For Quick Alerts
  ALLOW NOTIFICATIONS  
  For Daily Alerts

  ‘ಸಜನಿ’ ತುಂಬ ಶರ್ಮಿಳಾ ಪರಿಮಳ!

  By Staff
  |


  ಚಿತ್ರದ ಮೊದಲಾರ್ಧದಲ್ಲಿ ಲಂಡನ್‌ನ ರಮಣೀಯ ದೃಶ್ಯಗಳು ಹಾಗೂ ಒಂದಿಷ್ಟು ಹುಡುಗಾಟ ಬಿಟ್ಟರೆ ಮತ್ತಿನ್ನೇನು ಸಿಗುವುದಿಲ್ಲ. ಅದನ್ನು ಸ್ವಲ್ಪ ಸಹಿಸಿಕೊಂಡರೆ ದ್ವಿತೀಯಾರ್ಧ ಮಜವೋ ಮಜಾ. ಈ ಚಿತ್ರದ ಮೂಲಕ, ಸ್ಯಾಂಡಲ್‌ವುಡ್‌ಗೆ ಎಂಟ್ರಿ ಪಡೆದಿರುವ ಶರ್ಮಿಳಾ, ಪ್ರೇಕ್ಷಕರಿಗೆ ಇಷ್ಟವಾಗಲು ಕಾರಣಗಳಿವೆ... ವಿವರಗಳಿಗೆ ಸಿನಿಮಾ ನೋಡಿ...

  ಚಿತ್ರ : ಸಜನಿ
  ನಿರ್ಮಾಪಕ : ಸೊನಾಲಿ ನಿಖಿಲ್‌
  ನಿರ್ದೇಶನ : ಮುರುಗೇಶ್‌
  ಸಂಗೀತ : ಎ.ಆರ್‌.ರೆಹಮಾನ್‌
  ತಾರಾಗಣ : ಧ್ಯಾನ್‌, ಶರ್ಮಿಳಾ, ಅನಂತನಾಗ್‌, ಅವಿನಾಶ್‌, ಭವ್ಯಾ ಮತ್ತಿತರರು.

  ಹುಡುಗನಿಗೆ ಹೆಣ್ಣು ನೋಡಲು ಮನೆಯವರೆಲ್ಲ ಹೋಗುವುದು ಸಹಜ. ಹುಡುಗನ ಜತೆ ಅವನ ಪ್ರೇಯಸಿಯೇ ಬರುವನ್ನು ಎಲ್ಲಾದರೂ ನೋಡಿದ್ದೀರಾ? ನಗುಬರಬಹುದು. ಆದರೆ ಹಾಗೆ ಮಾಡದೆ ವಿಕ್ರಮ್‌ಗೆ ಬೇರೆ ದಾರಿಯೇ ಇರುವುದಿಲ್ಲ. ಆ ಮದುವೆ ಮುರಿದು ಬೀಳಲು ಹಾಗೆ ಮಾಡಲೇಬೇಕು.

  ಏಕೆಂದರೆ ಈಗಾಗಲೇ ಆತ ಸಜನಿಯನ್ನು ಲಂಡನ್‌ನಲ್ಲಿ ಮೆಚ್ಚಿಕೊಂಡಿದ್ದಾಗಿದೆ. ಅಲ್ಲೇ ಅವಳ ಜತೆ ಕದನ, ಜಗಳ, ಪ್ರೀತಿ, ಪ್ರೇಮ ಮಾಡಿದ್ದಾಗಿದೆ. ಮೂರು ಹಾಡುಗಳನ್ನೂ ಹಾಡಿದ್ದಾಗಿದೆ. ಏಳೇಳು ಜನುಮಕ್ಕೂ ನೀನೇ ನನ್ನವಳು ಜಾಣೆ ಎಂದು ಮಾತು ಕೊಟ್ಟಿದ್ದಾಗಿದೆ.

  ನಮ್ಮಪ್ಪ, ನಿಮ್ಮಪ್ಪ ನಮ್ಮ ಪ್ರೀತಿಗೆ ಅಡ್ಡಿ ಬರುತ್ತಾರೆ, ಓಡಿ ಹೋಗಿ ಮದುವೆಯಾಗೋಣ ಎಂದು ಹುಡುಗಿ ಎಷ್ಟು ಹೇಳಿದರೂ, ಬೇಡ ಬಿಡು ಅವರನ್ನು ಪಟಾಯಿಸಿಯೇ ಮದುವೆಯಾಗೋಣ ಎಂದು ಭರವಸೆ ನೀಡಿದ್ದಾಗಿದೆ. ಹಠಮಾರಿ ಅಪ್ಪನನ್ನು ಮಂಜಿನಂತೆ ಕ್ರಮೇಣ ಕರಗಿಸುವ ಮಾಸ್ಟರ್‌ ಪ್ಲಾನ್‌ ಮಾಡಿದ್ದಾಗಿದೆ. ಇದೆಲ್ಲ ಅವರಿಬ್ಬರಿಗೆ, ಪ್ರೇಕ್ಷಕರಿಗೆ ಗೊತ್ತು. ಅದು ಅವರಿಬ್ಬರ ಅಪ್ಪ, ಪಪ್ಪಗಳಿಗೆ ಗೊತ್ತಿರಬೇಕಲ್ವಾ? ಗೊತ್ತಾದರೂ ಅವರು ಸಹಿಸಿಕೊಳ್ಳುತ್ತಾರಾ? ಯಾರೋ ಪ್ರೀತಿ ಮಾಡ್ತಾರೆ ಎಂದರೆ ನಖಶಿಖಾಂತ ಉರಿದು ಬೀಳುವವರು, ತಮ್ಮ ಮಕ್ಕಳೇ ಪ್ರೇಮಸಲ್ಲಾಪಗಳಲ್ಲಿ ತೊಡಗಿದರೆ ಹೊಟ್ಟೆಗೆ ಹೊಕಿಕೊಂಡು ನುಂಗಿಕೊಂಳ್ತಾರಾ? ಉತ್ತರಕ್ಕಾಗಿ ನೀವು ‘ಸಜನಿ’ ನೋಡಬೇಕು.

  ಎಂಟು ವರ್ಷಗಳ ಹಿಂದೆ ತಮಿಳಿನಲ್ಲಿ ಬಿಡುಗಡೆಯಾಗಿದ್ದ ‘ಜೋಡಿ’ ನೋಡಿದ್ದರೆ, ಅದಕ್ಕಿಂತ ಮುಂಚೆ ‘ಪೂವೆಲ್ಲಾಂ ಕೇಟ್ಟುಪಾರ್‌’ ಅಥವಾ ಹಿಂದಿಯ ‘ದಿಲ್‌ವಾಲೆ ದುಲ್ಹನಿಯ ಲೇಜಾಯೆಂಗೆ’ನೋಡಿದ್ದರೂ ಇಷ್ಟೊತ್ತಿಗೆ ಅರ್ಥವಾಗಿ ಬಿಡುತ್ತಿತ್ತು. ಏಕೆಂದರೆ ಇದೇ ಕತೆ ಅಲ್ಲಿ ಆ ಹೆಸರುಗಳಲ್ಲಿ ಈಗಾಗಲೇ ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗ ಎಲ್ಲದರಲ್ಲೂ ಸ್ವಲ್ಪ ಲೇಟಾಗಿರುವುದರಿಂದ ಚಿತ್ರ ತಡವಾಗಿ ಬಂದಿದೆ ಅಷ್ಟೇ.

  ಇಷ್ಟು ವರ್ಷಗಳ ನಂತರ ಕನ್ನಡಕ್ಕೆ ಈ ಚಿತ್ರ ರೀಮೇಕಾಗಿದೆ ಎಂದರೆ ಅದಕ್ಕೆ ಕಾರಣ ಚಿತ್ರದಲ್ಲೊಂದು ಒಳ್ಳೆಯ ಸಂದೇಶವಿದೆ. ಚಿತ್ರದ ಮೊದಲಾರ್ಧದಲ್ಲಿ ಲಂಡನ್‌ನ ರಮಣೀಯ ದೃಶ್ಯಗಳು ಹಾಗೂ ಒಂದಿಷ್ಟು ಹುಡುಗಾಟ ಬಿಟ್ಟರೆ ಮತ್ತಿನ್ನೇನು ಸಿಗುವುದಿಲ್ಲ. ಅದನ್ನು ಸ್ವಲ್ಪ ಸಹಿಸಿಕೊಂಡರೆ ದ್ವಿತೀಯಾರ್ಧ ಮಜವೋ ಮಜಾ. ಅಲ್ಲೊಂದಿಷ್ಟು ಪಾತ್ರಗಳು, ಘಟನೆಗಳಿವೆ, ಲವಲವಿಕೆಯ ಅಭಿನಯ ಇದೆ. ಎಲ್ಲಕ್ಕಿಂತ ಚಿತ್ರಕ್ಕೆ ಹ್ಯಾಪಿ ಎಂಡಿಂಗ್‌ ಇದೆ.

  ಇದಕ್ಕೆಲ್ಲ ಕಾರಣ ನಾಯಕಿ ಶರ್ಮಿಳಾ. ಗ್ಲಾಮರ್‌ ಆಗಲೀ, ಸೆಂಟಿಮೆಂಟ್‌ ಆಗಲೀ ಶರ್ಮಿಳಾ ಎರಡಕ್ಕೂ ಸೈ ಎನ್ನಿಸಿಕೊಂಡಿದ್ದಾಳೆ. ಕನ್ನಡದಲ್ಲಿ ನೆಲೆನಿಲ್ಲುವ ಸೂಚನೆ ನೀಡಿದ್ದಾಳೆ. ನಾಯಕಿಗೆ ಹೋಲಿಸಿದರೆ ಎದುರಿಗೆ ನಾಯಕ ಧ್ಯಾನ್‌ ಸ್ವಲ್ಪ ಡಲ್‌ ಎನ್ನಬಹುದು. ಹಿರಿಯರಾದ ಶಿವರಾಮಣ್ಣ, ಅನಂತ್‌ನಾಗ್‌ ಮತ್ತು ಅವಿನಾಶ್‌ ಅವರೂ ನೀಟು, ಅಭಿನಯವೂ ನೀಟು.

  ಈಗಾಗಲೇ ಎರಡು ಭಾಷೆಗಳಲ್ಲಿ ಎ.ಆರ್‌.ರೆಹಮನ್‌ರ ಹಾಡುಗಳನ್ನು ಕೇಳಿದ್ದರೂ ಕೆಲವು ಇಷ್ಟವಾಗುತ್ತವೆ. ಆದರೆ ಕೆಲವು ಹಾಡುಗಳ ಮಧ್ಯೆ ಸಾಹಿತ್ಯ ಕಳೆದು ಹೋಗಿದೆ. ಛಾಯಾಗ್ರಾಹಕ ರಂಗಸ್ವಾಮಿ ಲಂಡನ್‌ನಲ್ಲಿ ಹಾಗೂ ಹಾಡುಗಳಲ್ಲಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಮುಗಿಸಿದ್ದಾರೆ. ಮನೆ ಮಂದಿಯೆಲ್ಲ ಮುಜುಗರವಿಲ್ಲದೆ ಸಜನಿಯನ್ನು ನೋಡಿ ಮಜಾ ಮಾಡಬಹುದು.

  ‘ದುನಿಯಾ’ ಹೇಗಿದೆ ಅನ್ನುವುದನ್ನು ಓದಿದಿರಾ?

  (ಸ್ನೇಹ ಸೇತು : ವಿಜಯ ಕರ್ನಾಟಕ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X