»   » ‘ಜೊತೆಜೊತೆಯಲಿ’ ಚಿತ್ರಮಂದಿರಕ್ಕೆ ಬನ್ನಿ..

‘ಜೊತೆಜೊತೆಯಲಿ’ ಚಿತ್ರಮಂದಿರಕ್ಕೆ ಬನ್ನಿ..

Posted By:
Subscribe to Filmibeat Kannada


ನಾಯಕ ಪ್ರೇಮ್‌ ಪಾತ್ರಕ್ಕೆ ನ್ಯಾಯ ಒದಗಿಸಿದ್ದರೂ ಇನ್ನೂ ಕಲಿಯುವ ಮನಸ್ಸು ಮಾಡಬೇಕು. ಹಾಗೇ ಈ ಹುಡುಗ ರಮ್ಯಾ ಜತೆ ನಿಂತರೆ ತಮ್ಮನಂತೆ ಕಾಣುವುದನ್ನು ನೀವು ಕ್ಷಮಿಸಬೇಕು!

  • ದೇವಶೆಟ್ಟಿ ಮಹೇಶ್‌
ಚಿತ್ರ : ಜೊತೆಜೊತೆಯಲಿನಿರ್ಮಾಣ : ಮೀನಾ ತೂಗುದೀಪನಿರ್ದೇಶನ : ದಿನಕರ್‌ ತೂಗುದೀಪಸಂಗೀತ : ಹರಿಕೃಷ್ಣತಾರಾಗಣ : ಪ್ರೇಮ್‌, ರಮ್ಯಾ, ದರ್ಶನ್‌, ಸೀಮಾ, ಶರಣ್‌ ಮತ್ತಿತರರು.
ಹೆಂಡತಿಯ ಅನಗತ್ಯ ಅನುಮಾನ, ಗಂಡನ ನಿರುದ್ದೇಶ ನಿರ್ಲಕ್ಷ್ಯ, ಒಂದು ಸಂಸಾರವನ್ನು ಹೇಗೆ ಹಾಳು ಮಾಡುತ್ತದೆ? ಅದರಿಂದ ಹುಟ್ಟುವ ಅಹಂನಿಂದ ಬದುಕು ಯಾವ ರೀತಿ ನಾಶದ ಹಂತಕ್ಕೆ ಬಂದು ನಿಲ್ಲುತ್ತದೆ ? ಇದು ನಗರ ಜೀವನದ ಒಂದು ಮುಖ. ಇದಕ್ಕೆ ಒಂದು ಕಥಾ ಹಂದರ ನೀಡಿ ಚಿತ್ರಕತೆ ಬರೆದಿದ್ದಾರೆ ದಿನಕರ್‌ ತೂಗುದೀಪ. ಇದು ಅವರ ಮೊದಲ ಚಿತ್ರ. ಆದರೂ ಹಾಗೆ ಭಾಸವಾಗದಂತೆ ನಿರೂಪಣೆ ಮಾಡಿದ್ದಾರೆ.

ಚಿತ್ರದ ಉದ್ದಕ್ಕೂ ದಿನಕರ್‌ ಒಂದು ಲವಲವಿಕೆ, ತಾಜಾತನ ಕಾಪಾಡಲು ಯತ್ನಿಸಿದ್ದಾರೆ. ತಕ್ಕ ಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ. ಹಾಗಂತ ಇಲ್ಲಿ ತಪ್ಪುಗಳೇ ಇಲ್ಲವೆಂದು ತಿಳಿಯಬೇಡಿ. ಅದರ ನಡುವೆಯೂ ಕತೆಯಾಳಗೆ ಒಂದಾದ ಹಾಸ್ಯ, ಸುಂದರ ಲೋಕೆಷನ್‌, ಚುರುಕು ಸಂಭಾಷಣೆ, ಚೆಂದದ ಹಾಡು ಹಾಗೂ ಪಾತ್ರಗಳ ಜೀವಂತ ಅಭಿನಯ... ಎಲ್ಲವೂ ಕೆಲವು ತಪ್ಪುಗಳನ್ನು ಮರೆಸಿಬಿಡುತ್ತದೆ.

ಆರಂಭದಲ್ಲೇ ಇದೊಂದು ಪ್ರೇಮಕತೆ ಎಂದು ಗೊತ್ತಾಗುತ್ತದೆ. ಆದರೆ ಇದು ಅರ್ಧ ಸತ್ಯ. ಕಾರಣ ಇಲ್ಲಿ ಮದುವೆ ನಂತರದ ಪ್ರೇಮ ಕತೆ ಪ್ಲಸ್‌ ವ್ಯಥೆ ಇದೆ. ನಾಯಕಿಯನ್ನು ಇಷ್ಟಪಡುವ ನಾಯಕ ಆಕೆಯನ್ನು ಒಲಿಸಿಕೊಳ್ಳಲು ಏನೇನೊ ಆಟ ಆಡುತ್ತಾನೆ. ಕೊನೆಗೆ ಮದುವೆ ಆಗುತ್ತದೆ. ಆಗ ಶುರುವಾಗುತ್ತದೆ ಮತ್ತೊಂದು ಕತೆ.

ಆತನ ಯಾವುದೋ ಕಾಲೆಳೆಯುವ ಮಾತು ಆಕೆಗೆ ಕೋಪ ಮೂಡಿಸುತ್ತದೆ. ಆತ ನನ್ನನ್ನು ನಿರ್ಲಕ್ಷ ಮಾಡುತ್ತಿದ್ದಾನೆ ಎನ್ನುವ ಅನಗತ್ಯ ಅನುಮಾನ ಮೂಡುತ್ತದೆ. ಆಮೇಲೆ ಬೇರೊಂದು ಹುಡುಗಿ ಜತೆ ಸಂಬಂಧ ಇದೆ ಎಂದು ತಿಳಿಯುತ್ತಾಳೆ. ಅದಕ್ಕೆ ತಕ್ಕಂತೆ ಆತನೂ ತಪ್ಪುಗಳಲ್ಲಿ (ಮಾಡದಿದ್ದರೂ)ಸಿಗುತ್ತಾನೆ. ಅಲ್ಲಿಗೆ.... ಮುಂದೆ ಏನಾಗುತ್ತದೆ ಎನ್ನುವುದನ್ನು ಸಿನಿಮಾ ನೋಡಿ ತಿಳಿಯಿರಿ. ಕನ್ನಡಕ್ಕೆ ಇಂಥ ಕತೆ ಹೊಚ್ಚ ಹೊಸತು. ಅಲ್ಲಲ್ಲಿ ಹಿಂದಿಯ ‘ಚಲ್ತೆ ಚಲ್ತೆ’ ಚಿತ್ರ ನೆನಪಾದರೂ ಅದಕ್ಕೂ ಇದಕ್ಕೂ ಬೇರೆ ಯಾವುದೇ ರೀತಿಯ ಸಂಬಂಧವಿಲ್ಲ. ಕತೆ ಮಾತ್ರ ಕೊಂಚ ಹೋಲುತ್ತದೆ.

ಚಿತ್ರಕತೆಯನ್ನು ಇನ್ನಷ್ಟು ಹಿಡಿತದಲ್ಲಿ ಇಡಬಹುದಾಗಿತ್ತು. ಹಾಗೇ ಕೊನೆ ಕೊನೆಯ ಗಂಭೀರ ದೃಶ್ಯಗಳಿಗೆ ಸುಮ್ಮನೆ ಹಾಸ್ಯದ ಲೇಪನ ಕೊಟ್ಟಿದ್ದು ಕತೆಯ ಬಂಧವನ್ನು ಹಾಳು ಮಾಡಿದೆ. ಆರಂಭದ ಕೆಲವು ದೃಶ್ಯಗಳು ಫ್ಲ್ಯಾಷ್‌ ಬ್ಯಾಕ್‌ ಎಂದು ತಿಳಿಯಲೇ ಕೊಂಚ ಸಮಯ ಹಿಡಿಯುತ್ತದೆ. ಇದಕ್ಕಿಂತ ಮುಖ್ಯವಾಗಿ ಪ್ರೇಮದ ನವಿರು ಭಾವನೆಗಳ ಕೊರತೆ.

ನಾಯಕ ನಾಯಕಿಯರ ಪ್ರೇಮದ ತೀವ್ರತೆಯನ್ನು ಕಟ್ಟಿ ಕೊಡುವ ದೃಶ್ಯ ತುಂಬ ಕಡಿಮೆ. ಹೀಗಾಗಿ ಅವರು ಮಾತಿನಲ್ಲಿ ಎಷ್ಟೇ ಅದನ್ನು ತೋರಿಸಿದರೂ ಮನಸ್ಸನ್ನು ಮುಟ್ಟುವುದಿಲ್ಲ. ಕೆಲವೊಮ್ಮೆ ಅವರು ಗಂಡ ಹೆಂಡತಿ ಅಂತಲೂ ಅನ್ನಿಸುವುದಿಲ್ಲ. ಇದು ಚಿತ್ರಕತೆಯ ದೊಡ್ಡ ದೌರ್ಬಲ್ಯ. ಇದರ ನಡುವೆಯೂ ರಮ್ಯಾ ಎನ್ನುವ ಚೆಂದದ ಹುಡುಗಿಯ ಚೆಂದದ ಅಭಿನಯ, ಶರಣ್‌, ತರುಣ್‌ದ್ವಯರ ಕಾಮಿಡಿ ಇಂಥ ಅಂಶಗಳನ್ನು ಮರೆಸುತ್ತದೆ.

ನಾಯಕ ಪ್ರೇಮ್‌ ಪಾತ್ರಕ್ಕೆ ನ್ಯಾಯ ಒದಗಿಸಿದರೂ ಇನ್ನೂ ಕಲಿಯುವ ಮನಸ್ಸು ಮಾಡಬೇಕು. ಹಾಗೇ ಈ ಹುಡುಗ ರಮ್ಯಾ ಜತೆ ನಿಂತರೆ ತಮ್ಮನಂತೆ ಕಾಣುವುದನ್ನು ನೀವು ಕ್ಷಮಿಸಬೇಕು. ಕ್ಯಾಮೆರಾ, ಸಂಗೀತ ಮತ್ತು ಚಿಂತನ್‌ ಎನ್ನುವ ಹೊಸ ಹುಡುಗ ಬರೆದ ಸಂಭಾಷಣೆಯನ್ನು ಸಂಭ್ರಮಿಸಬೇಕು.

ಏನೇ ಆದರೂ ಕೊಟ್ಟ ಕಾಸಿಗೆ ಮೋಸ ಮಾಡುವುದಿಲ್ಲ ಈ ಚಿತ್ರ. ಆದರೂ ದಿನಕರ್‌ಗೆ ಇದನ್ನೆಲ್ಲ ವಿವರವಾಗಿ ಹೇಳಲೇಬೇಕು. ಮೊದಲ ಚಿತ್ರದ ತಪ್ಪುಗಳನ್ನು ಎರಡನೇ ಚಿತ್ರದಲ್ಲಿ ಮಾಡದಿರಲಿ ಅಂತ...

Post your views

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada