»   » ಜೋಗಿ... ಜೋಗಿ... ಜೋಗಿ!

ಜೋಗಿ... ಜೋಗಿ... ಜೋಗಿ!

Posted By:
Subscribe to Filmibeat Kannada
ಸ್ಯಾಂಪಲ್‌ ಒಂದು

ಚಿತ್ರದ ಮೊದಲ ದೃಶ್ಯದಲ್ಲಿಯೇ ರಾಜಣ್ಣ ಮತ್ತು ಪಾರ್ವತಕ್ಕ ‘ಜೋಗಿ’(ಶಿವರಾಜ್‌ಕುಮಾರ್‌)ಗೆ ಭಿಕ್ಷೆ ಹಾಕ್ತಾರೆ. ಪ್ರೇಕ್ಷಕರು ಹುಚ್ಚು ಹಿಡಿದಂಗೆ ಕೇಕೆ ಹಾಕ್ತಾರೆ. ಭಿಕ್ಷೆಗಾಗಿ ಮನೆಮನೆ ಸುತ್ತೋ ಜೋಗಪ್ಪನಿಗೆ ಅಮ್ಮ ಅಂದ್ರೆ ಶ್ಯಾನಾ ಪ್ರೀತಿ. ಅಮ್ಮನಿಗೆ ಮಗ ಮಾದೇಸ ಅಂದ್ರೆ ಪಂಚ್‌ಪ್ರಾಣ. ಅಮ್ಮನ ಸುತ್ತಲೇ ಸುತ್ತುವ ಮಾದೇಸನಿಗೆ ಸಿಟ್ಟು ಬಂದ್ರೆ ಅಮ್ಮ ಜೋಗುಳ ಹಾಡಿದ್ರೆ ಸಾಲದು, ಕುಣಿಯಬೇಕು! ಸೊಂಟ ನೋಯ್ತದೆ ಅಂದ್ರೂ ಬಿಡಂಗಿಲ್ಲ. ಸರಿ, ಗದ್ದೆ ಬಯಲಲ್ಲಿ ಜೋಗಿ ಮತ್ತು ಅವರಮ್ಮ(ಅರುಂಧತಿ ನಾಗ್‌)ನ ಕುಣಿತ ಶುರವಾಗೋಯ್ತು. ಅವರ ಹೆಜ್ಜೆಗಳಿಗೆ ಹೆಜ್ಜೆ ಹಾಕೋ ಆಸೆ ನೋಡೋರಿಗೆ! ಅಮ್ಮ-ಮಗನ ಪ್ರೀತಿ ಕಂಡು ಮನತುಂಬಿ ಬರುತ್ತೆ! ನಂತರ ಬೆಟ್ಟದ ಮಾದೇಸ್ವರನ ಜಾತ್ರೆಯಾಗೆ ಶಿವಣ್ಣ ಹಾಡಿ ಕುಣಿಯೋದು ನೋಡುದ್ರೆ, ಸುಮ್ಮನಿರಲು ಕಷ್ಟವಾಗುತ್ತೆ! ಕುಣಿತವೋ ಕುಣಿತ!

*

ಸ್ಯಾಂಪಲ್‌ ಎರಡು

ಯಾನಾ ಗುಪ್ತಾ ಹಾಡೊಂದರಲ್ಲಿ ಬಳುಕುತ್ತ ಕುಣಿವ ಪರಿ, ಮೇಲೆ ಬೀಳುವಂತೆ ಓಡಿಬರುವ ಜೆನಿಫರ್‌ ಮತ್ತು ಆಯಮ್ಮನ ತೊಡೆಗಳನ್ನು ಕಂಡ ಪ್ರೇಕ್ಷಕ ಎಲ್ಲೋ ಹೋದ ಅಂತ ನಿರ್ದೇಶಕ ಪ್ರೇಮ್‌ಗೆ ಅನ್ನಿಸಿದ ತಕ್ಷಣ, ‘ ಹೊಡಿ ಮಗ ಹೊಡಿ ಮಗ, ಬಿಡ ಬೇಡ ಅವುನ್ನ...’ ಶುರು ಮಾಡುತ್ತಾರೆ. ಜೋಗಿ ಅಟ್ಟಾಡಿಸಿಕೊಂಡು ಅವುನ್ನ ಹೊಡೆಯೋದಕ್ಕೆ ಓಡೋದು ಕಂಡು ಎಲ್ಲರಿಗೂ ಹಿಂಬಾಲಿಸುವ ಆಸೆ ಆಗುತ್ತೆ.

ಅಷ್ಟರಲ್ಲಿಯೇ ಜೋಗಿ ಲವ್ವರ್‌ ಎಂದು ಚಿತ್ರದಲ್ಲಿ ಸ್ಕೋಪ್‌ ಗಿಟ್ಟಿಸುವ ಜೆನ್ನಿಫರ್‌ ‘ಜೋಗಯ್ಯೋ... ಜೋಗಯ್ಯೋ...’ ಎಂದು ಹಾಡೋದು ಕೇಳಿ, ಕುಣಿಯಲೇ ಬೇಕು ಅಂತ ಮನಸ್ಸಿಗೆ ಬರುತ್ತೆ. ಆದ್ರೆ...

*

ಸ್ಯಾಂಪಲ್‌ ಮೂರು

ಮಗನಿಗಾಗಿ ಅರುಂಧತಿ ನಾಗ್‌ ಬೀದಿಬೀದಿ ಸುತ್ತುತ್ತಾಳೆ. ಅಡ್ರಸ್‌ ಇಲ್ಲದೇ ಸುತ್ತೋ ಅವಳ ಪರಿ ಕಂಡು ಜನ ಅಣಕ ಮಾಡುತ್ತಾರೆ. ಆದರೆ ಅವಳ ಅಲೆದಾಟ, ಹುಡುಕಾಟ ನಿಲ್ಲೋದೇ ಇಲ್ಲ. ನಿನ್ನ ಮಗ ಮಾದೇಸನನ್ನು ಹುಡುಕೋ ಜವಾಬ್ದಾರಿ ನನಗಿರಲಿ ಎನ್ನುವ ಚಿತ್ರದ ನಾಯಕಿ, ‘ ಎಲ್ಲೋ ಜೋಗಪ್ಪ ನಿನ್ನ ಅರಮನೆ...’ ಎಂದು ಧ್ವನಿ ಎತ್ತಿದಾಗಲಂತೂ ಕುಣಿಯೋ ಮನಸ್ಸನ್ನು ಕಟ್ಟಿ ಹಾಕಲು ಆಗ ನಿಜಕ್ಕೂ ಕಷ್ಟವಾಗುತ್ತದೆ!

ಮತ್ತೊಂದು ಕಡೆ ಮಗ ಬರ್ತಾನೆ ಅಂಥ , ಅಣ್ಣಮ್ಮನ ಗುಡಿ ಮುಂದೆ ಹಗಲು-ರಾತ್ರಿ ಕಾದು ಕುಳಿತಿದ್ದ ಮಾದೇಸನ ಅಮ್ಮ ಹಾಗೆಯೇ ಕಣ್ಣುಮುಚ್ಚುತ್ತಾಳೆ. ಅಯ್ಯಯ್ಯೋ ಅನ್ನುತ್ತಿದ್ದಂತೆಯೇ ಮತ್ತೊಂದು ದೃಶ್ಯ ಬಂದೇ ಬಿಡುತ್ತೆ. ಆಕೆಯ ಮಗ ಅಮ್ಮನ ಹೆಣದ ಮುಂದೆ ಕುಣಿಯ ತೊಡಗುತ್ತಾನೆ. ಸತ್ತವರನ್ನು ನಗುನಗುತ್ತಲೇ ಮೇಲಕ್ಕೆ ಕಳಿಸಬೇಕು ಅನ್ನೋ ನಾಯಕನ ಸಿದ್ಧಾಂತ ಕಾರ್ಯರೂಪಕ್ಕೆ ಬಂದಿರುತ್ತದೆ.

*

ಮೇಲೆ ಹೇಳಿದ್ದು, ‘ಜೋಗಿ’ ಚಿತ್ರದ ಕೆಲವು ಸ್ಯಾಂಪಲ್‌ಗಳಷ್ಟೇ. ಚಿತ್ರದಲ್ಲಿ ಮನಬಿಚ್ಚಿ ಕುಣಿಯೋದಕ್ಕೆ ಮತ್ತು ಅಳೋದಕ್ಕೆ ಸಾಕಷ್ಟು ಜಾಗವಿದೆ. ಪ್ರೇಕ್ಷಕರ ನಾಡಿ-ಮಿಡಿತ ಅರಿತಿರುವ ನಿರ್ದೇಶಕ ಪ್ರೇಮ್‌ಗೆ ಹ್ಯಾಟ್ರಿಕ್‌, ಶಿವುಗೆ ಬ್ರೇಕ್‌, ಜೆನಿಫರ್‌ಗೆ ಎಂಟ್ರಿ ಎಲ್ಲವನ್ನು ‘ಜೋಗಿ’ ಕೊಡಬಲ್ಲದು ಅನ್ನೋದು ಚಿತ್ರ ಮುಗಿದಾಗ ಮನವರಿಕೆಯಾಗುತ್ತದೆ.

ಈರುಳ್ಳಿ ಗಿರಾಕಿ ಪ್ರೇಮ್‌, ನಿಮ್ಮ ಕಣ್ಣು ತೇವವಾಗುವ ತನಕ ಬಿಡೋದೇ ಇಲ್ಲ. ಈರುಳ್ಳಿ ಹೆಚ್ಚುತ್ತಲೇ(ಕುಯ್ಯುತ್ತಲೇ) ಇರುತ್ತಾರೆ! ನೀವೂ ಕಟುಕರಂತೆ ಹಠ ಮಾಡಿದ್ರೆ, ಎದೆಗೆ ಲಾಂಗ್‌ನಿಂದ ತಿವಿದು, ಅಳುವಂತೆ ಮಾಡುತ್ತಾರೆ! ಒಂದು ಕೈಯಲ್ಲಿ ಹೂವು ಮತ್ತು ಒಂದು ಕೈಯಲ್ಲಿ ಲಾಂಗ್‌ ಹಿಡಿಯುವ ಸವಾಲಿನ ಪಾತ್ರವನ್ನು ಶಿವಣ್ಣ ಅದ್ಭುತವಾಗಿ ನಿರ್ವಹಿಸಿದ್ದಾರೆ.

ಅಮ್ಮ-ಮಗನ ಬಾಂಧವ್ಯ, ಪ್ರೀತಿ, ವಿರಹ, ಭೂಗತ ಜಗತ್ತಿನ ವ್ಯವಹಾರಗಳು, ಬಡಿದಾಟ, ತಿಳಿಹಾಸ್ಯ -ಇವೆಲ್ಲವೂ ಚಿತ್ರದಲ್ಲಿ ಪದರಪದರವಾಗಿ ಬಿಚ್ಚಿಕೊಳ್ಳುತ್ತವೆ. ಒಂದು ಕಡೆ ‘ಓಂ’ನ ಛಾಯೆ ಕಾಣಿಸಿದರೂ, ಚಿತ್ರ ಬೇರೆ ದಿಕ್ಕಿನಲ್ಲಿಯೇ ಸಾಗುತ್ತದೆ. ಜೋಗಿನೇ ಬೇರೆ, ಅದರ ಸ್ಟೈಲೇ ಬೇರೆ...

ಸಾಮಾನ್ಯ ಕಥೆಯ ಎಳೆಯನ್ನು ಹಿಡಿದು, ಬೋರ್‌ ಆಗದಂತೆ ಪ್ರೇಮ್‌ ಜಗ್ಗಿದ್ದಾರೆ. ಕಥೆ ನಿಂತಿತು ಎನ್ನುವಾಗ ಬಿರುಸು ಪಡೆಯುತ್ತದೆ. ದಿಢೀರ್‌ ‘ ಹೊಡಿಮಗ...’ ಕಿವಿಯಲ್ಲಿ ರಿಂಗಣಿಸುತ್ತದೆ.

ಜೋಗಿ ಗೆಟಪ್ಪು, ಜೋಗಿ ಅನ್ನೋ ಹೆಸರು, ಪ್ರೇಮ್‌ ಪಡೆದ ಪ್ರಚಾರ, ಗುರುಕಿರಣ್‌ ಹಾಡು, ಅರುಂಧತಿನಾಗ್‌ ಅಭಿನಯ ಚಿತ್ರವನ್ನು ನೋಡಬಲ್‌ ಮಾಡಿವೆ. ಕೊಳ್ಳೇಗಾಲದ ದೇಸೀ ಕನ್ನಡ ಕೇಳುವುದಕ್ಕೆ ಹಿತವಾಗಿದೆ.

ಮೊದಲ ಚಿತ್ರದಲ್ಲಿಯೇ ಜೆನಿಫರ್‌ ಅಭಿಮಾನಿಗಳನ್ನು ಸೃಷ್ಟಿಸಿಕೊಳ್ಳುವಷ್ಟು ಸೊಗಸಾಗಿ ಅಭಿನಯಿಸಿದ್ದಾರೆ. ಮತ್ತೆ ಮುದ್ದಾಗಿಯೂ ಕಾಣಿಸಿದ್ದಾರೆ. ನಿರ್ಮಾಪಕ ರಾಮ್‌ಪ್ರಸಾದ್‌ ದುಡ್ಡು ಬಾಚಿಕೊಳ್ಳೋದಕ್ಕೆ ಗೋಣಿ ಚೀಲಗಳನ್ನು ಹುಡುಕುತ್ತಿದ್ದಾರೆ!

ಇಷ್ಟಾದರೂ ‘ಜೋಗಿ’ ಅಂದ್ರೆ ಏನು? ಒಂದೇ ಸಾಲಲ್ಲಿ ಹೇಳೋದಾದ್ರೆ : ಮಚ್ಚು! ಮುಗ್ಧತೆ!! ಮಮತೆ!!!


‘ಜೋಗಿ’ ಮಹಾತ್ಮೆ :
ರಾಜ್‌, ರಜನಿಕಾಂತ್‌ ಕಣ್ಣಲ್ಲಿ ‘ಜೋಗಿ’
ಇಂದಿನಿಂದ ‘ಜೋಗಿ’ ಜಾತ್ರೆ
ರಾಕ್ಷಸ, ಜೋಗಿ, ವಾಲ್ಮೀಕಿ ಮತ್ತು ಶಿವು


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada