For Quick Alerts
  ALLOW NOTIFICATIONS  
  For Daily Alerts

  ಕಲ್ಲರಳಿ ಕವಿತೆಯಾಗಿ, ಭರಣರ ಮಣಿಯಾಗಿ...

  By Staff
  |


  ಕೇಳಲು ಒಂದು ಸಾಮಾನ್ಯ ಕತೆ. ಆದರೆ ಭರಣ ಅದಕ್ಕೆ ನೀಡಿದ ಟ್ರೀಟ್‌ಮೆಂಟ್‌ ಇದೆಯಲ್ಲ... ಅದೇ ಇಡೀ ಚಿತ್ರವನ್ನು ತಂಗಾಳಿಯಾಗಿಸುತ್ತದೆ. ಹಿಂದೂ ಮುಸ್ಲಿಂ ಬಾಂಧವ್ಯವನ್ನು ಸುಮ್ಮನೆ ಒಂದು ಬಿರಿಯಾನಿ ಹಾಡಿನಲ್ಲಿ ಎಷ್ಟು ಭಾವುಕರಾಗಿ ಚಿತ್ರಿಸಿದ್ದಾರೆ ಎನ್ನುವುದನ್ನು ನೋಡಿಯೇ ತಿಳಿಯ ಬೇಕು.

  ಚಿತ್ರ : ಕಲ್ಲರಳಿ ಹೂವಾಗಿ
  ನಿರ್ಮಾಪಕ : ಮಧು ಬಂಗಾರಪ್ಪ
  ನಿರ್ದೇಶಕ : ಟಿ.ಎಸ್‌.ನಾಗಾಭರಣ
  ಸಂಗೀತ : ಹಂಸಲೇಖ
  ತಾರಾಗಣ : ಅಂಬರೀಶ್‌, ವಿಜಯ ರಾಘವೇಂದ್ರ, ಭಾರತಿ, ಉಮಾ ಶಂಕರಿ, ಭಾರತಿ ಮತ್ತಿತರರು.

  ಎಲ್ಲರೂ ಸಿನಿಮಾ ಮಾಡುತ್ತಾರೆ. ಆದರೆ ಕೆಲವರು ಮಾತ್ರ ಸಿನಿಮಾವನ್ನೇ ಬದುಕೆನ್ನುತ್ತಾರೆ. ಎರಡನೇ ಗುಂಪಿಗೆ ನಾಗಾಭರಣ ಸೇರುತ್ತಾರೆ. ಕೆಲವು ವರ್ಷಗಳಿಂದ ಅವರ ನಿರ್ದೇಶನದ ಸಿನಿಮಾ ಬಂದದ್ದೂ ಗೊತ್ತಾಗಲಿಲ್ಲ, ಹೋದದ್ದೂ ಗೊತ್ತಾಗಲಿಲ್ಲ. ಸಿಂಗಾರೆವ್ವ, ಚಿಗುರಿದ ಕನಸು ಚಿತ್ರಗಳು ವಿಮರ್ಶಕರ ಮೆಚ್ಚುಗೆ ಗಳಿಸಿದರೂ ಪ್ರೇಕ್ಷಕರಿಂದ ದೂರ ಉಳಿದವು. ಅದೇ ಕಾರಣದಿಂದಲೊ ಏನೊ ಹಠಕ್ಕೆ ಬಿದ್ದಂತೆ ಭರಣ ‘ಕಲ್ಲರಳಿ ಹೂವಾಗಿ’ ಎನ್ನುವ ಕವಿತೆಯಂಥ ಸಿನಿಮಾ ಮಾಡಿದ್ದಾರೆ.

  ಬಿ.ಎಲ್‌.ವೇಣು ಬರೆದ ಕಾಲ್ಪನಿಕ ಐತಿಹಾಸಿಕ ಕತೆಗೆ ಭರಣ ಸಮಕಾಲೀನ ಸ್ಪರ್ಶ ಕೊಟ್ಟಿದ್ದಾರೆ. ಹಿಂದೂ ಮುಸ್ಲಿಂ ಪ್ರೇಮ ಕತೆಯನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಅಧ್ಯಯನ ಯೋಗ್ಯ ಚಿತ್ರಕತೆ ಬರೆದಿದ್ದಾರೆ. ಅದಕ್ಕೆ ತಕ್ಕ ಹಿನ್ನೆಲೆ ಸಂಗೀತ, ಹಾಡು, ಲೋಕೇಶನ್‌, ಕಲೆ, ಕಲಾವಿದರು, ಕ್ಯಾಮೆರಾ... ಯಾವುದರಲ್ಲೂ ರಾಜಿಯಾಗಿಲ್ಲ.

  ಒಬ್ಬ ನಿರ್ದೇಶಕ ಮನಸು ಮಾಡಿದರೆ ಕಾದಂಬರಿ ಆಧಾರಿತ ಕತೆಯಿಟ್ಟುಕೊಂಡು, ಸ್ವಂತಿಕೆಯನ್ನು ಹೇಗೆ ತೋರಿಸಬಹು ಅನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ. ಇದು ಕೇವಲ ಭರಣರ ಗೆಲುವಲ್ಲ, ಸೃಜನ ಶೀಲತೆಗೆ ಸಂದ ಗೌರವ. ಕಲ್ಲನ್ನು ಕರಗಿಸಿ ಕವಿತೆ ಮಾಡಿರುವ ಅವರಿಗೇ ಇದೊಂದು ಮರೆಯದ ಮಣಿ !

  ಚಿತ್ರದುರ್ಗದ ಮದಕರಿನಾಯಕನ ಕಾಲದಲ್ಲಿ ಕತೆ ನಡೆಯುತ್ತದೆ. ಜಯದೇವ ರಾಜವೈದ್ಯರ ಮಗ. ಆಕಸ್ಮಿಕವಾಗಿ ಮುಸ್ಲಿಂ ನಾಯಕನ ಮಗಳು ನೂರ್‌ ಜಹಾನ್‌ ಅವನ ಮನೆಯಲ್ಲಿ ಆಶ್ರಯ ಪಡೆಯುತ್ತಾಳೆ. ಅದು ಪ್ರೇಮಕ್ಕೆ ತಿರುಗುತ್ತದೆ. ಅದೇ ಹೊತ್ತಿಗೆ ಜಯದೇವ, ಮದಕರಿ ನಾಯಕನ ಪ್ರಶಂಸೆಗೆ ಪಾತ್ರವಾಗಿ ಸಾವಿರ ಕುದುರೆ ಸರದಾರನಾಗುತ್ತಾನೆ. ಹೀರೊ ಇದ್ದಲ್ಲಿ ವಿಲನ್‌ ಇರಬೇಕಲ್ಲ...ಸೈಯದ್‌ ಬರುತ್ತಾನೆ. ಸಂಚು, ಒಳ ಸಂಚು, ಕೊನೆಯಲ್ಲಿ ...

  ಕೇಳಲು ಒಂದು ಸಾಮಾನ್ಯ ಕತೆ. ಬಹುಶಃ ಎಲ್ಲವೂ ಹೀಗೇ ಏನೊ. ಆದರೆ ಭರಣ ಅದಕ್ಕೆ ನೀಡಿದ ಟ್ರೀಟ್‌ಮೆಂಟ್‌ ಇದೆಯಲ್ಲ... ಅದೇ ಇಡೀ ಚಿತ್ರವನ್ನು ತಂಗಾಳಿಯಾಗಿಸುತ್ತದೆ. ಹಿಂದೂ ಮುಸ್ಲಿಂ ಬಾಂಧವ್ಯವನ್ನು ಸುಮ್ಮನೆ ಒಂದು ಬಿರಿಯಾನಿ ಹಾಡಿನಲ್ಲಿ ಎಷ್ಟು ಭಾವುಕರಾಗಿ ಚಿತ್ರಿಸಿದ್ದಾರೆ ಎನ್ನುವುದನ್ನು ನೋಡಿಯೇ ತಿಳಿಯ ಬೇಕು.

  ಹಾಗೇ ನಾಯಕ ನಾಯಕಿಯ ಪ್ರೇಮವನ್ನು ಸಂಪಿಗೆ ಹೂವಿನ ಮೂಲಕ ಹರಡುವ ರೀತಿ, ಅವರ ತಳಮಳ, ಆತಂಕ, ಪ್ರೇಮವನ್ನು ಮತ್ತೊಮ್ಮೆ ಹರೆಯಕ್ಕೆ ತಿರುಗಿದಂತೆ ಭರಣ ಮೂಡಿಸಿದ್ದಾರೆ. ಅದಕ್ಕೆ ಜತೆಯಾಗಿ ನಿಂತವರು ಹಂಸಲೇಖ ಎನ್ನುವ ಸಂಗೀತದ ಮಾಯಾವಿ. ಹಾಡಿಗಿರಲಿ, ಹಿನ್ನೆಲೆ ಸಂಗೀತವಿರಲಿ-ಹಂಸ್‌ ಕುಂಚ ಹಿಡಿದು ಕಲೆ ಅರಳಿಸಿದಂತೆ ಸಂಗೀತ ನೀಡಿದ್ದಾರೆ. ವಚನವನ್ನು ಹೊಸದಾಗಿ ಕೇಳಿಸುತ್ತಾರೆ. ಯಾವ ದೃಶ್ಯಕ್ಕೆ ಎಂಥ ವಾದ್ಯವಿದ್ದರೆ ಫೋರ್ಸ್‌ ಬರುತ್ತೆ ಎಂದು ತೋರಿಸಿದ್ದಾರೆ. ಕೆಲವೊಮ್ಮೆ ಭರಣ ಮತ್ತು ಹಂಸ ನಡುವೆ ಜುಗಲ್‌ಬಂದಿಯೂ ನಡೆಯುತ್ತದೆ.

  ಸಿಕ್ಕಾಪಟ್ಟೆ ನಟ ನಟಿಯರಿದ್ದಾರೆ. ಅನಂತ್‌ನಾಗ್‌, ಭಾರತಿ, ಸೈಯದ್‌ ತಮ್ಮ ಪಾತ್ರಗಳನ್ನು ನೀಟಾಗಿ ಮಾಡಿದ್ದಾರೆ. ಉಮಾ ಶಂಕರಿಯೂ ಫ್ಯಾಮಿಲಿ ಲುಕ್‌ ಬೆಡಗಿನಿಂದ ಖುಷಿ ಕೊಡುತ್ತಾರೆ. ಅಂಬರೀಷ್‌ ಇದೇ ತಮ್ಮ ಕೊನೆಯ ಚಿತ್ರವೆಂದು ಹೇಳಿದ್ದು ಅರ್ಥಪೂರ್ಣವಾಗಿದೆ. ಐತಿಹಾಸಿಕ ಚಿತ್ರಗಳ ಯುಗ ಮುಗಿದು ಹೋಯಿತು ಅನ್ನುವಾಗ ಭರಣ ಅದಕ್ಕೆ ಚಾಲನೆ ನೀಡಿದ್ದಾರೆ. ಕಾಸು ಸುರಿದ ಮಧು ಬಂಗಾರಪ್ಪ ಸಾಹಸವನ್ನೂ ಮರೆಯುವಂತಿಲ್ಲ. ಈ ಪರಂಪರೆ ಹೀಗೆ ಉಳಿಯಬೇಕೆಂದರೆ ನೀವೊಮ್ಮೆ ಸಿನಿಮಾ ನೋಡಬೇಕಷ್ಟೇ...

  ಇದು ರಾಜ್‌ ‘ವಿಜಯ’

  ಕತ್ತಿ ಕಾಳಗವಿರಲಿ, ಕುದುರೆ ಮೇಲೇರಿ ನಿಲ್ಲುವ ನಿಲುವಿರಲಿ, ಎದೆ ಉಬ್ಬಿಸಿ ಶತ್ರುಗಳನ್ನು ನಾಶ ಮಾಡುವ ಠೇಂಕಾರವಿರಲಿ, ನಲ್ಲೆಯನ್ನು ಸುತ್ತುತ್ತಾ ಮನವೊಲಿಸುವ ಪರಿ ಇರಲಿ, ವಿರಹ ವೇದನೆ ಇರಲಿ...ಈ ಎಲ್ಲ ಭಾವಗಳಲ್ಲಿ ವಿಜಯ ರಾಘವೇಂದ್ರರನ್ನು ನೋಡ್ತಾ ನೋಡ್ತಾ ನಿಮಗೆ ಡಾ.ರಾಜ್‌ ನೆನಪಾದರೆ ಅಚ್ಚರಿಯಲ್ಲ !

  ಹಾಗಂತ ರಾಜ್‌ಗೆ ಈ ಹುಡುಗನನ್ನು ಹೋಲಿಸುತ್ತಿಲ್ಲ. ಆದರೆ ರಾಜ್‌ ಬಿಟ್ಟರೆ ಬೇರಾರಿಗೂ ಐತಿಹಾಸಿಕ ಪಾತ್ರದ ಗತ್ತು ದಕ್ಕುವುದಿಲ್ಲ ಎನ್ನುವ ಮಾತಿತ್ತಲ್ಲ... ಅದನ್ನು ಮಾತ್ರ ವಿಜಯ್‌ ಸುಳ್ಳು ಮಾಡಿದ್ದಾರೆ. ಇದು ಉತ್ಪ್ರೇಕ್ಞೆ ಅಲ್ಲ, ಹೊಗಳಿಕೆ ಅಲ್ಲ. ಒಬ್ಬ ಕಲಾವಿದನಿಗೆ ಸಲ್ಲಲೇಬೇಕಾದ ಗೌರವ. ಹಾಗಂತ ರಾಜ್‌ರ ಎಲ್ಲವೂ ಇವರಿಗೆ ದಕ್ಕಿದೆ ಎಂದಲ್ಲ.

  ಎಪ್ಪತ್ತು ವರ್ಷದ ರಾಜ್‌ ಅಭಿನಯವನ್ನು ಈತನಲ್ಲಿ ಕಾಣುತ್ತೇವೆ ಎನ್ನುವ ಬದಲು ಬೇಡರ ಕಣ್ಣಪ್ಪ ಚಿತ್ರದ ರಾಜ್‌ ಅಭಿನಯ ನೆನಪಿಸಿಕೊಳ್ಳಿ. ಆಗ ರಾಜ್‌ ಕೂಡ ಮೂವತ್ತರ ಆಸುಪಾಸಿನಲ್ಲಿದ್ದರು. ಪ್ರತಿಭೆಗೆ ವಯಸ್ಸಿನ ಹಂಗೆಲ್ಲಿದೆ? ‘ಕಲ್ಲರಳಿ ಹೂವಾಗಿ... ’ ಹಾಡಿನಲ್ಲಿ ವಿಜಯ್‌ ಎಷ್ಟು ತನ್ಮಯವಾಗಿ ನಟಿಸಿದ್ದಾರೆಂದರೆ ಸಾಮಾನ್ಯ ಪದಕ್ಕೂ ಜೀವ ತುಂಬುತ್ತಾರೆ. ಸಂಭಾಷಣೆ ಶೈಲಿ, ಆವೇಶದ ನಡೆ, ಹಾಸ್ಯದ ತುಣುಕು... ಯಾವುದನ್ನೂ ಕಡಿಮೆ, ಹೆಚ್ಚು ಎಂದು ತಿಳಿಯದೆ ಎಲ್ಲಕ್ಕೂ ಸಮ ಸಮ ಅಂಕ ನೀಡಿದ್ದಾರೆ. ಅದಕ್ಕೇ ಗೆದ್ದಿದ್ದಾರೆ.

  ಈತನ ತಾಕತ್ತನ್ನು ಬಳಸಿಕೊಳ್ಳುವ ಕತೆಗಳು ಇನ್ನಷ್ಟು ಬರಲಿ. ವಿಜಯ್‌ ಎಚ್ಚರಿಕೆಯಿಂದ ಹೆಜ್ಜೆ ಇಡಲಿ...

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X