಿಗೆ ಬೋರಾಗುವುದು ಗ್ಯಾರಂಟಿ ಅಂತಲೂ ಚೆನ್ನಾಗಿ ಗೊತ್ತು. ಅದಕ್ಕೆ ಸರಿಯಾಗಿ ಮಸಾಲೆ ಅರೆದಿದ್ದಾರೆ!

  • ಚೇತನ್‌ ನಾಡಿಗೇರ್‌
ಇದೇ ಕತೆ ಅಪ್ಪಿತಪ್ಪಿ ಸಾಯಿಪ್ರಕಾಶ್‌ ಥರದ ‘ಕಣ್ಣೀರ ಧಾರೆ’ಯ ನಿರ್ದೇಶಕರಿಗೆ ಸಿಕ್ಕಿ ಬಿಟ್ಟಿದ್ದರೆ, ‘ತಂಗಿಯ ಮದುವೆ’ ಯಂತಲೋ ಅಥವಾ ‘ತಂಗಿಯ ಪ್ರೀತಿ, ಅಣ್ಣನ ನೀತಿ’ ಅಂತ ಚಿತ್ರ ಮಾಡಿ ಪ್ರೇಕ್ಷಕರ ಕರ್ಚೀಫು ಒದ್ದೆ ಮಾಡಿಸುತ್ತಿದ್ದರೇನೋ? ಆದರೆ ಅದು ಶ್ರೀಧರ್‌ ಕೈಗೆ ಸಿಕ್ಕಿರುವುದರಿಂದ ‘ಚೆಲ್ಲಾಟ’ವಾಗಿದೆ.

ಗಂಭೀರವಾಗ ಬೇಕಾಗಿದ್ದು ಹಗುರವಾಗಿದೆ. ಅತ್ತೂ ಅತ್ತೂ ಕಣ್ಣು ಊದಬೇಕಾಗಿದ್ದು, ನಕ್ಕೂ ನಕ್ಕೂ ಹೊಟ್ಟೆ ಹಗುರವಾಗುವಂತಾಗಿದೆ. ಇಷ್ಟಕ್ಕೂ ಏನೀ ‘ಚೆಲ್ಲಾಟ’? ಅದು ಒನ್‌ಲೈನ್‌ ಸ್ಟೋರಿ. ತಂಗಿ ಮತ್ತು ಆಕೆಯ ಮದುವೆಯ ಜವಾಬ್ದಾರಿ ಹೊತ್ತ ಅಣ್ಣನ ಜಂಜಾಟ, ಸಾರಿ ಚೆಲ್ಲಾಟಗಳೇ ಈ ‘ಚೆಲ್ಲಾಟ’ದ ಅಸಲೀ ಕತೆ.

ಇದು ಅತಿ ಪುರಾತನವಾದ ಕತೆ ಅಂತ ಶ್ರೀಧರ್‌ಗೆ ಚೆನ್ನಾಗಿ ಗೊತ್ತು. ಬರಿ ಇಷ್ಟೇ ತೋರಿಸಿದರೆ ಪ್ರೇಕ್ಷಕರಿಗೆ ಬೋರಾಗುವುದು ಗ್ಯಾರಂಟಿ ಅಂತಲೂ ಚೆನ್ನಾಗಿ ಗೊತ್ತು. ಅದಕ್ಕೆ ಸರಿಯಾಗಿ ಮಸಾಲೆ ಅರೆದಿದ್ದಾರೆ. ಕಾಮಿಡಿ, ಹಾಡು, ಫೈಟು, ಸೆಂಟಿಮೆಂಟು, ಮೊಬೈಲ್‌ ಪ್ರೀತಿ ... ಹೀಗೆ ಒಂದಾದ ನಂತರ ಇನ್ನೊಂದು, ಇನ್ನೊಂದಾದ ನಂತರ ಮತ್ತೊಂದು. ಒಟ್ಟಿನಲ್ಲಿ ಪ್ರೇಕ್ಷಕರನ್ನು ಮಿಸುಕಾಡದಂತೆ ಮಾಡಿದ್ದಾರೆ.

ಏನೇ ಇದ್ದರೂ ಚಿತ್ರದಲ್ಲಿ ನಿಜವಾಗಲೂ ಖುಷಿ ಕೊಡುವುದು ಕಾಮಿಡಿ. ನೀರಿನಲ್ಲಿ ನಾಯಕನನ್ನು ಹುಡುಕುವಾಗಿನ ದೃಶ್ಯವಾಗಲೀ, ನಿಶ್ಚಿತಾರ್ಥದಂದು ಆಗುವ ಗಲಿಬಿಲಿಯಾಗಲೀ, ಮದುಮಗ ಎಂಬ ಹೆಸರು ಸೃಷ್ಟಿಸುವ ಗೊಂದಲವಾಗಲೀ, ಮದುವೆ ಭಾವಿ ಮಾವ ಎಂಗೇಜ್‌ಮೆಂಟ್‌ ರಿಂಗ್‌ ಹಾಕುವ-ತೆಗೆಯುವ ದೃಶ್ಯಗಳಾಗಲಿ... ಇವೆಲ್ಲ ಪ್ರೇಕ್ಷಕರಿಗೆ ನಿಜವಾಗಲೂ ಫುಲ್‌ ಮೀಲ್ಸ್‌ . ಕೆಲವು ದೃಶ್ಯಗಳಲ್ಲಿ ಮಲೆಯಾಳಂ ಛಾಯೆ ಕಾಣಿಸಬಹುದು. ಕನ್ನಡೀಕರಿಸಿದ್ದಕ್ಕೆ ಶ್ರೀಧರ್‌ಗೊಂದು ಕಂಗ್ರಾಟ್ಸ್‌.

ಕಾಮಿಡಿಗೆ ಸ್ವಲ್ಪ ಜಾಸ್ತಿ ಒತ್ತು ಕೊಟ್ಟಿದ್ದರಿಂದಲೋ ಏನೋ ದೇವರಾಜ್‌ರಂಥ ಡೈನಾಮಿಕ್‌ ಸ್ಟಾರ್‌ ಹಾಗೂ ಅವಿನಾಶ್‌ರಂಥ ರಿಯಲ್‌ ಸ್ಟಾ ರ್‌ ಮಂಕಾಗಿದ್ದಾರೆ. ಕಿಶೋರಿ ಬಲ್ಲಾಳ್‌ರಂಥ ಹಿರಿಯ ಕಲಾವಿದೆ ಚಿತ್ರದುದ್ದಕ್ಕೂ ಮೂಕಪ್ರೇಕ್ಷಕರಾಗಿದ್ದಾರೆ. ಕಾಮಿಡಿಯಿಂದಲೇ ರಂಗಾಯಣ ರಘು, ಕೋಮಲ್‌ ಕುಮಾರ್‌ ಸಲೀಸಾಗಿ ಮನ ಗೆಲ್ಲುತ್ತಾರೆ.

ಟೆನ್ನಿಸ್‌ ಕೃಷ್ಣ ಕೆಲವು ಕಡೆ ಸಹನೆ ಪರೀಕ್ಷಿಸಿದರೂ, ಇನ್ನೂ ಕೆಲವು ಕಡೆ ಮನರಂಜಿಸಿದ್ದಾರೆ. ಆದರೆ, ಗಣೇಶ್‌ ಕಾಮಿಡಿಗೆ ಮಾತ್ರ ಲಾಯಕ್ಕು ಎಂದು ಬಲವಾಗಿ ನಂಬಿದವರು ಮಾತ್ರ ಆತ ಎಂಥಾ ನಟ ಎಂದು ಚಿತ್ರ ನೋಡೇ ತಿಳಿಯಬೇಕು. ಕಾಮಿಡಿ ಬಿಡಿ, ಸೆಂಟಿಮೆಂಟು ದೃಶ್ಯಗಳಲ್ಲೂ ಗಣೇಶ್‌ಗೆ ಫುಲ್‌ಮಾರ್ಕ್ಸ್‌. ಹೊಡೆದಾಟದ ದೃಶ್ಯಗಳಲ್ಲೂ ಗಣೇಶ್‌ ಮಿಂಚಿಂಗು. ಹೈಟು ಕಡಿಮೆ ಎಂದು ಕೊರಗುವುದನ್ನು ಬಿಟ್ಟರೆ ಮತ್ತು ಇನ್ನೂ ಚೆನ್ನಾಗಿ ಬಳಸಿಕೊಂಡರೆ, ಗಣೇಶ್‌ ಖಂಡಿತವಾಗಿಯೂ ಉದ್ಯಮಕ್ಕೆ ಆಸ್ತಿಯಾಗಬಹುದು.

ರೇಖಾ ತೆಳ್ಳಗಾಗಿದ್ದಾರೆ ಎಂಬ ಅಂಶವೊಂದು ಬಿಟ್ಟರೆ ಅವರಲ್ಲಿ ಮತ್ತಿನ್ನೇನೂ ಹೆಚ್ಚಿನ ಬದಲಾವಣೆಯಾಗಿಲ್ಲ. ಅದೇ ನಗು, ಅದೇ ಅಭಿನಯ. ಗುರುಕಿರಣ್‌ ಹಾಡುಗಳಲ್ಲಿ ವಿಶೇಷವೇನಿಲ್ಲ. ಸುಂದರನಾಥ ಸುವರ್ಣ ಕ್ಯಾಮೆರಾ ಕೆಲಸ ಸುಂದರ, ಸುಂದರ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada