twitter
    For Quick Alerts
    ALLOW NOTIFICATIONS  
    For Daily Alerts

    ಪ್ರಚಂಡ ರಾವಣ ಎಂಬ ಅಪರೂಪದ ಮೆಲೊಡ್ರಾಮಾ!

    By Staff
    |

    ಇವತ್ತು ನಟಭಯಂಕರ ವಜ್ರಮುನಿ ಬದುಕಿದ್ದಿದ್ದರೆ ಬಹುಶಃ ದೇವರಾಜ್ ಅವರನ್ನು ತಬ್ಬಿ ಮುದ್ದಾಡುತ್ತಿದ್ದರೇನೋ? ಡಾ. ರಾಜ್ ಇದ್ದಿದ್ದರೆ ಅವರ ಕೆನ್ನೆಗೊಂದು ಮುತ್ತಿಟ್ಟು ಎಷ್ಟು ಚೆನ್ನಾಗಿ ಮಾಡಿದ್ದೀಯಾ ಕಂದಾ...' ಎನ್ನುತ್ತಿದ್ದರೇನೋ? ಅಥವಾ ಇದೇ ಚಿತ್ರ ಒಂದು ವಾರದ ಹಿಂದೆ ಬಿಡುಗಡೆಯಾಗಿದ್ದರೆ ಆರ್. ಎನ್ ಜಯಗೋಪಾಲ್ ಹೆಮ್ಮೆಯ ಮಾತುಗಳನ್ನಾಡಿ ಕಣ್ಣೀರಾಗುತ್ತಿದ್ದರೇ' ಛೇ!

    *ವಿನಾಯಕರಾಮ್ ಕಲಗಾರು

    ನಿಜ. ನಟ ದೇವರಾಜ್ ರಾವಣನ ಪಾತ್ರದಲ್ಲಿ ಡೈನಾಮಿಕ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಬೆಂಕಿಯುಂಡೆಯುಗುಳುವಂಥ ಕಣ್ಣು, ಜಗವನ್ನೇ ಜಯಿಸಬಲ್ಲ ಗಜಗಾಂಭೀರ್ಯ, ಮೈನವಿರೇಳಿಸುವ ಅವರ ವಾಕ್‌ಚಾತುರ್ಯ, ಎರಡೂ ಕೈಎತ್ತಿ, ಆಕಾಶವನ್ನೇ ನುಂಗುವಂತೆ ಭೋರ್ಗರೆಯುವ ಆ ಘೋಷವಾಕ್ಯ.... ಎಲ್ಲವೂ ವಂಡರ್‌ಫುಲ್!

    ರಂಗಭೂಮಿ ಹಿನ್ನೆಲೆಯಿಂದ ದೇವರಾಜ್ ಮೊದಲ ಬಾರಿಗೆ ಪೌರಾಣಿಕ ಚಿತ್ರಕ್ಕೆ ಬಣ್ಣಹಚ್ಚಿದ್ದಾರೆ. ಅದರಲ್ಲೂ ಸವಾಲೆನಿಸುವ ದಶಕಂಠ ರಾವಣನ ಪಾತ್ರಕ್ಕೆ ಜೀವತುಂಬಿದ್ದಾರೆ. ಅವರ ಪಾತ್ರಕ್ಕೆ ಸರಿಹೊಂದುವ ರಾಮಾಯಣ ದ ಅದ್ಧೂರಿ ಸೆಟ್ ಹಾಕಿ ಪ್ರತೀ ಪಾತ್ರಕ್ಕೂ ಜೀವತುಂಬಿದ್ದಾರೆ ನಿರ್ದೇಶಕ ಶ್ರೀನಿವಾಸ್ ಪ್ರಸಾದ್. ಬಹುಶಃ ಇಂದು ಜಿ.ವಿ ಅಯ್ಯರ್, ಹುಣಸೂರು ಕೃಷ್ಣಮೂರ್ತಿ ಬದುಕಿದಿದ್ದರೆ ಪ್ರಚಂಡ ರಾವಣ ಸಿನಿಮಾ ನೋಡಿ ಭಾವುಕರಾಗುತ್ತಿದ್ದರೇನೋ!

    ರಾಮಾಯಣ ನಮ್ಮ ಜೀವನಾಡಿಯಲ್ಲಿ ಹಸಿರುಹೊಕ್ಕಾಗಿರುವಂಥದ್ದು. ಅಂಥ ಅದ್ಬುತ ದೃಶ್ಯಕಾವ್ಯಕ್ಕೆ ಸಿನಿಮಾರೂಪ ನೀಡುವುದು ಸುಲಭದ ಮಾತಲ್ಲ. ಅದರಲ್ಲೂ ಕಣಗಲ್ ಪ್ರಭಾಕರ ಶಾಸ್ತ್ರಿ ಅವರ ನಾಟಕವನ್ನು ಯತಾವತ್ತಾಗಿ ಬೆಳ್ಳಿ ತೆರೆಗೆ ತರುವುದೂ ದೊಡ್ಡ ಸಾಹಸವೇ ಸರಿ. ಸಿನಿಮಾ ನೋಡಿದವರಿಗೆ ಜಿವಿ ಅಯ್ಯರ್ ಚಿತ್ರಗಳು ನೆನಪಾಗದಿರದು. ಏಕೆಂದರೆ ಪ್ರತೀ ಫ್ರೇ ಮ್ 'ನಲ್ಲೂ ಅಷ್ಟೊಂದು ಶ್ರೀಮಂತಿಕೆ ಎದ್ದು ಕಾಣುತ್ತದೆ. ಆದರೆ 26ನೇ ವಯಸ್ಸಿನಲ್ಲೇ ಇಂಥದ್ದೊಂದು ಪ್ರಯತ್ನಕ್ಕಿಳಿದಿರುವ ನಿರ್ದೇಶಕರ ಬೆನ್ನುತಟ್ಟಲೇ ಬೇಕು.

    ಆಂಜನೇಯನ ಪಾತ್ರದಲ್ಲಿ ಭರತ್‌ಭಾಗವತರ್ ಅಮೋಘವಾಗಿ ಅಭಿನಯಿಸಿದ್ದಾರೆ. ಭಕ್ತಿಯನ್ನೇ ಮೈಯಲ್ಲಿ ಹೊತ್ತುಕೊಂಡಂತೆ ಪರಕಾಯ ಪ್ರವೇಶ ಮಾಡಿದ್ದಾರೆ. ಅವರು ಎಂಟ್ರಿ ಆಗುತ್ತಿದ್ದಂತೇ ಜನ ಸಾಕ್ಷಾತ್ ವಾಯುಪುತ್ರನೇ ಬಂದ ಎಂಬಂತೇ ಚಪ್ಪಾಳೆಯ ಸುರಿಮಳೆಗೈಯುತ್ತಾರೆ. ಇಂದು ಉದಯ್ ಕುಮಾರ್ ಇದ್ದಿದ್ದರೆ ಶಹಬ್ಬಾಶ್ ಭರತ್ ಎನ್ನುತ್ತಿದ್ದರೇನೋ!

    ನಾಟಕದ ರಾಗಗಳನ್ನೇ ಬಳಸಿ ಸಂಗೀತ ನೀಡಿರುವ ಗೋಪಿಕೃಷ್ಣ ಎಲ್ಲಿಯೂ ಸೋತಿಲ್ಲ. ಉದಯರವಿಚಂದ್ರಿಕಾ..., ಮಧುರರೂಪಿ ಬಾ..., ಜೋ ಲಾಲಿ ಜೋ ಲಾಲಿ ಹಾಡುಗಳು ಇಂಪಾಗಿವೆ. ಚಿತ್ರದ ಸಂಭಾಷಣೆಯಲ್ಲಿ ವಿಶೇಷವಾಗಿದೆ. ಅಂಗೈ ರಂಗಭೂಮಿಯಲ್ಲಿ ಮೃತ್ಯುದೇವತೆ ನೃತ್ಯವಾಡುತ್ತಿದ್ದಾಳೆ, ವಜ್ರ ಅಮೂಲ್ಯವಾದರೂ ಅದರಲ್ಲಿ ವಿಷವಿಲ್ಲ ಎಂದರೆ ನಂಬಲಾಗದು...' ಇಷ್ಟವಾಗುತ್ತದೆ. 'ವಿಭೀಷಣ, ಕಾಲಭೈರವನ ಪಾತ್ರಗಳು ವಿಶಿಷ್ಟವೆನಿಸಿವೆ.

    ಇವಿಷ್ಟು ಸಿನಿಮಾದ ಕುರಿತಾದ ಪರವಾದ ಅಂಶಗಳು. ಹಾಗಂತ ವಿರೋಧ ಅಂಶಗಳೇ ಇಲ್ಲ ಎಂದಲ್ಲ.ಇದೊಂದು ಸಿನಿಮಾ ಖಂಡಿತ ಹೌದು ಎಂಬುದನ್ನು ಒಪ್ಪಿಕೊಳ್ಳೋದೇ ಕಷ್ಟ. ಬದಲಾಗಿ ಪೌರಾಣಿಕ ನಾಟಕ ನೋಡಿದ ಅನುಭವವಾಗುತ್ತದೆ. ಇನ್ನುಕೆಲವು ಕಡೆ ಯಾವುದೇ ಮೆಗಾಧಾರಾವಾಹಿ ನೆನಪಾದರೂ ಆಶ್ಚರ್ಯವಿಲ್ಲ.

    ನಿರ್ದೇಶಕರು ರಾವಣನನ್ನೇ ವಿಜೃಂಭಿಸುವ ನಿಟ್ಟಿನಲ್ಲಿ ರಾಮನ ಪಾತ್ರವನ್ನು ಸಪ್ಪೆಯಾಗಿಸಿದ್ದಾರೆ. ರಾವಣ ಕತೆಯ ಕೇಂದ್ರಬಿಂದು ನಿಜ. ಆದರೆ ರಾಮ ಅವತಾರ ಪುರುಷ. ಆದ್ದರಿಂದ ಅವನಿಗೆ ಹೆಚ್ಚು ಒತ್ತು ನೀಡದಿರುವುದು ಸಮಂಜಸವಲ್ಲ. ನಿತಿನ್ ರಾಮನಿಗಿಂತಾ ಕೃಷ್ಣನ ಪಾತ್ರಕ್ಕೆ ಹೆಚ್ಚು ಹೊಂದಿಕೊಳ್ಳುತಾರೆ! ಮಂಡೋದರಿ ಹಾಗೂ ಸೀತೆಯ ಪಾತ್ರ ಸತ್ವಕಳೆದುಕೊವೆ.

    ಇನ್ನು ಕ್ಯಾಮೆರಾವರ್ಕ್ ಬಗ್ಗೆ ಹೇಳುವುದಾದರೆ ಅದು ಎಲ್ಲೋ ಒಂದಿಷ್ಟು ಕಡೆ ಕಣ್ಣಿಗೆ ರಾಚುತ್ತದೆ. ಇನ್ನು ಕೆಲವೆಡೆ ಗ್ರಾಫಿಕ್ ಕೂಡ ಕೈಕೊಟ್ಟಿದೆ. ಒಟ್ಟಾರೆ ಇದನ್ನು ಸಿನಿಮಾ ಎನ್ನುವ ಬದಲು ಒಂದು ಅಪರೂಪದ ಮೆಲೋಡ್ರಾಮಾ ಎನ್ನಬಹುದೇನೋ!

    Friday, March 29, 2024, 1:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X