»   » ವಿಲಕ್ಷಣ ದುನಿಯಾದ ವಿಚಿತ್ರ ದರ್ಶನ

ವಿಲಕ್ಷಣ ದುನಿಯಾದ ವಿಚಿತ್ರ ದರ್ಶನ

Subscribe to Filmibeat Kannada


‘ಮುಂಗಾರು ಮಳೆ’ ನಂತರ ಅದಕ್ಕೆ ತದ್ವಿರುದ್ಧವಾದ ಆದರೆ ವಿಕ್ಷಿಪ್ತ ಮತ್ತು ವಿಶೇಷ ಸಿನಿಮಾ ಬಂದಿದೆ. ಡೋಂಟ್‌ ಮಿಸ್‌ ಇಟ್‌...

  • ದೇವಶೆಟ್ಟಿ ಮಹೇಶ್‌

ಚಿತ್ರ : ದುನಿಯಾ
ನಿರ್ಮಾಪಕ : ಸಿದ್ದರಾಜು
ನಿರ್ದೇಶನ : ಸೂರಿ
ಸಂಗೀತ : ವಿ.ಮನೋಹರ್‌
ತಾರಾಗಣ : ವಿಜಯ್‌, ರಶ್ಮಿ, ರಂಗಾಯಣ ರಘು ಮತ್ತಿತರರು.

‘ಹರಕಲು ಬಟ್ಟೆ ಹಾಕ್ಕೊಂಡೋರೆಲ್ಲ ಕಳ್ಳರಲ್ಲ ಹುಡುಗಿ, ಬಾ ಬಾ ಇಲ್ಲಿ ಬದುಕೋಕೆ ನಂಬ್ಕೆ ಬೇಕು... ಗೊತ್ತಾಯ್ತಾ?’ ಬಡವರ ಘನತೆ ಹೆಚ್ಚಿಸುವ ಈ ಮಾತಿನ ಮೂಲಕ ‘ದುನಿಯಾ’ ಬಿಚ್ಚಿಕೊಳ್ಳುತ್ತದೆ. ಇದುವರೆಗೆ ಕನ್ನಡ ಚಿತ್ರಗಳಲ್ಲಿ ಕಾಣದ ವಿಲಕ್ಷಣ, ವಿಚಿತ್ರ ಬದುಕು ಮತ್ತು ಪಾತ್ರಗಳು ತೆರೆದುಕೊಳ್ಳುತ್ತವೆ. ಹೊರಲೋಕಕ್ಕೆ ಕರೆದುಕೊಂಡು ಹೋಗುತ್ತವೆ. ಜೀವನದ ಇನ್ನೊಂದು ಮುಖವನ್ನು ತೋರಿಸುತ್ತಾ, ಕಸಿವಿಸಿಗೊಳಿಸುತ್ತಾ, ಕೊನೆಗಿಷ್ಟು ಕಣ್ಣೀರಿಗೆ ಕವಿತೆಯಾಗುತ್ತದೆ.

ಇಂಥ ‘ದುನಿಯಾ’ ಕಟ್ಟಿಕೊಟ್ಟದ್ದು ನಿರ್ದೇಶಕ ಸೂರಿ. ಇದು ಈ ಹುಡುಗನ ಮೊದಲ ಚಿತ್ರ. ಆದರೆ ಹತ್ತು ಚಿತ್ರಗಳ ನಿರ್ದೇಶಕನಂತೆ ಕೆಲಸ ಮಾಡಿದ್ದಾನೆ. ಸಂಗೀತ, ಕ್ಯಾಮೆರಾ, ಸಂಕಲನ, ಸಂಭಾಷಣೆ, ಸಾಹಿತ್ಯ, ಕಲೆ, ಕಾಸ್ಟ್ಯೂಮ್ಸ್‌, ಲೈಟಿಂಗ್‌, ಲೋಕೇಶನ್‌... ಎಲ್ಲಾ ವಿಭಾಗವೂ ತಾಜಾ ತಾಜಾ... ಎಲ್ಲದಕ್ಕೂ ಸೂರಿ ಸ್ಪರ್ಶ ಇದ್ದೇ ಇದೆ. ಇದು ಹೀಗೇ ಇರಬೇಕು ಎನ್ನುವ ತುಡಿತ ಪ್ರತಿ ಫ್ರೇಮ್‌ನಲ್ಲೂ ಕಾಣಿಸುತ್ತದೆ. ಪಾತ್ರಗಳ ಆಯ್ಕೆಯಲ್ಲೂ ಸೂರಿ ಗೆದ್ದಿದ್ದಾರೆ. ಅನೇಕ ಹೊಸ ಮುಖಗಳು ಹಸಿಹಸಿಯಾಗಿಯೇ ಇಷ್ಟವಾಗುತ್ತವೆ.

ವಿ.ಮನೋಹರ್‌ ಸಂಗೀತದಲ್ಲಿ ಜೀವಂತಿಕೆಯಿದೆ. ಇದು ಅವರಿಗೆ ಪುನರ್ಜನ್ಮ. ಸತ್ಯ ಹೆಗಡೆ ಕ್ಯಾಮೆರಾ ಕೆಲಸ ಕತೆಗೊಂದು ಬುನಾದಿ ಹಾಕುತ್ತದೆ. ಅರೆಗತ್ತಲ ಬೆಳಕಿನ ಬೆಂಗಳೂರಿನ ದರ್ಶನ ಮಾಡಿಸುತ್ತದೆ. ಇನ್ನು ಸೂರಿ ಸಂಭಾಷಣೆಯ ಖದರ್ರೇ ಬೇರೆ. ಮಾತುಗಳನ್ನೂ ಹೀಗೂ ಬರೆಯಬಹುದಾ ಎನ್ನುವ ಅಚ್ಚರಿಗೆ ನೂಕುತ್ತದೆ. ಅದರಲ್ಲೂ ರಂಗಾಯಣ ರಘುಗೆ ಬರೆದ ಮಾತುಗಳು ತಮಾಷೆಯಾಗಿಯೇ ಬದುಕಿನ ನಗ್ನ ಸತ್ಯಗಳನ್ನು ಹೇಳುತ್ತಾ ಬಿಚ್ಚಿಬೀಳಿಸುತ್ತವೆ. ಅವರೊಬ್ಬರಿಗೆ ಬರೆದ ಮಾತುಗಳೇ ಸೂರಿಯ ತಾಕತ್ತಿಗೆ ಸಾಕ್ಷಿ.

ಮೊದಲ ಬಾರಿ ನಾಯಕನಾದ ವಿಜಯ್‌ ಸಿಕ್ಕ ಅವಕಾಶಗವನ್ನು ಆಚೀಚೆ ಆಗದಂತೆ ಬಳಸಿಕೊಂಡಿದ್ದಾರೆ. ಪಾತ್ರವೂ ವಿಲಕ್ಷಣವಾಗಿದೆ. ತೀರಾ ಅಮಾಯಕನಂತೆ ಕಾಣಿಸುವ ಆತ ಏಕಾಏಕಿ ಕಾಡು ಮನುಷ್ಯನಂತೆ ಒರಟನಾಗುತ್ತಾನೆ. ಬಹುಶಃ ಇಂಥ ಪಾತ್ರ ಕನ್ನಡದಲ್ಲಿ ಬಂದಿರೋದು ಇದೇ ಮೊದಲು. ಅದಕ್ಕೆ ವಿಜಯ್‌ ನ್ಯಾಯ ಸಲ್ಲಿಸಿದ್ದಾರೆ. ಸೆಂಟಿಮೆಂಟ್‌ಗಿಂತ ಹೊಡೆದಾಟದಲ್ಲಿ ಅಬ್ಬಿರುಸುತ್ತಾರೆ.

ನಾಯಕಿ ರಶ್ಮಿ ಪಕ್ಕದ ಮನೆ ಹುಡುಗಿಯಂತೆ ಆವರಿಸುತ್ತಾರೆ. ಯಾವುದೇ ಪಾತ್ರಕ್ಕೂ ಸೈ ಎನ್ನುವ ಮಾತನ್ನು ರಂಗಾಯಣ ರಘು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಲೂಸ್‌ ಮಾದನ ಪಾತ್ರದಲ್ಲಿ ಯೋಗೀಶ್‌ ನಿಜಕ್ಕೂ ನಿಮಗೊಂದು ಬೋನಸ್‌. ಒಮ್ಮೆಯೂ ನಗದ ಕಿಶೋರ್‌ ಮಸ್ತುರೇ ಮಸ್ತು.

ಇಷ್ಟೆಲ್ಲ ಹೇಳಿ, ಕತೆಯನ್ನೇ ತಿಳಿಸದಿದ್ದರೆ ಹೇಗೆ? ಅದು ಸಿಂಪಲ್‌. ಭೂಗತ ಲೋಕ ಮತ್ತು ಪ್ರೇಮ ಕತೆ ಎರಡನ್ನೂ ಮಿಶ್ರ ಮಾಡಿ ಸೂರಿ ಕತೆ ಬರೆದಿದ್ದಾರೆ. ಹಳ್ಳಿಯಿಂದ ಬಂದ ನಾಯಕ ಅಪಹರಣವಾದ ಹುಡುಗಿಯನ್ನು ರಕ್ಷಿಸುತ್ತಾನೆ. ಅವಳೊಂದಿಗೆ ಬದುಕುತ್ತಾ, ಅವಳ ಓದಿಗೆ ಸಹಾಯ ಮಾಡುತ್ತಾ, ನಿಧಾನವಾಗಿ ಭೂಗತ ಲೋಕಕ್ಕೆ ಕಾಲಿಡುತ್ತಾನೆ. ತಾನು ಮಾಡದ ತಪ್ಪಿಗೆ ಅಪರಾಧಿ ಆಗುತ್ತಾ ಹೋಗುತ್ತಾನೆ. ಮುಂದೆ?

ಅದಕ್ಕೆ ಚಿತ್ರ ನೋಡಿ. ಇಂಥ ಕತೆಗೆ ವಿಭಿನ್ನ ನಿರೂಪಣೆೆಯೇ ಜೀವಾಳ. ಅದರಲ್ಲಿ ಸೂರಿ ಗೆದ್ದಿದ್ದಾರೆ. ಆದರೆ ಭಯಪಡಿಸುವಷ್ಟು ಹಿಂಸೆಯನ್ನು ತೋರಿಸಿದ್ದು ಒಳ್ಳೆಯದಲ್ಲ. ‘ಹೀಗೇ ನಡೆಯುತ್ತೆ’ ಅನ್ನೋದು ನಿಜ. ಹಾಗಂತ ಅದನ್ನೇ ತೆರೆ ಮೇಲೆ ತೋರಿಸಬಾರದು. ಸಿನಿಮಾಕ್ಕೊಂದು ಸಾಮಾಜಿಕ ಜವಾಬ್ದಾರಿ ಇರುತ್ತದಲ್ಲವೆ? ಎನಿ ಹೌ... ‘ಮುಂಗಾರು ಮಳೆ’ ನಂತರ ಅದಕ್ಕೆ ತದ್ವಿರುದ್ಧವಾದ ಆದರೆ ವಿಕ್ಷಿಪ್ತ ಮತ್ತು ವಿಶೇಷ ಸಿನಿಮಾ ಬಂದಿದೆ. ಡೋಂಟ್‌ ಮಿಸ್‌ ಇಟ್‌...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada