»   » ಮಗುವಿನಂತೆ ನಕ್ಕ ಬಿಡಿ. ಒಸಿ ಕುಸಿ ಪಡ್ರೀ

ಮಗುವಿನಂತೆ ನಕ್ಕ ಬಿಡಿ. ಒಸಿ ಕುಸಿ ಪಡ್ರೀ

Posted By:
Subscribe to Filmibeat Kannada

*ಮಹೇಶ್‌ ದೇವಶೆಟ್ಟಿ

ಆ ವಯಸ್ಸೇ ಹಾಗೆ. ಸಿಗರೇಟಿನಿಂದ ಹೊರಬಿದ್ದ ಹೊಗೆಯ ಹಾಗೆ. ಮನಸ್ಸಿನಲ್ಲಿಯೇ ಬಿಯರ್‌ ಕುಡಿಯುವ ಕಳ್ಳನ ಹಾಗೆ. ಗೆಜ್ಜೆ ಸದ್ದಿಗೆ ಬೆಚ್ಚುವ, ಕಿಲಕಿಲಕ್ಕೆ ಬೆವರುವ, ಕುಡಿ ನೋಟಕ್ಕೆ ಕಂಗಾಲಾಗುವ ಮನಸ್ಸೇ ಹೀಗೆ.

ಅವರು ಆಧುನಿಕ ಪಂಚ ಪಾಂಡವರು. ಮೀಸೆ ಬಂದವರಿಗೆ ದೇಶ ಕಾಣುತ್ತೋ ಬಿಡುತ್ತೋ ಗೊತ್ತಿಲ್ಲ. ಇವರಿಗೆ ಮಾತ್ರ ಹುಡುಗಿಯರು ಹೊಳೆಯಲ್ಲಿ ಸ್ನಾನ ಮಾಡುವುದು ಕಾಣುತ್ತೆ. ಅದಕ್ಕೆ ಮರ ಏರಬೇಕೆಂಬುದು ಗೊತ್ತಾಗುತ್ತೆ. ಅದು ಅವರ ಮನೆಯವರಿಗೂ ಗೊತ್ತಾಗಿ ಮೈತುಂಬಾ ಕಜ್ಜಾಯ ತಿನ್ನೋದು ಸಲೀಸಾಬಿಡುತ್ತೆ. ಇಂತಹ ಕೃಷ್ಣ ಪರಮಾತ್ಮರಿರುವ ಊರಿನ ಶಾಲೆಗೆ ಮೇಡಂ ಒಬ್ಬಳು ಬರುತ್ತಾಳೆ. ಅವಳ ಉಂಗುಷ್ಟದಿಂದ ನೆತ್ತಿಯವರೆಗೆ ರಂಭೆಯ ಒನಪಿರುತ್ತದೆ. ಅವಳನ್ನು ಮೆಚ್ಚಿಸಲು ಇವರೆಲ್ಲ ಅಂಗಿಯಲ್ಲಿ ತೊಣಚಿ ಹೊಕ್ಕವರಂತೆ ಒದ್ದಾಡುತ್ತಾರೆ. ಅವಳು ಹಲ್ಲು ಕಿರುದುದನ್ನೇ ಪ್ರೀತಿಯೆಂದು ತಿಳಿಯುತ್ತಾರೆ. ಕೆನ್ನೆ ಸವರಿದ್ದನ್ನೇ ಅದು ಎಂದು ಒದ್ದಾಡುತ್ತಾರೆ. ಹೀಗಿರುವಾಗ ಅದಾಗಲೇ ಅವಳಿಗೆ ಒಬ್ಬ ಹುಡುಗನಿರುವುದು ಗೊತ್ತಾಗುತ್ತದೆ. ಅಷ್ಟರಲ್ಲಿ ಮೇಡಂ ಹೊಟ್ಟೆಯಲ್ಲಿ ಗಣಪತಿ ಬೆಳೆಯುವ ಸುದ್ದಿ ಊರ ಬಾಯಿಗೆ ಎಲೆಯಡಿಕೆಯಾಗುತ್ತದೆ. ಬಾಳೆಲೆಯೆಯಲ್ಲಿ ಊಟ ಮಾಡಿದವರು ತಾವೇ ಪಾಂಡವರು ಎಂದು ತಿಳಿಯುತ್ತಾರೆ. ಅಸಲಿಗೆ ಗಣಪತಿ ಅಪ್ಪ ಆ ಶಿವಪ್ಪ ಯಾರೆನ್ನುವುದೇ ಕತೆಯ ಪಾಜಾಗಟ್ಟಿ.

ಕತೆ ಕೇಳಿದ ತಕ್ಷಣ ಕನ್ನಡದ್ದೇ ಯಾವುದೋ ಚಿತ್ರ ಇದ್ದಂತೆ ಇದೆಯಲ್ಲ ಅಂತ ಅನಿಸುವುದು ಸಹಜ. ಅದು ಆಂಟಿ ಪ್ರೀತ್ಸೆ ಆದರೂ ಸರಿ, ಫ್ರೆಂಡ್ಸ್‌ ಆದರೂ ಓ.ಕೆ. ಮೂಲ ಹಂದರ ಅದೇ ಆಗಿದ್ದರೂ ಪಾಂಚಾಲಿಯಲ್ಲಿ ಎರಡು ವಿಶೇಷತೆಗಳಿವೆ. ಎರಡು ಸಾಲಿನ ಮಾತು ಬಿಟ್ಟರೆ ಉಳಿದ ಕಡೆ ದ್ವಂದ್ವಾರ್ಥದ ಸೋಂಕು ಇಲ್ಲ. ಹಾಗೆಯೇ ಹಸಿ ಬಿಸಿ ದೃಶ್ಯಗಳನ್ನು ತೋರಿಸುವ ಅವಕಾಶ ಇದ್ದರೂ ಅದನ್ನು ಬಿಟ್ಟು ಮನೆ ಮಂದಿಯೆಲ್ಲಾ ನೋಡಿ ಕಚಗುಳಿ ಪಡುವಂತೆ ಚಿತ್ರಿಸಲಾಗಿದೆ ಮತ್ತು ನೇಟಿವಿಟಿಯನ್ನು ಅಕ್ಷರಶಃ ಉಳಿಸಿಕೊಳ್ಳಲಾಗಿದೆ. ಇದೆಲ್ಲಾ ಕ್ರೆಡಿಟ್ಟು ನಿರ್ದೇಶಕ ದಿನೇಕ್‌ ಬಾಬುಗೇ ಸಲ್ಲಬೇಕು. ಮೊದಲಿನಿಂದ ಕೊನೆಯವರೆಗೆ ನಗೆಯ ಬಿಸಿ ಬೇಳೆ ಬಾತ್‌ ತಿನ್ನಿಸುವ ಅವರು ಅಡಕೆ ಹೋಳಿನಷ್ಟು ಉಸಿರು ಬಿಟ್ಟರೆ ಪಂಚ್‌ ತಪ್ಪಿ ಹೋಗುತ್ತೆ ಎನ್ನುವಂತೆ ಮಾತುಗಳನ್ನು ಹೊಸೆದಿದ್ದಾರೆ. ಇನ್ನೇನು ಸಾಕಾಗಿತ್ತು ಎನ್ನುವ ಹೊತ್ತಿಗೆ ಒಂದೆರಡು ಪಾವಟಿಗೆ ಏರಿ ಟಾಟಾ ಹೇಳುತ್ತಾರೆ.

ಹಿಂದೆ ಮಲಯಾಳಂನಲ್ಲಿ ಹಬ್ಬಿದ್ದ ಹಾಗೂ ಕನ್ನಡದಲ್ಲಿ ಕಾಶೀನಾಥ್‌ ಗುತ್ತಿಗೆ ಹಿಡಿದಿದ್ದ ಇಂತಹ ಕತೆಗೆ ಬಾಬು ತಮ್ಮ ಟಚ್‌ ಕೊಟ್ಟಿದ್ದಾರೆ. ಅಶ್ಲೀಲತೆಯ ಅಂಚಿಗೆ ಹೋಗಿಯೂ ಹೋಗದವರಂತೆ ಕ್ಯಾಮರಾ ಹಿಡಿದಿದ್ದಾರೆ. ಆದರೆ ಒಂದರೆಡು ಮೂಲಭೂತ ಸತ್ಯಗಳನ್ನು ಮರೆತಿದ್ದಾರೆ. ಹಳ್ಳಿ ಹುಡುಗರು ಈಗಲೂ ಅವರು ತಿಳಿದಂತೆ ಮುಗ್ಧರಾಗೇನೂ ಉಳಿದಿಲ್ಲ. ಚಡ್ಡಿ ತೊಡುವ ಹುಡುಗನಿಗೂ ಏನೋ ದಾಹ... ಏಕೋ ಮೋಹ... ಸುಡುತಿದೆ ವಿರಹಾ...

ಒಂದು ಸಲವೂ ಮಕ್ಕಳಿಗೆ ಪಾಠ ಮಾಡದ ಮೇಡಮ್ಮು ಊರು ಉದ್ಧಾರ ಮಾಡಲು ಕಚ್ಚೆ ಕಟ್ಟಿ ನಿಲ್ಲುವುದು, ಪಂಚಾಯಿತಿಯಲ್ಲಿ ಮಗುವಿನ ತಂದೆ ಹೆಸರನ್ನು ಹೇಳುತ್ತೇನೆ ಎನ್ನುವ ಮೇಡಮ್ಮು, ಸರ್ಪದೋಷಕ್ಕೆ ಶಾಂತಿ ಮಾಡಿಸಬೇಕು ಎಂದೊಡನೆ ಜೋಯಿಸನೊಡನೆ ಬೆಟ್ಟ ಹತ್ತುವ ಮೇಡಮ್ಮು... ಇಂಥವಳೇ ಮೇಡಮ್ಮಾಗಲು ಲಾಯಕ್ಕೆಂದು ಅಕ್ಷರ ಕಲಿತವಳೆಂದೂ ದಿನೇಶ್‌ ಬಾಬು ಮಾತ್ರ ಹೇಳಬೇಕು.

ಕತೆಯೇ ಜೀವಾಳವಾದ ಈ ಚಿತ್ರದಲ್ಲಿ ಯಾರು ನಟಿಸಿದ್ದರೂ ಅಂತಹ ವ್ಯತ್ಯಾಸವಾಗುತ್ತಿರಲಿಲ್ಲ. ಆದರೂ ರಂಭೆಯಂತೆ ಬಳುಕುವ ರಂಭಾ, ಕಂಠಮಟ್ಟ ಕುಡಿದು ಸಾಯ್ತೀನಿ ಎಂದು ಹೆದರಿಸುವ ಉಮೇಶ್‌ ಸದಾ ಗದರುವ ಗೌಡನಾಗಿ ಮಂಡ್ಯ ಕಿಟ್ಟಿ, ಕಾರ್ಗಿಲ್‌ ಗಡಿಯಿಂದಲೇ ಓಡಿ ಬಂದಂತಿರುವ ಯೋಗೀಶ್ವರ್‌ , ಬಂಡೀಪುರ ಮಾರಾಜ್ರ ಕ್ಲೋಸ್‌ ಫ್ರೆಂಡ್‌ ಎಂದು ರೈಲು ಬಿಡುವ ಶರಣ್‌, ಪೋಲಿ ಹುಡುಗರಾದ ಅನಿರುದ್ಧ, ಸುನೀಲ್‌ರಾವ್‌, ವಿನಾಯಕ ಜೋಶಿ, ಆನಂದ್‌ ಮತ್ತು ಗಣೇಶ್‌ ಸಿಕ್ಕಂತೆ ಪ್ಲಸ್‌ ಸಿಕ್ಕಷ್ಟು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ನಗಿಸಿ ಜೀವ ಹಿಂಡಿದ್ದಾರೆ.

ಒಂದು ಸಾಲು ಕೇಳಿಸಿಕೊಳ್ಳದಿದ್ದರೆ ನಿಮಗೇ ನಷ್ಟ ಎನ್ನುವಂತೆ ಬಾಬು ಸಂಭಾಷಣೆ ಬರೆದಿದ್ದಾರೆ. ಅದನ್ನು ಅಷ್ಟೇ ನಿಯತ್ತಾಗಿ- ಮಣ್ಣಿನ ಗುಣಕ್ಕೆ ಮೋಸವಾಗದಂತೆ- ಕನ್ನಡಕ್ಕೆ ತಂದಿದ್ದಾರೆ ವತ್ಸಲಾ ಉಲಿತಾಯ. ಪಿಕೆಎಚ್‌ ದಾಸ್‌ ಛಾಯಾಗ್ರಹಣದಲ್ಲಿ ಶ್ರೀರಂಗ ಪಟ್ಟಣದ ಸುತ್ತಲಿನ ಪ್ಯಾರೀ ಪ್ಯಾರೀ ಲೊಕೇಶನ್‌ಗಳನ್ನು ಕಣ್ತುಂಬಿಕೊಳ್ಳಬಹುದು. ಕಿವಿ ನೆಟ್ಟಗೆ ಮಾಡಿ ಕೇಳಿದರೂ ‘ಶುಗರ್‌ ಇದೆ’ ಹಾಡಿನ ಅರ್ಥ ತಿಳಿಯುವುದಿಲ್ಲ. ಉಳಿದ ಹಾಡುಗಳ ಟ್ಯೂನ್‌ಗಳನ್ನು ಜೆಮಿನಿ ‘ಕೆ ’ ಟೀವಿಯಲ್ಲಿ ಕೇಳಿದಂತೆನಿಸಿದರೆ ಅಚ್ಚರಿಯಿಲ್ಲ. ಏಕೆಂದರೆ ಸಂಗೀತ ನೀಡಿದ್ದು ಕರ್ನಾಟಕ ‘ಕಂಟ್ರಿ’ರವ ಗುರುಕಿರಣ್‌ !

(ಸ್ನೇಹಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada