»   » ಸೆಂಟಿಮೆಂಟು + ನಮಿತಾ ಪೆಪ್ಪರ್‌ಮೆಂಟು = ನೀಲಕಂಠ

ಸೆಂಟಿಮೆಂಟು + ನಮಿತಾ ಪೆಪ್ಪರ್‌ಮೆಂಟು = ನೀಲಕಂಠ

Subscribe to Filmibeat Kannada


ಸೆಂಟಿಮೆಂಟಿಗೆ ಸುಜಾತಾ, ಪಡ್ಡೆಗಳಿಗೆ ನಮಿತಾ, ಕಾಮಿಡಿಗೆ ಸಾಧು, ಕ್ರೌರ್ಯಕ್ಕೆ ಲಂಬೂ ನಾಗೇಶ್‌ ಹಾಗೂ ಅವಿನಾಶ್‌ ... ಇವರೆಲ್ಲರ ಜತೆ ಬೋನಸ್ಸೆಂಬಂತೆ ರವಿಚಂದ್ರನ್‌ರ ಹಾಡು-ಪಾಡು.

ಚಿತ್ರ : ನೀಲಕಂಠ
ನಿರ್ಮಾಪಕ : ಎಂ.ಕೆ.ಬಾಲಮುತ್ತಯ್ಯ
ನಿರ್ದೇಶಕ : ಸಾಯಿ ಪ್ರಕಾಶ್‌
ಸಂಗೀತ : ರವಿಚಂದ್ರನ್‌
ತಾರಾಗಣ : ರವಿಚಂದ್ರನ್‌, ನಮಿತಾ, ಸುಜಾತಾ, ಸಾಧುಕೋಕಿಲಾ, ಶ್ರೀದೇವಿಕಾ, ಲಂಬೂ ನಾಗೇಶ್‌ ಮತ್ತಿತರರು.

ನೀಲಕಂಠ ಇರೋದೇ ಹಾಗೆ. ಕಲಿಯುಗದ ಈ ನೀಲಕಂಠನ್ನ ನೇರಾನೇರ ಕೈಲಾಸವಾಸಿ ನೀಲಕಂಠನ ಜತೆ ಹೋಲಿಸಬಹುದು. ಸದಾ ಹಸನ್ಮುಖಿ. ಎಂದೂ ಕೋಪ ಮಾಡಿಕೊಳ್ಳುವವನಲ್ಲ. ಕೋಪ ಬಂದರೆ ಮಾತ್ರ ಬುರುಡೆಗೆ ಬಿಸಿನೀರು ಕಾಯಿಸದೆ ಬಿಡುವುದಿಲ್ಲ.

ಇಂಥ ನೀಲಕಂಠಂಗೆ ತಾಯಿಯೇ ಸರ್ವಸ್ವ. ಅನ್ನ ಕೊಟ್ಟ ಧಣಿಗಳೇ ದೇವರು. ಅಮ್ಮನೊಂದಿಗೆ ಲಾಲಿ ಪದ ಹಾಡುತ್ತಾ, ಧಣಿಗಳು ಕಣ್ಣಲ್ಲಿ ಹೇಳಿದ್ದನ್ನು ಮಾಡುತ್ತಾ ನೆಮ್ಮದಿಯಾಗಿರುತ್ತಾನೆ. ಇಷ್ಟಾದರೆ ಕತೆ ಹೇಗೆ ಮುಂದುವರಿಯಲು ಸಾಧ್ಯ? ಅದಕ್ಕೇ ಗೌರಿ ಬರುತ್ತಾಳೆ.

ಅವಳು ಧಣಿಯ ತಮ್ಮನ ಮಗಳು. ನೀಲಕಂಠನನ್ನು ಸಾಕಷ್ಟು ಹಚ್ಚಿಕೊಂಡವಳು. ಕನಸಿನಲ್ಲೇ ಅವನೊಂದಿಗೆ ಗೀಗೀ ಪದ ಹಾಡುವವಳು. ನೀಲಕಂಠ ಸಹ ಗೌರಿಯನ್ನು ಒಪ್ಪಿ ಕೊಂಡುಬಿಟ್ಟಿದ್ದರೆ ಅಷ್ಟೆಲ್ಲಾ ಆಗುತ್ತಲೇ ಇರಲಿಲ್ಲವೇನೋ? ಆದರೆ, ನೀಲಕಂಠನಿಗೆ ಹೆಂಡತಿಯಾಗಿ ಬರುವವಳು ಮನೆಗೆ ಹೊಂದಿಕೊಳ್ಳುತ್ತಾಳೋ, ಇಲ್ಲವೋ ಎಂಬ ಭಯ. ಹಾಗಿರುವಾಗಲೇ ಅವನಿಗೆ ಕಷ್ಟದಲ್ಲಿರುವ ಗಂಗೆ ಸಿಗುತ್ತಾಳೆ. ಅವಳ ಕರೆತಂದು ತನ್ನ ಅತ್ತೆಯ ಮನೆಯಲ್ಲಿಡುತ್ತಾ ಅಮ್ಮನಿಂದಲೂ ಮುಚ್ಚಿಡುತ್ತಾನೆ. ಅಮ್ಮನಿಗೆ ಹೇಗೊ ಗೊತ್ತಾಗುತ್ತದೆ. ಅವಳೇ ಸೊಸೆಯೆಂದು ಅಮ್ಮನೂ ಮನದಲ್ಲಿಯೇ ಮಂಡಿಗೆ ತಿನ್ನುತ್ತಾಳೆ.

ಆದರೆ ವಿಧಿವಿಪರೀತವಾಗಿ ನೀಲಕಂಠ, ಗೌರಿಯನ್ನು ಮದುವೆಯಾಗುವ ಹಾಗೆ ಮಾಡುತ್ತದೆ. ಮಗ ತನಗೆ ಹೇಳದೆಯೇ ಮದುವೆಯಾದ ಎಂದು ತಾಯಿ ಕೋಪಗೊಂಡು, ಅವನ ಮುಖ ನೋಡದಿರುವ ನಿರ್ಧಾರ ಕೈಗೊಳ್ಳುವಂಥಾಗುತ್ತದೆ. ಇತ್ತ ನೀಲಕಂಠ, ಗಂಗೆಯನ್ನು ಇಟ್ಟುಕೊಂಡಿದ್ದಾಳೆಂದು ಗೌರಿ ತಪ್ಪು ತಿಳಿದು ಸಿಟ್ಟಾಗುವಂತಾಗ ನೀಲಕಂಠನಿಗೆ ಯಾರ್ಯಾರನ್ನು ಹೇಗ್ಹೇಗೆ ನಿಭಾಯಿಸುವುದು ಎಂದು ಗೊತ್ತಾಗದಂತಾಗುತ್ತದೆ.

ಮನಸ್ನಲ್ಲಿ ಕೋಲಾಹಲ ಇದ್ರೂ ಸೇಮ್‌ ಆ ನೀಲಕಂಠನ ತರಹ ಎಲ್ಲಾ ಗಂಟಲಲ್ಲೇ ಇಟ್ಟುಕೊಳ್ಳುವಂತಾಗುತ್ತದೆ. ಹೌದು. ನೀಲಕಂಠ ಇದನ್ನೆಲ್ಲಾ ಹೇಗೆ ಬಗೆಹರಿಸುತ್ತಾನೆ? ಅದನ್ನ ಚಿತ್ರಮಂದಿರದಲ್ಲಿ ನೋಡಿ ಬಿಡಿ. ಇದು ಹಲವು ವರ್ಷಗಳ ಹಿಂದೆ ತಮಿಳಿನಲ್ಲಿ ಬಂದ ಚಿತ್ರವೊಂದರ ರೀಮೇಕ್‌. ಕತೆಯಲ್ಲಿರುವ ತಾಯಿಮಗನ ಸೆಂಟಿಮೆಂಟೇ, ಕನ್ನಡಕ್ಕೆ ರೀಮೇಕ್‌ ಮಾಡುವಂತೆ ಅವರನ್ನು ಪ್ರಚೋದಿಸಿರಬಹುದೇನೋ ಗೊತ್ತಿಲ್ಲ. ರೀಮೇಕು ಎಂದು ಅವರೇನು ಮೋಸ ಮಾಡುವುದಿಲ್ಲ. ಯಾರ್ಯಾರಿಗೆ ಏನೇನು ಬೇಕೋ, ಎಷ್ಟೆಷ್ಟು ಬೇಕೋ ಅದನ್ನೆಲ್ಲಾ ಇಟ್ಟಿದ್ದಾರೆ.

ಸೆಂಟಿಮೆಂಟಿಗೆ ಸುಜಾತಾ, ಪಡ್ಡೆಗಳಿಗೆ ನಮಿತಾ, ಕಾಮಿಡಿಗೆ ಸಾಧು, ಕ್ರೌರ್ಯಕ್ಕೆ ಲಂಬೂ ನಾಗೇಶ್‌ ಹಾಗೂ ಅವಿನಾಶ್‌ ... ಇವರೆಲ್ಲರ ಜತೆ ಬೋನಸ್ಸೆಂಬಂತೆ ರವಿಚಂದ್ರನ್‌ರ ಹಾಡು-ಪಾಡು. ಆರಂಭ ಜೋರಾಗಿದೆ, ಆಮೇಲೆ ಕೊಂಚ ನಿಧಾನವಾಗಿದೆ. ಹಾಗೂ ಹೀಗೂ ಸಹಿಸಿಕೊಂಡರೆ ಚಿತ್ರ ತೆಗೆದು ಹಾಕುವಂತಿಲ್ಲ.

ರವಿಚಂದ್ರನ್‌ ನಟರಾಗಿಯೂ, ಸಂಗೀತ ನಿರ್ದೇಶಕರಾಗಿಯೂ ಮಿಂಚುತ್ತಾರೆ. ಆದರೆ, ಅವರಿಗಿಂಥ ನಮಿತಾ ಹೆಚ್ಚು ಶಿಳ್ಳೆ, ಚಪ್ಪಾಳೆ ಗಿಟ್ಟಿಸುತ್ತಾರೆಂದರೆ ಅವರು ಬೇಸರ ಮಾಡಿಕೊಳ್ಳಬಾರದು. ಅದು ಅಭಿನಯದಲ್ಲಲ್ಲ, ಹಾಡುಗಳಲ್ಲಿ ಮಾತ್ರ. ಶ್ರೀದೇವಿಕಾಗಿರೋದು ಚಿಕ್ಕ ಪಾತ್ರ. ಅವರೂ ಚೊಕ್ಕವಾಗಿ ಕಾಣಿಸಿಕೊಂಡಿದ್ದಾರೆ. ತಾಯಿಯಾಗಿ ಸುಜಾತ ಅಭಿನಯ ಚೆನ್ನಾಗಿದೆ. ರಿಲೀಫ್‌ಗೆಂದು ಬರುವ ಸಾಧು ಪಾತ್ರಕ್ಕೊಂದು ವ್ಯಾಖ್ಯಾನವೇ ಇಲ್ಲ. ಇನ್ನೂ ಅಸಂಖ್ಯ ಪಾತ್ರಗಳಿವೆ. ಯಾವುದೂ ನೆನಪಿನಲ್ಲುಳಿಯುವುದಿಲ್ಲ.

ತಂತ್ರಜ್ಞರಲ್ಲಿ ಗೆಲ್ಲುವುದು ಛಾಯಾಗ್ರಾಹಕ ಜಿ.ಎಸ್‌ ಸೀತಾರಾಂ. ಸುಂದರಿ ನಮಿತಾ ಇನ್ನೂ ಚೆನ್ನಾಗಿ ಕಾಣುವಲ್ಲಿ ಅವರ ಪಾತ್ರ ದೊಡ್ಡದಿದೆ. ಮತ್ತೂ ಚೆನ್ನಾಗಿ ಕಾಣುವಲ್ಲಿ ರವಿಚಂದ್ರನ್‌ರ ಹಾಡುಗಳ ಕೈಚಳಕವಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada