»   » ರಂಗ ಎಸ್ಸೆಸ್ಸೆಲ್ಸಿ ಪಾಸ್‌, ಸೆಕೆಂಡ್‌ ಕ್ಲಾಸ್‌

ರಂಗ ಎಸ್ಸೆಸ್ಸೆಲ್ಸಿ ಪಾಸ್‌, ಸೆಕೆಂಡ್‌ ಕ್ಲಾಸ್‌

Posted By:
Subscribe to Filmibeat Kannada
  • ರಮೇಶ್‌ಕುಮಾರ್‌ ನಾಯಕ್‌
ನೆಂಚಿಕೊಳ್ಳಲು ಜೋಡಿಸಿಟ್ಟಿರುವ ಆಲೂ ಚಿಪ್ಸ್‌, ಬೋನ್‌ಲೆಸ್‌ ಚಿಕನ್‌ ಕಬಾಬ್‌, ಮೂಂಗ್‌ದಾಲ್‌, ಪಾಪಡ್‌ ಮಿಕ್ಸ್‌ಗಳೆಲ್ಲ ಗರಂಗರಂ ಆವೆ. ಆದರೆ ಗುಟುಕಿಸಬೇಕಿರುವ ಬಿಯರ್‌ಗೆ ಟೇಸ್ಟೇ ಇಲ್ಲದಿದ್ದರೆ ? ‘ರಂಗ ಎಸ್‌ಎಸ್‌ಎಲ್‌ಸಿ’ಯ ಪಾಡೂ ಇದೇ.

ರಂಗನ ಆಟೊ ಆರಂಭದಲ್ಲಿ ಏಕ್‌ದಂ ಟಾಪ್‌ಗೇರ್‌ನಲ್ಲಿ ಓಡುತ್ತದೆ. ಮುಂದೆ ಮಧ್ಯಮ ವೇಗಕ್ಕೆ ಇಳಿಯುತ್ತದೆ. ಇಂಟರ್‌ವಲ್‌ ಹೊತ್ತಿಗೆ ಗಕ್ಕನೆ ನಿಂತುಬಿಡುವ ಆಟೊ, ಬಳಿಕ ಕುಂಯಾಮರ್ರೊ ಎಂದು ಸಾಗುತ್ತದೆ.

ಮಣಿ ಚಿತ್ರದಿಂದ ಅಪಾರ ಭರವಸೆ ಮೂಡಿಸಿದ್ದ ನಿರ್ದೇಶಕ ಯೋಗರಾಜ ಭಟ್‌ ಮೇಲೆ ಸಹಜವಾಗಿಯೇ ವಿಪರೀತ ನಿರೀಕ್ಷೆಗಳಿದ್ದವು. ‘ರಂಗ ಎಸ್‌ಎಸ್‌ಎಲ್‌ಸಿ’ ಎಂಬ ಟೈಟಲ್‌ ಮತ್ತು ಚಿತ್ರದ ಒಟ್ಟಾರೆ ಕಾನ್ಸೆಪ್ಟ್‌ನಿಂದ ಭಟ್‌ ಮೆಚ್ಚುಗೆ ಗಳಿಸುತ್ತಾರೆ. ಆದರೆ ಚಿತ್ರಕಥೆಯ ಉತ್ತರಾರ್ಧ ಮತ್ತು ನಾಯಕನಿಗೆ ಪರ್ಯಾಯವಾಗಿ ಮೂಡಿಬರುವ ದೃಶ್ಯಾವಳಿಗಳ ಅತಿರೇಕ ಚಿತ್ರದ ಫಲಿತಾಂಶದ ಮೇಲೆ ದುಷ್ಪರಿಣಾಮ ಬೀರಿದೆ.

ಇಡೀ ಚಿತ್ರವು ರಂಗ(ಸುದೀಪ್‌)ನ ಮೇಲೆ ಕೇಂದ್ರೀಕೃತ. ಆತನ ಎಂಟ್ರಿ, ಗುಣಗಾನದ ಹಾಡು ಮತ್ತು ಪಕ್ಕಾ ಆಡು ಮಾತಿನ ಸಂಭಾಷಣೆ ನಾಯಕನ ಪಾತ್ರವನ್ನು ಬಲಿಷ್ಠಗೊಳಿಸಿದೆ. ಆದರೆ ಚಿತ್ರದ ಎರಡನೇ ಪ್ರಮುಖ ಭಾಗವಾದ ಖಳನಾಯಕನ ಪಾತ್ರ ರಂಗಾಯಣ ರಘು ಅವರ ಓವರ್‌ ಮ್ಯಾನರಸಿಂನಿಂದ ಗಬ್ಬೆದ್ದಿದೆ. ರಘುವಿನ ಬಾಂಬ್‌ನಾಗನ ಪಾತ್ರದ ಹುಚ್ಚಾಟಕ್ಕೆ ಕತ್ತರಿ ಹಾಕಿ, ಚಿತ್ರಕತಥೆಯಲ್ಲಿ ಹಾಸ್ಯದ ಟ್ರ್ಯಾಕೊಂದನ್ನು ಸೇರಿಸಬಹುದಿತ್ತೇನೊ.

ಸುದೀಪ್‌ನ ಹೀರೋಯಿಸಂ ಒಂದನ್ನೇ ನೆಚ್ಚಿಕೊಂಡಿರುವ ನಿರ್ದೇಶಕರು ಉಳಿದ ಭಾಗವನ್ನು ಕಡೆಗಣಿಸಿದ್ದಾರೆ. ಒಂದು ಹಂತದವರೆಗೆ ಸುದೀಪ್‌ ನಟನೆ ಖುಷಿ ಕೊಡುತ್ತದೆ. ಆದರೆ ಕೊನೆಕೊನೆಗೆ ಅವರ ಅಬ್ಬರ, ಕಿರುಚಾಟ ಬಾಂಬ್‌ನಾಗನ ಜತೆ ಜಿದ್ದಿಗೆ ಬಿದ್ದಿದ್ದರಿಂದ ಕಿರಿಕಿರಿಯಾಗುತ್ತದೆ.

ಸಂದೀಪ್‌ ಚೌಟರ ಸಂಗೀತ ಚಿತ್ರದ ಪ್ಲಸ್‌ ಪಾಯಿಂಟ್‌. ಎಲ್ಲ ಹಾಡುಗಳು ಸೊಗಸಾಗಿವೆ. ಅವುಗಳಲ್ಲಿ ಎರಡು ಹಾಡುಗಳ ಕಿಕ್‌ ಕೊಟ್ಟರೆ, ಉಳಿದವು ಗುನುಗುನಿಸುವಂತಿವೆ. ಗ್ರಾಮ್ಯ ಸೊಗಡಿನ ‘ಊರ ಕಣ್ಣು , ಯಾರ ಕಣ್ಣು ’ ಹಾಡಂತೂ ಕನ್ನಡದ ಸಾರ್ವಕಾಲಿಕ ಸೂಪರ್‌ ಹಿಟ್‌ ಹಾಡುಗಳಲ್ಲಿ ಸ್ಥಾನ ಗಿಟ್ಟಿಸಲಿದೆ. ಹಿನ್ನೆಲೆ ಸಂಗೀತ ಕೂಡ ಹೊಸ ಅನುಭವ ಕೊಡುತ್ತದೆ. ಹಾಡು ಬರೆದ ನಾಗೇಂದ್ರ ಪ್ರಸಾದ್‌ ಸಖತ್ತಾಗಿ ಸ್ಕೋರ್‌ ಮಾಡಿದ್ದಾರೆ.

ಚಿತ್ರಕತೆಯಲ್ಲಿ ಸೂರಿ ಎಡವಿದ್ದರೂ ಸಂಭಾಷಣೆಯಲ್ಲಿ ಮಿಂಚಿದ್ದಾರೆ. ‘ಪಾರೂ, ನಾನು ಮದುವೆ ಆಗೋ ಹುಡುಗಿ ರಂಭೆ, ಊರ್ವಶಿ, ಮೇನಕೆ ಥರ ಇರಬೇಕಂತಿಲ್ಲ ಪಾರೂ, ಮೊಕದ ಮೇಲಿರಬೇಕಾದ ಪಾರ್ಟ್ಸ್‌ಗಳೆಲ್ಲ ಅಲ್ಲಲ್ಲೆ ಇದ್ರೆ ಸಾಕೂ ಪಾರೂ. ಎರಡು ಕಣ್ಣು, ಎರಡು ಕಿವಿಗಳಲ್ಲಿ ಕನಿಷ್ಠ ಒಂದೊಂದು ವರ್ಕಿಂಗ್‌ ಕಂಡೀಷನ್‌ನಲ್ಲಿದ್ರೆ ಸಾಕು ಪಾರೂ, ಎಡ್ಜೆಸ್ಟ್‌ ಮಾಡ್ಕೊತೀನಿ. ಆದ್ರೆ ಯಾವ ಆ್ಯಂಗಲ್‌ನಲ್ಲಿ ನೋಡಿದ್ರೂ ಆಕೆ ಹುಡುಗಿ ಥರಾನೆ ಕಾಣ್ಬೇಕು ಪಾರೂ. ರಾತ್ರಿ ನಾನು ನೈಂಟಿ ಹಾಕ್ಕೊಂಡು ಬರುವಾಗ ನೈಟಿ ಹಾಕ್ಕೊಂಡು ಬಾಗಿಲಲ್ಲಿ ನಿಂತು ಗುರಾಯಿಸಿದ್ರೆ ಮಾತ್ರ ಬೇಜಾನ್‌ ಪ್ರಾಬ್ಲಮ್‌ ಆಗುತ್ತೆ ಪಾರೂ......’ ಇದು ಸೂರಿ ಡೈಲಾಗ್‌ನ ಸ್ಯಾಂಪಲ್‌.

ರಂಗ, ಎಸ್‌ಎಸ್‌ಎಲ್‌ಸಿ ಪಾಸ್‌ ಮಾಡಲಾಗದ ಒಬ್ಬ ಸಾಮಾನ್ಯ ಆಟೊ ಡ್ರೆೃವರ್‌. ಆತನೇ ಹೇಳಿಕೊಳ್ಳುವಂತೆ ಒಂಚೂರು ಹುಚ್ಚ . ಆತನ ಮೈಮುಟ್ಟಿದವರು ಕ್ಷಣಾರ್ಧದಲ್ಲಿ ಮಂಗಮಾಯ. ಈ ನಡುವೆ ಆತನನ್ನು ಪದ್ಮಾ (ರಮ್ಯಾ) ಪ್ರೀತಿಸುತ್ತಾಳೆ. ನಿಯಮದ ಪ್ರಕಾರ ಹುಡುಗಿ ಮನೆಯಲ್ಲಿ ವಿರೋಧ. ಇದರ ಜತೆಗೆ ವಿಲನ್‌ಗಳ ಕಾಟ. ಮುಂದೆ ಸಾಮಾನ್ಯವಾಗಿ ಏನು ನಡೆಯಬೇಕೋ ಅದೇ ನಡೆಯುತ್ತದೆ. ಹಾಗಾಗಿ ಇಲ್ಲಿ ಮಹತ್ವದ ತಿರುವುಗಳಿಲ್ಲ . ಕುತೂಹಲಕ್ಕೆ ಜಾಗವಿಲ್ಲ .

ಮತ್ತೇರಿಸುವ ಸಂಗೀತ, ಕಿಕ್ಕೇರಿಸುವ ಡೈಲಾಗ್‌, ವಿಲಕ್ಷಣ ಮ್ಯಾನರಿಸಂ, ಮಾದಕ ಐಟಂ ಸಾಂಗ್‌.... ಇವೆಲ್ಲ ಎಷ್ಟೇ ಪೊಗದಸ್ತಾಗಿದ್ದರೂ ಚಿತ್ರವನ್ನು ಅಂತಿಮವಾಗಿ ಕಾಪಾಡುವುದು ಆರಂಭ, ಮಧ್ಯಂತರ ಮತ್ತು ಅಂತ್ಯ. ರಂಗನ ದೌರ್ಬಲ್ಯ ಇರುವುದು ಇಲ್ಲೇ .

ಮಧ್ಯಂತರ ಮತ್ತು ಕ್ಲೈಮ್ಯಾಕ್ಸ್‌ನ ಮಾತು ಬಂದಾಗ ಬಾಲಿವುಡ್‌ನ ಹೊಸ ಚಿತ್ರ ಮರ್ಡರ್‌ ನೆನಪಾಗುತ್ತಿದೆ. ಮಲ್ಲಿಕಾ ಷೆರಾವತ್‌ಳ ಅಭೂತಪೂರ್ವ ಬೆಡ್‌ರೂಂ ದೃಶ್ಯಗಳಿವೆ ಎಂದು ನಿರ್ಮಾಪಕರು ಟಾಂಟಾಂ ಮಾಡಿ ಚಿತ್ರ ಮಂದಿರ ಭರ್ತಿ ಮಾಡಿದರು. ಆದರೆ ಅಲ್ಲಿ ಚಿತ್ರವನ್ನು ಕಾಪಾಡಿದ್ದು ಮಲ್ಲಿಕಾಳ ಬೆತ್ತಲೆ ದೇಹವಲ್ಲ , ಅಚ್ಚರಿಯ ಚಿತ್ರಕಥೆ.

ಚಿತ್ರದಲ್ಲಿ ಎದ್ದು ಕಾಣುವುದು ಮೂರೇ ಪಾತ್ರ. ಆತ, ಆಕೆ ಮತ್ತು ಆಕೆಯ ಪ್ರಿಯಕರ. ಪ್ರಿಯಕರನ ಕೊಲೆ, ಆತ ಮತ್ತು ಆಕೆಯ ಬಂಧನ ಇಂಟರ್‌ವೆಲ್‌ ಹೊತ್ತಿಗೆ ಆಗಿರುತ್ತದೆ. ಐಸ್‌ಕ್ರೀಂ ತಿಂದು ಮನೆಗೆ ಹೋಗೋದೆ ವಾಸಿ, ಚಿತ್ರದಲ್ಲಿ ಮುಂದೇನಿರುತ್ತದೆ ಮಣ್ಣು ಎಂದುಕೊಳ್ಳುತ್ತಾರೆ ಪ್ರೇಕ್ಷಕರು. ಆದರೆ ಎಲ್ಲರ ನಿರೀಕ್ಷೆಗೆ ವ್ಯತಿರಿಕ್ತವಾಗಿ ಮುಂದೆ ತಿರುವುಗಳ ಮೇಲೆ ತಿರುವು ಕಾಣಿಸಿಕೊಳ್ಳುತ್ತದೆ. ಪ್ರೇಕ್ಷಕರು ಕೊನೆಯ ಕ್ಷಣದವರೆಗೆ ಟೆನ್ಷನ್‌ನಲ್ಲಿರುತ್ತಾರೆ.

ಅಂದಹಾಗೆ, ಇಲ್ಲಿ ‘ರಂಗ’ನನ್ನು ನೋಡಲು ಬಂದವರು ಚಿತ್ರ ಮುಗಿಯಲು 20 ನಿಮಿಷ ಇರುವಾಗಲೇ ಹೊರಡಲುಧಿಅನುವಾಗುತ್ತಾರೆ.

(ಸ್ನೇಹಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada