twitter
    For Quick Alerts
    ALLOW NOTIFICATIONS  
    For Daily Alerts

    ಇದೊಂದು ಉತ್ತಮ ಚಿತ್ರ ; ಅನುಮಾನವೇ ಇಲ್ಲ . ಆದರೆ, ಪಕ್ಕಾ ಸ್ವಮೇಕ್‌ ಚಿತ್ರವೆಂದು ಘೋಷಿಸಿದ್ದ ನಿರ್ಮಾಪಕ ಸಾ.ರಾ.ಗೋವಿಂದು ಮಟಮಟ ಮಧ್ಯಾಹ್ನವೇ ಕನ್ನಡಿಗರನ್ನು ಮೋಸ ಮಾಡಿದರಾ ?

    By Staff
    |

    ಹಳ್ಳಿಯಿಂದ ಬಂದ ಮುಗ್ಧ ಹುಡುಗನಾಗಿ ದರ್ಶನ್‌ ತೂಗುದೀಪ್‌ ಕೊನೆಗೂ ತಾವೊಬ್ಬ ಅಪ್ಪಟ ಕಲಾವಿದನೆಂದು ಸಾಬೀತುಪಡಿಸಿದ್ದಾರೆ. ಕಣ್ಣಿನಲ್ಲಿ ನೀರು ತುಂಬಿಕೊಂಡು ಮೆಲುದನಿಯಲ್ಲಿ ಮಾತನಾಡುವ ದರ್ಶನ್‌ ಎಂಥ ಕಟುಕರ ಎದೆಗೂ ಹೆಜ್ಜೆ ಇಡಬಲ್ಲರು. ‘ಅವ್ವಾ, ನಿನ್ನ ತೊಡೆ ಮೇಲೆ ಮಲಗುವ ಆಸೆ ಆಗ್ತಿದೆ ಕಣವ್ವೊ’ ಎಂದು ಹೇಳಿ ಮಗುವಿನಂತೆ ತಾಯಿ ತೊಡೆಗೆ ತಲೆ ಆನಿಸುವ ಈ ಹುಡುಗ ಮುಂದೊಂದು ದಿನ ಸೆಂಟಿಮೆಂಟ್‌ ಕಿಂಗ್‌ ಆಗುವುದರಲ್ಲಿ ಅನುಮಾನವೇ ಇಲ್ಲ . ಹಾಗೆಯೇ ‘ಹ’ಕಾರಗಳನ್ನು ತಿದ್ದಿಕೊಳ್ಳುವ ಜವಾಬ್ದಾರಿಯೂ ಅವರ ಮೇಲಿದೆ. ನಾಯಕನ ತಾಯಿಯಾಗಿ ಉಮಾಶ್ರೀ ಮತ್ತೊಮ್ಮೆ ಪುಟ್ನಂಜಿಯ ನೆನಪನ್ನು ತಂದುಕೊಡುತ್ತಾರೆ. ಫೋನ್‌ ಹಿಡಿವ ರೀತಿಯಲ್ಲೂ ಹಳ್ಳಿ ಹೆಣ್ಣಿನ ಮುಗ್ಧತೆ ಉಳಿಸಿಕೊಂಡಿರುವ ಉಮಾಶ್ರೀ ಇನ್ನೆಷ್ಟು ಪ್ರತಿಭೆಯನ್ನು ಅಡಗಿಸಿಕೊಂಡಿದ್ದಾರೋ ?

    ಹಠಮಾರಿ ಹುಡುಗಿ ಋತಿಕಾ, ಪ್ರೀತಿಯ ಬೆಡಗಿ ಅಭಿರಾಮಿ ಒಬ್ಬರಿಗೊಬ್ಬರು ಸೆಡ್ಡು ಹೊಡೆಯುವಂತೆ ನಟಿಸಿದ್ದಾರೆ. ಇಂಥವರನ್ನು ಆಮದು ಮಾಡಿಕೊಂಡರೆ ಕನ್ನಡದ ಮಾನವಾದರೂ ಉಳಿಯುತ್ತದೆ. ಹಸಿರು ಬೆಟ್ಟಗಳ ಮೋಹಕತೆಯನ್ನು ಹಿಡಿದಷ್ಟೇ ನಿಯತ್ತಾಗಿ ಬಂಗಲೆಯ ಭವ್ಯತೆಯನ್ನು ಸೊಗಸಾಗಿ ಛಾಯಾಗ್ರಾಹಕ ಗಿರಿ ಸೆರೆಹಿಡಿದಿದ್ದಾರೆ.

    ಕಲಾ ನಿರ್ದೇಶಕನ ಕೆಲಸದ ಪ್ರೀತಿ ತೆರೆಮೇಲೆ ಕಾಣಿಸುತ್ತದೆ. ಕಲ್ಯಾಣ್‌ ಬರೆದ ಹಾಡುಗಳಿಗೆ ಲಾಲಿಹಾಡಿನ ಒನಪಿದೆ. ಆದರೆ ಜೀವಮಾನದ ಶ್ರೇಷ್ಠ ಸಂಗೀತ ನೀಡಿದ್ದು ನಿಜಕ್ಕೂ ಸಾಧು ಕೋಕಿಲಾನ ? ಅದು ಅಚ್ಚರಿ. ಅಷ್ಟೇ ಕೆಟ್ಟದಾದ ಹಿನ್ನೆಲೆ ಸಂಗೀತ ನೀಡಿದ್ದಕ್ಕೂ ಸಾಧುನೇ ಅಪರಾಧಿ.

    ಪುಟ್ಟ ಮಕ್ಕಳಿಂದ ಅರಿಸ್ಟಾಟಲ್‌ ಚಿಂತನೆಯಂಥ ಮಾತುಗಳನ್ನು ಹೇಳಿಸಿದ ಮುರುಳಿ ಮೋಹನ್‌ ಶ್ರೇಷ್ಠ ಖಳನಾಯಕನಾಗಿ ಮಿಂಚಿದ್ದಾರೆ. ಹಾಗೆಯೇ ಅನೇಕ ಅನುಮಾನಗಳಿಗೆ ಹಲವು ದೃಶ್ಯಗಳು ಕಾರಣವಾಗುತ್ತವೆ. ಅರ್ಧದಲ್ಲೇ ಮಾಯವಾಗುವ ಋತಿಕಾಳ ಪಾತ್ರಕ್ಕೆ ಅಂತ್ಯವೇ ಇಲ್ಲ . ಒಂದು ಫ್ಲಾಶ್‌ಬ್ಯಾಕ್‌ ಅನಗತ್ಯವಾಗಿತ್ತು . ಹಾಗೆಯೇ ಒಂದು ಹಾಡು ಪ್ಲಸ್‌ ಹದಿನೈದು ನಿಮಿಷಗಳ ದೃಶ್ಯಕ್ಕೆ ಕತ್ತರಿ ಹಾಕಬದುದಿತ್ತು .

    ಇದೊಂದು ಉತ್ತಮ ಚಿತ್ರವೆಂಬುದರಲ್ಲಿ ಅನುಮಾನವಿಲ್ಲ . ಆದರೆ ನಿರ್ದೇಶಕ ವಾಸು ಈ ಮಟ್ಟದ ಚಿತ್ರವನ್ನು ಹ್ಯಾಂಡಲ್‌ ಮಾಡುವುದು ಹೇಗೆ ಸಾಧ್ಯ ಎನ್ನುವುದು ಅವರ ಹಿಂದಿನ ಚಿತ್ರಗಳ ಲೆವೆಲ್‌ ಬಲ್ಲವರ ಛೋಟಾ ಡೌಟು ! ಅದೇ ಮಾತನ್ನು ಸಾಧು, ಮುರುಳಿ ಮೋಹನ್‌ ಹಾಗೂ ಕತೆ ಬರೆದ ಅಜೇಯ್‌ ಕುಮಾರ್‌ ಬಗ್ಗೆಯೂ ಹೇಳಬಹುದು. ಯಾಕೆಂದರೆ ಇದರಲ್ಲಿ ತಮಿಳಿನ ‘ಸೆಂದಮಿಳ್‌ ಪಾಟ್ಟು’ ಚಿತ್ರದ ಹಸಿಬಿಸಿ ವಾಸನೆ ಹೊಡೆಯುತ್ತಿದೆ ಎಂದು ಪಿಸುಗುಡುತ್ತಿದೆ ಕಾನಿಷ್ಕಾದ ಅಂಗಳ. ಪಕ್ಕಾ ಸ್ವಮೇಕ್‌ ಚಿತ್ರವೆಂದು ಘೋಷಿಸಿದ್ದ ನಿರ್ಮಾಪಕ ಸಾ.ರಾ.ಗೋವಿಂದು ಮಟಮಟ ಮಧ್ಯಾಹ್ನವೇ ಕನ್ನಡಿಗರನ್ನು ಮೋಸ ಮಾಡಿದರಾ ?

    (ವಿಜಯ ಕರ್ನಾಟಕ)

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Thursday, April 25, 2024, 9:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X