»   » ಲಂಚಾವತಾರದ ವಿರುದ್ಧ ‘ವಿಷ್ಣುಸೇನೆ’

ಲಂಚಾವತಾರದ ವಿರುದ್ಧ ‘ವಿಷ್ಣುಸೇನೆ’

Posted By:
Subscribe to Filmibeat Kannada

‘ಹೆತ್ತಮ್ಮನಿಗೆ ಕಾಯಿಲೆ ಬಂದಾಗ ಯಾರಾದರೂ ಚಿಕಿತ್ಸೆ ಕೊಡುವುದು ಬಿಟ್ಟು ಕಾಲ, ಧರ್ಮ ನೋಡ್ತಾ ಕೂತ್ಕೋತಾರಾ? ಅದೇ ರೀತಿ ನಮ್ಮನ್ನ ಸಾಕಿ ಬೆಳೆಸಿದ ಭಾರತಾಂಬೆಗೆ ಲಂಚ ಎಂಬ ಮಾರಿ ಬಡಿದರೆ ಏನು ಮಾಡೋದು ಅಂತ ಸುಮ್ನಿರೋಕ್ಕಾಗತ್ತಾ?’

ಇದು ‘ವಿಷ್ಣುಸೇನಾ’ ದ ನಾಯಕ ಜಯಸಿಂಹ ಕೇಳುವ ಪ್ರಶ್ನೆ. ಯಾರು ಬೇಕಾದರೂ ಸುಮ್ಮನಿರಬಹುದು. ಆದರೆ ಜಯಸಿಂಹನಿಗೆ ಲಂಚ ಹಾಗೂ ಲಂಚಕೋರರನ್ನು ಕಂಡರೆ ನಿಗಿ ನಿಗಿ ಕೋಪ.

ಅವನು ಸಾಮಾನ್ಯ ಜನರಿಗೆ ಜಯಸಿಂಹ. ಲಂಚ ಕೋರರಿಗೆ ಮಾತ್ರ ‘ಸಿಂಹ’. ಸಾಮಾನ್ಯ ಜನರಿಗೆ ಅವನೊಬ್ಬ ಪ್ರೊಫೆಸರ್‌. ಲಂಚಕೋರರಿಗೆ ‘ವಿಷ್ಣು ಸೇನಾ’ ಎಂಬ ಸಂಘಟನೆಯ ಅನಾಮಿಕ, ಅಪರಿಚಿತ ಹಾಗೂ ಆಗಂತಕ ಕ್ಯಾಪ್ಟನ್‌. ಅವನ ಕಾರ್ಯಾಚರಣೆಯೇನಿದ್ದರೂ ಕತ್ತಲಲ್ಲಿ. ‘ನನ್ನ ಕೆಲಸಗಳೆಲ್ಲ ಕತ್ತಲಲ್ಲೇ ಆದರೂ, ಉದ್ದೇಶ ಮಾತ್ರ ಕತ್ತಲಲ್ಲಿರು(ಲಂಚದ ಸುಳಿಯಲ್ಲಿ ಸಿಕ್ಕಿರುವ)ವ ಜನರಿಗೆ ಬೆಳಕು ತೋರಿಸುವುದು’ ಎನ್ನುತ್ತಾನೆ ಅವನು.

ಅವನ ಈ ಉದ್ದೇಶಗಳಿಗೂ ಒಂದು ಹಿನ್ನೆಲೆಯಿದೆ. ಅದು ತಿಳಿಯುವುದಕ್ಕೆ ಬ್ಯಾಕ್‌ಗೇ ಹೋಗಬೇಕು. ಅದೊಂದು ಸುಖಿ ಕುಟುಂಬ. ಅದರ ಒಡೆಯ ಈ ಜಯಸಿಂಹ. ವೃತ್ತಿಯಲ್ಲಿ ಪ್ರೊಫೆಸರ್‌. ಈ ಸುಖೀ ಕುಟುಂಬ ಯಾರದ್ದೋ ಲಂಚದ ಆಸೆಗೆ ಬಲಿಯಾಗುತ್ತದೆ. ಜಯಸಿಂಹ ಮಾತ್ರ ಹೇಗೋ ಉಳಿದುಕೊಳ್ಳುತ್ತಾನೆ. ಈ ದುರ್ಘಟನೆಯ ಬಗ್ಗೆ ಪತ್ತೆ ಮಾಡಲು ಹೋದಾಗ ಇಡೀ ವ್ಯವಸ್ಥೆ ಲಂಚದ ವಿಷ ಜ್ವಾಲೆಯಲ್ಲಿರುವುದು ಗೊತ್ತಾಗುತ್ತದೆ. ಇದನು ತಡೆಯಲು ಹೋದವನ ಮೇಲೆ ಹಲ್ಲೆಯಾಗುತ್ತದೆ.

ಒನ್ಸ್‌ ಅಗೇನ್‌ ಜಯಸಿಂಹ ಬದುಕುಳಿಯುತ್ತಾನೆ. ಈ ಬಾರಿ ಏನೇ ಆದರೂ ಸರಿ, ಲಂಚವನ್ನು ಕಿತ್ತೆಸೆಯುತ್ತೇನೆ ಎಂದು ಪಣ ತೊಡುತ್ತಾನೆ. ಇದೇ ಅನಿಸಿಕೆಯಿರುವ ಹಲವು ವಿದ್ಯಾರ್ಥಿಗಳನ್ನು ಒಂದುಗೂಡಿಸುತ್ತಾನೆ. ವಿಷ್ಣುಸೇನಾ ಎಂಬ ಸಂಘಟನೆ ಹುಟ್ಟು ಹಾಕಿ, ಆ ಮೂಲಕ ಸರಕಾರಿ ಹಾಗೂ ಖಾಸಗೀ ಕ್ಷೇತ್ರಗಳಲ್ಲಿರುವ ಅತೀ ಭ್ರಷ್ಟರನ್ನು ಹಾಗೂ ಲಂಚಕೋರರನ್ನು ಅಪಹರಿಸುತ್ತಾನೆ. ಅವರಲ್ಲಿ ಅತೀ ಭ್ರಷ್ಟನಿಗೆ ಮರಣದಂಡನೆ ನೀಡಿ ಲಂಚಕೋರರಿಗೆ ಭಯ ಹುಟ್ಟಿಸಿ ದುಃಸ್ವಪ್ನವಾಗುತ್ತಾನೆ. ಒಂದು ಹಂತದಲ್ಲಿ ಕರ್ನಾಟಕವನ್ನು ಲಂಚಮುಕ್ತ ರಾಜ್ಯವನ್ನಾಗಿ ಮಾಡಲು ಯಶಸ್ವಿಯಾಗುತ್ತಾನೆ. ಅವನ ಈ ಕಾರ್ಯಾಚರಣೆ ಶಾಶ್ವತವಾಗಿರುತ್ತದೆಯೇ? ಅದಕ್ಕೆ ‘ವಿಷ್ಣುಸೇನಾ’ ನೋಡಿಯೇ ಉತ್ತರ ತಿಳಿಯಬೇಕು.

ಇದೊಂದು ರೀಮೇಕ್‌ ಚಿತ್ರ. ಈಗಾಗಲೇ ತಮಿಳಿನಲ್ಲಿ ‘ರಮಣ’ ಹಾಗೂ ತೆಲುಗಿನಲ್ಲಿ ‘ಠಾಗೋರ್‌’ ಎಂಬ ಹೆಸರುಗಳಲ್ಲಿ ಜನಪ್ರಿಯವಾಗಿವೆ. ಮೊದಲೆರಡು ಚಿತ್ರಗಳ ಯಶಸ್ಸಿನಿಂದಲೋ ಏನೋ ನಿರ್ದೇಶಕ ನಾಗಣ್ಣ ಹೆಚ್ಚು ಬದಲಾವಣೆಗಳನ್ನು ಮಾಡಿಕೊಳ್ಳದೆ ಮೂಲ ಚಿತ್ರಕ್ಕೆ ನಿಷ್ಠರಾಗಿದ್ದಾರೆ. ಆದರೆ, ವಿಶೇಷವೆಂದರೆ ರೀಮೇಕ್‌ ಚಿತ್ರವಾದರೂ ಇಲ್ಲಿನ ನೇಟಿವಿಟಿಗೆ ತಕ್ಕುದಾಗಿದೆ. ಚಿತ್ರಕತೆಯನ್ನೇನೋ ನಾಗಣ್ಣ ತರಲು ಯಶಸ್ವಿಯಾಗಿದ್ದಾರೆ. ಆದರೆ, ಆ ಗಟ್ಟಿತನವನ್ನು ತರಲು ಯಶಸ್ವಿಯಾಗಿಲ್ಲ. ಹಾಗಾಗಿ, ಚಿತ್ರ ಮೊದಲರ್ಧದಲ್ಲಿ ಕೊಂಚ ಲ್ಯಾಗ್‌ ಆಗುತ್ತದೆ. ಅದರಲ್ಲೂ ಅನಾವಶ್ಯಕವಾಗಿ ಬರುವ ಹಾಡುಗಳು ಚಿತ್ರಕತೆಯ ಓಟವನ್ನು ತುಂಡರಿಸಿಬಿಡುತ್ತದೆ. ಅಲ್ಲದೆ, ಲಂಚಾವತಾರ ಎಂಬ ದೊಡ್ಡ ವಿಷಯವೇ ಇರುವುದರಿಂದ ಕೆಲವು ಸಂಭಾಷಣೆಗಳು ಭಾಷಣಗಳಾಗಿವೆ. ಆದರೂ, ಸಂಭಾಷಣೆಕಾರ ವಿಜಯಸಾರಥಿ ತಮ್ಮ ಸಂಭಾಷಣೆಗಳಿಂದ ಅಲ್ಲಲ್ಲಿ ಪಂಚ್‌ ನೀಡುತ್ತಾರೆ.

ಅಭಿನಯದ ವಿಷಯಕ್ಕೆ ಬಂದರೆ ವಿಷ್ಣುವರ್ಧನ್‌ ಫಸ್ಟ್‌ ಕ್ಲಾಸ್‌. ಅದರಲ್ಲೂ ಆಸ್ಪತ್ರೆಯ ದೃಶ್ಯಗಳಲ್ಲಿ ಹಾಗೂ ಹೆಂಡತಿ-ಮಗು ಸುಟ್ಟು ಕರಕಲಾಗಿರುವ ದೃಶ್ಯದಲ್ಲಿ ವಿಷ್ಣುವರ್ಧನ್‌ ಅಭಿನಯ ನೋಡೇ ಸವಿಯಬೇಕು. ರಮೇಶ್‌, ಅನಂತ್‌ನಾಗ್‌ ಹಾಗೂ ಪಂಕಜ್‌ಧೀರ್‌ರದು ಚಿಕ್ಕ ಪಾತ್ರಗಳಾದರೂ ಚೊಕ್ಕ ಅಭಿನಯ. ಲಕ್ಷ್ಮೀಗೋಪಾಲಸ್ವಾಮಿ ಮುದ್ದಾಗಿ ಕಾಣಿಸುತ್ತಾರೆ. ಇನ್ನು ಗುರ್ಲಿನ್‌ಚೋಪ್ರಾ ಹಾಗೂ ಅಶುತೋಷ್‌ರಾಣಾ ಆಟಕ್ಕುಂಟು ಲೆಕ್ಕಕ್ಕಿಲ್ಲ.

ರಮೇಶ್‌ಬಾಬು ಅವರ ಛಾಯಾಗ್ರಹಣ ಹಾಗೂ ದೇವಾರ ಸಂಗೀತದಲ್ಲಿ ಅಂಥ ವಿಶೇಷತೆಯೇನಿಲ್ಲ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada