»   » ಇಲ್ಲಿ ಕತೆಯೇ ಇಲ್ಲ. ಹಾಗಂತ ಹೇಳಿದರೆ ಕತೆ ಬರೆದ ಇಂದ್ರಜಿತ್‌ ಬೇಜಾರು ಮಾಡಿಕೊಳ್ಳಬಾರದು. ಏನೂ ಇರದುದರ ನಡುವೆ ಏನೋ ಇರುವಂತೆ ತೋರಿಸುವ ಹೊಸ ಶೈಲಿ ಇವರದು !

ಇಲ್ಲಿ ಕತೆಯೇ ಇಲ್ಲ. ಹಾಗಂತ ಹೇಳಿದರೆ ಕತೆ ಬರೆದ ಇಂದ್ರಜಿತ್‌ ಬೇಜಾರು ಮಾಡಿಕೊಳ್ಳಬಾರದು. ಏನೂ ಇರದುದರ ನಡುವೆ ಏನೋ ಇರುವಂತೆ ತೋರಿಸುವ ಹೊಸ ಶೈಲಿ ಇವರದು !

Posted By:
Subscribe to Filmibeat Kannada

ಕನ್ನಡಕ್ಕೆ ಮೊದಲು ‘ ಡೌವ್‌’ ಎಂಬ ಶಬ್ದ ಪರಿಚಯಿಸಿದ ಕೀರ್ತಿ ಯಾರಿಗೆ ಸಲ್ಲುತ್ತದೆ ? ಒಬ್ಬ ಉಪೇಂದ್ರ ಅಂತಾನೆ. ಮತ್ತೊಬ್ಬ ಜಗ್ಗೇಶ್‌ ಅಂತ ಸೆಡ್ಡು ಹೊಡೆಯುತ್ತಾನೆ. ಅವರಿಬ್ಬರ ಜಗಳ ಯುದ್ಧದ ಹಂತಕ್ಕೆ ಮುಟ್ಟಬೇಕೆನ್ನುವಾಗ ಮೇಡಂ ಅದಕ್ಕೊಂದು ನಿಷ್ಪಕ್ಷಪಾತವಾದ ಉಪಸಂಹಾರ ಕೊಡುತ್ತಾಳೆ. ‘ ಉಪೇಂದ್ರ ಪರಿಚಯಿಸಿದ್ದು ‘ಡೌವ್‌’, ಜಗ್ಗೇಶ್‌ ಹುಟ್ಟು ಹಾಕಿದ್ದು ‘ ಡಗಾರ್‌’. ಸುಮ್ನೆ ಕೂತ್ಕೊಳ್ಳಿ !’ ಇದು ಜಿಂಕೆ ಮರಿಗಳ ತುಂಟಾಟದ ಸ್ಯಾಂಪಲ್‌. ಆ ಹಿಂಡಿನಲ್ಲಿ ಚಾಕೊಲೇಟ್‌ ಬಾಯ್‌ ಅನಿರುದ್ಧ ಇದ್ದಾನೆ. ಬೆಣ್ಣೆ ಕಾಲಿನ ಚೆಲುವೆ ರೇಖಾ ಇದ್ದಾಳೆ. ‘ ಹೆಂಗೈತೆ ಮೈಗೆ’ಅಂತ ರೋಪು ಹಾಕುತ್ತಲೇ ಮನಸ್ಸನ್ನು ಕದಡುವ ಛಾಯಾಸಿಂಗ್‌ ಇದ್ದಾಳೆ. ವಿದ್ಯಾರ್ಥಿ ಹೆಸರಿನ ‘ ಅಂಕಲ್‌’ ಮಂಡ್ಯ ರಮೇಶ್‌ ಇದ್ದಾನೆ. ಇವರ ಆಟಕ್ಕೆ ಕಡಿವಾಣ ಹಾಕಲು ಲಿಂಗೋ ಲೀಲಾ ಉರುಫ್‌ ಲಿಂಗೇನ ಹಳ್ಳಿ ಲೀಲಾವತಿಯಾಗಿ ಉಮಾಶ್ರೀ ಇದ್ದಾರೆ. ಇವರ ಸಕಲ ಕಲಾ ಚಟುವಟಿಕೆಯ ಕೇಂದ್ರ ಕಾರಸ್ಥಾನವಾಗಿ ಕಾಲೇಜಿದೆ. ಅಲ್ಲಿ ಸೊಂಟಾಟವಾಡುವ ಬೊಂಬಾಟ್‌ ಹುಡುಗಿಯರಿದ್ದಾರೆ. ಇಷ್ಟೆಲ್ಲ ಇದ್ದ ಮೇಲೆ ಮಂಗಾಟ, ಚಿನ್ನಾಟ, ತುಂಟಾಟಕ್ಕೆ ಎಲ್ಲೆಯಾದರೂ ಎಲ್ಲಿ ? ಅದೊಂದು ಹರೆಯದ ಲೋಕ. ಹರೆಯದ ಮೈ ಮನಸ್ಸುಗಳ ಸ್ನೇಹ ಪಾಕ. ಅದು ಸ್ನೇಹದಲ್ಲೇ ಮುಗಿದರೆ ಹರೆಯಕ್ಕೆ ಅರ್ಥವಾದರೂ ಏನು ? ಹಾಗಂತ ತಿಳಿದೇ ಅಲ್ಲೊಂದು ಪ್ರೇಮ ಲೋಕ ಸೃಷ್ಟಿಯಾಗಿರುತ್ತದೆ. ಆರು ವರ್ಷದಿಂದ ಕೂಡಿ ಬೆಳೆದ ಅನಿರುದ್ಧ ಮತ್ತು ಛಾಯಾಸಿಂಗ್‌ ನಡುವೆ ರೇಖಾ ಕಾಲಿಡುತ್ತಾಳೆ. ಅದನ್ನು ಸಹಿಸದ ಛಾಯಾ ಅಡ್ಡಗಾಲು ಹಾಕುತ್ತಾಳೆ. ಕೊನೆಗೆ ಎಡವಿಬಿದ್ದವರಾರು ಎನ್ನುವುದನ್ನು ತೆರೆಯ ಮೇಲೆ ನೋಡಿ ಸಂತಸ ಪಡಿ.

ಇದೇ ಈಗ ಕಾಲೇಜು ಮೆಟ್ಟಿಲು ಹತ್ತಿದವರಿಗೆ ಏನೇನು ಬೇಕೋ ಅದೆಲ್ಲವೂ ಇಲ್ಲಿದೆ.

ಇದು ಕ್ಯಾಂಪಸ್‌ ಜೋಕುಗಳ ಸರಮಾಲೆ. ಹಾಗಾಗಿಯೇ ನಿರ್ದೇಶಕ ಇಂದ್ರಜಿತ್‌ ಜೋಕುಗಳ ಗುಡ್ಡೆ ಹಾಕಿ ನಡುವೆ ತೆಳ್ಳನೆಯ ಕತೆ ಹೆಣೆದಿದ್ದಾರೆ. ಆದರೆ ಪ್ರೇಮದ ನವಿರು ಭಾವನೆಗಳನ್ನು ಹಿಡಿದಿಡುವುದು ಸಾಧ್ಯವಾಗಿಲ್ಲ. ಇಷ್ಟಾದರೂ ನಿಮ್ಮಿಂದ ಭೇಷ್‌ ಅನ್ನಿಸಿಕೊಳ್ಳೋದು ಕೃಷ್ಣ ಕುಮಾರ್‌ ಛಾಯಾಗ್ರಹಣ. ಹಾಡುಗಳನ್ನು ಚಿತ್ರಿಸಿದ ರೀತಿ ಕನ್ನಡದ ಮಟ್ಟಿಗೆ ಹೊಚ್ಚ ಹೊಸತು. ಅದಕ್ಕೆ ತಕ್ಕಂತೆ ಸುಚಿತ್ರಾ ನೃತ್ಯ ನಿರ್ದೇಶನ, ಗುರುಕಿರಣ್‌ ಸಂಗೀತ ಯಾವುದೋ ಗುಂಗು ಹಿಡಿಸುತ್ತದೆ. ವಸ್ತ್ರ ವಿನ್ಯಾಸದಲ್ಲಿ ಬಳಸಿದ ಬಣ್ಣ ಬಣ್ಣದ ಬಟ್ಟೆ ಕೂಡ ಅದ್ಧೂರಿಯಾಗಿದೆ. ಮೂರು ಹಾಡುಗಳು ಕೇಳುವಂತಿವೆ. ಭಾವನಾತ್ಮಕ ದೃಶ್ಯಗಳಿಗೆ ಕತ್ತರಿಯಾಟ ಆಡಿಸಿ ತುಂಟಾಟ ಆಡಿದ್ದು ಸಂಕಲನಕಾರ ಶಶಿಕುಮಾರ್‌. ಅನಿರುದ್ಧ ಮಾಡಿದ ಪಾತ್ರಕ್ಕೆ ಯಾವ ಹುಡುಗನನ್ನಾದರೂ ತಂದು ಕೂಡಿಸಿದ್ದರೂ ಅಂಥ ವ್ಯತ್ಯಾಸವಾಗುತ್ತಿರಲಿಲ್ಲ. ಮಾಮೂಲಿ ಹುಡುಗನ ಪಾತ್ರದಲ್ಲಿ ಅವರು ಮಾಮೂಲಿಯಾಗಿ ನಟಿಸಿದ್ದಾರೆ.

‘ಚಿತ್ರ ’ ರೇಖಾ ಒಂದು ಸಲ ಮಿಡಿ ತೊಟ್ಟರೆ ಎಲ್ಲರೂ ಬಾಯಿ ಬಿಟ್ಟು ನೋಡುತ್ತಾರೆ. ಎರಡನೇ ಸಲವೂ ಹಾಗೆಯೇ ಮಾಡಬಹುದು. ಆದರೆ ಛಾಯಾ ಸಿಂಗ್‌ ಇದ್ದಾಳಲ್ಲ... ಆ ಹುಡುಗಿ ಕ್ಯಾಮೆರಾ ಎದುರಿರುವುದನ್ನು ಮರೆತೇ ಪಾತ್ರಕ್ಕೆ ಜೀವ ತುಂಬಿದ್ದಾಳೆ. ಒಂದು ಕ್ಷಣದಲ್ಲಿ ಕಣ್ಣಲ್ಲಿ ತುಳುಕಿಸುವ ನೀರಿನ ಪೊರೆಯಿಂದ ಮನಸ್ಸಿಗೆ ಹತ್ತಿರವಾಗುತ್ತಾಳೆ. ಒಂದೇ ಹಾಡಿನಲ್ಲಿ ಬಂದು ಗಿರಿಗಿಟ್ಟಿಯಾಡಿಸುವ ಸುದೀಪ್‌ ಅಲೆ ಮರೆಯಲು ಸಾಧ್ಯವೇ ಇಲ್ಲ.

‘ಡಗಾರ್‌’ ಶಬ್ದವನ್ನು ಜಗ್ಗೇಶ್‌ ಪರಿಚಯಿಸಿದಂತೆ ‘ವಯಾಗ್ರ ’ವನ್ನು ಕನ್ನಡಕ್ಕೆ ಮೊಟ್ಟ ಮೊದಲು ತಂದ ‘ಕೀರ್ತಿ’ ನಿರ್ದೇಶಕರಿಗೇ ಸಲ್ಲಬೇಕು. ವಯಾಗ್ರ ತಿಂದ ನಾಯಿಮರಿ ಹೆಣ್ಣು ನಾಯಿಯನ್ನು ಬೆನ್ನು ಹತ್ತಿ ಪೊದೆಯ ಹಿಂದೆ ಸೇರುವುದೇ ತಕ್ಕಮಟ್ಟಿಗೆ ತುಂಟಾಟದ ‘ ಮಾನ’ ಉಳಿಸಿದೆ ! ಅದಿರಲಿ ಇಡೀ ತಂಡ ಶ್ರಮ ಪಟ್ಟಿದೆ. ಅದು ಎದ್ದು ಕಾಣುತ್ತದೆ. ಫಸಲು ಹೇಗೆ ಬಂದಿದೆ ಅನ್ನುವುದಕ್ಕಿಂತ ಪಟ್ಟಪಾಡನ್ನು ನೆನಪಿಡಬೇಕು.

(ವಿಜಯಕರ್ನಾಟಕ)

Post your own Review

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada