»   » ಘಮ್ಮೆನ್ನುವ ‘ಸೇವಂತಿ ಸೇವಂತಿ’ಪರಿಮಳ

ಘಮ್ಮೆನ್ನುವ ‘ಸೇವಂತಿ ಸೇವಂತಿ’ಪರಿಮಳ

Subscribe to Filmibeat Kannada


‘ಸೇವಂತಿ ಸೇವಂತಿ’ ಅಷ್ಟೆಲ್ಲ ಸುದ್ದಿ ಮಾಡಿದ್ದು ಏಕೆ? ಮೊದಲ ಬಾರಿಗೆ ಬರೀ ಜಾನಪದ ಹಾಡುಗಳನ್ನು ಬಳಸಿಕೊಳ್ಳಲಾಗಿದೆ ಎಂಬ ಒಂದೇ ಒಂದು ಕಾರಣಕ್ಕೆ. ಆದರೆ, ಚಿತ್ರದ ಮೈನಸ್‌ ಪಾಯಿಂಟೇ ಹಾಡುಗಳು.

  • ಚೇತನ್‌ ನಾಡಿಗೇರ್‌
ಜಾನಪದ ಹಾಡುಗಳನ್ನು ಈ ಚಿತ್ರಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದಾಗ ಜನ ಸಂಭ್ರಮಪಟ್ಟಿದ್ದು ಸುಳ್ಳಲ್ಲ. ಈಗ ಅದ್ಯಾಕೆ ಬೇಕಿತ್ತು ಎಂದು ಕೇಳುತ್ತಿರುವುದೂ ಸುಳ್ಳಲ್ಲ. ಜನ ಜಾನಪದ ಹಾಡುಗಳನ್ನು ಇಷ್ಟಪಟ್ಟಿರುವುದು ಅದರ ಸರಳತೆ, ಸೊಗಡು ಮತ್ತು ಅದರ ಇಂಪಾದ ಧ್ವನಿಗಾಗಿ. ಆದರೆ, ‘ಸೇವಂತಿ ಸೇವಂತಿ’ಯಲ್ಲಿ ಅದೊಂದು ಬಿಟ್ಟು ಇನ್ನೆಲ್ಲ ಇವೆ.

ಇಲ್ಲಿ ಜಾನಪದ ಹಾಡುಗಳು ಸಹ ಪಕ್ಕಾ ಸಿನಿಮೀಯವಾಗಿವೆ. ರೀಮಿಕ್ಸ್ಡ್‌ ಆಗಿವೆ. ಇದಕ್ಕೆ ಕಾರಣ; ಕುನಾಲ್‌ ಗಂಜನ್‌ವಾಲ, ಶ್ರೇಯಾ ಘೋಷಾಲ್‌, ಶಂಕರ್‌ ಮಹಾದೇವನ್‌, ಎಸ್‌.ಎ. ರಾಜ್‌ಕುಮಾರ್‌ ... ಮುಂತಾದ ಸುಶ್ರಾವ್ಯ ಕಂಠಗಳಿಂದ ಹಾಡಿಸಿರುವುದು. ಮತ್ತು ಎಸ್‌.ಎ.ರಾಜ್‌ಕುಮಾರ್‌ ಸಂಗೀತ ನೀಡಿರುವುದು. ಇವರನ್ನೆಲ್ಲ ಕರ್ನಾಟಕಕ್ಕೆ ಕರೆಸಿ ಕನ್ನಡ ಡಿಂಡಿಮ ಬಾರಿಸಿರುವ ಎಸ್‌. ನಾರಾಯಣ್‌ಗೆ ಜೈ!

ಇದನ್ನೆಲ್ಲ ಸಹಿಸಿಕೊಂಡು ಬಿಟ್ಟರೆ ಸೇವಂತಿಯಲ್ಲಿ ಪ್ರೀತಿಯ ಪರಿಮಳವಿದೆ. ತಣ್ಣನೆ ಕ್ರೌರ್ಯವಿದೆ, ಒಳ್ಳೆಯ ಕತೆಯಿದೆ, ಸುಮಾರಾದ ಚಿತ್ರಕತೆಯಿದೆ. ಅದಕ್ಕೂ ಸುಮಾರಾದ ನಿರೂಪಣೆಯಿದೆ. ಚಿತ್ರದ ಕತೆ ಸರಳವಾಗಿದೆ.

ಆ ಊರಲ್ಲಿ ಭೀಕರ ಬರ. ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರ. ಇಂಥ ಸಂದರ್ಭದಲ್ಲಿ ಆ ಊರಿಗೆ ಅವನು ಬರುತ್ತಾನೆ. ಅವನು ಊರಿಗೆ ಕಾಲಿಡುತ್ತಲೇ ಮುನಿಸಿಕೊಂಡಿದ್ದ ಮಳೆರಾಯ ಭೂಮಿಗೆ ಕಾಲಿಡುತ್ತದೆ. ಆ ಸಂತೋಷಕ್ಕೆ ಅವನ ಬಾಯಿಂದ ‘ಮಾಯದಂಥ ಮಳೆ ಬಂತಣ್ಣಾ ’ ಹಾಡಾಗಿ ಬರುತ್ತದೆ.

ಅವನು ದೇವು. ಬೆಣ್ಣೆ ಮುದ್ದಪ್ಪನ ಮಗ. ಆರನೇ ಕ್ಲಾಸನ್ನೇ ಎಂಟು ವರ್ಷ ಓದಿದವನು. ಓದಿಗಿಂತ ಜಾನಪದ ಹಾಡುಗಳೇ ನನಗಿಷ್ಟ ಎನ್ನುವವನು. ಸುಖವಿರಲಿ, ದುಃಖವಿರಲಿ ಒಂದಲ್ಲ ಒಂದು ಹಾಡನ್ನು ಸದಾ ಹಾಡುವವನು. ಹೀಗೊಮ್ಮೆ ಗುನುಗುತ್ತಿರುವಾಗಲೇ ಅದು ಸೇವಂತಿ ಕಿವಿಗೆ ಬೀಳುತ್ತದೆ.

ಅವರಿಬ್ಬರ ಮಧ್ಯೆ ಚಿಗುರೊಡೆದ ಸ್ನೇಹ, ಮುಂದೆ ಪ್ರೀತಿಯ ಕಡೆ ತಿರುಗುತ್ತದೆ. ಅದನ್ನು ಹೇಳುವಷ್ಟರಲ್ಲಿ ಅವಳಿಗೆ ಮದುವೆ ಗೊತ್ತಾಗಿರುತ್ತದೆ. ಗೆಳೆಯ ಸಹಿಸಲಾರದಾಗುತ್ತಾನೆ. ಹೇಗಾದರೂ ಸರಿ, ಅವಳನ್ನೇ ಮದುವೆಯಾಗಬೇಕು ಎಂದು ಮದುವೆಯ ಹಿಂದಿನ ದಿನ ಸದ್ದಿಲ್ಲದೆ ಅವಳಿಗೆ ಗೊತ್ತಾಗದಂತೆಯೇ ತಾಳಿ ಕಟ್ಟಿ ಬರುತ್ತಾನೆ.

ಬೆಳಗಾಗುತ್ತಿದ್ದಂತೆಯೇ ವಿಷಯ ಡಂಗೂರ, ಮದುವೆ ಕ್ಯಾನ್ಸಲ್‌. ಭಗ್ನ ಪ್ರೇಮಿಗಳಿಗೆ ಇಂಥದೊಂದು ಭಯಂಕರ ಐಡಿ ಹೇಳಿಕೊಡುತ್ತಲೇ ಎಸ್‌. ನಾರಾಯಣ್‌ ಮುಂದಿನ ಕತೆಯ ನೋಡುಗರಿಗೆ ಸಾಕಷ್ಟು ಟೆನ್ಷನ್‌ ಕೊಡುತ್ತಾರೆ. ಕತೆ ತುಸು ಎಳೆಯುತ್ತಾರೆ. ಹೀಗೆ ಎಳೆದು ಎಳೆದು ಚಿತ್ರ ಮುಗಿಸುತ್ತಾರೆ. ಆಗ ಪ್ರೇಕ್ಷಕನಿಗೆ ನಾಯಕಿಯ ಗೊಂದಲ, ಅವಳ ತೀರ್ಮಾನ ವಿಚಿತ್ರವೆನಿಸುತ್ತದೆ.

ಅದೇನೇ ಇರಲಿ, ನಾರಾಯಣ್‌ ಬಹಳ ಜಾಣತನದಿಂದ ಹಾಡುಗಳನ್ನು ಕತೆಗೆ ಪೂರಕವಾಗಿ ಪೋಣಿಸಿದ್ದಾರೆ. ಅದರಲ್ಲೂ ಬರೀ ಗ್ರಾಫಿಕ್ಸ್‌ನಲ್ಲೇ ತೆಗೆದಿರುವ ‘ನೋಡವಳಂದಾವಾ... ’ ಹಾಡಂತೂ ನಿಜವಾಗಲೂ ನೋಡಬಲ್‌. ಮಿಕ್ಕ ಹಾಡುಗಳಿಗೂ ಮೋಸ ಮಾಡಿಲ್ಲ. ಅದಕ್ಕೆ ಅವರಿಗೆ ಜತೆಯಾಗಿದ್ದಾರೆ ಪಿ.ಕೆ.ಎಚ್‌. ದಾಸ್‌. ಮನೆಯಾಗಲಿ, ಹೊರಗಿನ ಪರಿಸರವಾಗಲಿ ... ಎಲ್ಲವನ್ನು ಅವರು ಚೆಂದಗಾಣಿಸಿದ್ದಾರೆ.

ನಾಯಕ-ನಾಯಕಿಯಿಂದ ಹಿಡಿದು ಎಲ್ಲರೂ ತಮ್ಮ ಶಕ್ತ್ಯಾನುಸಾರ ಸ್ಪರ್ಧೆಗಿಳಿದವರಂತೆ ಚೆನ್ನಾಗಿ ಅಭಿನಯಿಸಿದ್ದಾರೆ. ಅದರಲ್ಲೂ ವಿಜಯ ರಾಘವೇಂದ್ರ ಹಾಗೂ ದೊಡ್ಡಣ್ಣ ಅಭಿನಯ ಗ್ರೇಟ್‌. ಸೆಂಟಿಮೆಂಟ್‌ ಹಾಗೂ ಕಾಮಿಡಿ ದೃಶ್ಯಗಳಲ್ಲಿ ದೊಡ್ಡಣ್ಣ; ಭಯ, ಸಂಶಯ, ತಲ್ಲಣಗಳ ನಡುವೆ ವಿಜಯ್‌ ರಾಘವೇಂದ್ರ ಗೆಲ್ಲುತ್ತಾರೆ.

ರಮ್ಯ ಮುಖದಲ್ಲಿ ಲವಲವಿಕೆಯಿದೆ. ಹಾಗೆಯೇ ಕೈಯಲ್ಲಿ ಕೂಡ. ಅದಕ್ಕೇ ಇರಬೇಕು ಚಿತ್ರದಲ್ಲಿ ಅವರಿಂದ ಹೊಡೆಸಿಕೊಳ್ಳುವವರ ಪಟ್ಟಿ ದೊಡ್ಡದೇ ಇದೆ. ಮುಖ್ಯಮಂತ್ರಿ ಚಂದ್ರು, ತುಳಸಿ ಶಿವಮಣಿ, ಕೋಮಲ್‌ ಕುಮಾರ್‌ ಅಭಿನಯವೂ ಸೊಗಸಾಗಿದೆ.

ಒಟ್ಟಿನಲ್ಲಿ ‘ಸೇವಂತಿ ಸೇವಂತಿ’ಯ ಪರಿಮಳವನ್ನು ಇಡೀ ಕುಟುಂಬಕ್ಕೆ ಕಟ್ಟಿ ಕೊಟ್ಟಿದ್ದಾರೆ ನಾರಾಯಣ್‌. ಅದನ್ನು ಆಸ್ವಾದಿಸುವುದು ಪ್ರೇಕ್ಷಕರಿಗೆ ಬಿಟ್ಟ ವಿಚಾರ.

‘ಸೇವಂತಿ ಸೇವಂತಿ’ ಸಿನಿಮಾದ ಚಿತ್ರಪಟಗಳು

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada