»   » ಚಿತ್ರವಿಮರ್ಶೆ: ಸುಂದರಿ ಗಂಡ ಸದಾನಂದನಿಗೆ ಸಲಾಮ್

ಚಿತ್ರವಿಮರ್ಶೆ: ಸುಂದರಿ ಗಂಡ ಸದಾನಂದನಿಗೆ ಸಲಾಮ್

Subscribe to Filmibeat Kannada

ಒಬ್ಬ ಹಾಸ್ಯ ನಟ ನಾನೂ ಹೀರೊ ಆಗ್ತೀನಿ ಅಂತ ಕ್ಯಾಮೆರಾ ಮುಂದೆ ನಿಂತರೆ ಏನಾಗುತ್ತೆ ? ಈ ಪ್ರಶ್ನೆಗೆ ಉತ್ತರಿಸುವ ಮುನ್ನ ಫ್ಲ್ಯಾಶ್‌ಬ್ಯಾಕ್‌ಗೆ ಹೋಗಬೇಕು. ಸಾಧು, ಟೆನ್ನಿಸ್, ಜಹಂಗೀರ್, ಚಿದಾನಂದ ಹಾದಿಯಲ್ಲಿ ಈಗ ನಾಯಕನಾಗುವ ಸರದಿ ಹಾಸ್ಯನಟ ಶರಣ್ ಅವರದ್ದು. ಅವರೀಗ ಸುಂದರಿ ಗಂಡ ಸದಾನಂದ'ನಾಗಿದ್ದಾರೆ. ಹಾಗಂತ ಶರಣ ಶಾಣೇತನ ಇಲ್ಲಿ ವರ್ಕ್‌ಔಟ್ ಆಗಿದೆಯಾ?

*ವಿನಾಯಕರಾಮ್ ಕಲಗಾರು

ಒಬ್ಬ ಹಾಸ್ಯ ನಟ ನಾನೂ ಹೀರೊ ಆಗ್ತೀನಿ ಅಂತ ಕ್ಯಾಮೆರಾ ಮುಂದೆ ನಿಂತರೆ ಏನಾಗುತ್ತೆ ? ಈ ಪ್ರಶ್ನೆಗೆ ಉತ್ತರಿಸುವ ಮುನ್ನ ಫ್ಲ್ಯಾಶ್‌ಬ್ಯಾಕ್‌ಗೆ ಹೋಗಬೇಕು.
ಸಾಧುಕೋಕಿಲಾ ಈ ಪುಣ್ಯಾತ್ಮ ತೆರೆ ಮೇಲೆ ಸುಂಯ್ ಟಪಕ್' ಅಂತ ಸೊಂಟ ಕುಣಿಸುತ್ತ ತೆರೆ ಮೇಲೆ ಬಂದ್ರೆ ಸಾಕು. ಜನ ಕೇಕೆ ಹಾಕಲು ಶುರುಮಾಡುತ್ತಾರೆ. ಸಾಧು ಬಾಯಿಬಿಟ್ಟ ಎಂದರೆ ಗೊಳ್ ಎಂದು ನಗುತ್ತಾರೆ.

ಅದೇ ಹುಮ್ಮಸ್ಸಿನಲ್ಲಿ ಸಾಧು ಗೆಟಪ್ಪು ಬದಲಾಯಿಸಿದರು. ಹೀ... ಹೀ... ಅಂತ ಹೀರೊ ಆದರು. ನಾನು ತಿಮ್ಮರಾಯಿ... ಅವಳೇ ನನ್ನ ಹುಡುಗಿ...ತರಿಕೆರೆ ಏರಿಮೇಲೆ ಅಂತ ಥೈ ಥೈ ಕುಣಿದರು. ಆದರೆ ಆಗಿದ್ದೇನು? ಜನ ಕುರಿ ಆಗಲಿಲ್ಲ/ಸಿನಿಮಾ ತಿಮ್ಮಪ್ಪನ ಪಾದ ಸೇರಿತು. ಅಲ್ಲಿಂದ ಸಾಧು ಇದರ ಸಹವಾಸವೇ ಸಾಕು ಎಂದು ಸುಮ್ಮನಾದರು!
ಚಿದಾನಂದ, ಜಹಂಗೀರ್ ಈ ಇಬ್ಬರೂ ಕಿರುತೆರೆ ಮೇಲೆ ಲೊಚಲೊಚ ಎನ್ನೋದೇ ತಡ. ಮಕ್ಕಳು ಪಾಪಾ ಪಾಂಡು... ಎನ್ನುತ್ತ ಟಿವಿ ಮುಂದೆ ಹಾಜರ್. ಮನೆಮಂದಿ: ಏನ್ ಮಸ್ತಾಗ್ ಮಾಡ್ತಾರಪ್ಪ ನಮ್ ಹುಡುಗ್ರು' ಅನ್ನುತ್ತಿದ್ದರು. ಹೊಟ್ಟೆ ಹಿಡಿದು ನಗುತ್ತಿದ್ದರು.

ಆದರೆ ಆ ಜೋಡಿ ಸಿನಿಮಾದಲ್ಲೂ ನಗಿಸ್ತೀವಿ ಅಂತ ಬಂದ್ರು. ಆದರೆ ಆಗಿದ್ದೇನು? ಸೂಪರ್ ಜೋಡಿಯ ಮೋಡಿ ವರ್ಕ್‌ಔಟ್ ಆಗಲೇ ಇಲ್ಲ. ನಿರ್ಮಾಪಕರು ಶಂಭುಲಿಂಗಾ ಎಂದು ತಲೆಮೇಲೆ ಟವಲ್ ಹಾಕ್ಕೊಂಡು ಕೂತರು!

ಟೆನ್ನಿಸ್ ಕೃಷ್ಣ-'ಯಣ್ಣ ನಮಸ್ಕಾರ ಕಣಣ್ಣೋ...' ಅಂತ ಕಣ್ಣು ಪಿಳಪಿಳ ಪಿಳಪಿಳ ಮಿಟುಕಿಸುತ್ತಿದ್ದರೆ ಸಾಕು. ಜನ ಬಿದ್ದೂಬಿದ್ದು ನಗೋರು. ಒಂದು ಕಾಲದಲ್ಲಿ ಈತ ಮುಟ್ಟಿದ್ದೆಲ್ಲಾ ಚಿನ್ನ. ಆದರೆ ಕೊನೆಗೆ 'ಯಣ್ಣ ನಾನೂ ಹೀರೋ ಆಯ್ತೀನಿ ಕಣಣ್ಣೋ' ಅಂತ ಬಣ್ಣ ಹಚ್ಚಿದ್ರು. ಅವರ 'ಅಪ್ಪ ನಂಜಪ್ಪ, ಮಗ ಗುಂಜಪ್ಪ' ಏನಾಯಿತು ಅಂತ ನಿಮಗೇ ಹೊತ್ತು!

ಈಗ ನಾಯಕನಾಗುವ ಸರದಿ ಹಾಸ್ಯನಟ ಶರಣ್ ಅವರದ್ದು. ಅವರೀಗ 'ಸುಂದರಿ ಗಂಡ ಸದಾನಂದ'ನಾಗಿದ್ದಾರೆ. ಹಾಗಂತ ಶರಣ ಶಾಣೇತನ ಇಲ್ಲಿ ವರ್ಕ್‌ಔಟ್ ಆಗಿದೆಯಾ? ಅದು ಆಗಿದೆ ಎಂದರೆ ತಪ್ಪಾಗುತ್ತದೆ. ಏಕೆಂದರೆ ಅದಕ್ಕೆ ಕೆಲವು ಕಾರಣಗಳಿವೆ.

ಒಬ್ಬ ಕಾಮಿಡಿಯನ್ ಅಬ್ಬಬ್ಬಾ ಎಂದರೆ ಇಡೀ ಸಿನಿಮಾದಲ್ಲಿ ಅರ್ಧಗಂಟೆ ಇರುತ್ತಾನೆ ಅಷ್ಟೇ. ಆಗ ಅವ ಓವರ್ ಆಕ್ಟಿಂಗ್ ಮಾಡಿದರೂ ಸಹಿಸಿಕೊಳ್ಳಬಹುದು. ಏಕೆಂದರೆ ಅಲ್ಲಿ ನಾಯಕ, ನಾಯಕಿ, ಹಾಡು, ಡ್ಯಾನ್ಸು... ಇರುತ್ತವೆ. ಆದರೆ ಅವ ಸಿನಿಮಾ ಪೂರ್ತಿ ನುಲಿಯುತ್ತಿದ್ದರೆ? ಅದನ್ನು ಸಹಿಸೋದು ಅಷ್ಟು ಸುಲಭವಲ್ಲ. ಶರಣ್‌ದೂ ಅದೇ ಕತೆ. ಅವರು ಮೊದಲಾರ್ಧದ ಒಂದು ಸೀನ್‌ನಲ್ಲೂ ಸುಮ್ಮನೆ ಇರೋದೇ ಇಲ್ಲ. ಮೈಮೇಲೆ ಹುಳ ಬಿಟ್ಟುಕೊಂಡವರ ಹಾಗೆ ಮಾಡುತ್ತಾರೆ. ಅದೊಂಥರಾ ಕಾಮಿಡಿಯ ಪರಾಕಾಷ್ಠೆ ಇದ್ದಂಗೆ ! ಹಾಗೆ ಮಾಡುವ ಬದಲು ಅವರು ಸುಮ್ಮನಿದ್ದೇ ನಗಿಸಲು ಪ್ರಯತ್ನಿಸಬಹುದಿತ್ತು.

ಆದರೆ ಮೊದಲಾರ್ಧಕ್ಕೆ ತದ್ವಿರುದ್ದ ಮುಂದಿನದ್ದು. ಅಲ್ಲಿ ಬರೋದೇ ಬರಿ ಮೂರೇ ಸೀನ್ ಅಷ್ಟೇ. ಅಲ್ಲಿ ಶರಣ್ ಕಾಮಿಡಿಯ ಗಂಧಗಾಳಿ ಇಲ್ಲ. ಅದೇ ರೀತಿ ಕತೆಯಲ್ಲೂ ವಿಶೇಷತೆ ಏನಿಲ್ಲ. ಸದಾನಂದ ಹೆಂಡತಿಗೆ ಮೋಸ ಮಾಡುತ್ತಾನೆ. ಒಂದಿಷ್ಟು ಹುಡುಗಿಯರ ಜತೆ ಚಕ್ಕಂದ ಆಡುತ್ತಾನೆ. ಆದರೆ ಹೆಂಡತಿ ಎದುರಿಗೆ ರಾಮಣ್ಣ. ಹುಡುಗೀರ ಎದುರಿಗೆ ಕಾಮಣ್ಣ. ಕಾರಣ ಬಡತನ. ಬದುಕಿನ ದಾರಿ ಕಾಣದ ಆತ ಸುಂದರಿಯನ್ನು ಮದುವೆ ಆಗಿರುತ್ತಾನೆ. ಅವಳಿಗೇ ಕೈಕೊಟ್ಟು ಇನ್ನೊಬ್ಬಳ ಜತೆ ಮದುವೆಗೆ ತಯಾರಿ ನಡೆಸಿರುತ್ತಾನೆ. ಆಗೊಂದು ದೊಡ್ಡದುರಂತ ಸಂಭವಿಸುತ್ತೆ...

ಶರಣ್ ಹಾವು ಮೆಟ್ಟಿದವನಂತೇ ಕುಣಿದಾಡುವ ಬದಲು ಇನ್ನೊಂದಿಷ್ಟು ಸೀರಿಯಸ್ ಆಗಿ ಮಾಡಬಹುದಿತ್ತು. ವಟವಟ ಎಂದು ತಲೆ ನೋವು ಬರಿಸುವ ಬದಲು ಕಣ್‌ಸನ್ನೆಯಲ್ಲೋ, ಆಂಗಿಕ ಅಭಿನಯದಲ್ಲೋ ನಗಿಸಬಹುದಿತ್ತು. ಹಾಗಾಗಲು ಶರಣ್ ಮಾತ್ರ ಹೊಣೆಗಾರನಲ್ಲ. ನಿರ್ದೇಶಕ ಉಮಾಕಾಂತ್ ಆ ಬಗ್ಗೆ ಒಂದಿಷ್ಟು ಎಚ್ಚರ ವಹಿಸಬೇಕಿತ್ತು. ಆದರೂ ಶರಣ್ ಒಂದು ಹಂತದವರೆಗೆ ಇಷ್ಟವಾಗತ್ತಾರೆ. ಹೆಂಡತಿ ಎದುರಿಗೆ ನಿಂತ ಭೀಮಸೇನ, ನಳಮಹಾರಾಜರೆಲ್ಲ ಗಂಡಸರಲ್ಲವೇ ಎಂದಾಗ, ಕಿವಿಮೇಲೆ ಹೂ ಇಟ್ಟು ಕೊಂಡ ಚಿತ್ರದಲ್ಲಿ. ದೇವರ ಪೂಜೆ ಮಾಡಿ ಹೆಂಡತಿ ಫ್ರೆಂಡಿಗೆ ಪ್ರಸಾದ ಕೊಡುವಾಗ...ಹೀಗೆ ಕೆಲವು ಕಡೆ ಚೆನ್ನಾಗಿಯೇ ಅಭಿನಯಿಸಿದ್ದಾರೆ. ಆದರೆ ಬಾಲಕೃಷ್ಣ ಕಾಕತ್ಕರ್ ಧ್ವನಿ ಕ್ರೈಮ್ ಸ್ಟೋರಿಗಿಂತ ಭಿನ್ನವಾಗಿದ್ದರೆ ಚೆನ್ನಾಗಿರುತ್ತಿತ್ತು ಐಟ್ ಲಗಾ. ಜತೆಗೆ ಒಂದಿಷ್ಟು ಹಾಡುಗಳನು'ಚಿ೦ ಸೇರಿಸಿದ್ದರೆ ಸಿನಿಮಾ ಕ್ಲಿಕ್ ಆಗುತ್ತಿತ್ತೇನೋ...

ಇಷ್ಟೆಲ್ಲಾ ಆಗಿ ನೀವು ಯೋಚಿಸುತ್ತಿರಬಹುದು. ದ್ವಾರಕೀಶ್, ಜಗ್ಗೇಶ್, ಕೋಮಲ್ ಎಲ್ಲಾ ಕಾಮಿಡಿ ಆರ್ಟಿಸ್ಟ್ ತಾನೇ. ಅವರು ಗೆದ್ದಿದ್ದು ಹೇಗೆ ಅಂತ ಕೇಳಬಹುದು?
ಅವರ ಗೆಲುವಿಗೆ ಹಲವು ಕಾರಣಗಳಿವೆ- ಅವರಲ್ಲಿ ಇಡೀ ಮೂರು ತಾಸು ಕತೆಗೆ ಬೇಕಾದಂತೇ ಪಾತ್ರ ನಿರ್ವಹಿಸಬಲ್ಲ ತಾಕತ್ತಿತ್ತು. ಅವರ ಮ್ಯಾನರಿಸಂಗೆ ಸರಿಹೊಂದುವ ನೇಪಥ್ಯ ಕಲಾವಿದರು, ದೃಶ್ಯಗಳು, ಸನ್ನಿವೇಶಗಳನ್ನು ಸೃಷ್ಟಿಸಬಲ್ಲ ರಾಜ್ ಕಿಶೋರ್, ದಿನೇಶ್‌ಬಾಬುವಂಥ ನಿರ್ದೇಶಕರಿದ್ದರು. ಆದರೆ ಅವೆಲ್ಲ ಉಮಾಕಾಂತ್ ಕೈಯಿಂದ ಮಾಡಲಾಗಿಲ್ಲ ಎನ್ನುವುದು ಕಹಿಯಾದರೂ ಸತ್ಯ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada