For Quick Alerts
  ALLOW NOTIFICATIONS  
  For Daily Alerts

  ‘ನಂಜುಂಡಿ’ ಉಂಡಿ ತಿಂದವನೇ ಜಾಣ : ಹಳ್ಳಿ ಸೊಗಡ ನೋಡಿರೋ..

  By Staff
  |

  *ಮಹೇಶ್‌ ದೇವಶೆಟ್ಟಿ

  ‘ಹಳ್ಳಿ ಕಡೆ ಕಿತ್ಕೊಂಡು ಓಡುತ್ತೆ ನೋಡ್‌ ಮಾಮು’. ಇದು ಸಿನಿಮಾ ನೋಡಿ ಹೊರಬಂದವರ ಮೊದಲ ಮಾತು. ಕನ್ನಡ ಚಿತ್ರಗಳೆಂದರೆ ಮುಖ ಒಪ್ಪಾರೆ ತಿರುಗಿಸುತ್ತಿರುವ ಈ ಹೊತ್ತಿನಲ್ಲಿ ಅದೇ ಕನ್ನಡ ಚಿತ್ರವೊಂದು ಜನರ ಮನಸ್ಸನ್ನು ಗೆದ್ದು ಕ್ಯಾಕಿ ಹೊಡೆಯಲಿದೆ. ಶಿವಣ್ಣನ ಚಿತ್ರ ಬದುಕಿಗೆ ಹೊಸ ತಿರುವು ನೀಡಲಿದೆ. ನಿರ್ಮಾಪಕ ರಾಮು ತುಟಿಯಲ್ಲಿ ನಗು ಅರಳಿಸಲಿದೆ. ಗ್ರಾಮೀಣ ಬದುಕಿನ ಚಿತ್ರಗಳಿಗೆ ಹೊಸ ಭಾಷ್ಯ ಬರೆಯಲಿದೆ. ಇದನ್ನು ಸಾಧ್ಯವಾಗಿಸಿದ್ದು ಕತೆ, ಚಿತ್ರಕತೆ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆ ಹೊತ್ತ ಎಸ್‌.ಆರ್‌.ಬ್ರದರ್ಸ್‌ ಎಂಬ ಅನಾಮಿಕ ವ್ಯಕ್ತಿಗಳ ಸಿನಿಮಾ ಪ್ರೀತಿ ಮತ್ತು ಶ್ರದ್ಧೆ .

  ಅಂಥದ್ದು ಇದರಲ್ಲಿ ಏನಪ್ಪಾ ಇದೆ ಅಂದರೆ ಅದನ್ನು ಕಣ್ಣಾರೆ ನೋಡಿ ಮಜಾ ಮಾಡಿ ಅನ್ನುವುದಷ್ಟೇ ನಮ್ಮ ಸಲಹೆ. ಏಕೆಂದರೆ ಈ ಚಿತ್ರ, ದೃಶ್ಯ ಮಾಧ್ಯಮವನ್ನು ಅಕ್ಷರಶಃ ಮಜಬೂತಾಗಿ ಬಳಸಿಕೊಂಡಿದೆ. ಒಂದು ಹಳ್ಳಿಯನ್ನು ಅದರ ಎಲ್ಲ ಮಿತಿ ಮತ್ತು ವಿಶೇಷತೆಗಳೊಂದಿಗೆ ಹೆಣೆಯಲಾಗಿದೆ. ಚಿಕ್ಕಚಿಕ್ಕ ವಿವರಗಳನ್ನು ನಾಜೂಕಾಗಿ ಕುಸುರಿ ಮಾಡಿ ಹಳ್ಳಿಯನ್ನೇ ಒಂದು ಪಾತ್ರವಾಗಿಸಿದ ಚಮತ್ಕಾರವೂ ಇಲ್ಲಿದೆ. ಕಟ್ಟೆಯ ಮೇಲೆ ಕುಳಿತು ಮಗುವಿಗೆ ಊಟ ಮಾಡಿಸುವ ಅಮ್ಮ , ಅವಳು ಮಗಳಿಗೆ ತಲೆ ಬಾಚುವ ಸಡಗರ. ಕಾಳು ಕಡ್ಡಿಗೆ ಪೂಜೆ ಮಾಡುವ ಸಂಭ್ರಮ, ಹೊಲ ಉಳುವ ರೈತನ ಬಿಸಿಯುಸಿರು... ಇದೆಲ್ಲವನ್ನೂ ಗ್ರಾಮೀಣ ಬದುಕಿನ ಪ್ರೀತಿ, ಮಾನವೀಯತೆ, ಅಸೂಯೆ, ದ್ವೇಷ ಮತ್ತು ದಬ್ಬಾಳಿಕೆಯಾಂದಿಗೆ ಹದವಾಗಿ ಬೆರೆಸಿ ನಿರ್ದೇಶಕ ಹಳೆಯ ಕತೆಗೆ ಹೊಸ ನಿರೂಪಣೆ ಕೊಟ್ಟಿದ್ದಾರೆ.

  ನಾಯಕ ನಂಜುಂಡಿ ಊರಿಗೆ ಉಪಕಾರಿ. ನಾಯಕಿ ಸೊಕ್ಕಿನ ಹುಡುಗಿ. ಅವರಿಬ್ಬರ ನಡುವಿನ ದ್ವೇಷ ಆತನನ್ನು ಜೈಲಿಗೆ ಕಳುಹಿಸುತ್ತದೆ. ತಾಯಿ ಎದೆಗೆ ಗುಂಡು ಬೀಳಿಸುತ್ತದೆ. ಹೀಗೆ ಶುರುವಾಗುವ ಬಡವ ಮತ್ತು ಶ್ರೀಮಂತ ನಡುವಿನ ಕದನ ಬರಗಾಲದ ನಡುವೆ ಹಾದು, ನಾಯಕನ ಮೇಲೆ ಅತ್ಯಾಚಾರ ಆರೋಪ ಹೊರಿಸಿ ಊರಿನಿಂದ ಬಹಿಷ್ಕಾರದರೆಗೆ ಉದ್ದಕ್ಕೆ ಬೆಳೆಯುತ್ತದೆ.

  ಕತೆ ಕೇಳುತ್ತಿದ್ದಂತೆಯೇ ಇದು ಐದಾರು ಚಿತ್ರಗಳ ವಗ್ಗರಣೆಯಂತಿದೆ ಅನ್ನಿಸುವುದು ನಿಜ. ಆದರೆ ಅದನ್ನು ಮರೆಸುವಂತೆ ಚಿತ್ರವನ್ನು ನೋಡೆಬಲ್‌ ಆಗಿಸಿರುವುದು ನಿರ್ದೇಶಕರಿಗೆ ದಕ್ಕುವ ಕ್ರೆಡಿಟ್ಟು . ಸಂಭಾಷಣೆಯಲ್ಲಿ ಅಪ್ಪಟ ಮಣ್ಣಿನ ಗುಣದ ವಾಸನೆಯಿದೆ. ‘ಬಡವರ ಮಾತೆಂದರೆ ಆನೆ ದಂತ’ ಎನ್ನುವ ಮಾತು ಹೊಸ ರೂಪಕ ಸೃಷ್ಟಿಸಿದೆ. ಗಾದೆ ಮಾತುಗಳನ್ನು ಮತ್ತು ಸರ್ವಜ್ಞನ ವಚನಗಳನ್ನು ಸೂಕ್ತವಾಗಿ ಜೋಡಿಸಲಾಗಿದೆ.

  ಹಂಸಲೇಖ ಲೇಖನಿಗೆ ಮತ್ತೊಮ್ಮೆ ಹರೆಯ ಬಂದಿದೆ. ನಾಲ್ಕು ಹಾಡುಗಳಲ್ಲಿ ಬೇರೊಂದು ಲೋಕಕ್ಕೆ ಹಂಸ್‌ ಕರೆದೊಯ್ಯುತ್ತಾರೆ. ಆದರೆ ಹಿನ್ನೆಲೆ ಸಂಗೀತ ಕೆಲವು ದೃಶ್ಯಗಳ ಮಾತುಗಳನ್ನೇ ನುಂಗಿ ನೀರು ಕುಡಿದದ್ದು ಬೇಜಾನ್‌ ತಪ್ಪು ಕಣ್ರೀ.

  ಬರಗಾಲದ ದೃಶ್ಯಗಳನ್ನು ಇಷ್ಟೊಂದು ಪರಿಣಾಮಕಾರಿಯಾಗಿ ಚಿತ್ರಿಸಿದ್ದೇ ಸುರೇಶ್‌ಬಾಬು ಛಾಯಾಗ್ರಹಣದ ತಾಕತ್ತು ತೋರಿಸುತ್ತದೆ. ಕೋಣದ ಓಟದ ಸ್ಪರ್ಧೆಯಲ್ಲಂತೂ ಅವರ ಕ್ಯಾಮರಾ ಕುದುರೆಯಂತೆ ಓಡಿ ಅಚ್ಚರಿಗೊಳಿಸುತ್ತದೆ. ಜೋನಿಹರ್ಷ ಸಂಕಲನವಾಗಲಿ, ಕಲಾ ನಿರ್ದೇಶಕನ ಅಭಿರುಚಿಯಾಗಲಿ, ವಸ್ತ್ರಾಲಂಕಾರ ಮತ್ತು ಮೇಕಪ್‌ ಮಾಡುವಾತನ ಕೆಲಸದ ನಿಯ್ತತಿರಲಿ... ಎಲ್ಲವೂ ದಿಲ್‌ ಖುಷ್‌.

  ಶಿವಣ್ಣನ ಬಗ್ಗೆ ಏನು ಹೇಳುವುದು ? ಅವರು ಪಾತ್ರದಲ್ಲಿ ಒಂದಾಗುವ ರೀತಿಯಂತೂ ಬೆರಗು ಮೂಡಿಸುತ್ತದೆ. ಸೂಕ್ಷ್ಮ ಭಾವನೆಗಳನ್ನು ಕಣ್ಣಿನಲ್ಲಿಯೇ ಹೇಳಿ ಅಲ್ಲಾಡಿಸುವ ಶಕ್ತಿ ಅವರಿಗಷ್ಟೇ ಸಾಧ್ಯವೇನೋ? ಮಳೆರಾಯನನ್ನು ಕರೆಯುವ ಹಾಡಿನಲ್ಲಿ ಅವರು ತಾವೇ ಹೈರಾಣಾದ ರೈತನಾಗಿಬಿಟ್ಟಿದ್ದಾರೆ. ಇದುವರೆಗಿನ ಅವರ ಚಿತ್ರಗಳಲ್ಲಿ ನಂಜುಂಡಿ ವಂಡರ್‌ಫುಲ್‌!

  ಉಮಾಶ್ರೀ ಮತ್ತೊಮ್ಮೆ ತಮ್ಮ ಖಡಕ್‌ ಮಾತುಗಳಿಂದ, ಅಬ್ಬರಿಸುವ ಅಭಿನಯದಿಂದ ಮಿಂಚಿದ್ದಾರೆ. ಪಂಚಾಯತಿ ಕಟ್ಟೆಯಲ್ಲಿ ರೇಗುವಾಗ, ಮಗನನ್ನು ಜೈಲಿನಲ್ಲಿ ಭೇಟಿಯಾದಾಗ ಅವರು ಥಟ್‌ ಅಮ್ಮನಾಗಿ ಬಿಡುತ್ತಾರೆ. ಕೆಲವು ಕಡೆ ಪೌರಾಣಿಕ ನಾಟಕಗಳ ಭೀಮನನ್ನು ನೆನಪಿಸಿದರೆ ಮಾಫ್‌ ಕರೋ ಭಯ್ಯಾ...

  ಅಲ್ಲಲ್ಲಿ ಕಾಣಿಸಿಕೊಳ್ಳುವ ಹಂಸವಿಜೇತ ತನ್ನ ಮೌನದಿಂದಲೇ ಆರ್ದ್ರಗೊಳಿಸುತ್ತಾಳೆ. ಲೋಕೇಶ್‌, ದೊಡ್ಡಣ್ಣ , ಕರಿಬಸವಯ್ಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಾಯಕಿ ಡೆಬಿನಾ ಅಷ್ಟಕ್ಕಷ್ಟೆ. ಹಾಗಂತ ಚಿತ್ರದಲ್ಲಿ ತಪ್ಪುಗಳೇ ಇಲ್ಲವೆಂದಲ್ಲ . ಅಗತ್ಯಕ್ಕಿಂತ ಹೆಚ್ಚಾಗಿ ಕತೆ ಜಗ್ಗಿದ್ದಾರೆ. ಬರಗಾಲದ ಎಪಿಸೋಡ್‌ ಕೇವಲ ಸುದ್ದಿಯಾಗುತ್ತದೆ ವಿನಾ ಎದೆಗೆ ಗುದ್ದುವಂತಿಲ್ಲ . ಲಗಾನ್‌ ಚಿತ್ರದ ಕ್ರಿಕೆಟ್‌ ಸ್ಪರ್ಧೆಯನ್ನು ಇಲ್ಲಿ ಕೋಣನ ಸ್ಪರ್ಧೆಯಾಗಿಸಿ ಸ್ವಂತಿಕೆಗೆ ಕಪ್ಪುಚುಕ್ಕೆ ಇಡಲಾಗಿದೆ. ಮಿಡಿ ತೊಡುತ್ತಿದ್ದ ನಾಯಕಿ ಏಕಾಏಕಿ ಲಂಗ ದಾವಣಿ ತೊಟ್ಟು ಗೌರಮ್ಮನಾಗುವುದು, ನಾಯಕನಿಗೆ ಲೈನ್‌ ಹೊಡೆಯುವುದು ಇವೆಲ್ಲವನ್ನೂ ಅಗರಿಸಿಕೊಳ್ಳುವುದು ಕೊಂಚ ಕಷ್ಟವೇ. ಆದರೂ ಕಮರ್ಷಿಯಲ್‌ ಚಿತ್ರದಲ್ಲಿ ಕಲಾತ್ಮಕ ಹೃದಯವಿಟ್ಟುಕೊಂಡ ನಂಜುಂಡಿಯ ಹಳ್ಳಿ ಸೊಗಡಿನ ಬಗೆಬಗೆಯ ಉಂಡಿಯನ್ನು ಬಾಯಿ ಚಪ್ಪರಿಸಿ ತಿನ್ನಬಹುದು. ಅಂದಹಾಗೆ, ಇದನ್ನು ನೋಡಿದಾಗ ರಾಜ್‌ ಹಳೆಯ ಚಿತ್ರಗಳನ್ನು ನೋಡಿದಷ್ಟೇ ಖುಷಿಯಾಗೋದು ಕೇವಲ ಕಾಕತಾಳೀಯ ಇರಬಹುದು.

  (ಸ್ನೇಹಸೇತು : ವಿಜಯ ಕರ್ನಾಟಕ)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X