For Quick Alerts
  ALLOW NOTIFICATIONS  
  For Daily Alerts

  ಇದು ’ರಮ್ಯ ಚೈತ್ರ ಕಾಲ’

  By Staff
  |


  ಅದ್ಭುತ ದೃಶ್ಯ ಹಾಗೂ ಸಂಭಾಷಣೆಗಳ ಮೂಲಕ ಅಚ್ಚರಿ ಮೂಡಿಸುವ ಸುನೀಲ್‌ಕುಮಾರ್‌ ದೇಸಾಯಿ, ತಾವು ಅದೇ ದೇಸಾಯಿ ಎಂದು ತೋರಿಸಿಕೊಡುತ್ತಾರೆ.

  • ಚೇತನ್‌ ನಾಡೀಗರ್‌
  ದೇಸಾಯಿ ಈ ಬಾರಿ ಮತ್ತೊಮ್ಮೆ ಪ್ರೇಮಕತೆ ಹೊಸೆದಿದ್ದಾರೆ. ಅವರು ಮೊದಲ ಬಾರಿಗೆ ‘ನಮ್ಮೂರ ಮಂದರ ಹೂವೇ’ಎಂಬ ಲವ್‌ ಸ್ಟೋರಿ ಮಾಡಿದಾಗ ಅದು ಸೂಪರ್‌ ಹಿಟ್‌ ಆಗಿತ್ತು. ನಂತರ ‘ಸ್ಪರ್ಶ’ವೂ ಗೆದ್ದಿತ್ತು. ಈಗ ‘ರಮ್ಯ ಚೈತ್ರ ಕಾಲ’ದ ಸರದಿ.

  ಅವನು ಚೆನ್ನ. ಗುಣದಲ್ಲಿ ಚಿನ್ನ. ಸಮಾಜ ಸೇವೆಯೇ ಅವನ ಕೆಲಸ. ಅದಕ್ಕೇ ಅವನು ಊರಿಗೆಲ್ಲ ಬೇಕಾದವ. ಒಟ್ಟಾರೆ ಚೆನ್ನ ಒಬ್ಬ‘ಕ್ರಿಯಾ’ ಶೀಲ ವ್ಯಕ್ತಿ. ಇಂಥ ಚೆನ್ನ ತಲೆ ಉಪಯೋಗಿಸುವುದು ಕೇವಲ ತೆಂಗಿನ ಕಾಯಿ ಒಡೆಯುವುದಕ್ಕೆ. ಅದೂ ದಾಖಲೆಗಲ್ಲ, ಯಾರದೋ ಹರಕೆ ಪೂರೈಸುವುದಕ್ಕೆ. ಅದು ಬಿಟ್ಟರೆ ಚಿತ್ರದ ಪೂರ್ತಿ ಚೆನ್ನ ತಲೆಗಿಂತ ಹೃದಯವನ್ನೇ ಉಪಯೋಗಿಸುತ್ತಾನೆ. ಒಟ್ಟಾರೆ ಚೆನ್ನ ಎಲ್ಲರನ್ನು ಗೆಲ್ಲುವುದೇ ತನ್ನ ಹೃದಯದಿಂದ. ಇಂಥ ಚೆನ್ನನ ಬಾಳಿಗೆ ನಾಯಕಿ ಕಾಲಿಡುತ್ತಾಳೆ. ಅವನು ಎಲ್ಲರಿಗೂ ಸೈ ಎನ್ನುವುದೇ ನಾಯಕಿಗೆ ಸೈ ಎನಿಸುತ್ತದೆ. ನಾಯಕ-ನಾಯಕಿ ಹತ್ತಿರವಾಗುತ್ತಾರೆ. ಇನ್ನೇನು ಮತ್ತಷ್ಟು ಹತ್ತಿರವಾಗಬೇಕು, ಆಗ ಹೃದಯವೇ ಅಡ್ಡಬರುತ್ತದೆ. ಏನೇನೋ ಘಟನೆಗಳು ನಡೆದು ಹೋಗುತ್ತವೆ. ತನ್ನ ಪ್ರೇಯಸಿಯೇ ಹೇಳಿದಳೆಂದು ಅವಳನ್ನು ಮರೆತು ಬೇರೆಯವಳನ್ನು ಮದುವೆಯಾಗವಾಗಲು ಚೆನ್ನ ರೆಡಿಯಾಗುತ್ತಾನೆ. ಮುಂದೇನಾಗುತ್ತದೆ, ನೀವೇ ನೋಡಿ ಹೇಳಿ.

  ಈ ಚಿತ್ರ ಪ್ರಾರಂಭಿಸುವುದಕ್ಕೆ ಮುಂಚೆ ಕತೆಯಿರಲಿಲ್ಲ ಎಂದು ದೇಸಾಯಿ ಒಮ್ಮೆ ಹೇಳಿಕೊಂಡಿದ್ದರು. ಆದರೆ ಚಿತ್ರ ಮುಗಿದ ನಂತರವೂ ದೇಸಾಯಿ ಕತೆ ಬಗ್ಗೆ ಗಮನಹರಿಸದಿರುವುದು ಪ್ರೇಕ್ಷಕರಿಗೆ ಬೇಸರ ತರಿಸದೇ ಇರುವುದಿಲ್ಲ. ಚಿತ್ರದ ಪೂರ್ತಿ ಘಟನೆಗಳು ನಡೆಯುತ್ತವೆ. ಥ್ರಿಲ್ಲರ್‌ ಚಿತ್ರಗಳಿಗಾದರೆ ಕತೆಗಿಂತ ಘಟನೆಗೆ ಹೆಚ್ಚು ಪ್ರಾಮುಖ್ಯತೆ ಬೇಕು. ಆದರೆ ಇಂಥ ನವಿರು ಪ್ರೇಮಕತೆಗಳಿಗೆ ಘಟನೆಗಳೇ ಮೈನಸ್‌ ಪಾಯಿಂಟು. ಆದರೂ ದೇಸಾಯಿ ಕೆಲಮೊಮ್ಮೆ ಅದ್ಭುತ ದೃಶ್ಯ ಹಾಗೂ ಸಂಭಾಷಣೆಗಳ ಮೂಲಕ ಅಚ್ಚರಿ ಕೊಟ್ಟು ತಾವಿನ್ನೂ ಅದೇ ದೇಸಾಯಿ ಎಂದು ತೋರಿಸಿ ಕೊಡುತ್ತಾರೆ. ಎಲ್ಲರಿಗೂ ಇಷ್ಟವಾಗುತ್ತಾರೆ. ದೇಸಾಯಿ ಗೆದ್ದರು ಎಂದು ಅಭಿಮಾನಿಗಳು ಸಂತೋಷ ಪಡುವಷ್ಟರಲ್ಲೇ ಎಂದಿನಂತೆ ಚಿತ್ರವನ್ನು ತೀರಾ ನಾಟಕೀಯ ಮಾಡಿ ನಿರಾಸೆ ಮೂಡಿಸುತ್ತಾರೆ. ಈ ನಡುವೆ ಚಿತ್ರಕ್ಕೆ ಎಲ್ಲೂ, ಏನೇನೂ ಸಂಬಂಧವಿರದ ಕಾಮಿಡಿ ಟ್ರಾಕ್‌ ಕೆಲಮೊಮ್ಮೆ ಕಿರಿಕಿರಿ ತರಿಸುವುದು ಸುಳ್ಳಲ್ಲ. ಆದರೆ, ಈ ಕಾಮಿಡಿಯಲ್ಲಿ ಕಕ್ಕಸ್ಸು ಜೋಕುಗಳಿಲ್ಲ, ಅಬ್ಬರ-ಅರಚಾಟಗಳಿಲ್ಲ. ಅಲ್ಲಿರುವುದು ಶುದ್ಧ ಕನ್ನಡ. ಹಾಗಾಗಿ ಪ್ರೇಕ್ಷಕ ಕ್ಷಮಿಸುತ್ತಾನೆ. ಏನೇ ಓರೆ-ಕೋರೆಗಳಿರಲಿ ವಾರ ವಾರ ‘ಪ್ರಕ್ಷುಬ್ಧ’ಚಿತ್ರಗಳೇ ಬರುತ್ತಿರುವ ಇಂದಿನ ದಿನಗಳಲ್ಲಿ ನಿಜವಾಗಲೂ ಚಿತ್ರರಂಗಕ್ಕೆ ಇದು ರಮ್ಯ ಚೈತ್ರ ಕಾಲ.

  ಚೆನ್ನನ ಪಾತ್ರಕ್ಕೆ ಸಂದೀಪ್‌ ಹೇಳಿ ಮಾಡಿಸಿದ ಹಾಗಿದ್ದಾರೆ. ಅವರು ಪಾತ್ರ ಮಾಡುತ್ತಿದ್ದಾರೆ ಎಂದೆನ್ನಿಸುವುದೇ ಇಲ್ಲ. ಅವರ ಮುಗ್ಧತೆ, ಇಂಥ ಪಾತ್ರ ಮಾಡುವಾಗ ಇರುವ ತನ್ಮಯತೆ ಖುಷಿ ಕೊಡುತ್ತದೆ. ನಂದಿತಾ ತಮಗೆ ಸಿಕ್ಕ ಒಳ್ಳೆಯ ಅವಕಾಶವನ್ನು ಉತ್ತಮವಾಗೇನೂ ಬಳಸಿಕೊಂಡಿಲ್ಲ. ಯಾಣ ಸೇರಿದಂತೆ ಇನ್ನೂ ಅಸಂಖ್ಯ ಪಾತ್ರಗಳು ಈ ಚಿತ್ರದಲ್ಲಿದೆ.

  ಆದರೆ, ಯಾಣ ಹಾಗೂ ಕುರುಡಿ ಪಾತ್ರ ಮಾಡಿರುವ ರೇಷ್ಮಾ ಬಿಟ್ಟರೆ ಒಬ್ಬರೂ ಕಣ್ಣ ಮುಂದೆ ಬರಲ್ಲ. ಕಾರಣ ಎಲ್ಲರೂ ಹೊಸಬರು. ಅಲ್ಲದೆ, ಚಿತ್ರದ ಪೂರಾ ನಾಯಕಿ- ನಾಯಕಿಯರೇ ಆವರಿಸಿಕೊಳ್ಳುವುದರಿಂದ ಮಿಕ್ಕ ಪಾತ್ರಗಳಾವುವೂ ರಿಜಿಸ್ಟರ್‌ ಆಗುವುದಿಲ್ಲ.

  ಪಾತ್ರವರ್ಗದವರ ಜತೆ ತಂತ್ರಜ್ಞರೂ ಹೊಸಬರು. ಆದರೂ ಛಾಯಾಗ್ರಹಕ ಪ್ರಭಾಕರ್‌ ಎದ್ದು ನಿಲ್ಲುತ್ತಾರೆ. ಶಿರಸಿಯ ಸುತ್ತಮುತ್ತಲಿನ ಪರಿಸರ, ಗೋಕರ್ಣದ ಕಡಲ ಕಿನಾರೆ, ಯಾಣ ಅದ್ಭುತವಾಗಿ ಮೂಡಿಬಂದಿದೆ. ಶ್ಯಾಮ್‌ಸುಂದರ್‌ ಸಂಗೀತ ನಿರ್ದೇಶನದ ಹಾಡುಗಳು ಮಧುರವಾಗಿವೆ. ಅದರಲ್ಲೂ ಟೈಟಲ್‌ ಸಾಂಗ್‌ ಗುನುಗುವಂತಿದೆ.

  ರೀಮೇಕ್‌ ಸಂಸ್ಕೃತಿ ಬಗ್ಗೆ ಬೇಸರ ವ್ಯಕ್ತಪಡಿಸುವ ದೇಸಾಯಿ ರಾಜಾ ಹಿಂದುಸ್ತಾನಿ ಚಿತ್ರದ ಪರ್‌ದೇಸಿ ಪರ್‌ದೇಸಿ ಹಾಡನ್ನು ರೀಮೇಕ್‌ ಮಾಡಿಸಿದ್ದು ಬೇಸರ ತರಿಸುತ್ತದೆ. ಚಿತ್ರಕತೆಯೇ ಹಾಗೆ ಸಾಗುವುದರಿಂದ ಸಂಕಲನಕಾರರನ್ನು ದೂಷಿಸುವ ಹಾಗಿಲ್ಲ.

  (ಸ್ನೇಹ ಸೇತು ವಿಜಯ ಕರ್ನಾಟಕ )

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X